ಮಳೆ ಅವಘಡ: ಏಳು ಬಲಿ

ಭಾನುವಾರ, ಮೇ 26, 2019
32 °C

ಮಳೆ ಅವಘಡ: ಏಳು ಬಲಿ

Published:
Updated:
ಮಳೆ ಅವಘಡ: ಏಳು ಬಲಿ

ಬೆಂಗಳೂರು: ರಾಜ್ಯದಲ್ಲಿ ವರ್ಷಧಾರೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಅವಘಡಕ್ಕೆ ಏಳು ಮಂದಿ ಬಲಿಯಾಗಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆಗೆ ಹಾನಿಯಾಗಿದೆ.

ರಾಮನಗರ ಜಿಲ್ಲೆಯಾದ್ಯಂತ ಶನಿವಾರ ರಾತ್ರಿಯಿಡೀ ಬಿರುಸಿನ ಮಳೆಯಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿದ್ದಾರೆ.

ಬಿಡದಿಯ ನೆಲ್ಲಿಗುಡ್ಡ ಕೆರೆಗೆ ಮೀನು ಬಲೆ ಹಾಕಲು ತೆರಳಿದ್ದ ಅವರೆಗೆರೆ ನಿವಾಸಿಗಳಾದ ಉಮೇಶ್‌ (28) ಹಾಗೂ ರವಿಕುಮಾರ್ (19) ಶನಿವಾರ ಸಂಜೆ ತೆಪ್ಪ ಮಗುಚಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಮಾಡಿ ಶವಗಳನ್ನು ಹೊರಕ್ಕೆ ತೆಗೆಯಲಾಯಿತು.

ರಾಮನಗರ ತಾಲ್ಲೂಕಿನ ತಿಮ್ಮಸಂದ್ರ–ಮೆಳೇಹಳ್ಳಿ ಬಳಿ ಭಾನುವಾರ ಬೆಳಿಗ್ಗೆ ಕಣ್ವ ಹೊಳೆಯ ನೀರಿನ ಹರಿವು ಕಣ್ತುಂಬಿಕೊಳ್ಳಲು ಬಂದಿದ್ದ ವೇಳೆ ಮಣ್ಣಿನ ದಿಬ್ಬ ಕುಸಿದು ಅರಳೀಮರದದೊಡ್ಡಿ ನಿವಾಸಿ ನಂದೀಶ್‌ (39) ಮೃತಪಟ್ಟಿದ್ದಾರೆ. ಗ್ರಾಮಸ್ಥರ ಜೊತೆ ಮೊಬೈಲಿನಲ್ಲಿ ಫೋಟೊ ತೆಗೆಯುತ್ತಿದ್ದಾಗ ನಿಂತಿದ್ದ ನೆಲ ಏಕಾಏಕಿ 20 ಅಡಿ ಆಳಕ್ಕೆ ಕುಸಿಯಿತು. ನಂದೀಶ್‌ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಹಳ್ಳಕ್ಕೆ ಬಿದ್ದ ಇನ್ನೂ ಇಬ್ಬರನ್ನು ಸ್ಥಳೀಯರು ರಕ್ಷಿಸಿದರು.

ಬೀದರ್ ಜಿಲ್ಲೆ ಬಸವಕಲ್ಯಾಣ ಎಂಜಿನಿಯರಿಂಗ್ ಕಾಲೇಜಿನ ನಿರ್ಮಾಣ ಹಂತದ ಕಟ್ಟಡದಲ್ಲಿ ನಿಂತಿದ್ದ ಮಳೆ ನೀರು ಖಾಲಿ ಮಾಡುವಾಗ ವಿದ್ಯುತ್ ಪ್ರವಹಿಸಿ ಸಿಬ್ಬಂದಿ, ಕೌಡಿಯಾಳದ ಅವಿನಾಶ ಹಿರೊಳ್ಳೆ (23) ಶನಿವಾರ ಮೃತಪಟ್ಟಿದ್ದಾರೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಮುಕ್ರಂಬಾದಲ್ಲಿ ಭಾನುವಾರ ಸಿಡಿಲು ಬಡಿದು ಶಂಕ್ರಪ್ಪ ಚೇಂಗಟಿ (40) ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿರುವಾಗ ಈ ಅವಘಡ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಶನಿವಾರ ಸುರಿದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ತುಂಬಿದ ಚರಂಡಿಗೆ ಬಿದ್ದು ಶಕ್ತಿ ನಗರದ ನರೇಂದ್ರ (30) ಮೃತಪಟ್ಟರೆ, ತಾಲ್ಲೂಕಿನ ಅಳಿ ಕೆಂಪನಹಳ್ಳಿಯಲ್ಲಿ ಮನೆ ಕುಸಿದು ತಿಪ್ಪಣ್ಣ (60)  ಸಾವಿಗೀಡಾಗಿದ್ದಾರೆ.

ಮಳೆಯಲ್ಲಿ ತುಂಬಿದ ಚರಂಡಿಗೆ ಬಿದ್ದು ರಾಯಚೂರು ಜಿಲ್ಲೆ ಶಕ್ತಿ ನಗರದ ನರೇಂದ್ರ (30) ಎಂಬುವವರು  ಮೃತಪಟ್ಟಿದ್ದಾರೆ. ರಸ್ತೆ ಜಾಲಾವೃತವಾಗಿದ್ದು, ರಸ್ತೆ ತಿಳಿಯದೆ ಚರಂಡಿಗೆ ಕಾಲಿಟ್ಟು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

1500 ಕೋಳಿ ಸಾವು

ಅಜ್ಜಂಪುರ ಪಟ್ಟಣದಲ್ಲಿ ಶನಿವಾರ ಸುರಿದ ಗಾಳಿ– ಮಳೆಗೆ ದಂದೂರು- ಕಾರೇಹಳ್ಳಿ ಗ್ರಾಮಗಳ ಮಾರ್ಗದಲ್ಲಿನ ಕೋಳಿ ಫಾರಂನ ಮೇಲ್ಚಾವಣಿ ಕುಸಿದು 1500ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ.

ದಂದೂರು ಗ್ರಾಮದ ಗುರುರಾಜ್ ಅವರು ಸಿಮೆಂಟ್‌ ಶೀಟ್‌ ಬಳಸಿ ಕೋಳಿ ಫಾರಂ ನಡೆಸುತ್ತಿದ್ದರು. ಶನಿವಾರ ಬೀಸಿದ ಗಾಳಿಗೆ ಫಾರಂನ ಶೀಟ್‌ಗಳು ತುಂಡಾಗಿ ಬಿದ್ದಿವೆ. ಪರಿಣಾಮ 13 ದಿನಗಳ ಹಿಂದೆ ಹುಟ್ಟಿದ್ದ ಕೋಳಿ ಮರಿಗಳು ಸಾವನ್ನಪ್ಪಿವೆ. ಅವುಗಳಿಗೆ ಆಹಾರ ನೀಡಲು ಬಳಸುತ್ತಿದ್ದ ಪರಿಕರಗಳೂ ನಾಶವಾಗಿವೆ.

ಬಿರುಸಿನ ಮಳೆಯಿಂದಾಗಿ ಶಿವನಿ ಭಾಗದಲ್ಲಿನ ರಾಗಿ ಬೆಳೆಯೂ ನೆಲಕಚ್ಚಿದೆ. 15  ದಿನಗಳಲ್ಲಿ ಕೊಯ್ಲಿಗೆ ಬರಲಿದ್ದ ರಾಗಿ ತೆನೆಗಳು ನೆಲಕ್ಕೆ ತಾಗಿವೆ.

ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶನಿವಾರ ರಾತ್ರಿ ಹಾಸನ ತಾಲ್ಲೂಕಿನ ಬಿಟ್ಟಗೌಡನಹಳ್ಳಿಯ ಕೆರೆ ಕಟ್ಟೆ ಒಡೆದು ಅಪಾರ ಬೆಳೆ ನಾಶವಾಗಿದೆ. ಕೆಲ ದಿನಗಳಿಂದ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ಸಾಕಷ್ಟು ಕಡೆಗಳಲ್ಲಿ ಅನಾವೃಷ್ಟಿ ಉಂಟಾಗಿದೆ. ರಾಗಿ, ಜೋಳ, ಶುಂಠಿ ಬೆಳೆಗೆ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಕುಸಿದ ಕೋಟೆ

ಶ್ರೀರಂಗಪಟ್ಟಣದ ಕೋಟೆ ಆಂಜನೇಯಸ್ವಾಮಿ ದೇವಾಲಯ ಬಳಿ, ರಾಂಪಾಲ್‌ ರಸ್ತೆಯ ಸಮೀಪ ಕೋಟೆ ಕುಸಿದಿದೆ. ಸುಮಾರು 10 ಮೀಟರ್‌ ಉದ್ದದ ಗೋಡೆ ನೆಲ ಕಚ್ಚಿದೆ. ಶತಮಾನಗಳ ಹಿಂದೆ ನಿರ್ಮಿಸಿರುವ ಕೋಟೆಯ ದಪ್ಪ ಕಲ್ಲುಗಳು ನೆಲಕ್ಕೆ ಉರುಳಿದ್ದು, ಕೋಟೆಯ ಅವಶೇಷಗಳು ಕಂದಕಕ್ಕೆ ಬಿದ್ದಿವೆ.

ಮನೆಗೋಡೆ ಕುಸಿತ

ಮಂಡ್ಯ ಜಿಲ್ಲೆಯ ಕೊಪ್ಪ ಹೋಬಳಿಯ ಕೆಲವು ಗ್ರಾಮಗಳಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಮನೆಯೊಂದರ ಗೋಡೆ ಕುಸಿದಿದ್ದು, ಅಕ್ಕಪಕ್ಕದ ಮನೆಗಳೂ ಕುಸಿಯುವ ಭೀತಿಯಲ್ಲಿವೆ. ಕೆಲವೆಡೆ ಮರಗಳು ರಸ್ತೆಗೆ ಉರುಳಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಗಳು ಮತ್ತು ಗುಡಿಸಲುಗಳಿಗೆ ನೀರು ನುಗ್ಗಿದೆ. ಉರ್ದು ಶಾಲೆಯ ಆವರಣ ಜಲಾವೃತಗೊಂಡಿದೆ. 10 ಮನೆಗಳು ಭಾಗಶಃ ಕುಸಿದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry