ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆಗೆ ತಾಲ್ಲೂಕಿನಲ್ಲಿ ಹಿನ್ನಡೆ

Last Updated 16 ಅಕ್ಟೋಬರ್ 2017, 6:08 IST
ಅಕ್ಷರ ಗಾತ್ರ

ತರೀಕೆರೆ: ಜಾತಿ ವ್ಯವಸ್ಥೆ, ಸಂಪ್ರದಾಯ ಹಾಗೂ ಅರಿವಿನ ಕೊರತೆ ಒಂದೆಡೆಯಾದರೆ, ಅಂಗನವಾಡಿ ಕೇಂದ್ರದ ಅನನುಕೂಲತೆಯ ಕಾರಣ ದಿಂದಾಗಿ ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷಿ ‘ಮಾತೃಪೂರ್ಣ ಯೋಜನೆ’ಯು ತಾಲ್ಲೂಕಿನಲ್ಲಿ ಹಿನ್ನಡೆಯಾಗುವ ಲಕ್ಷಣಗಳು ಕಾಣುತ್ತಿವೆ.

ಅಪೌಷ್ಟಿಕತೆಯಿಂದ ಗರ್ಭಿಣಿಯರು ಹಾಗೂ ಬಾಣಂತಿಯರು ಎದುರಿ ಸುತ್ತಿರುವ ರಕ್ತ ಹೀನತೆಯ ಸಮಸ್ಯೆಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಜಾರಿಗೊಳಿಸಿದೆ. ಈ ಯೋಜನೆಗೆ ತಾಲ್ಲೂಕಿನಲ್ಲಿ ಒಟ್ಟು 3,250 ಗರ್ಭಿಣಿಯರು ಹಾಗು ಬಾಣಂತಿಯರನ್ನು ಗುರುತಿಸಲಾಗಿದ್ದು, 324 ಅಂಗನವಾಡಿ ಕೇಂದ್ರಗಳ ಮೂಲಕ ಸೌಲಭ್ಯ ಫಲಾನುಭವಿಗಳಿಗೆ ತಲುಪಬೇಕಿದೆ.

ಈ ಯೋಜನೆಯಂತೆ ಒಂದು ಫಲಾನುಭವಿಗೆ 150 ಗ್ರಾಂ ಅಕ್ಕಿ, 30 ಗ್ರಾಂ ತೊಗರಿ ಬೇಳೆ, 1 ಕೋಳಿ ಮೊಟ್ಟೆ, 50 ಗ್ರಾಂ ತರಕಾರಿ ಸೇರಿದಂತೆ ಮಸಾಲೆ ಪದಾರ್ಥಗಳ ಬಳಸಿ ಸ್ವಾದಿಷ್ಟ ಮಧ್ಯಾಹ್ನದ ಬಿಸಿಯೂಟವನ್ನು ಅಂಗನವಾಡಿ ಕೇಂದ್ರಗಳಲ್ಲಿ ತಯಾರಿಸಿ ಗರ್ಭಿಣಿಯರು ಹಾಗು ಬಾಣಂತಿಯರಿಗೆ ಉಣ ಬಡಿಸಬೇಕು. ಒಬ್ಬ ಫಲಾನುಭವಿಗಳಿಗೆ ₹ 21ರಂತೆ ತಾಲ್ಲೂಕಿನ ಎಲ್ಲ ಫಲಾನುಭವಿಗಳಿಗೆ ಮಾಸಿಕ ₹ 1,76,250 ವೆಚ್ಚ ಅಂದಾಜಿಲಾಗಿದೆ. 2017 ಡಿಸೆಂಬರ್‌ 31ರವರೆಗೆ ಸುಮಾರು ₹ 14,62,500 ಗಳನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಸಿಡಿಪಿಒ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

‘ಇಲಾಖೆ ವತಿಯಿಂದ ಮಾಮೂಲಿ ಯಂತೆ ಅಕ್ಕಿ, ಬೇಳೆ ಹಾಗೂ ಎಣ್ಣೆ ನೀಡಲಾಗುತ್ತಿದೆ. ಅಡುಗೆಗೆ ಸಾಸಿವೆ, ಬೆಳ್ಳುಳ್ಳಿ, ಈರುಳ್ಳಿ, ಕೋಳಿ ಮೊಟ್ಟೆ, ತರಕಾರಿ, ಸೊಪ್ಪು ತೆಂಗಿನಕಾಯಿಯನ್ನು ನಾವೇ ನಮ್ಮ ದುಡ್ಡಲ್ಲಿ ಕೊಂಡು ಬಿಸಿಯೂಟ ತಯಾರಿಸುತ್ತಿದ್ದೇವೆ . ಈ ತನಕ ಹಣ ಪಾವತಿ ಆಗಿಲ್ಲ’ ಎಂದು ಕೆಲ ಅಂಗನವಾಡಿ ಕಾರ್ಯಕರ್ತೆಯರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಕೆಲವೊಂದು ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಗರ್ಭಿಣಿಯರು ನೆಲದ ಮೇಲೆ ಊಟಕ್ಕೆ ಕೂರಲು ಸಾಧ್ಯವಿಲ್ಲದ ಸ್ಥಿತಿ ಇದೆ.
ಗಾಳಿ ಮತ್ತು ಬೆಳಕು ಇಲ್ಲದಿರುವುದು ಹಾಗೂ ಸ್ವಚ್ಛತೆಯ ಕೊರತೆ ಫಲಾನುಭವಿಗಳನ್ನು ಅಂಗನವಾಡಿ ಕೇಂದ್ರದಿಂದ ದೂರಸರಿಯುವಂತೆ ಮಾಡುತ್ತಿದೆ’ ಎಂಬುದು ಸಾರ್ವಜನಿಕರ ಆರೋಪ.

‘ಸೊಸೈಟಿಯ ಕಳಪೆ ಅಕ್ಕಿ ಅನ್ನ ಉಣ್ಣಲು ಇಲ್ಲಿಗೆ ಬರಬೇಕಾ? ಎಂತಹ ಬಡವರೇ ಇರಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿಶೇಷ ಊಟೋಪಚಾರ ಮಾಡಿ ಅವರ ಆತ್ಮವಿಶ್ವಾಸ ಹೆಚ್ಚಿಸುವುದು ಭಾರತೀಯ ಕುಟುಂಬಗಳ ಸಂಪ್ರದಾಯ’ ಎನ್ನುತ್ತಾರೆ ಫಲಾನುಭವಿಗಳ ಪೋಷಕರು.

ಕೇಂದ್ರಗಳಲ್ಲಿ ಈಗಾಗಲೇ ಬಿಸಿ ಯೂಟ ಉಣ್ಣಲು ತಯಾರಿಲ್ಲದ ಫಲಾನುಭವಿಗಳು ಊಟ ಬೇಡವೇ ಬೇಡ ಎಂದು ಕೇಂದ್ರಗಳ ಮೂಲಕ ಸರ್ಕಾರಕ್ಕೆ ಮನವಿ ನೀಡ ತೊಡಗಿದ್ದಾರೆ. ಊಟ ತಯಾರು ಮಾಡದಿದ್ದರೆ ಇಲಾ ಖೆಯ ಅಧಿಕಾರಿಗಳು ಕ್ರಮವಹಿಸುವ ಎಚ್ಚರಿಕೆಯನ್ನು ಕಾರ್ಯಕರ್ತೆ ಯರಿಗೆ ನೀಡಿದ್ದಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತೆಯರು ಅಡಕತ್ತರಿಯಲ್ಲಿ ಸಿಕ್ಕಿ ಹಾಕಿ ಕೊಂಡಂತಹ ಸ್ಥಿತಿ ನಿರ್ಮಾಣವಾಗಿದೆ.

ಇಲಾಖೆಯ ವಿವಿಧ ಅನುದಾನ ಬಳಸಿ ಯೋಜನೆ ಕಾರ್ಯಗತಗೊಳಿಸಲು ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ಪಟ್ಟಣ ಸೇರಿಂದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಸಹ ಅಸಹಕಾರ ಕಂಡು ಬರುತ್ತಿದೆ. ಯೋಜನೆಯ ಲಾಭವನ್ನು ಫಲಾನುಭವಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎನ್ನುತ್ತಾರೆ ಪ್ರಭಾರ ಸಿಡಿಪಿಓ ಸಾವಿತ್ರಿ.
ದಾದಾಪೀರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT