ಸೋಮವಾರ, ಸೆಪ್ಟೆಂಬರ್ 16, 2019
21 °C

ಜ್ಯೋತಿ ಬೆಳಗಿ ಭೀತಿ ಕಳೆಯಲಿ

Published:
Updated:

ಲಕ್ಷ್ಮೇಶ್ವರ: ಬೆಳಕಿನ ಹಬ್ಬ ದೀಪಾವಳಿ ನಾಡಿಗೆ ಅತ್ಯಂತ ದೊಡ್ಡ ಹಬ್ಬ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದೆಡೆಗೆ ಕರೆದೊಯ್ಯುವ ಆಚರಣೆ. ಇದರ ದ್ಯೋತಕವಾಗಿ ಎಲ್ಲರ ಮನೆಗಳ ಮುಂದೆ ತಿಂಗಳ ಕಾಲ ಹಣತೆ ಹಾಗೂ ಆಕಾಶ ಬುಟ್ಟಿಗಳು ಮಿನುಗುತ್ತವೆ. ಮನೆಯ ಹೆಣ್ಣುಮಕ್ಕಳಿಗೆ ಹಬ್ಬದ ಸಂದರ್ಭದಲ್ಲಿ ಬಿಡುವಿಲ್ಲದ ಕೆಲಸ. ಮನೆ ಸ್ವಚ್ಛಗೊಳಿಸುವುದರಿಂದ ಆರಂಭವಾಗುವ ಅವರ ಹಬ್ಬದ ಸಂಭ್ರಮ ನಿರಂತರವಾಗಿ ಸಾಗುತ್ತವೆ.

ಲಕ್ಷ್ಮೇಶ್ವರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ದೀಪಾವಳಿಯನ್ನು ನಾಲ್ಕು ದಿನಗಳವರೆಗೆ ಆಚರಿಸುತ್ತಾರೆ. ಒಂದನೇ ದಿನ ನೀರು ತುಂಬುವ ಹಬ್ಬ. ಅಂದು ಎಲ್ಲರೂ ಕಾಯಿಸುವ ಹಂಡೆಗೆ ನೀರು ತುಂಬಿಡುವುದು ವಾಡಿಕೆ. ಅಲ್ಲದೆ ಹಂಡೆಯ ಕುತ್ತಿಗೆ ಸುತ್ತಲೂ ಬೇಲಿಯಲ್ಲಿ ಬೆಳೆಯುವ ಮಾಲಿಂಗನ ಬಳ್ಳಿಯನ್ನು ಕಾಯಿಸಹಿತ ಕಿತ್ತು ತಂದು ಕಟ್ಟುತ್ತಾರೆ. ಈ ಬಳ್ಳಿಯಲ್ಲಿ ಔಷಧ ಗುಣಗಳು ಇವೆ ೆಂಬುದು ವಿಶೇಷ.

ಎರಡನೇ ದಿನ ನರಕ ಚತುರ್ದಶಿ. ಅಂದು ನರಕಾಸುರನ ವಧೆಯಾದ ದಿನ. ಇಂದು ನಸುಕಿನಲ್ಲಿಯೇ ಮಕ್ಕಳಿಗೆ ಅಭ್ಯಂಜನ ಸ್ನಾನ ಮಾಡಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆರೋಗ್ಯದ ದೃಷ್ಟಿಯಿಂದ ವರ್ಷಕ್ಕೊಮ್ಮೆಯಾದರೂ ಅಭ್ಯಂಜನ ಸ್ನಾನ ಮಾಡಲೇಬೇಕು ಎನ್ನುತ್ತಾರೆ ಹಿರಿಯರು.

ಮೂರನೇ ದಿನ ಅಮಾವಾಸ್ಯೆ. ಈ ದಿನ ಎಲ್ಲರ ಮನೆ ಮತ್ತು ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ನೆರವೇರುತ್ತದೆ. ಕೆಲವರು ಐದು ಜನ ಮುತ್ತೈದೆಯರನ್ನು ಮನೆಗೆ ಬರಮಾಡಿಕೊಂಡು ಅವರನ್ನೇ ಲಕ್ಷ್ಮೀ ಎಂದು ಭಾವಿಸಿ ಪೂಜೆ ಸಲ್ಲಿಸುತ್ತಾರೆ. ಈ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವ ಮುತ್ತೈದೆಯರು ಬೆಳಗಿನಿಂದ ಉಪವಾಸ ಇರಬೇಕಾಗುತ್ತದೆ. ಸಂಜೆ ಆಹ್ವಾನ ನೀಡಿದವರು ಇವರನ್ನು ಮನೆಗೆ ಬರಮಾಡಿಕೊಂಡು ಲಕ್ಷ್ಮೀ ಪೂಜೆ ನಂತರ ಊಟ ಬಡಿಸುತ್ತಾರೆ. ಅಲ್ಲಿಗೆ ಅವರ ಉಪವಾಸ ವ್ರತ ಮುಗಿಯುತ್ತದೆ.

ನಾಲ್ಕನೇ ದಿನ ಅತ್ಯಂತ ಮಹತ್ವದ್ದು. ಅಂದು ದೀಪಾವಳಿ ಪಾಡ್ಯ. ಹಳ್ಳಿ ಮತ್ತು ಪಟ್ಟಣಗಳಲ್ಲಿ ಅಂದು ರೈತರು ಜಾನುವಾರುಗಳನ್ನು ಕಟ್ಟುವ ಹಟ್ಟಿ ಶುಚಿಗೊಳಿಸಿ ಅಲ್ಲಿ ಸಗಣಿಗೆಯಿಂದ ಸಿದ್ಧಪಡಿಸಿದ ಪಾಂಡವರನ್ನು (ಹಟ್ಟೆವ್ವ) ಪ್ರತಿಷ್ಠಾಪಿಸಿ ಕಾಡು ಮತ್ತು ಹೊಲಗಳಲ್ಲಿ ಬೆಳೆಯುವ ಉತ್ರಾಣಿ, ಹೊನ್ನರಿಕೆ ಮತ್ತು ಕೋಲಾಣಿ ಹೂವುಗಳಿಂದ ಶೃಂಗಾರ ಮಾಡುತ್ತಾರೆ.

ಸೆಗಣಿಯಿಂದ ತಯಾರಿಸಿದ ಪಾಂಡವರನ್ನು ಮನೆ ಬಾಗಿಲು, ದೇವರ ಜಗುಲಿ, ಒಲೆ ಹತ್ತಿರ ಇಡಲಾಗುತ್ತದೆ. ವಿಶೇಷವಾಗಿ ಪಾಂಡವರನ್ನು ಆಕಳು ಸಗಣಿಯಿಂದ ತಯಾರಿಸಲಾಗುತ್ತೆ. ಸಗಣಿ ರೋಗ ನಿರೋಧಕ ಶಕ್ತಿ ಹೊಂದಿದೆ. ಪಾಂಡವರ ರೂಪದಲ್ಲಿ ಇದನ್ನು ಇಡುವುದರಿಂದ ಮನೆಗಳಲ್ಲಿ ವಿಷ ಜಂತುಗಳು ಸುಳಿಯುವುದಿಲ್ಲ ಎಂಬ ನಂಬಿಕೆ ಜನರದ್ದು. ಇನ್ನು ಸಂಜೆ ಆಗುತ್ತಿದ್ದಂತೆ ಪಾಂಡವರನ್ನು ಮನೆಗಳ ಕುಂಬಿಗಳ ಮೇಲೆ ಸಾಲಾಗಿ ಇಡುತ್ತಾರೆ. ಇದು ಹಿಂದಿನಿಂದ ನಡೆದು ಬಂದ ಪದ್ಧತಿ.

 

Post Comments (+)