ರಣಜಿ ಕ್ರಿಕೆಟ್‌ ಪಂದ್ಯ: ಅಸ್ಸಾಂ ವಿರುದ್ಧ ಕರ್ನಾಟಕ ತಂಡಕ್ಕೆ ಭಾರಿ ಮುನ್ನಡೆ

ಸೋಮವಾರ, ಜೂನ್ 17, 2019
25 °C
ಗೌತಮ್‌, ಸಮರ್ಥ್‌ ಶತಕ ಸಂಭ್ರಮ

ರಣಜಿ ಕ್ರಿಕೆಟ್‌ ಪಂದ್ಯ: ಅಸ್ಸಾಂ ವಿರುದ್ಧ ಕರ್ನಾಟಕ ತಂಡಕ್ಕೆ ಭಾರಿ ಮುನ್ನಡೆ

Published:
Updated:
ರಣಜಿ ಕ್ರಿಕೆಟ್‌ ಪಂದ್ಯ: ಅಸ್ಸಾಂ ವಿರುದ್ಧ ಕರ್ನಾಟಕ ತಂಡಕ್ಕೆ ಭಾರಿ ಮುನ್ನಡೆ

ಮೈಸೂರು: ಅಸ್ಸಾಂ ತಂಡದ ಬೌಲಿಂಗ್‌ ವಿಭಾಗದ ದೌರ್ಬಲ್ಯಗಳನ್ನು ಬಯಲುಮಾಡಿ ಸೊಗಸಾದ ಶತಕ ಗಳಿಸಿದ ಕೆ.ಗೌತಮ್‌ (ಅಜೇಯ 147, 158 ಎಸೆತ) ಮತ್ತು ಆರ್‌.ಸಮರ್ಥ್‌ (123) ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಭಾರಿ ಮುನ್ನಡೆ ತಂದುಕೊಟ್ಟರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರದ ಆಟದ ಅಂತ್ಯಕ್ಕೆ ಆರ್‌.ವಿನಯ್‌ ಕುಮಾರ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 115 ಓವರ್‌ಗಳಲ್ಲಿ 6 ವಿಕೆಟ್‌ಗೆ 427 ರನ್‌ ಗಳಿಸಿದೆ. ಈ ಮೂಲಕ 282 ರನ್‌ಗಳ ಮುನ್ನಡೆ ಪಡೆದಿದ್ದು, ಋತುವಿನ ಮೊದಲ ಗೆಲುವಿಗೆ ವೇದಿಕೆ ಸಿದ್ಧಪಡಿಸಿಕೊಂಡಿದೆ.

ಮೊದಲ ದಿನ ಬೌಲಿಂಗ್‌ನಲ್ಲಿ ಮಿಂಚಿ ನಾಲ್ಕು ವಿಕೆಟ್‌ ಪಡೆದಿದ್ದ ಗೌತಮ್‌, ಭಾನುವಾರ ಚೊಚ್ಚಲ ಶತಕ ದಾಖಲಿಸಿ ಈ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಂಡರು. ಎರಡನೇ ದಿನ ಕರ್ನಾಟಕ 85 ಓವರ್‌ಗಳಲ್ಲಿ 4.11ರ ಸರಾಸರಿಯಲ್ಲಿ 350 ರನ್‌ ಕಲೆಹಾಕಿತು.

ಅವಳಿ ಆಘಾತ: ವಿಕೆಟ್‌ ನಷ್ಟವಿಲ್ಲದೆ 77 ರನ್‌ಗಳಿಂದ ದಿನದಾಟ ಆರಂಭಿಸಿದ ಕರ್ನಾಟಕ ಎಚ್ಚರಿಕೆಯಿಂದ ಇನಿಂಗ್ಸ್‌ ಬೆಳೆಸಿತು. ಸಮರ್ಥ್‌ ಮತ್ತು ಮಯಂಕ್‌ ಅಗರವಾಲ್‌ ಕ್ರಮವಾಗಿ 47 ಹಾಗೂ 26 ರನ್‌ಗಳಿಂದ ಬ್ಯಾಟಿಂಗ್‌ ಮುಂದುವರಿಸಿದರು. ಬೆಳಿಗ್ಗೆ ಮೋಡ ಕವಿದ ವಾತಾವರಣವಿದ್ದ ಕಾರಣ ಬ್ಯಾಟಿಂಗ್‌ ಕಷ್ಟಕರವಾಗಿತ್ತು.

ಮೊದಲ ವಿಕೆಟ್‌ ಜತೆಯಾಟವನ್ನು ಬೆಳೆಯಲು ಅರೂಪ್‌ ದಾಸ್‌ ಅವಕಾಶ ನೀಡಲಿಲ್ಲ. ಅವರು ಎಂಟನೇ ಓವರ್‌ನಲ್ಲಿ ಆತಿಥೇಯರಿಗೆ ಅವಳಿ ಆಘಾತ ನೀಡಿದರು. ಎರಡನೇ ಎಸೆತದಲ್ಲಿ ಮಯಂಕ್‌ (31, 93 ಎಸೆತ) ಅವರನ್ನು ಬೌಲ್ಡ್‌ ಮಾಡಿದರೆ, ಅಂತಿಮ ಎಸೆತದಲ್ಲಿ ಅಭಿಷೇಕ್‌ ರೆಡ್ಡಿ (0) ಅವರನ್ನು ವಿಕೆಟ್‌ ಕೀಪರ್‌ಗೆ ಕ್ಯಾಚ್‌ ಕೊಡಿಸಿದರು.

ಸಮರ್ಥ್‌, ಅಬ್ಬಾಸ್‌ ಆಸರೆ: ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಒತ್ತಡ ಅನುಭವಿಸಿದ ತಂಡಕ್ಕೆ ಸಮರ್ಥ್‌ ಮತ್ತು ಮೀರ್‌ ಕೌನೈನ್‌ ಅಬ್ಬಾಸ್‌ ಆಸರೆಯಾದರು. 44ನೇ ಓವರ್‌ನಲ್ಲಿ ಕರ್ನಾಟಕದ ಮೊತ್ತ 100 ರನ್‌ ಗಡಿ ದಾಟಿತು. ಮೊದಲ ಅವಧಿಯಲ್ಲಿ ಮಳೆ ಸುರಿದು 57 ನಿಮಿಷಗಳ ಆಟ ನಷ್ಟವಾಯಿತು. ಭೋಜನಕ್ಕೆ ತೆರಳುವ ವೇಳೆ ತಂಡ 2 ವಿಕೆಟ್‌ಗೆ 114 ರನ್‌ ಗಳಿಸಿತ್ತು.

ದಿನದ ಎರಡನೇ ಅವಧಿಯಲ್ಲಿ ಸ್ಕೋರಿಂಗ್‌ನ ವೇಗ ಹೆಚ್ಚಿತು. ಅಬ್ಬಾಸ್‌ ಮತ್ತು ಸಮರ್ಥ್‌ ಎದುರಾಳಿ ಬೌಲರ್‌ಗಳಿಗೆ ಚುರುಕು ಮುಟ್ಟಿಸಿದರು. ತಾಳ್ಮೆಯಿಂದ ಇನಿಂಗ್ಸ್‌ ಕಟ್ಟಿದ ಸಮರ್ಥ್‌ ಅವರು ರಾಹುಲ್‌ ಸಿಂಗ್‌ ಎಸೆದ 61ನೇ ಓವರ್‌ನ ಮೊದಲ ಎಸೆತವನ್ನು ಪಾಯಿಂಟ್‌ ಕಡೆ ತಳ್ಳಿ ಎರಡು ರನ್‌ ಕಲೆಹಾಕಿ ಶತಕ ಪೂರೈಸಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಗಳಿಸಿದ ಆರನೇ ಶತಕ ಇದು.

ಅಬ್ಬಾಸ್‌ (30, 79 ಎಸೆತ, 5 ಬೌಂ) ಅವರನ್ನು ತರ್ಜಿಂದರ್‌ ಸಿಂಗ್‌ಗೆ ಕ್ಯಾಚ್‌ ಕೊಡಿಸಿ ಔಟ್‌ ಮಾಡಿದ ಆಫ್‌ ಸ್ಪಿನ್ನರ್‌ ಸ್ವರೂಪಂ ಪುರಕಾಯಸ್ತ ಈ ಜತೆಯಾಟ ಮುರಿದರು. ಎರಡನೇ ವಿಕೆಟ್‌ಗೆ 98 ರನ್‌ ಮೂಡಿಬಂತು. ಶತಕ ಗಳಿಸಿದ ಬಳಿಕ ಸಮರ್ಥ್‌ ಹೆಚ್ಚುಹೊತ್ತು ನಿಲ್ಲಲಿಲ್ಲ. ಸ್ವರೂಪಂ ಅವರಿಗೆ ವಿಕೆಟ್‌ ಒಪ್ಪಿಸಿದರು. ಕ್ರೀಸ್‌ನಲ್ಲಿ ಐದು ಗಂಟೆ ಕಳೆದು 234 ಎಸೆತಗಳನ್ನು ಎದುರಿಸಿದ ಅವರು 10 ಬೌಂಡರಿ ಗಳಿಸಿದರು.

ಗೌತಮ್‌ ಅಬ್ಬರ: ದಿನದ ಕೊನೆಯ ಅವಧಿಯಲ್ಲಿ ಅಬ್ಬರಿಸಿದ ಗೌತಮ್ ಅವರು ಅಸ್ಸಾಂ ಬೌಲರ್‌ಗಳನ್ನು ತಬ್ಬಿಬ್ಬುಗೊಳಿಸಿದರು. ಸ್ಟುವರ್ಟ್‌ ಬಿನ್ನಿ (41, 54 ಎಸೆತ) ಜತೆ ಆರನೇ ವಿಕೆಟ್‌ಗೆ 128 ಎಸೆತಗಳಲ್ಲಿ 103 ರನ್‌ಗಳ ಜತೆಯಾಟ ನೀಡಿದರು. ಬಿನ್ನಿ ಔಟಾದ ಬಳಿಕ ಬಂದ ಶ್ರೇಯಸ್‌ ಗೋಪಾಲ್‌ (ಬ್ಯಾಟಿಂಗ್‌ 38) ಅವರು ಗೌತಮ್‌ಗೆ ತಕ್ಕ ಸಾಥ್‌ ನೀಡಿದರು. ಈ ಜೋಡಿ ಮುರಿಯದ ಏಳನೇ ವಿಕೆಟ್‌ಗೆ 128 ಎಸೆತಗಳಲ್ಲಿ 109 ರನ್‌ ಪೇರಿಸಿದೆ.

ಅಸ್ಸಾಂ ತಂಡದ ಎಲ್ಲ ಬೌಲರ್‌ಗಳ ಮೇಲೆ ಪ್ರಭುತ್ವ ಸಾಧಿಸಿದ ಗೌತಮ್‌ 10 ಬೌಂಡರಿ, ಆರು ಸಿಕ್ಸರ್‌ ಸಿಡಿಸಿ ತಮ್ಮ ಇನಿಂಗ್ಸ್‌ನ ಕಳೆ ಹೆಚ್ಚಿಸಿದರು. ರಾಹುಲ್‌ ಸಿಂಗ್‌ ಎಸೆತವನ್ನು ಮಿಡ್‌ ವಿಕೆಟ್‌ ಬೌಂಡರಿಗೆ ಅಟ್ಟಿ ರಣಜಿ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಪೂರೈಸಿದರು. ಶತಕದ ಬಳಿಕವೂ ಅವರ ಬ್ಯಾಟಿಂಗ್‌ ವೈಭವ ಮುಂದುವರಿಯಿತು.

ಅಸ್ಸಾಂ: ಮೊದಲ ಇನಿಂಗ್ಸ್‌ 59.1 ಓವರ್‌ಗಳಲ್ಲಿ 145

ಕರ್ನಾಟಕ ಮೊದಲ ಇನಿಂಗ್ಸ್‌ 115 ಓವರ್‌ಗಳಲ್ಲಿ 6 ವಿಕೆಟ್‌ಗೆ 427

(ಶನಿವಾರ 30 ಓವರ್‌ಗಳಲ್ಲಿ ವಿಕೆಟ್‌ನಷ್ಟವಿಲ್ಲದೆ 77)

ಆರ್‌.ಸಮರ್ಥ್‌ ಸಿ ತರ್ಜಿಂದರ್‌ ಸಿಂಗ್‌ ಬಿ ಸ್ವರೂಪಂ ಪುರಕಾಯಸ್ತ 123

ಮಯಂಕ್‌ ಅಗರವಾಲ್‌ ಬಿ ಅರೂಪ್‌ ದಾಸ್‌ 31

ಅಭಿಷೇಕ್‌ ರೆಡ್ಡಿ ಸಿ ರಹಮಾನ್‌ ಬಿ ಅರೂಪ್‌ ದಾಸ್‌ 00

ಮೀರ್‌ ಕೌನೈನ್‌ ಅಬ್ಬಾಸ್‌ ಸಿ ತರ್ಜಿಂದರ್‌ ಸಿಂಗ್‌ ಬಿ ಸ್ವರೂಪಂ ಪುರಕಾಯಸ್ತ 30

ಕೆ.ಗೌತಮ್‌ ಬ್ಯಾಟಿಂಗ್‌ 147

ಸಿ.ಎಂ.ಗೌತಮ್‌ ಎಲ್‌ಬಿಡಬ್ಲ್ಯು ಬಿ ಸ್ವರೂಪಂ ಪುರಕಾಯಸ್ತ 03

ಸ್ಟುವರ್ಟ್‌ ಬಿನ್ನಿ ಬಿ ಅರೂಪ್‌ ದಾಸ್‌ 41

ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ 38

ಇತರೆ: (ನೋಬಾಲ್‌–9, ಲೆಗ್‌ಬೈ–5) 14

ವಿಕೆಟ್‌ ಪತನ: 1–92 (ಮಯಂಕ್‌; 37.2), 2–92 (ಅಭಿಷೇಕ್‌; 37.6), 3–190 (ಅಬ್ಬಾಸ್‌; 66.3), 4–197 (ಸಮರ್ಥ್‌; 68.4), 5–215 (ಗೌತಮ್‌; 72.6), 6–318 (ಬಿನ್ನಿ; 93.4)

ಬೌಲಿಂಗ್‌: ಅರೂಪ್‌ದಾಸ್‌ 35–7–101–3, ಅಬೂ ನೆಚೀಮ್‌ ಅಹ್ಮದ್‌ 24–1–86–0, ಸ್ವರೂಪಂ ಪುರಕಾಯಸ್ತ 16–1–80–3, ರಾಹುಲ್‌ಸಿಂಗ್‌ 22–3–93–0, ಪಲ್ಲವ್‌ಕುಮಾರ್‌ದಾಸ್‌ 16–3–60–0, ಗೋಕುಲ್‌ಶರ್ಮಾ 2–0–2–0

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry