ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಯಾಂಗದ ಸ್ವಾಯುತ್ತತೆ ಜತೆ ರಾಜಿ ಇಲ್ಲ’

Last Updated 16 ಅಕ್ಟೋಬರ್ 2017, 6:36 IST
ಅಕ್ಷರ ಗಾತ್ರ

ಧಾರವಾಡ: ‘ದೇಶದ ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕಾದರೆ ನ್ಯಾಯಾಂಗ ವ್ಯವಸ್ಥೆಯ ಸ್ವಾಯುತ್ತತೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಯುವ ವಕೀಲರ ಮೇಲಿದೆ’ ಎಂದು ಸುಪ್ರಿಂಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ ಹೇಳಿದರು.

ಇಲ್ಲಿನ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ನಡೆದ 20ನೇ ಎಸ್‌.ಸಿ ಜವಳಿ ಸ್ಮಾರಕ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನ್ಯಾಯಾಂಗಕ್ಕೆ ಸ್ವಾಯುತ್ತತೆ ಇರದಿದ್ದರೆ ಅದಕ್ಕೆ ಅರ್ಥವಿಲ್ಲ. ಸ್ವಾಯುತ್ತತೆ ಇಲ್ಲದ ವ್ಯವಸ್ಥೆಯ ಭಾಗವಾಗುವುದರಿಂದ ಏನೂ ಪ್ರಯೋಜನ ಇಲ್ಲ. ದೇಶದ ಜನತೆ ನ್ಯಾಯಾಂಗದ ಮೇಲೆ ಅಪಾರ ನಂಬಿಕೆ ಮತ್ತು ಅಪೇಕ್ಷೆ ಇಟ್ಟುಕೊಂಡಿದ್ದಾರೆ. ಹೀಗಾಗಿ ಸ್ವಾಯುತ್ತತೆಗೆ ಧಕ್ಕೆಯಾಗದಂತೆ ಮುಂದಿನ ಪೀಳಿಗೆ ಕಾಳಜಿವಹಿಸಬೇಕು’ ಎಂದು ಸಲಹೆ ನೀಡಿದರು.

‘ವಕೀಲಿ ವೃತ್ತಿ ಸರಳವಲ್ಲ. ಆದರೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ, ನಿರಂತರ ಅಧ್ಯಯನದ ಮೂಲಕ ಈ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ಹಣ ಮಾಡುವುದು ಮತ್ತು ಬದುಕುವುದು ಮಾತ್ರ ವಕೀಲಿ ವೃತ್ತಿಯ ಉದ್ದೇಶವಲ್ಲ. ಇದರ ಹೊರತಾಗಿ ಉತ್ತಮ ಸಮಾಜ ನಿರ್ಮಾಣ ಮಾಡುವ ಗುರುತರ ಹೊಣೆಗಾರಿಕೆ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮೇಲಿದೆ. ಈ ವೃತ್ತಿಯಲ್ಲಿ ಯಾವುದೇ ರೀತಿಯ ಅವ್ಯವಹಾರಗಳಿಗೆ ಅವಕಾಶವಾಗದಂತೆ ನೋಡಿಕೊಳ್ಳಬೇಕು’ ಎಂದರು.

‘ಈ ಕ್ಷೇತ್ರಕ್ಕೆ ಬರುವ ಮುಂದಿನ ಪೀಳಿಗೆ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಕೆಲವು ಸರಳ ಸೂತ್ರಗಳನ್ನು ಪಾಲಿಸಬೇಕು. ಕೇವಲ ಕಾನೂನಿನ ಜ್ಞಾನ, ಪ್ರಕರಣದ ಮುಖ್ಯ ಸಂಗತಿಗಳು ಗೊತ್ತಿದ್ದರೆ ಯಶಸ್ವಿ ವಕೀಲರಾಗಲು ಸಾಧ್ಯವಿಲ್ಲ. ಅದರ ಜೊತೆ ಪ್ರಕರಣವನ್ನು ನಾವು ಹೇಗೆ ಪ್ರಸ್ತುತಪಡಿಸುತ್ತೇವೆ. ನ್ಯಾಯ ನಿರ್ಣಯ ಮಾಡುವ ನ್ಯಾಯಾಧೀಶರಿಗೆ ಆ ಸಂಗತಿಗಳನ್ನು ಹೇಗೆ ಮನವರಿಕೆ ಮಾಡಿಕೊಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ’ ಎಂದು ಹೇಳಿದರು.

‘ಯಾವುದೇ ಪ್ರಕರಣದಲ್ಲಿ ವಾದ ಮಂಡನೆ ಮಾಡುವಾಗ ನಿಧಾನವಾಗಿ, ಅರ್ಥವಾಗುವಂತೆ, ಆಕರ್ಷಕ ಶೈಲಿಯಲ್ಲಿ ವಾದ ಮಂಡಿಸಿ. ನಿಮ್ಮ ವಾದವನ್ನು ನ್ಯಾಯಾಧೀಶರು ಹೇಗೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಗಮನಿಸಿ, ಪ್ರಕರಣದ ಸಂಗತಿಗಳನ್ನು ಪರಿಣಾಮಕಾರಿಯಾಗಿ ತಿಳಿಸುವ ಪ್ರಯತ್ನ ಮಾಡಬೇಕು. ಅಂದಾಗ ಯೋಗ್ಯ ನ್ಯಾಯ ದೊರೆಯುತ್ತದೆ. ಜತೆಗೆ ವೃತ್ತಿಯಲ್ಲೂ ಯಶಸ್ಸು ನಿಮ್ಮದಾಗುತ್ತದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕವಿವಿ ಕುಲಪತಿ ಪ್ರೊ.ಪ್ರಮೋದ ಗಾಯಿ, ಕೆ.ಎಲ್‌.ಹೈದರಾಬಾದಿ, ಡಾ.ವಿ.ಎ. ಅಮ್ಮಿನಭಾವಿ, ಡಾ.ವಿಶ್ವನಾಥ ಎಂ., ನ್ಯಾ.ಸುಭಾಸ ಅಡಿ, ಹಿರಿಯ ವಕೀಲ ಶರತ್ ಜವಳಿ, ಕೆ.ಬಿ.ನಾವಲಗಿಮಠ ಇದ್ದರು. ಸ್ಪರ್ಧೆಯಲ್ಲಿ ದೇಶದ ವಿವಿಧ ಕಾನೂನು ಕಾಲೇಜುಗಳ 40 ತಂಡಗಳು ಭಾಗವಹಿಸಿದ್ದವು. ಬೆಂಗಳೂರು ಕಾನೂನು ಕಾಲೇಜು ತಂಡ – ಚಾಂಪಿಯನ್‌, ಕೇರಳದ ಎರ್ನಾಕುಲಂನ ಸರ್ಕಾರಿ ಕಾನೂನು ಮಹಾವಿದ್ಯಾಲಯ ರನ್ನರ್‌ಅಪ್ ಪ್ರಶಸ್ತಿ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT