ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ಭರ್ಜರಿ ಜಯದ ಸಂಭ್ರಮ

Last Updated 15 ಅಕ್ಟೋಬರ್ 2017, 19:22 IST
ಅಕ್ಷರ ಗಾತ್ರ

ಗುರುದಾಸ್‌ಪುರ/ ಮಲ್ಲಪುರಂ: ಬಿಜೆಪಿ ಸಂಸದ ಹಾಗೂ ನಟ ವಿನೋದ್ ಖನ್ನಾ ಅವರ ನಿಧನದಿಂದ ತೆರವಾಗಿದ್ದ ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಬಿಜೆಪಿಯ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಗುರುದಾಸ್‌ಪುರ ದಲ್ಲಿಯ ಹೀನಾಯ ಸೋಲಿನಿಂದ ಬಿಜೆಪಿಯು ತೀವ್ರ ಮುಖಭಂಗ ಅನುಭವಿಸಿದೆ. ಹಲವು ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ಈ ಕ್ಷೇತ್ರವನ್ನು ಕಾಂಗ್ರೆಸ್‌ ಕಿತ್ತುಕೊಂಡಿದೆ.

ಮತ್ತೊಂದೆಡೆ ದಕ್ಷಿಣದಲ್ಲಿ ಕೇರಳದ ವೇಂಗರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲೂ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಭ್ಯರ್ಥಿ ಜಯಗಳಿಸಿದೆ. ಆಡಳಿತಾರೂಢ ಸಿಪಿಎಂ ಮುಜುಗರ ಅನುಭವಿಸಿದೆ. ನಾಲ್ಕನೇ ಸ್ಥಾನಕ್ಕೆ ಕುಸಿದ ಬಿಜೆಪಿ ಅಭ್ಯರ್ಥಿ ಕೇವಲ ಐದು ಸಾವಿರ ಮತ ಪಡೆದಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿದ್ದ ಕಾಂಗ್ರೆಸ್‌ ಪಾಳೆಯದಲ್ಲಿ ಈ ಎರಡು ಉಪ ಚುನಾವಣೆ ಫಲಿತಾಂಶಗಳು ದೀಪಾವಳಿಗೂ ಮುಂಚೆಗೆ ಹಬ್ಬದ ಸಂಭ್ರಮ ತಂದಿವೆ.

ಚಂಡೀಗಡ, ಗುರುದಾಸಪುರ, ಅಮೃತಸರ, ಲುಧಿಯಾನಾ, ಜಲಂಧರ್‌ನ ಕಾಂಗ್ರೆಸ್‌ ಕಚೇರಿ ಎದುರು ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಭಾರಿ ಅಂತರದ ಜಯ: ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಮಾಜಿ ಕೇಂದ್ರ ಸಚಿವ ಬಲರಾಂ ಜಾಖಡ್‌ ಅವರ ಪುತ್ರ ಸುನಿಲ್‌ ಜಾಖಡ್‌ 1,93,219 ಮತಗಳ ಭಾರಿ ಅಂತರದಿಂದ ಬಿಜೆಪಿ ಅಭ್ಯರ್ಥಿ ಸ್ವರಣ್‌ ಸಾಲಾರಿಯಾ ಅವರನ್ನು ಸೋಲಿಸಿದ್ದಾರೆ.

ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರೂ ಆಗಿರುವ ಜಾಖಡ್‌ 4,99,752 ಮತ ಪಡೆದರೆ, ಸಲಾರಿಯಾ 3,06,533 ಮತ ಪಡೆದಿದ್ದಾರೆ.

ಆಮ್‌ ಆದ್ಮಿ ಪಕ್ಷದ ನಿವೃತ್ತ ಮೇಜರ್‌ ಜನರಲ್‌ ಸುರೇಶ್‌ ಖಜುರಿಯಾ ಕೇವಲ 23,579 ಮತ ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಆಪ್‌ ಸ್ಪರ್ಧೆಯಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.

ಏಪ್ರಿಲ್‌ನಲ್ಲಿ ಕ್ಯಾನ್ಸರ್‌ನಿಂದ ಮೃತಪಟ್ಟ ಬಿಜೆಪಿ ಸಂಸದ ವಿನೋದ್‌ ಖನ್ನಾ ಅವರು ನಾಲ್ಕು ಬಾರಿ (1998,1999, 2004 ಮತ್ತು 2014ರಲ್ಲಿ) ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

2009ರಲ್ಲಿ ಒಂದು ಬಾರಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ ಸಿಂಗ್ ಬಾಜ್ವಾ ಅವರಿಂದ ಸೋಲುಂಡಿದ್ದರು.
*
ಯುಡಿಎಫ್‌ಗೆ ಗೆಲುವು: ಸಿಪಿಎಂಗೆ ಮುಜುಗರ, ನಾಲ್ಕನೇ ಸ್ಥಾನದಲ್ಲಿ ಬಿಜೆಪಿ
ಮಲಪ್ಪುರಂ (ಕೇರಳ): ಕೇರಳದ ಮಲಪ್ಪುರಂ ಜಿಲ್ಲೆಯ ವೇಂಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಅಂಗಪಕ್ಷವಾದ ದಿ ಇಂಡಿಯನ್‌ ಯುನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌) ಅಭ್ಯರ್ಥಿ ಕೆ.ಎನ್‌.ಎ ಖಾದರ್‌ ಜಯಗಳಿಸಿದ್ದಾರೆ.

ಖಾದರ್‌ ಅವರು ಸಿಪಿಎಂ ಅಭ್ಯರ್ಥಿ ಪಿ.ಪಿ. ಬಷೀರ್‌ ಅವರನ್ನು 23,310 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಖಾದರ್‌ 65,227, ಬಷೀರ್‌ 41,917 ಮತ ಪಡೆದಿದ್ದಾರೆ. ಎಸ್‌ಡಿಪಿಐನ ಕೆ.ಸಿ. ನಸೀರ್‌ 8,648 ಮತ್ತು ನಾಲ್ಕನೇ ಸ್ಥಾನದಲ್ಲಿರುವ ಬಿಜೆಪಿ ಅಭ್ಯರ್ಥಿ ಕೆ. ಜಯಚಂದ್ರನ್‌ ಮಾಸ್ಟರ್‌ ಕೇವಲ 5,728 ಮತ ಪಡೆದಿದ್ದಾರೆ. ಅಕ್ಟೋಬರ್‌ 11ರಂದು ಚುನಾವಣೆ ನಡೆದಿತ್ತು. ಈ ಕ್ಷೇತ್ರ ಮೊದಲು ಐಯುಎಂಎಲ್‌ ವಶದಲ್ಲಿತ್ತು.

2016ರಲ್ಲಿ ನಡೆದ ಚುನಾವಣೆಯ ಗೆಲುವಿನ ಅಂತರ ಕುಸಿದಿದೆ. ಯುಡಿಎಫ್‌ ಈ ಗೆಲುವು ಕೇವಲ ತಾಂತ್ರಿಕ ಗೆಲುವು ಎಂದು ಎಲ್‌ಡಿಎಫ್‌ ಪ್ರತಿಕ್ರಿಯಿಸಿದೆ.

ವೇಂಗರ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಕೆ. ಕುನ್ಹಾಲಿಕುಟ್ಟಿ ಅವರು ಐಯುಎಂಎಲ್‌ ಸಂಸದ ಇ.ಅಹ್ಮದ್‌ ಅವರ ನಿಧನದಿಂದ ತೆರವಾಗಿದ್ದ ಮಲಪ್ಪುರಂ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರಿಂದ ಶಾಸಕ ಸ್ಥಾನ ತೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT