ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಮ್ಮನಹಳ್ಳಿಯ ಬಸವೇಶ್ವರ ನಗರದಲ್ಲಿ ಅಭಿವೃದ್ಧಿ ಮರೀಚಿಕೆ.

Last Updated 16 ಅಕ್ಟೋಬರ್ 2017, 5:27 IST
ಅಕ್ಷರ ಗಾತ್ರ

ಕುರುಗೋಡು: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಗೆ ಸಮೀಪದ ಸಿದ್ದಮ್ಮನಹಳ್ಳಿಯ ಬಸವೇಶ್ವರ ನಗರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕಲುಷಿತ ನೀರು ರಸ್ತೆಯಲ್ಲಿ ಸಂಗ್ರಹವಾಗಿದೆ. ಮಳೆ ಬಂದರೆ ಕಲುಷಿತ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.

ಚರಂಡಿ ನೀರಿನ ದುರ್ವಾಸನೆ ಜೊತೆಗೆ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಜನರು ಡೆಂಗಿ, ಚಿಕುನ್ ಗುನ್ಯಾ, ಮಲೇರಿಯಾ ರೋಗ ಭೀತಿಯಲ್ಲಿ ಜೀವಿಸುತ್ತಿದ್ದಾರೆ. ಇಲ್ಲಿನ ನಿವಾಸಿಗಳಾದ ಶ್ರಾವಣಿ, ಶಿಲ್ಪಾ, ಬುಡ್ಡಪ್ಪ ಮತ್ತು ಅನುಶ್ರೀ ಎಂಬುವರು ಡೆಂಗಿ ಜ್ವರದಿಂದ ಬಳ್ಳಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರದೇಶದ ಎಲ್ಲ ರಸ್ತೆಗಳಲ್ಲಿ ತಗ್ಗು, ಗುಂಡಿ ನಿರ್ಮಾಣಗೊಂಡಿವೆ. ಮಳೆಯಿಂದಾಗಿ ನೀರು ಸಂಗ್ರಹಗೊಂಡು ಜನ ಜಾನುವಾರುಗಳು ಸಂಚರಿಸುವುದು ಸಮಸ್ಯೆಯಾಗಿದೆ.
‘ಇಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಮಸ್ಯೆಗಳನ್ನೇ ಹೊತ್ತು ಮಲಗುವ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಕೆ.ಖಾಸೀಂ.

‘ಮನೆಯ ಮುಂದೆ ಗಲೀಜು ನೀರು ನಿಂತಾವ. ಅದನ್ನು ಕ್ಲೀನ್ ಮಾಡ್ರಿ ಅಂತ ಗ್ರಾಮ ಪಂಚಾಯ್ತಿಗೆ ಹೇಳಿದ್ರೆ ಏನು ಮಾಡಿಲ್ಲ. ಸೊಳ್ಳೆ ಹೆಚ್ಚಾಗಿ ಮನ್ಯಾಗ ಮಲಗೋಕೆ ಆಗುತ್ತಿಲ್ಲ. ನಮ್ಮನ್ಯಾಗ ಮಕ್ಕಳಿಗೆ ಮತ್ತು ಹಿರಿಯರಿಗೆ ಒಂದು ವಾರದಿಂದ ಜ್ವರ ಬರಾ ಕತ್ಯಾವ, ಏನು ಮಾಡಬೇಕು ಅಂತ ತಿಳಿದಿಲ್ಲ. ಓಟಾಕ್ಸಿಕೊಂಡಾರು ಈ ಕಡಿಮೆ ತಿರುಗಿ ನೋಡಿಲ್ಲ. ಐದು ವರ್ಸಕ್ಕೆ ಒಂದು ಬಾರಿ ಬರತಾರೆ’ ಎಂದು ಸ್ಥಳಕ್ಕೆ ಭೇಟಿ ಕೊಟ್ಟಿದ್ದ ‘ಪ್ರಜಾವಾಣಿ’ ಪ್ರತಿನಿಧಿ ಬಳಿ ಸ್ಥಳೀಯ ನಿವಾಸಿ ಚಂದ್ರಮ್ಮ ಮತ್ತು ಲಕ್ಷ್ಮಿ ಸಮಸ್ಯೆ ತೋಡಿಕೊಂಡರು.

1999ರಲ್ಲಿ ಗ್ರಾಮದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ನೀಡಿದ್ದರು. ಇಲ್ಲಿಯೂ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಒಟ್ಟು 164 ಮನೆಗಳಿದ್ದು, 600ಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಮಳೆ ಬಂದರೆ ನೀರು ಗುಡಿಸಲು ಮತ್ತು ಮನೆಗಳ ಒಳಗೆ ನುಗ್ಗಿ ಅನಾಹುತ ಸೃಷ್ಟಿಸುತ್ತಿದೆ. ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ಕೊಡಬೇಕು ಎಂದು ಶಿವಾನಂದ, ಸಿದ್ದಪ್ಪ, ರಿಂದಪ್ಪ ಮತ್ತು ಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT