ಮಂಗಳವಾರ, ಸೆಪ್ಟೆಂಬರ್ 17, 2019
25 °C

ರಜೆಯಲ್ಲೂ ಬೋಧನೆ: ಮಕ್ಕಳ ಮೇಲಿನ ಒತ್ತಡ ಅಧ್ಯಯನಕ್ಕೆ ಮನವಿ

Published:
Updated:

ಬೆಂಗಳೂರು: ‘ವಿಶ್ವಾಸ ಕಿರಣ’ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮಧ್ಯಂತರ ರಜೆ ಅವಧಿಯಲ್ಲೂ ವಿಶೇಷ ಬೋಧನೆ ಮಾಡಲಾಗುತ್ತಿದ್ದು, ಇದರಿಂದ ಮಕ್ಕಳ ಮೇಲೆ ಉಂಟಾಗುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಅಧ್ಯಯನ ನಡೆಸಬೇಕು ಎಂದು ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ಒತ್ತಾಯಿಸಿದೆ.

ಮಕ್ಕಳ ಕಲಿಕಾ ಮಟ್ಟವನ್ನು ಉತ್ತಮಪಡಿಸುವ ಉದ್ದೇಶದಿಂದ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆದು ವಿಶೇಷ ತರಬೇತಿ ನೀಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

‘ನಿರಂತರ ವಿದ್ಯಾಭ್ಯಾಸದಿಂದ ಮಕ್ಕಳ ಮೇಲೆ ಉಂಟಾಗುವ ಒತ್ತಡ ಕಡಿಮೆ ಮಾಡಲು ಮಧ್ಯಂತರ ರಜೆ ನೀಡಲಾಗುತ್ತದೆ. ಈ ರಜೆ ಅವಧಿಯಲ್ಲೂ ಬೋಧನೆ ಮಾಡುವುದರಿಂದ ಪ್ರತಿಕೂಲ ಪರಿಣಾಮದ ಬಗ್ಗೆ ತಜ್ಞರಿಂದ ಸ್ಪಷ್ಟ ಅಭಿಪ್ರಾಯಗಳನ್ನು ಪಡೆಯಬೇಕು ಎಂದು ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ ಹೇಳಿದ್ದಾರೆ.

ಶಿಕ್ಷಣ ಇಲಾಖೆಯಲ್ಲಿ ರಜಾ ರಹಿತ ನೌಕರರಾದ ಮುಖ್ಯ ಶಿಕ್ಷಕರು, ವಿಷಯ ಪರಿವೀಕ್ಷಕರು, ಶಿಕ್ಷಣ ಸಂಯೋಜಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಡಯಟ್ ಹಿರಿಯ ಮತ್ತು ಕಿರಿಯ ಉಪನ್ಯಾಸಕರನ್ನು ಮಾತ್ರ ವಿಶ್ವಾಸ ಕಿರಣ ಯೋಜನೆಯಡಿ ಬಳಸಿಕೊಳ್ಳಬೇಕು. ರಜಾ ಸಹಿತ ನೌಕರರಾಗಿರುವ ವಿಷಯ ಶಿಕ್ಷಕರಿಗೆ ರಜೆ ನೀಡಿ ಒತ್ತಡ ಮುಕ್ತ ಜೀವನ ನಡೆಸಲು ಅನುಕೂಲ ಕಲ್ಪಸಬೇಕು ಎಂದು ಆಗ್ರಹಿಸಿದ್ದಾರೆ.

ಆದರೂ ಈಗಾಗಲೇ ಪ್ರೌಢಶಾಲಾ ಸಹ ಶಿಕ್ಷಕರನ್ನು ಬೋಧನೆಗೆ ನೇಮಿಸಲಾಗಿದೆ. ಅವರಿಗೆ ವಿಶೇಷ ಗಳಿಕೆ ರಜೆ ಮಂಜೂರು ಮಾಡಬೇಕು ಎಂದೂ ಮಂಜುನಾಥ ಆಗ್ರಹಿಸಿದ್ದಾರೆ.

Post Comments (+)