ಗುರುವಾರ , ಸೆಪ್ಟೆಂಬರ್ 19, 2019
29 °C

ಗಿಡ ಕಡಿದರೆ ಮಕ್ಕಳ ಕೈ ಕಡಿದಂತೆ

Published:
Updated:

ಹಾಸನ: ಗಿಡ ಕಡಿದರೆ ಮಕ್ಕಳ ಕೈ ಕಡಿದಂತೆ. ಮರ ಉಳಿಸಿ, ಪರಿಸರ ರಕ್ಷಿಸದಿದ್ದರೆ ಮಾನವ ಸರ್ವನಾಶವಾಗುತ್ತಾನೆ ಎಂದು ಕರ್ನಾಟಕ ಬಾಲವಿಕಾಶ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಹ.ಕೌಲಗಿ ಎಚ್ಚರಿಸಿದರು.

ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಸಹಯೋಗದಲ್ಲಿ ಮಗು-ಪರಿಸರ ಎಂಬ ಪರಿಸರ ಜಾಗೃತಿ ಶಿಕ್ಷಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗಿರುವ ಪರಿಸರ ಕಾಳಜಿ ದೊಡ್ಡವರಿಗೆ ಇಲ್ಲ. ಪರಿಸರ ನಿರ್ಲಕ್ಷ್ಯ ಮಾಡಿದರೆ ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಪರಿಸರ ರಕ್ಷಣೆ ಎಲ್ಲರ ಹೊಣೆ ಎಂದು ಹೇಳಿದರು. ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಪರಿಸರ ಎಂದರೆ ಕುಟುಂಬ. ಗಿಡಗಳೂ ಅಪ್ಪ , ಅಮ್ಮ, ಅಣ್ಣ , ತಂಗಿ

ಇದ್ದಂತೆ. ತಂದೆ, ತಾಯಿ ಹೇಗೆ ಮಕ್ಕಳನ್ನು ಆರೈಕೆ ಮಾಡುತ್ತಾರೋ ಹಾಗೆಯೇ ಗಿಡ-ಮರಗಳು, ನೀರು, ನೆರಳು, ಆಮ್ಲಜನಕ, ಹೂವು, ಹಣ್ಣು ಎಲ್ಲವನ್ನೂ ಕೊಟ್ಟು ಆರೈಕೆ ಮಾಡುತ್ತವೆ. ಎಲ್ಲರೂ ಮರ, ಗಿಡಗಳ ಮಹತ್ವ ತಿಳಿಯ ಬೇಕು ಎಂದು ಸಲಹೆ ನೀಡಿದರು.

ಆದಿಚುಂಚನಗಿರಿ ಶಾಖ ಮಠದ ಶಂಭುನಾಥ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಪರಿಸರ ಜಾಗೃತಿ ಇಲ್ಲ ಅರಣ್ಯ ನಾಶ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಸುಂದರ ಪರಿಸರವನ್ನು ಚಿತ್ರದಲ್ಲಿ ಮಾತ್ರ ಕಾಣಬೇಕಾದಂತಹ ಪರಿಸ್ಥಿತಿ ಎದುರಾಗಲಿದೆ. ತಾಲ್ಲೂಕಿನಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಮರ ಗಳನ್ನು ಕಡಿಯಲಾಗಿದೆ. ಇದು ನಮ್ಮೆದುರಿನ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಹಸಿರು ಭೂಮಿ ಪ್ರತಿಷ್ಠಾನದ ಸಂಘಟನಾ ಕಾರ್ಯದರ್ಶಿ ರೂಪ ಹಾಸನ ಮಾತನಾಡಿ, ಪ್ರತಿಷ್ಠಾನ ಆರಂಭಗೊಂಡ 6 ತಿಂಗಳಲ್ಲಿ 20 ಕಲ್ಯಾಣಿ ಹೂಳೆತ್ತಲಾಗಿದ್ದು, 5 ಸಾವಿರಕ್ಕೂ ಹೆಚ್ಚು ಗಿಡ ನೆಡಲಾಗಿದೆ. ಮಳೆ ನೀರು ಕುರಿತು ಜಾಗೃತಿ ಮೂಡಿಸಿ, ಬೀಜದುಂಡೆ ತಯಾರಿ ಮಾಡುತ್ತಿದ್ದೇವೆ. ಪ್ರತಿ ಭಾನುವಾರ ಹಸಿರು ಭೂಮಿ ನೀರು, ಪರಿಸರ ರಕ್ಷಣೆಯ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಎಸ್‌.ಎಸ್‌.ಪಾಷಾ ವಂದಿಸಿದರು. ಅಧ್ಯಕ್ಷ ಆರ್‌.ಪಿ.ವೆಂಕಟೇಶ ಮೂರ್ತಿ ಸ್ವಾಗತಿಸಿದರು.

Post Comments (+)