ಸೋಮವಾರ, ಸೆಪ್ಟೆಂಬರ್ 16, 2019
22 °C

ಸದೃಢ ಹಳಿ ಮೇಲೆ ಭಾರತದ ಆರ್ಥಿಕತೆ: ಲಗಾರ್ಡ್‌ ವಿಶ್ವಾಸ

Published:
Updated:
ಸದೃಢ ಹಳಿ ಮೇಲೆ ಭಾರತದ  ಆರ್ಥಿಕತೆ: ಲಗಾರ್ಡ್‌ ವಿಶ್ವಾಸ

ವಾಷಿಂಗ್ಟನ್‌: ಭಾರತದ ಆರ್ಥಿಕತೆಯು ಸದೃಢ ಹಳಿಯ ಮೇಲೆ ಸಾಗುತ್ತಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಿನ್‌ ಲಗಾರ್ಡ್‌ ಹೇಳಿದ್ದಾರೆ.

ಪ್ರಸಕ್ತ  ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರ ಕಡಿಮೆ ಇರಲಿದೆ ಎಂದು ಮೊನ್ನೆಯಷ್ಟೇ ಐಎಂಎಫ್‌ ತನ್ನ ಜಾಗತಿಕ ಆರ್ಥಿಕ ಮುನ್ನೋಟ ವರದಿಯಲ್ಲಿ ಅಂದಾಜಿಸಿತ್ತು. ಅದರ ಬೆನ್ನಲ್ಲೇ ಈ ಹೇಳಿಕೆ ಹೊರ ಬಿದ್ದಿದೆ.

‘ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಗೆ ತಂದಿರುವುದು ವ್ಯಾಪಕ ಮತ್ತು ದೂರಗಾಮಿ ಪರಿಣಾಮ ಬೀರಲಿವೆ. ಇವುಗಳ ಪರಿಣಾಮವಾಗಿ ಅಲ್ಪಾವಧಿಯಲ್ಲಿ ಆರ್ಥಿಕ ಪ್ರಗತಿ ಕುಂಠಿತಗೊಂಡಿದೆ. ಇದು ತಾತ್ಪೂರ್ತಿಕವಾಗಿರಲಿದೆ. ಇತ್ತೀಚಿನ ವರ್ಷಗಳಲ್ಲಿ ಜಾರಿಗೆ ತಂದಿರುವ ಸುಧಾರಣಾ ಕ್ರಮಗಳ ಫಲವಾಗಿ ಮಧ್ಯಮಾವಧಿ ಮತ್ತು ದೀರ್ಘಾವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯು ಬೆಳವಣಿಗೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ.

‘ವಿತ್ತೀಯ ಕೊರತೆ ತಗ್ಗಿಸಿರುವುದು, ಹಣದುಬ್ಬರವು ಗಮನಾರ್ಹವಾಗಿ ಕಡಿಮೆಯಾಗಿರುವುದು ಮತ್ತು ಸುಧಾರಣಾ ಕ್ರಮಗಳಿಂದ ಉದ್ಯೋಗ ಅವಕಾಶಗಳು ಹೆಚ್ಚಲಿವೆ’  ಎಂದು ಲಗಾರ್ಡ್‌ ಹೇಳಿದ್ದಾರೆ.

2017ರಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಈ ಹಿಂದಿನ ಎರಡು ಅಂದಾಜುಗಳಿಗೆ ಹೋಲಿಸಿದರೆ ಶೇ 0.5ರಷ್ಟು ಕಡಿಮೆಯಾಗಿ ಶೇ 6.7ಕ್ಕೆ ಇಳಿಯಲಿದೆ. 2018ರಲ್ಲಿ ಶೇ 0.3ರಷ್ಟು ಕಡಿಮೆಯಾಗಿ ಶೇ 7.4ರಷ್ಟಾಗಲಿದೆ ಎಂದು ಐಎಂಎಫ್‌ ವರದಿಯಲ್ಲಿ ತಿಳಿಸಲಾಗಿತ್ತು.

Post Comments (+)