ಶನಿವಾರ, ಸೆಪ್ಟೆಂಬರ್ 21, 2019
25 °C

ರಸ್ತೆ 5.5 ಮೀಟರ್ ಅಗಲಕ್ಕೆ ತೀರ್ಮಾನ

Published:
Updated:

ಮೆಳೇಕೋಟೆ (ದೊಡ್ಡಬಳ್ಳಾಪುರ): ತಾಲ್ಲೂಕಿನ ಮೆಳೇಕೋಟೆ ಗ್ರಾಮದಿಂದ ಮೆಳೇಕೋಟೆ ಕ್ರಾಸ್ ವರೆಗಿನ 1.9 ಕಿಮೀ ರಸ್ತೆ ಡಾಂಬರೀಕರಣ ಕಾಮಗಾರಿ ಕಾರ್ಯ ಆರಂಭವಾಗಿದೆ. 3.75 ಮೀಟರ್ ಅಗಲ ರಸ್ತೆ ಕಾಮಗಾರಿಗೆ ₹1.90 ಲಕ್ಷ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದೆ.

ಆದರೆ ಮತ್ತೆ ಎರಡು ಮೀಟರ್ ಹೆಚ್ಚುವರಿ ಅಗಲ ರಸ್ತೆ ನಿರ್ಮಾಣವಾಗಬೇಕೆಂಬ ಒತ್ತಾಯದ ಕಾರಣ ಮೆಳೇಕೋಟೆ ಗ್ರಾಮದ ಸ್ಥಳೀಯ ರಾಜಕೀಯ ಮುಖಂಡರು ಮತ್ತು ಇಲ್ಲಿನ ಯುವ ಸ್ಫೂರ್ತಿ ಟ್ರಸ್ಟ್ ಹಾಗೂ ಪಿಎಂಜಿಎಸ್‌ಐ ಕಾರ್ಯಪಾಲಕ ಎಂಜಿನಿಯರ್‌, ಗುತ್ತಿಗೆದಾರರ ಸಭೆ ಮೆಳೇಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಭೆ ನಡೆಯಿತು.

ಒಂದು ದಶಕದಿಂದ ನನೆಗುದಿಗೆ ಬಿದ್ದಿದ್ದ ಮೆಳೇಕೋಟೆ ಮತ್ತು ಮೆಳೇಕ್ರಾಸ್ ರಸ್ತೆ ತೀರ ಹದಗೆಟ್ಟಿತ್ತು. ಪರಿಣಾಮ ಸಾರ್ವಜನಿಕ ವಲಯದಲ್ಲಿ ಸ್ಥಳೀಯ ಆಡಳಿತ ಸೇರಿದಂತೆ ತಾಲ್ಲೂಕು ಆಡಳಿತದ ವಿರುದ್ಧ ವಾಗ್ದಾಳಿಗಳು ನಿರಂತರವಾಗಿದ್ದವು. ಗ್ರಾಮದ ರಾಜಕೀಯ ಮುಖಂಡರು ಮತ್ತು ಯುವ ಸ್ಪೂರ್ತಿ ಟ್ರಸ್ಟ್ ಒತ್ತಾಯದಿಂದ ‘ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ’ಯಡಿ ರಸ್ತೆ ಕಾಮಗಾರಿಗೆ ಅನುಮೋದನೆ ದೊರಕಿತ್ತು.

ಆದರೆ ಕೆರೆ ಏರಿಯ ಕೆಳಗೆ ನೀರು ಜಿನುಗುವುದರಿಂದ 3.75 ಮೀಟರ್ ರಸ್ತೆ ನಿರ್ಮಾಣವಾದರೆ ಮತ್ತೆ ರಸ್ತೆ ಹಾಳಾಗುತ್ತದೆ. ಅಲ್ಲದೆ ಚಿಕ್ಕಬಳ್ಳಾಪುರ ದೊಡ್ಡಬಳ್ಳಾಪುರ ಗಡಿ ಭಾಗದಲ್ಲಿರುವ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಸಮೀಪ ಕಲ್ಲುಗಣಿಗಾರಿಕೆ ನಡೆಯುತ್ತಿದೆ. ಭಾರಿ ಪ್ರಮಾಣದ ಲಾರಿಗಳು ಈ ರಸ್ತೆಯಲ್ಲಿ ಸಂಚರಿಸಲಿವೆ. ಇದರಿಂದ ರಸ್ತೆ ಬೇಗನೆ ಹಾಳಾಗುತ್ತದೆ. ಹೀಗಾಗಿ ಇಲ್ಲಿನ ಲಾರಿ ಮಾಲೀಕರ ಸಂಘದಿಂದ ಸುಮಾರು 150ಕ್ಕೂ ಹೆಚ್ಚು ಲೋಡ್ ಜಲ್ಲಿ ನೀಡಲು ಒಪ್ಪಿಗೆ ನೀಡಿದ್ದಾರೆ.

ಮೆಳೇಕೋಟೆ ಗ್ರಾಮ ಪಂಚಾಯಿತಿಯಿಂದ ಅಗತ್ಯ ಹಣ ನೀಡಲು ಒಪ್ಪಿಗೆ ನೀಡಿದ್ದು, 3.75 ಮೀಟರ್ ರಸ್ತೆಯನ್ನು 5.5 ಮೀಟರ್ ಅಗಲಕ್ಕೆ ಏರಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು. ಕೆರೆ ಕಟ್ಟೆ ಕೆಳಗಡೆ ರಸ್ತೆಗೆ ಹೊಂದಿಕೊಳ್ಳುವ ಕೋಡಿ ವ್ಯಾಪ್ತಿಯನ್ನು ಮತ್ತಷ್ಟು ಉನ್ನತೀಕರಣಕ್ಕೆ ನಿರ್ಧರಿಸಲಾಯಿತು.

ಮಳೇಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್.ಚಿದಾನಂದ್ ಪ್ರತಿ ಕ್ರಿಯೆ ನೀಡಿದ್ದು, 3.75 ಮೀಟರ್ ಅಗಲದ ರಸ್ತೆಯನ್ನು 5.5 ಮೀಟರ್ ಅಗಲಕ್ಕೆ ಹೆಚ್ಚಿಸಲು ಪಂಚಾಯಿತಿಯಿಂದ ಅಗತ್ಯ ಆರ್ಥಿಕ ಸಹಾಯ ನೀಡಲಾ ಗುವುದು. ಪಂಚಾಯಿತಿ ಸರ್ವ ಸದ ಸ್ಯರ ಸಭೆಯಲ್ಲಿ ಸರ್ವಾನುಮತದ ಅಂಗೀ ಕಾರವನ್ನು ದಾಖಲಿಸುತ್ತೇವೆ ಎಂದರು.

ಯೋಜನೆಯ ಕಾರ್ಯಪಾಲಕ ಎಂಜಿನಿಯರ್‌ ತಿಮ್ಮಯ್ಯ ಮಾತನಾಡಿ, ಸ್ಥಳೀಯ ಆಡಳಿತ ಮತ್ತು ಸ್ಥಳೀಯ ಮುಖಂಡರ ಒತ್ತಾಯಕ್ಕೆ ಇಲಾಖೆ ಅನುಮತಿ ನೀಡಿದೆ. ಉತ್ತಮ ಗುಣ ಮಟ್ಟದ ರಸ್ತೆಯನ್ನು ನಿರ್ಮಿಸುತ್ತೇವೆ ಎಂದರು.

ಸಭೆಯಲ್ಲಿ ಮುಖಂಡರಾದ ಎ. ಹನುಮಂತಯ್ಯ, ಎಂ.ಎಸ್.ಜಗನ್ನಾಥ್, ಎನ್.ಆಂಜಿನಪ್ಪ, ನಿವೃತ್ತ ಮುಖ್ಯ ಶಿಕ್ಷಕ ಎಂ.ಶಿವರುದ್ರಪ್ಪ, ಎಪಿಸಿಎಸ್ ನಿರ್ದೇಶಕ ಕೆ.ಮುನೇಗೌಡ, ಯುವ ಸ್ಫೂರ್ತಿ ಟ್ರಸ್ಟ್ ರಿಟ್ಟಾಲ್ ಎಂ.ವಿಜಯಕುಮಾರ್, ರಘುನಂದನ್, ಎಂ.ಎ.ಹರೀಶ್, ಅನಿಲ್‌ ಕುಮಾರ್, ರಾಮಾಂಜನೆಯ, ಸ್ಥಳೀಯ ಮುಖಂಡರು ಪಾಲ್ಗೊಂಡಿದ್ದರು.

Post Comments (+)