ಶನಿವಾರ, ಸೆಪ್ಟೆಂಬರ್ 21, 2019
24 °C

ನಿರ್ವಹಣೆಯಾಗದ ತ್ಯಾಜ್ಯದಿಂದಲೂ ಸಮಸ್ಯೆ ಉಲ್ಬಣ

Published:
Updated:
ನಿರ್ವಹಣೆಯಾಗದ ತ್ಯಾಜ್ಯದಿಂದಲೂ ಸಮಸ್ಯೆ ಉಲ್ಬಣ

ಚಿತ್ರದುರ್ಗ: ಪ್ರತಿ ಬಾರಿ ಮಳೆ ಸುರಿದಾಗಲೆಲ್ಲ ಕಾಲುವೆಯಿಂದ ಹೆಚ್ಚುವರಿಯಾಗಿ ಹರಿದ ನೀರು ನಗರದ ವಿಆರ್‌ಎಸ್‌ ಲೇಔಟ್‌ಗೆ ನುಗ್ಗುತ್ತದೆ. ಬಿ.ಡಿ.ರಸ್ತೆಯಲ್ಲಿ ನೀರು ರಸ್ತೆಗೆ ಹರಿಯುವುದು ‘ಸಂಪ್ರದಾಯ’ವಾಗಿದೆ. ನೆಹರೂ ನಗರದ ಮೂರು ಕ್ರಾಸ್‌ಗಳಿಗೂ ಮೂರು ದಿನಗಳಿಂದಲೂ ಕಾಲುವೆ ಮೇಲ್ಭಾಗದಿಂದ ನೀರು ಹರಿದು ಮನೆಗಳಿಗೆ ನುಗಿದೆ..!

ಮಳೆ ನೀರು ಮನೆಗಳಿಗೆ ನುಗ್ಗುವ ಇಂಥ ಘಟನೆಗಳಿಗೆ ಪ್ರತ್ಯಕ್ಷವಾಗಿ ರಾಜಕಾಲುವೆ ಒತ್ತುವರಿ ಎಂಬ ಕಾರಣ ದೊರೆಯುತ್ತದೆ. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ, ಈ ಒತ್ತುವರಿ ಜತೆಗೆ, ಕಾಲುವೆಯೊಳಗೆ ಸೇರುವ ತ್ಯಾಜ್ಯದ ರಾಶಿಯೂ ಪರೋಕ್ಷವಾಗಿ ಕಾರಣ ಎಂಬುದು ಸ್ಪಷ್ಟವಾಗುತ್ತದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ, ಕಾಲುವೆಗಳನ್ನು ಪರಿಶೀಲಿಸಿದಾಗ, ರಾಶಿ ರಾಶಿ ತ್ಯಾಜ್ಯ ಕಾಲುವೆಯಲ್ಲಿರುವುದು ಗಮನಕ್ಕೆ ಬಂದಿತು.

ರಾಜಕಾಲುವೆ ಆಸುಪಾಸಿನ ನಿವಾಸಿ ಗಳಲ್ಲಿ ಕೆಲವರು ಮನೆಯಲ್ಲೇ ನಿಂತು ತ್ಯಾಜ್ಯದ ಬುಟ್ಟಿಗಳನ್ನು ಕಾಲುವೆಗೆ ಎಸೆಯುತ್ತಾರೆ. ಭಾನುವಾರ ಬೆಳಿಗ್ಗೆ ಸಚಿವ ಆಂಜನೇಯ ಅವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ಅರ್ಧ ಗಂಟೆ ಮುನ್ನ ನೆಹರೂ ನಗರದಲ್ಲಿ ನಿವಾಸಿಯೊಬ್ಬರು ಕಾಲುವೆಗೆ ತ್ಯಾಜ್ಯದ ಬುಟ್ಟಿ ಎಸೆದಿದ್ದು ಕಂಡು ಬಂತು.

ತ್ಯಾಜ್ಯ ನಿರ್ವಹಣೆ ಸಮಸ್ಯೆ: ಎಲ್ಲೆಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆಯೋ ಅಲ್ಲೆಲ್ಲ ಕಾಲುವೆಗಳಲ್ಲೂ ತ್ಯಾಜ್ಯ ತುಂಬಿಕೊಂಡು, ನೀರು ಮುಂದಕ್ಕೆ ಹರಿಯದಂತಾಗಿದೆ. ಜ್ಞಾನವಿಕಾಸ ಶಾಲೆ ಎದುರಿನ ಕಾಲುವೆ ಮೇಲಿನ ಸ್ಲ್ಯಾಬ್ ತೆಗೆದ ಮೇಲೆ, ಅದರೊಳಗೆ ರಾಶಿ ರಾಶಿ ತ್ಯಾಜ್ಯವಿದ್ದದ್ದು ಕಂಡು ಬಂತು. ಮೆದೇಹಳ್ಳಿ ರಸ್ತೆಯಲ್ಲಿ ಈದ್ಗಾ ಮೊಹಲ್ಲಾ ಬಳಿಯ ರಾಜಕಾಲುವೆಯಲ್ಲೂ ಹೀಗೆ ತ್ಯಾಜ್ಯ ತುಂಬಿಕೊಂಡಿದೆ.

ಪರಿಣಾಮವಾಗಿ ಇತ್ತೀಚೆಗೆ ಸುರಿದ ಮಳೆನೀರು ಈ ಕಾಲುವೆ ಮೇಲೆ ಹರಿದು, ಪಕ್ಕದ ಬಡಾವಣೆಯ ನಿವಾಸಿಗಳನ್ನು ನಿದ್ದೆಗೆಡಿಸಿದ ಎಂದು ನಿವಾಸಿಗಳಾದ ಸಾದತ್, ರಫಿಕ್ ‘ಪತ್ರಿಕೆ’ಗೆ ತಿಳಿಸಿದರು. ರಾಜಕಾಲುವೆಗಳು ಆರಂಭದಲ್ಲಿ ದೊಡ್ಡದಾಗಿದ್ದು, ನಂತರ ಕಿರಿದಾಗಿವೆ. ಅದರೊಂದಿಗೆ ತ್ಯಾಜ್ಯವೂ  ಸೇರಿಕೊಂಡರೆ ನೀರು ಹರಿಯಲು ಸಾಧ್ಯವಾಗದೇ ಅವಾಂತರ ಸೃಷ್ಟಿಯಾಗುತ್ತದೆ. ಇಂಥ ಸಮಸ್ಯೆ ಮೆದೇಹಳ್ಳಿ ರಸ್ತೆಯ ಮುಂದುವರಿದ ಭಾಗವಾದ ಅಯ್ಯಪ್ಪಸ್ವಾಮಿ ದೇವಸ್ಥಾನದ ಆಸುಪಾಸಿನ ಕಾಲುವೆಗಳಲ್ಲೂ ಇದೆ.

ತೆಗೆಯದ ಮರಳಿನ ರಾಶಿ: ಹೆದ್ದಾರಿ ಬದಿಯ ರಾಜಕಾಲುವೆಗಳಲ್ಲಿ ತ್ಯಾಜ್ಯದ ಜತೆಗೆ ಮರಳಿನ ರಾಶಿಯೂ ಸೇರುತ್ತಿದೆ. ತುರುವನೂರು ರಸ್ತೆಗೆ ಹೊಂದಿಕೊಂಡಿರುವ ಸರ್ವೀಸ್ ರಸ್ತೆಗೆ ಹೊಂದಿಕೊಂಡಿರುವ ವಿಆರ್‌ಎಸ್‌ ಲೇಔಟ್‌ ಇಂಥ ಸಮಸ್ಯೆಯಿಂದ ಪರಿತಪಿಸುತ್ತಿದೆ. ‘ಕಾಲುವೆಗಳಲ್ಲಿ ಮುಕ್ಕಾಲು ಭಾಗ ಮರಳು ಹಾಗೂ ಹೂಳು ಸೇರಿಕೊಂಡು, ಮಳೆ ನೀರು ಹರಿವಿಗೆ ಅಡ್ಡವಾಗಿದೆ. ಪರಿಣಾಮವಾಗಿ ಲೇಔಟ್‌ನ ಮನೆಗಳಿಗೆ ನೀರು ನುಗ್ಗಿತು.

‘ಈ ಬಗ್ಗೆ ಎನ್‌ಎಚ್‌ಎಐಗೆ ದೂರು ನೀಡಿದ್ದೆವು. ಪ್ರಯೋಜನವಾಗಿರಲಿಲ್ಲ’ ಎಂದು ಅಲ್ಲಿನ ನಿವಾಸಿ ದಯಾನಂದ್ ಸಮಸ್ಯೆ ಹೇಳಿಕೊಂಡರು. ಭಾನುವಾರ ಮಧ್ಯಾಹ್ನ ಈ ರಾಜಕಾಲುವೆಗಳನ್ನು ಜೆಸಿಬಿಯಿಂದ ತೆರವುಗೊಳಿಸುತ್ತಿದ್ದಾಗ, ಒಂದೊಂದು ಬದಿಯಿಂದ ಒಂದು ಟ್ರ್ಯಾಕ್ಟರ್‌ ಲೋಡ್‌ನಷ್ಟು ಮರಳು ಸಂಗ್ರಹವಾಗಿರುವುದು ಕಂಡು ಬಂತು.

‘ರಾಜಕಾಲುವೆ ಸ್ವಚ್ಛಗೊಳ್ಳುವುದಿಲ್ಲ’: ‘ಸಣ್ಣ ಪುಟ್ಟ ಚರಂಡಿ ಸ್ವಚ್ಛಗೊಳಿಸುವ ನಗರಸಭೆಯವರು, ರಾಜಕಾಲುವೆಗೆ ಕೈ ಹಾಕುವುದಿಲ್ಲ. ಪರಿಣಾಮವಾಗಿ ಮಳೆ ನೀರು ಹರಿವಿಗೆ ತೊಂದರೆಯಾಗುತ್ತಿದೆ’ ಎಂಬುದು ನಾಗಕರಿಕರ ಸಾಮಾನ್ಯ ಆರೋಪ.  ಈ ಕುರಿತು ಪೌರಾಯುಕ್ತ ಚಂದ್ರಪ್ಪ ಅವರನ್ನು ಕೇಳಿದಾಗ, ‘ಹಾಗೇನಿಲ್ಲ. ಆಗಾಗ್ಗೆ ಸ್ವಚ್ಛಗೊಳಿಸುತ್ತೇವೆ. ದೂರು ಬಂದರೆ ಸ್ಪಂದಿಸಿ, ಕ್ಲೀನ್ ಮಾಡಿಸಿದ್ದೇವೆ. ಆದರೆ, ಜನರು, ವಾಹನಕ್ಕೆ ಕಸ ಹಾಕುವುದನ್ನು ಬಿಟ್ಟು ಚರಂಡಿಗೆ ಎಸೆಯುತ್ತಾರೆ. ತ್ಯಾಜ್ಯ ಪ್ರಮಾಣ ಹೆಚ್ಚಾಗುತ್ತದೆ’ ಎಂದು ಪ್ರತಿಕ್ರಿಯಿಸುತ್ತಾರೆ.

‘ಎಲ್ಲೆಂದರಲ್ಲಿ ಕಸ ಹಾಕುವವರಿಗೆ ದಂಡ ಹಾಕಿದ್ದೇವೆ. ದಂಡ ಕೊಟ್ಟು ತಪ್ಪು ಮಾಡುವವರ ಸಂಖ್ಯೆ ಹೆಚ್ಚಿದೆ. ಜನರಲ್ಲಿ ಸಾಮಾಜಿಕ ಹಾಗೂ ಪರಿಸರ ಪ್ರಜ್ಞೆ ಮೂಡಬೇಕು’ ಎನ್ನುತ್ತಾರೆ ಅವರು. ‘ಕಸ ತೆಗೆದರೂ, ಅದನ್ನು ತಕ್ಷಣ ವಿಲೇವಾರಿ ಮಾಡುವುದಿಲ್ಲ. ಬಿ.ಡಿ.ರಸ್ತೆಯಲ್ಲಿ ಹೀಗೆ ಮಾಡಿದ್ದರಿಂದ, ಮಳೆ ಬಂದಾಗ ಕಸ ಮತ್ತೆ ಕಾಲುವೆಗೆ ಸೇರಿಕೊಂಡಿದೆ’ ಎಂಬುದು ಕೆಲವು ಅಂಗಡಿಯವರು ಅಭಿಪ್ರಾಯ.

‘ಎಲ್ಲೋ  ಒಮ್ಮೆ ಹಾಗಾಗಿರ ಬಹುದು. ನಮ್ಮ ಸಿಬ್ಬಂದಿ ಅದನ್ನು ತೆರವುಗೊಳಿಸುತ್ತಾರೆ’ ಎಂದು ಚಂದ್ರಪ್ಪ ಸಮರ್ಥಿಸುತ್ತಾರೆ. ಈ ಎಲ್ಲ ಘಟನೆಗಳಿಂದ ರಾಜಕಾಲುವೆಯ ತ್ಯಾಜ್ಯ ನಿರ್ವಹಣೆ ಕೂಡ ಬಹುದೊಡ್ಡ ಸಮಸ್ಯೆ ಎಂದು ಅರಿವಿಗೆ ಬಂದಿರುವ ಹಿನ್ನೆಲೆಯಲ್ಲಿ ನಗರಸಭೆಯವರು ಈಗಾಗಲೇ  ಕಾಲುವೆಗಳ  ಸ್ವಚ್ಛತೆಗೆ ಮುಂದಾಗಿದ್ದಾರೆ. ಸಾರ್ವಜನಿಕರ ಸಹಕಾರ ಕೇಳುತ್ತಿದ್ದಾರೆ.

Post Comments (+)