ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಒಂದಾಗಿ ಹೋಗಿ: ಜಾರಕಿಹೊಳಿ ಸಹೋದರರಿಗೆ ವೇಣುಗೋಪಾಲ್‌ ತಾಕೀತು

Published:
Updated:

ಬೆಳಗಾವಿ: ‘ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹಾಗೂ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಒಗ್ಗಟ್ಟಾಗಿ ಪಕ್ಷ ಸಂಘಟಿಸಲೇಬೇಕು.

ಸಹೋದರರಿಬ್ಬರೂ ಕಾರ್ಯಕರ್ತರನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು. ಇದು ಎಐಸಿಸಿ ಆದೇಶ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ತಾಕೀತು ಮಾಡಿದರು.

ಇಲ್ಲಿನ ಧರ್ಮನಾಥ ಭವನದಲ್ಲಿ ಭಾನುವಾರ ನಡೆದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಇಂದು ನಾವು ಏನೇ ಆಗಿದ್ದರೂ ಅದಕ್ಕೆ ಪಕ್ಷ ಕಾರಣ ಎನ್ನುವುದನ್ನು ಮರೆಯಬಾರದು. ಪಕ್ಷವಿಲ್ಲದಿದ್ದರೆ ನಾವು ಶೂನ್ಯ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇದ್ದರೆ, ಚರ್ಚೆ– ಸಮಾಲೋಚನೆ ಮೂಲಕ ಬಗೆಹರಿಸಿಕೊಳ್ಳಬೇಕು’ ಎಂದು ಜಾರಕಿಹೊಳಿ ಸಹೋದರರಿಗೆ ಸೂಚಿಸಿದರು.

‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಯಾರೋ ಒಬ್ಬ ವ್ಯಕ್ತಿ ಅದನ್ನು ನಿರ್ಧರಿಸುವುದಿಲ್ಲ. ಕಾಂಗ್ರೆಸ್‌ ಯಾರೊಬ್ಬರ ಆಸ್ತಿ ಅಲ್ಲ, ಸಾರ್ವಜನಿಕರ ಪಕ್ಷ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ, ಜನರೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಹಾಗೂ ಗೆಲ್ಲಬಹುದಾದ ಸಾಮರ್ಥ್ಯವಿರುವ ಅಭ್ಯರ್ಥಿಗೆ ಟಿಕೆಟ್‌ ದೊರೆಯುತ್ತದೆ. ಪಕ್ಷದ ಅಭ್ಯರ್ಥಿಯನ್ನು ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಬೆಂಬಲಿಸಬೇಕು’ ಎಂದು ಸೂಚಿಸಿದರು.

Post Comments (+)