ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ವೃತ್ತಗಳಲ್ಲಿ ಹೆಚ್ಚಿದ ದೂಳು

Last Updated 16 ಅಕ್ಟೋಬರ್ 2017, 5:41 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿ ಏಳು ವೃತ್ತಗಳಿ ದ್ದರೂ ಒಂದು ಸಹ ಅಂದವಾಗಿಲ್ಲ. ಬಸವೇಶ್ವರ ವೃತ್ತ, ಅಂಬೇಡ್ಕರ್‌ ವೃತ್ತ ಹಾಗೂ ಬೊಮ್ಮಗೊಂಡೇಶ್ವರ ವೃತ್ತಗಳಲ್ಲಿ ಮೂರ್ತಿಗಳಿಗೆ ಮಾತ್ರ ಪ್ರಾಮುಖ್ಯ ನೀಡಲಾಗಿದೆ. ವೃತ್ತಗಳಲ್ಲಿನ ರಸ್ತೆಗಳು ಸಂಪೂರ್ಣ ಕಿತ್ತುಕೊಂಡು ಹೋಗಿವೆ. ವಾಹನಗಳ ನಿರಂತರ ಓಡಾಟದಿಂದಾಗಿ ದೂಳು ಆವರಿಸಿಕೊಂಡು ಸಾರ್ವಜನಿಕರು ತೊಂದರೆ ಅನುಭವಿಸಬೇಕಾಗಿದೆ.

ನಗರದ ಕೇಂದ್ರ ಸ್ಥಾನದಲ್ಲಿರುವ ಬಸವೇಶ್ವರ ವೃತ್ತದಲ್ಲಿ ರಸ್ತೆ ಹಾಳಾಗಿ ಒಂದು ವರ್ಷ ಕಳೆದಿದೆ. ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪ್‌ ಅಳವಡಿಸಲು ರಸ್ತೆ ಅಗೆದ ನಂತರ ಸಾಧಾರಣ ಮಟ್ಟಿಗೆ ರಸ್ತೆ ದುರಸ್ತಿ ಮಾಡಿದರೂ ಕಾಮಗಾರಿ ಅಚ್ಚುಕಟ್ಟಾಗಿ ಆಗಿಲ್ಲ. ರಸ್ತೆ ಮೇಲೆ ಅಪಾರ ದೂಳು ತುಂಬಿಕೊಳ್ಳುತ್ತಿದೆ. ಸಂಚಾರ ಪೊಲೀಸ್‌ ಕಾನ್‌ಸ್ಟೆಬಲ್‌ಗಳು ಮೂಗು ಮುಚ್ಚಿಕೊಂಡು ವಾಹನ ಸಂಚಾರ ಒತ್ತಡ ನಿಯಂತ್ರಿಸಬೇಕಾಗಿದೆ.

ಸಮಗಾರ ಹರಳಯ್ಯ ವೃತ್ತದ ಬಳಿಯೂ ಇದೇ ಸ್ಥಿತಿ ಇದೆ. ರಸ್ತೆ ಮಧ್ಯೆ ಅಗೆದು ಒಳಚರಂಡಿ ಪೈಪ್‌ಗಳನ್ನು ಜೋಡಿಸಿದ ನಂತರ ಸರಿಯಾಗಿ ಮುಚ್ಚಿಲ್ಲ. ವೃತ್ತದಲ್ಲಿ ಅಲ್ಲಲ್ಲಿ ತಗ್ಗು ಬಿದ್ದಿವೆ. ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಂತೂ ಸಂಪೂರ್ಣ ಹದಗೆಟ್ಟಿದೆ.

ನಗರದ ಒಂದು ವೃತ್ತದಲ್ಲೂ ಜಿಬ್ರಾಕ್ರಾಸ್‌ ನಿರ್ಮಿಸಿಲ್ಲ. ಪಾದಚಾರಿ ಗಳು ವೃತ್ತದ ಮಧ್ಯೆಯೇ ನಡೆದು ಹೋಗುತ್ತಿರುವ ಕಾರಣ ಅವರನ್ನು ಆಚೆ ಕಳಿಸುವುದು ಪೊಲೀಸರಿಗೆ ತಲೆ ನೋವಾಗಿದೆ. ವೃತ್ತದ ಬಳಿ ಇರುವ ಹಂಪ್ಸ್‌ಗಳಿಗೆ ಬಣ್ಣ ಬಳಿದಿಲ್ಲ. ವೇಗವಾಗಿ ಬರುವ ವಾಹನಗಳು ಮೇಲಕ್ಕೆ ಜಿಗಿದು ಅಪಘಾತಕ್ಕೀಡಾಗುತ್ತಿವೆ.

ರಸ್ತೆ ಸುರಕ್ಷತಾ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಸಂಚಾರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು. ಆದರೆ ಈ ಸಮಿತಿ ಸಹ ಅಪರೂಪಕ್ಕೆ ಸಭೆ ಸೇರುತ್ತದೆ. ಹೀಗಾಗಿ ಜನರ ಸಮಸ್ಯೆಗೆ ಸ್ಪಂದಿಸುವವರೇ ಇಲ್ಲವಾಗಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ನಬಿ ಖರೇಶಿ ಹೇಳುತ್ತಾರೆ.

ಬೆಂಗಳೂರಿನಿಂದ ಈಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗವಾಗಿ ಬಂದಿರುವ ಡಿ.ದೇವರಾಜ್‌ ನಗರಸಭೆ ಹಾಗೂ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಅಧಿಕಾರಿಗಳನ್ನು ಸಂಪರ್ಕಿಸಿ ವೃತ್ತಗಳನ್ನು ದುರಸ್ತಿ ಪಡಿಸಿ ಜಿಬ್ರಾ ಕ್ರಾಸಿಂಗ್ ಗಳಿಗೆ ಬಣ್ಣ ಬಳಿಯುವಂತೆ ಸೂಚಿಸಿದ್ದಾರೆ.

ವೃತ್ತಗಳ ಅಭಿವೃದ್ಧಿ ಮಾಡಬೇಕು ಎನ್ನುವುದು ನಗರದ ಜನತೆಯ ಬಹುದಿನಗಳ ಬೇಡಿಕೆಯಾಗಿದೆ. ನಗರಸಭೆಯಲ್ಲಿ ಪ್ರಮುಖ ವಿಷಯಗಳು ಚರ್ಚೆಗೇ ಬರುವುದಿಲ್ಲ. ಪ್ರತಿ ಬಾರಿಯೂ ಗಟಾರ, ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆಯಲ್ಲಿ ಆಗುತ್ತಿರುವ ತೊಂದರೆ ಕುರಿತು ಪ್ರಸ್ತಾಪ ಆಗುತ್ತವೆ. ವೃತ್ತಗಳ ಅಭಿವೃದ್ಧಿ ವಿಷಯವನ್ನು ಅಧಿಕಾರಿಗಳೂ ಪ್ರಸ್ತಾಪ ಮಾಡುವುದಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT