ಅವ್ಯವಸ್ಥೆಯ ತಾಣ ನಗರಸಭೆ ಉದ್ಯಾನ

ಶನಿವಾರ, ಮೇ 25, 2019
22 °C

ಅವ್ಯವಸ್ಥೆಯ ತಾಣ ನಗರಸಭೆ ಉದ್ಯಾನ

Published:
Updated:
ಅವ್ಯವಸ್ಥೆಯ ತಾಣ ನಗರಸಭೆ ಉದ್ಯಾನ

ಬಾಗಲಕೋಟೆ: ಹೆಸರಿಗೆ ಮಾತ್ರ ಅದು ಉದ್ಯಾನ. ವಾಸ್ತವದಲ್ಲಿ ಬಾಳು ಬಿದ್ದ ಜಮೀನು. ಲಕ್ಷಾಂತರ ರೂಪಾಯಿ ವೆಚ್ಚಮಾಡಿ ನಿರ್ಮಿಸಿದ್ದ ನಗರಸಭೆಗೆ ಸಮರ್ಪಕ ನಿರ್ವಹಣೆ ಮಾಡಲು ಮಾತ್ರ ಆಸಕ್ತಿ ಇದ್ದಂತಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು ನವನಗರದ ಸೆಕ್ಟರ್ ನಂಬರ್ 29 ಮತ್ತು 30 ರಲ್ಲಿ ಇರುವ ಉದ್ಯಾನಗಳು ಕನಿಷ್ಠ ಮೂಲ ಸೌಲಭ್ಯಗಳಿಂದ ವಂಚಿತವಾಗಿ ಗಿಡಗಂಟಿಗಳು ಬೆಳೆದು ನಿಂತಿವೆ.

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ದುರ್ವಾಸನೆ ಬರುತ್ತಿದ್ದು, ಅನೈರ್ಮಲ್ಯ ಸೃಷ್ಟಿಯಾಗಿದೆ. ಈ ಕುರಿತು ಮಾತ ನಾಡಿದ ಸ್ಥಳೀಯ ನಾಗರಿಕ ವಿಜಯ್ ಹಂಚಿನಾಳ, ‘ಜನಪ್ರತಿನಿಧಿಗಳು ಹಾಗೂ ನಗರಸಭೆಯ ಅಧಿಕಾರಿಗಳಿಗೆ ಸ್ಥಳೀಯರು ಪ್ರತಿನಿತ್ಯ ಹಿಡಿಶಾಪ ಹಾಕಬೇಕಾಗಿದೆ. ಉದ್ಯಾನ ಸುತ್ತಲೂ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ. ಆದರೆ ಅದರ ಒಳಗಿನ ಖಾಲಿ ಜಾಗದಲ್ಲಿ ಮೊಣಕಾಲವರೆಗೆ ಹುಲ್ಲು, ಕಸಕಡ್ಡಿಗಳು, ಗಿಡಗಂಟಿಗಳು ಬೆಳೆದು ನಿಂತಿವೆ’ ಎಂದರು.

ಉದ್ಯಾನ ಎಂದಾಕ್ಷಣ ಮಕ್ಕಳ ಆಟಿಕೆ, ಜಾರುಬಂಡೆ, ಕಬ್ಬಿಣದ ಉಯ್ಯಾಲೆ, ಹೂವಿನ ಗಿಡ, ಮರಗಳು, ಆಸನಗಳು ಕಲ್ಪನೆಗೆ ಬರುವುದು ಸಾಮಾನ್ಯ. ಆದರೆ ನವನಗರದ 68 ಸೆಕ್ಟರ್‌ಗಳಲ್ಲಿರುವ ಬಹುತೇಕ ಉದ್ಯಾನಗಳು ಪಾಳು ಬಿದ್ದಿವೆ.

ರಾತ್ರಿಯಾದರೆ ಸಾಕು ಹಾವು, ಚೇಳುಗಳು ಕಾಣಸಿಗುತ್ತವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಮಹಿಳೆಯರು ಮತ್ತು ಮಕ್ಕಳು ರಾತ್ರಿ ಹೊತ್ತು ಹೊರಗಡೆ ಬರಲು ಹೆದರುತ್ತಿದ್ದು, ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಉದ್ಯಾನದಲ್ಲಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಬೆಳೆದು ನಿಂತಿರುವ ಕಸ ಕಡ್ಡಿಗಳ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ನಿರಾತಂಕವಾಗಿ ವಾಯು ವಿಹಾರ ನಡೆಸಲು ಪಾರ್ಕಿಂಗ್ ಟ್ರಾಕ್, ವಿದ್ಯುತ್ ದೀಪ ಅಳವಡಿಸಿಲ್ಲ ಎಂದು ನಿವಾಸಿ ಮಂಜುನಾಥ ಎನ್.ಆರೋಪಿಸಿದರು.

ಸಂಬಂಧಿಸಿದ ಅಧಿಕಾರಿಗಳು, ಆಯಾ ವಾರ್ಡ್‌ ಸದಸ್ಯರು ಮುತುವರ್ಜಿ ವಹಿಸಿ ಉದ್ಯಾನ ಅಭಿವೃದ್ಧಿಗೆ ಒತ್ತು ನೀಡಬೇಕು. ನಿರ್ವಹಣೆಗೆ ಹೆಚ್ಚಿನ ಮಹತ್ವ ನೀಡಬೇಕು. ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

‘ಉದ್ಯಾನವು ನಗರಸಭೆ ವ್ಯಾಪ್ತಿಗೆ ಬರುವುದಿಲ್ಲ. ಕೇವಲ ಸಮುದಾಯ ಭವನದ ನಿರ್ವಹಣೆ ನಮಗೆ ಸಂಬಂಧಿಸಿದ್ದು. ಉದ್ಯಾನದ ನಿರ್ವಹಣೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ’ ಎಂದು 27ನೇ ವಾರ್ಡ್‌ ಸದಸ್ಯೆ ಉಮಾ ಚಪ್ಪರಕಿ ಹೇಳಿದರು. ಈ ಬಗ್ಗೆ ನಗರಸಭೆ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಮೊಬೈಲ್ ಸ್ವಿಚ್‌ ಆಫ್ ಆಗಿತ್ತು.

ಮಹಾಂತೇಶ ಮಸಾಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry