ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಚ್ಚಿ ಹೋದ ರಸ್ತೆ, ಸೇತುವೆಗಳು!

Last Updated 16 ಅಕ್ಟೋಬರ್ 2017, 6:49 IST
ಅಕ್ಷರ ಗಾತ್ರ

ರೋಣ: ಸತತ ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿದ್ದ ತಾಲ್ಲೂಕಿನ ರೈತರು ಕಳೆದ ತಿಂಗಳು ಸುರಿದ ಮಳೆಯಿಂದ ಸಂತಸಗೊಂಡಿದ್ದರು. ಸಾಲಸೋಲ ಮಾಡಿ ಈರುಳ್ಳಿ, ಕಡಲೆ, ಜೋಳ, ಶೇಂಗಾ ಸೇರಿ ಹಲವು ಹಿಂಗಾರು ಬೆಳೆಗಳ ಬಿತ್ತನೆ ಮಾಡಿದ್ದರು. ಆದರೆ, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲ ಬೆಳೆಗಳು ಮಳೆ ನೀರಿನಲ್ಲಿ ಮುಳುಗಿದ್ದು, ರೈತ ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅತಿಯಾದ ಮಳೆಯಿಂದಾಗಿ ರೈತರು ಮುಂದೆ ಏನು ಮಾಡಬೇಕು ಎಂದು ದಿಕ್ಕುಗಾಣದೇ ಕಂಗಾಲಾಗಿದ್ದಾರೆ.

ಅಪಾರ ಬೆಳೆ ಹಾನಿ: ತಾಲ್ಲೂಕಿನ ಹೊಳೆ ಆಲೂರು, ಯಾ.ಸ ಹಡಗಲಿ, ಬೆಳವಣಕಿ, ಬಿ.ಎಸ್.ಬೇಲೇರಿ, ಗಾಡಗೋಳಿ, ಬಸರಕೊಡ, ಹೊಳೆಮಣ್ಣೂರ, ಮೆಣಸಗಿ ಕೌಜಗೇರಿ ಅಸೂಟಿ ಗ್ರಾಮಗಳ ಮೂಲಕ ಹಾದು ಹೋಗುವ ಮಲಪ್ರಭಾನದಿ ಹಾಗೂ ಬೆಣ್ಣೆಹಳ್ಳ ತುಂಬಿ ಹರಿಯುತ್ತಿರುವುದರಿಂದ ಹೊಲಗಳಲ್ಲಿ ನೀರು ತುಂಬಿ ಬೆಳೆ ಕೊಳೆಯುತ್ತಿವೆ. ಹೊಲದ ತುಂಬ ನೀರು ನಿಂತಿರುವುದರಿಂದ ಹೊಲಗಳು ಕೆರೆಗಳಂತಾಗಿವೆ. ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವುದು ನಿರರ್ಥಕವಾಗಿದ್ದು, ರೈತರ ಕೈಗೆ ಬಂದ ತುತ್ತು ಬಾಯಿಗೆ ಬರದಾಂತಾಗಿದೆ.

ಸಾಲದ ಸುಳಿಯಲ್ಲಿ ರೈತ ಸಮುದಾಯ: ನಾಲ್ಕು ವರ್ಷಗಳಿಂದ ಮಳೆ, ಬೆಳೆ ಇಲ್ಲದೇ ಸಾಲ ಮಾಡಿಕೊಂಡಿದ್ದ ರೈತರು ಈ ಬಾರಿ ಮಳೆ ಆಯಿತು ಎಂಬ ಸಂತಸದಲ್ಲಿ ಬಿತ್ತನೆ ಕಾರ್ಯಕ್ಕೆಂದು ಸಾಲ ಮಾಡಿದ್ದರು. ಆದರೆ ಬಿತ್ತನೆ ಮುಗಿದ ತಿಂಗಳಲ್ಲೇ ರೈತನ ಶ್ರಮ, ಬಿತ್ತಿದ ಬೀಜ, ಚಿಗುರಿದ ಮೊಳಕೆ ಎಲ್ಲವೂ ನೀರುಪಾಲಾಗಿದೆ. ಇದರಿಂದ ರೈತರ ಮೇಲೆ ಸಾಲದ ಹೊರೆ ಮತ್ತಷ್ಟು ಹೆಚ್ಚಿದೆ.

ಕುಸಿದ ಮನೆಗಳು: ನಿರಂತರವಾಗಿ ಸುರಿದ ಮಳೆಯಿಂದ ತಾಲ್ಲೂಕಿನಲ್ಲಿ 211 ಮನೆಗಳು ನೆಲಕಚ್ಚಿವೆ. ಇದರಿಂದ ನಿವಾಸಿಗಳು ವಾಸಿಸಲು ಸೂರಿಲ್ಲದೆ ಬೀದಿಗೆ ಬರುವಂತಾಗಿದೆ.

ಕೂಲಿಯನ್ನೂ ಕಿತ್ತುಕೊಂಡ ಮಳೆ: ಸತತ ಮಳೆಯಿಂದ ಗ್ರಾಮೀಣ ಪ್ರದೇಶದಲ್ಲಿನ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಹೊಲಗಳಲ್ಲಿ ಕಸ ತೆಗೆಯುವುದು, ಬಿತ್ತನೆ ಮಾಡುವುದು, ಗೊಬ್ಬರ ಹಾಕುವುದು... ಇತ್ಯಾದಿ ಕೃಷಿ ಸಂಬಂಧಿತ ಕೆಲಸಗಳಿಗೆ ಮಳೆರಾಯ ತಡೆಯೊಡ್ಡಿದ್ದಾನೆ.

ನರೇಗಲ್ ಹೋಬಳಿ ವ್ಯಾಪ್ತಿಯಲ್ಲೂ ಹಾನಿ
ನರೇಗಲ್: ಒಂದು ವಾರದಿಂದ ನರೇಗಲ್ ಹೋಬಳಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಂತಾಗಿವೆ. ರಸ್ತೆ ನಡುವೆ ನಿರ್ಮಿಸಿದ ಸೇತುವೆಗಳು, ಕಾಂಕ್ರೀಟ್ ಪರಸಿಗಳು ಕಿತ್ತು ಹೋಗಿವೆ. ಜಮೀನುಗಳಒಡ್ಡು ಒಡೆದು ಹಾನಿಯಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ.

ಅಬ್ಬಿಗೇರಿ–ಕುರಡಗಿ ಮಾಗರ್ದಲ್ಲಿನ ಕಾಂಕ್ರೀಟ್ ಪರಸಿಗಳು ಸಂಪೂರ್ಣವಾಗಿ ಕಿತ್ತುಹೋಗಿವೆ. ಅಬ್ಬಿಗೇರಿ–ಯರೆಬೇಲೆರಿ ಮಾರ್ಗದಲ್ಲಿ ಸುಮಾರು 7 ಕಿ.ಮಿ. ಹಾಗೂ ಕುರಡಿಗಿ ಮದ್ಯದಲ್ಲಿನ 2 ಕಿ.ಮಿ ರಸ್ತೆ ಮಳೆಯಿಂದ ಕಿತ್ತುಹೋಗಿದೆ. ಅದೇ ಮಾರ್ಗದಲ್ಲಿನ ನಾಗೇನಹಳ್ಳದ ಸೇತುವೆ ಮಳೆಯ ರಭಸಕ್ಕೆ ಕೊಚ್ಚಿಹೋಗಿದೆ. ಈ ಮಾರ್ಗದ ರಸ್ತೆಗಳಿಗೆ ಸುಮಾರು 6 ವರ್ಷಗಳಿಂದ ಡಾಂಬರೀಕರಣ ಕೆಲಸ ನಡೆದಿಲ್ಲ. ಹೀಗಾಗಿ, ರಸ್ತೆಗಳು ಸಂಪೂರ್ಣ ಕೊಚ್ಚಿಹೋಗಿವೆ ಎಂಬ ಆರೋಪಗಳು ಕೇಳಿಬಂದಿವೆ.

ಹೋಬಳಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಕೆಸರು ಗದ್ದೆಯಾಗಿ ಪರಿಣಮಿಸಿದ್ದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ನರೇಗಲ್, ರೋಣ ಪಟ್ಟಣಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳು, ರೈತರು, ವ್ಯಾಪಾರಸ್ಥರು, ನೌಕರರು ಮನೆಯಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ಈ ಕುರಿತು ಜನಪ್ರತಿನಿಧಿಗಳು ಹಾಗೂ
ಸಂಬಂಧಿಸಿದ ಅಧಿಕಾರಿಗಳು ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿಲ್ಲ ಎಂದು ಅಬ್ಬಿಗೇರಿ, ಯರೆಬೇಲೆರಿ, ಕುರಡಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT