ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕಟ್ಟೆ ಒಡೆದು ಅಪಾರ ಬೆಳೆ ನಾಶ

Last Updated 16 ಅಕ್ಟೋಬರ್ 2017, 6:55 IST
ಅಕ್ಷರ ಗಾತ್ರ

ಹಾಸನ: ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶನಿವಾರ ರಾತ್ರಿ ತಾಲ್ಲೂಕಿನ ಬಿಟ್ಟಗೌಡನಹಳ್ಳಿಯ ಕೆರೆ ಕಟ್ಟೆ ಒಡೆದು ಅಪಾರ ಬೆಳೆ ನಾಶವಾಗಿದೆ.
ಕೆಲ ದಿನಗಳಿಂದ ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಎಡಬಿಡದೆ ಮಳೆ ಸುರಿಯುತ್ತಿರುವ ಕಾರಣ ಸಾಕಷ್ಟು ಕಡೆಗಳಲ್ಲಿ ಅನಾವೃಷ್ಟಿ ಉಂಟಾಗಿದೆ. ಜೋರು ಮಳೆಗೆ ಕೆರೆ ಕಟ್ಟೆ ಒಡೆದು ಸುತ್ತಲಿನ ರೈತರು ಜಮೀನಿನಲ್ಲಿ ಬೆಳೆದಿದ್ದ ರಾಗಿ, ಜೋಳ, ಶುಂಠಿ ಬೆಳೆಗೆ ನೀರು ನುಗ್ಗಿ ಸಂಪೂರ್ಣ ಹಾನಿಯಾಗಿದೆ.

ಬೆಳಿಗ್ಗೆ ರೈತರು ಜಮೀನಿಗೆ ಬಂದು ನೋಡಿದಾಗಿ ಜಮೀನು ಪೂರ್ತಿ ನೀರು ತುಂಬಿಕೊಂಡು ಕೆರೆ ವಾತಾವರಣ ನಿರ್ಮಾಣವಾಗಿತ್ತು. ಇದರಿಂದಾಗಿ ಅನ್ನದಾತನಿಗೆ ದಿಕ್ಕು ತೋಚದಂತಾಗಿದೆ. ನಾಲ್ಕು ವರ್ಷಗಳಿಂದ ಮಳೆ ಕೊರತೆಯಿಂದ ಕೆರೆಗಳು ಬತ್ತಿ ಹೋಗಿದ್ದವು. ಆದರೆ ಈ ಬಾರಿ ಉತ್ತಮ ಮಳೆಯಾದ್ದರಿಂದ ಬಿಟ್ಟಗೌಡನಹಳ್ಳಿಯ 4–5 ಕೆರೆಗಳು ಭರ್ತಿಯಾಗಿದೆ.

‘ಕೂಡಲೇ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಹಾಗೂ ಕೆರೆಗಳ ಏರಿ ದುರಸ್ತಿ ಪಡಿಸಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ. ‘ನಗರದಿಂದ ಕೂಗಳತೆ ದೂರದಲ್ಲಿ ಇರುವ ಗ್ರಾಮದಲ್ಲಿ ಕೆರೆಯ ಕಟ್ಟೆ ಒಡೆದು ಬೆಳೆ ನಾಶವಾಗಿದ್ದರೂ ಯಾವೊಬ್ಬ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ರೈತರ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಕಾಳಜಿ ಇಲ್ಲದಂತಾಗಿದೆ. ಕೆರೆ ಏರಿ ಒಡೆದು ರೈತರು ಬೆಳೆದಿದ್ದ ಜೋಳ, ರಾಗಿ ಮತ್ತು ಶುಂಠಿ ಬೆಳೆಯು ಸಂಪೂರ್ಣ ನಾಶವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೊಗಣ್ಣ ಆಗ್ರಹಿಸಿದರು.

ಕುಸಿದ ಗೋಡೆ; ಮುರಿದ ವೃದ್ಧೆಯ ಕಾಲು
ಶ್ರವಣಬೆಳಗೊಳ: ಹೋಬಳಿ ಯಾದ್ಯಂತ ಶನಿವಾರ ವ್ಯಾಪಕ ಮಳೆಯಾಗಿದ್ದು, ವಡ್ಡರಹಳ್ಳಿ ಗ್ರಾಮದ ಮನೆಯೊಂದರ ಗೋಡೆ ಕುಸಿದು ಬಿದ್ದ ಪರಿಣಾಮ ವೃದ್ಧೆಯ ಕಾಲುಗಳು ಮುರಿತಕ್ಕೊಳಗಾಗಿವೆ.

ಕೆಂಪಮ್ಮ (55) ಮನೆಯಲ್ಲಿ ಮಲಗಿದ್ದ ವೇಳೆ ಗೋಡೆ ಕುಸಿದು ಬಿದ್ದು ಈ ಅವಘಡ ಸಂಭವಿಸಿದೆ. ಅವರನ್ನು ಚನ್ನರಾಯಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದಲ್ಲಿ ಒಂದೇ ಸಮನೆ ಸುರಿದ ಮಳೆಗೆ ವಿಂಧ್ಯಗಿರಿ ಮತ್ತು ಚಂದ್ರಗಿರಿ ರಸ್ತೆಗಳಲ್ಲಿ ಒಂದು ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ‘ಮಳೆ ಮಾಪನ ಕೇಂದ್ರದಲ್ಲಿ 77.7 ಮಿಲಿ ಮೀಟರ್‌ ಮಳೆಯಾಗಿದೆ’ ಎಂದು ರೈನ್‌ಗೇಜ್‌ ವ್ಯವಸ್ಥಾಪಕ ಮಲ್ಲೇಶಪ್ಪ ಭಾನುವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT