ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಜ್ರ ಮಹೋತ್ಸವ ವೆಚ್ಚ ₹10 ಕೋಟಿಗೆ ಇಳಿಸಿ’

Last Updated 15 ಅಕ್ಟೋಬರ್ 2017, 19:41 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ ವಜ್ರಮಹೋತ್ಸವ ಆಚರಣೆಗಾಗಿ ₹ 26.87 ಕೋಟಿ ವೆಚ್ಚದ ಪ್ರಸ್ತಾವನೆಗೆ ಅನುಮೋದನೆ ನೀಡಲು ನಿರಾಕರಿಸಿರುವ ಹಣಕಾಸು ಇಲಾಖೆ ₹ 10 ಕೋಟಿ ವೆಚ್ಚದಲ್ಲೇ ಕಾರ್ಯಕ್ರಮ ಮುಗಿಸಿ ಎಂದು ಸೂಚಿಸಿದೆ.

ವಜ್ರ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಮುಂದಾಗಿದ್ದ ವಿಧಾನಸಭೆ ಮತ್ತು ಪರಿಷತ್ತಿನ ಸಚಿವಾಲಯ ಇದಕ್ಕಾಗಿ ದೊಡ್ಡ ಮೊಟ್ಟದ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ₹ 26.87 ಕೋಟಿ ವೆಚ್ಚದಲ್ಲಿ ₹ 5 ಕೋಟಿಯಷ್ಟು ಸರಕು ಮತ್ತು ಸೇವಾ ತೆರಿಗೆಗೆ ಹೋಗಲಿದೆ.

ಎರಡು ದಿನಗಳ ಕಾರ್ಯಕ್ರಮಕ್ಕೆ ಇಷ್ಟು ದೊಡ್ಡ ಮೊತ್ತಚ ಖರ್ಚು ಮಾಡಲು ಆಕ್ಷೇಪಿಸಿದ ಹಣಕಾಸು ಇಲಾಖೆ, ಯಾವುದಕ್ಕೆ ಎಷ್ಟು ಖರ್ಚಾಗಲಿದೆ ಎಂದು ಪೂರ್ಣ ವಿವರ ನೀಡುವಂತೆ ಸೂಚಿಸಿತ್ತು.

ಅತ್ಯಂತ ಸಂಭ್ರಮದಿಂದ ಎಲ್ಲರ ನೆನಪಿನಲ್ಲಿ ಉಳಿಯುವಂತೆ ಕಾರ್ಯಕ್ರಮ ನಡೆಸುತ್ತೇವೆ, ಅದಕ್ಕೆ ಇಷ್ಟು ಹಣ ಬೇಕು ಎಂದು ಸಚಿವಾಲಯ ಪ್ರತಿಪಾದಿಸಿತು. ಇದನ್ನು ಒಪ್ಪದ ಹಣಕಾಸು ಇಲಾಖೆ, ಇಷ್ಟು ಖರ್ಚು ಮಾಡುವುದು ಬೇಡ, ₹ 10 ಕೋಟಿ ವೆಚ್ಚದೊಳಗೆ ಕಾರ್ಯಕ್ರಮದ ವಿವರವನ್ನು ಒಳಗೊಂಡು ಪ್ರಸ್ತಾವನೆ ಸಲ್ಲಿಸಿ ಎಂದು ಕಡತ ವಾಪಸ್ ಕಳುಹಿಸಿತು.

ಮತ್ತೆ ಹಳೆಯ ಪ್ರಸ್ತಾವನೆಯನ್ನೇ ಸಚಿವಾಲಯ ಕಳುಹಿಸಿತು. ತನ್ನ ಆಕ್ಷೇಪಣೆಯೊಂದಿಗೆ ಕಡತವನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ಕಳುಹಿಸಿದ ಹಣಕಾಸು ಇಲಾಖೆ, ಒಪ್ಪಿಗೆ ನೀಡುವ ವಿವೇಚನಾಧಿಕಾರವನ್ನು ಅವರಿಗೆ ಬಿಟ್ಟಿದೆ.

ಅನುದಾನಕ್ಕೆ ಬೇಡಿಕೆ ಮಂಡಿಸಿದ ಕಡತ ಈಗ ಮುಖ್ಯಮಂತ್ರಿ ಬಳಿ ಇದೆ. ಶಾಸಕರಿಗೆ ಚಿನ್ನದ ಬಿಸ್ಕೆಟ್‌, ಸಿಬ್ಬಂದಿಗೆ ಬೆಳ್ಳಿತಟ್ಟೆ ನೀಡಲು ಮುಂದಾಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳ ಶಾಸಕರು ಇದರ ಬಗ್ಗೆ ತಕರಾರು ತೆಗೆದಿದ್ದಾರೆ.

ರಾಜ್ಯದಾದ್ಯಂತ ಮಳೆಯಿಂದ ಜನರು ಜೀವ ಕಳೆದುಕೊಳ್ಳುತ್ತಿರುವಾಗ, ಅವರ ನೆರವಿಗೆ ಧಾವಿಸಬೇಕಾದ ಸರ್ಕಾರ ಹಾಗೂ ಶಾಸನಸಭೆ, ವಜ್ರ ಮಹೋತ್ಸವದ ಹೆಸರಿನಲ್ಲಿ ದುಂದು ವೆಚ್ಚ ಮಾಡುವುದು ಅಗತ್ಯವಿತ್ತೇ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಎತ್ತಿದ್ದಾರೆ.

ಹೀಗಾಗಿ, ₹ 26.87 ಕೋಟಿ ವೆಚ್ಚಕ್ಕೆ ಮುಖ್ಯಮಂತ್ರಿ ಒಪ್ಪಿಗೆ ನೀಡುವುದು ಅನುಮಾನ ಎಂದು ಮೂಲಗಳು ಹೇಳಿವೆ.

'ನಾವು ಯಾರೂ ಬೆಳ್ಳಿ ತಟ್ಟೆ ಕೇಳಿರಲಿಲ್ಲ. ಅದರ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಯಿಂದಾಗಿ ನಾವು ಮುಜುಗರ ಅನುಭವಿಸುವಂತಾಗಿದೆ. ವಿಧಾನಸೌಧ ಕಟ್ಟಲು ₹ 1.73 ಕೋಟಿ ಖರ್ಚಾಗಿತ್ತು. ಅದರ ವಜ್ರ ಮಹೋತ್ಸವಕ್ಕೆ ₹ 27 ಕೋಟಿ ಎಂದರೆ ಹಾಸ್ಯಾಸ್ಪದ
ವಲ್ಲವೇ' ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಅಭಿ‍‍ಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT