ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಕೋಳಿ ಫಾರಂ ಮೇಲ್ಚಾವಣಿ ಕುಸಿದು 1500 ಕೋಳಿ ಸಾವು

Last Updated 16 ಅಕ್ಟೋಬರ್ 2017, 6:14 IST
ಅಕ್ಷರ ಗಾತ್ರ

ಅಜ್ಜಂಪುರ: ನಗರದಲ್ಲಿ ಶನಿವಾರ ಸುರಿದ ಗಾಳಿ– ಮಳೆಗೆ ದಂದೂರು- ಕಾರೇಹಳ್ಳಿ ಗ್ರಾಮಗಳ ಮಾರ್ಗದಲ್ಲಿನ ಕೋಳಿ ಫಾರಂನ ಮೇಲ್ಚಾವಣಿ ಕುಸಿದು 1500ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ.

ಗ್ರಾಮದ ಗುರುರಾಜ್ ಅವರು ಸಿಮೆಂಟ್‌ ಶೀಟ್‌ ಬಳಸಿ ಕೋಳಿ ಫಾರಂ ನಡೆಸುತ್ತಿದ್ದರು. ಶನಿವಾರ ಬೀಸಿದ ಗಾಳಿಗೆ ಶೀಟ್‌ಗಳು ತುಂಡಾಗಿ ಬಿದ್ದಿವೆ. ಪರಿಣಾಮ 13 ದಿನಗಳ ಕೋಳಿಗಳು ಸಾವನ್ನಪ್ಪಿವೆ. ಅವುಗಳಿಗೆ ಆಹಾರ ನೀಡಲು ಬಳಸುತ್ತಿದ್ದ ಫೀಡರ್ಸ್, ನೀರು ಪೂರೈಸುವ ಡ್ರಿಂಕರ್ಸ್ ಕೂಡಾ ನಾಶವಾಗಿವೆ. ಜತೆಗೆ ಬ್ರೀಡಿಂಗ್ ಲೈಟ್ ಹಾಗೂ ವಿದ್ಯುತ್ ಸಂಪರ್ಕಿಸುವ ವಯರ್‌, ನೀರು ಪೂರೈಸುವ ಪೈಪ್‌ಗಳು ತುಂಡಾಗಿ ನಷ್ಟ ಸಂಭವಿಸಿದೆ.

ಕೋಳಿಗಳಿಗಾಗಿ ಸಂಗ್ರಹಿಸಲಾಗಿದ್ದ 50ಕೆಜಿ ತೂಕದ 35 ಆಹಾರದ ಚೀಲಗಳು ತೊಯ್ದು ಹಾಳಾಗಿವೆ. ಕೋಳಿಗಳ ಸಂರಕ್ಷಣೆಗಾಗಿ ಬಳಸಲಾಗುತ್ತಿದ್ದ ಹಲವು ಚೀಲ ಭತ್ತದ ಒಟ್ಟೂ ಕೂಡಾ ಅನುಪಯುಕ್ತವಾಗಿದೆ ಎಂದು ಫಾರಂ ಮಾಲೀಕ ಗುರುರಾಜ್ ತಿಳಿಸಿದರು.

ಸ್ವಯಂ ಉದ್ಯೋಗ ಕಂಡುಕೊಳ್ಳುವ ನಿಟ್ಟಿನಲ್ಲಿ ಕೋಳಿ ಫಾರಂ ಆರಂಭಿಸಿದ್ದೆ. ಆದರೆ, ಒಂದೇ ದಿನದ ಜೋರು ಗಾಳಿ– ಮಳೆ ಎಲ್ಲವನ್ನೂ ನಾಶಮಾಡಿತು. ಫಾರಂ ಬಿದ್ದಾಗ ಕೋಳಿಗಳ ನರಳಾಟ ಮತ್ತು ಸಾವು ನೋವು ತರಿಸಿದೆ. ಜತೆಗೆ ಲಕ್ಷಾಂತರ ರೂಪಾಯಿ ನಷ್ಟವೂ ಆಗಿದೆ. ಈ ಅನುಹುತಕ್ಕೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.

ರಾಗಿ ಬೆಳೆ ನಾಶ: ಜೋರು ಮಳೆಯಿಂದಾಗಿ ಶಿವನಿ ಭಾಗದಲ್ಲಿನ ರಾಗಿ ಬೆಳೆಯೂ ನೆಲಕಚ್ಚಿದೆ. ಮುಂದಿನ ಹದಿನೈದು ದಿನಗಳಲ್ಲಿ ಕೊಯ್ಲಿಗೆ ಬರಲಿದ್ದ ರಾಗಿ ತೆನೆಗಳು ನೆಲಕ್ಕೆ ತಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಣ ಸಮೀಪ ನಾರಣಾಪುರ ಭಾಗದ ಕೃಷಿ ಜಮೀನಿಗಳಲ್ಲಿ ಮಳೆ ನೀರು ನಿಂತಿದೆ. ಹೀಗಾಗಿ ಕೃಷಿ ಜಮೀನುಗಳಲ್ಲಿ ಬೆಳೆದಿರುವ ಈರುಳ್ಳಿ ಗಡ್ಡೆಗಳು ಕೊಳೆಯುವ ಹಂತಕ್ಕೆ ತಲುಪುತ್ತಿವೆ. ಹೆಚ್ಚಿನ ಮಳೆಯಿಂದಾಗಿ ಭೂಮಿಯಿಂದ ಈರುಳ್ಳಿ ಕೀಳಲು ಆಗದೇ, ಹೊಲದಿಂದ ಹೊರತರಲು ಆಗದೇ ಪರಿತಪಿಸುತ್ತಿರುವ ಕೆಲವು ರೈತರಿಗೆ ಹೆಚ್ಚಿನ ಮಳೆ ಶಾಪವಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT