ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಭಜಕದಲ್ಲಿ ಹೂವಿನ ಹಂದರ

Last Updated 16 ಅಕ್ಟೋಬರ್ 2017, 7:22 IST
ಅಕ್ಷರ ಗಾತ್ರ

ಕಲಬುರ್ಗಿ: ರಸ್ತೆ ವಿಭಜಕದ ಮಧ್ಯೆ ಅರಳಿ ನಿಂತಿರುವ ಬಗೆ ಬಗೆಯ ಹೂವುಗಳು ನೋಡುಗರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿವೆ. ಬೆಳಿಗ್ಗೆ ವಾಯು ವಿಹಾರಕ್ಕೆ ಬಂದವರಲ್ಲಿ ಕೆಲವರು ಅಲ್ಲಿಯ ಕೆಲವಿಷ್ಟು ಹೂವುಗಳನ್ನು ಕಿತ್ತುಕೊಂಡು ಪೂಜೆಗೆ ಕೊಂಡೊಯ್ಯುತ್ತಿರುತ್ತಾರೆ. ಇಲ್ಲಿಯ ರಾಮಮಂದಿರ–ರಾಷ್ಟ್ರಪತಿ ಚೌಕ್‌ ರಸ್ತೆಯಲ್ಲಿ ರಾಮಮಂದಿರ ಕಡೆಯಿಂದ ಬರುವಾಗ ಈ ನೋಟ ಸಾಮಾನ್ಯ.

ಬೆಳೆದು ನಿಂತಿರುವ ಆಲಂಕಾರಿಕ ಗಿಡ, ಹೂವಿನ ಬಳ್ಳಿಗಳು ಈ ರಸ್ತೆಯ ಅಂದ ಹೆಚ್ಚಿಸಿವೆ. ನಗರದ ಸೌಂದರ್ಯೀಕರಣಕ್ಕಾಗಿ ಮಹಾನಗರ ಪಾಲಿಕೆಯು ರಸ್ತೆಗಳಲ್ಲಿ ವಿಭಜಕ ನಿರ್ಮಿಸಿ, ಅಲ್ಲಿ ಸಸಿ ನೆಡುವ ಕಾರ್ಯ ಮಾಡುತ್ತಿದೆ. ರಾಮಮಂದಿರದಿಂದ ರಾಷ್ಟ್ರಪತಿ ಚೌಕ್‌ ವರೆಗಿನ ರಸ್ತೆಯ ವಿಭಜಕ ಕಾಮಗಾರಿ ಕೈಗೊಂಡಿದ್ದು, ಶೇ 90ರಷ್ಟು ಪ್ರದೇಶಕ್ಕೆ ಗ್ರಿಲ್‌ ಅಳವಡಿಸಲಾಗಿದೆ.

ಇವುಗಳಿಗೆ ನೀರುಣಿಸಲು ನಾಲ್ಕು ಬೋರ್‌ವೆಲ್‌ಗಳನ್ನು ಕೊರೆಯಲಾಗಿದೆ. ನೀರು ಪೋಲು ತಡೆಯಲು ಹನಿ ನೀರಾವರಿ ಪದ್ಧತಿ ಅಳವಡಿಸಲಾಗಿದೆ. ‘ಈ ರಸ್ತೆಯಲ್ಲಿ ನೆಟ್ಟಿರುವ ಹೂವಿನ ಹಾಗೂ ಆಲಂಕಾರಿಕ ಗಿಡಗಳು ಬೆಳೆವಣಿಗೆ ಹೊಂದಿವೆ. ಅಲ್ಲಿ ಅಳವಡಿಸಿರುವ ಹನಿ ನೀರಾವರಿ ಪೈಪ್‌ಗಳನ್ನು ಬೇರೆ ರಸ್ತೆಯ ವಿಭಜಕಗಳಲ್ಲಿಯ ಸಸಿಗಳನ್ನು ಬೆಳೆಸಲು ಸ್ಥಳಾಂತರಿಸಲು ಚಿಂತಿಸುತ್ತಿದ್ದೇವೆ’ ಎನ್ನುತ್ತಾರೆ ಪಾಲಿಕೆಯ ಆಯುಕ್ತ ಪಿ.ಸುನಿಲಕುಮಾರ್‌ ಅವರು.

‘ಈ ರಸ್ತೆ ವಿಭಜಕ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೇ ಅಲ್ಲಿಯ ಸಸಿಗಳನ್ನು ಬೆಳೆಸುವ ಹೊಣೆ ವಹಿಸಲಾಗಿದೆ. ಹನಿ ನೀರಾವರಿ ಪೈಪ್‌ಗಳನ್ನು ಅಲ್ಲಿಂದ ಸ್ಥಳಾಂತರಿಸಿದರೂ ಸಹ ಪೈಪ್‌ಗಳ ಮೂಲಕ ನಿಯಮಿತವಾಗಿ ನೀರುಣಿಸಿ, ಈ ಗಿಡಗಳು ಹಾಳಾಗದಂತೆ ನೋಡಿಕೊಳ್ಳಲಾಗುವುದು’ ಎನ್ನುವುದು ಅವರ ವಿವರಣೆ. ಹುಮನಾಬಾದ್‌ ನಾಕಾದಿಂದ ಆಳಂದ ಚೆಕ್‌ಪೋಸ್ಟ್‌ ವರೆಗಿನ ರಸ್ತೆಯಲ್ಲಿಯೂ ಇದೇ ಬಗೆಯ ವಿಭಜಕ ನಿರ್ಮಿಸಿ, ಅಲ್ಲಿಯೂ ಸಸಿಗಳನ್ನು ನೆಡಲಾಗಿದೆ.

‘ಗ್ರಿಲ್‌ ಅಳವಡಿಕೆಗೆ ಹೆಚ್ಚಿನ ಹಣ ವಿನಿಯೋಗವಾಗುತ್ತದೆ ಎಂಬ ಕಾರಣಕ್ಕೆ ಹುಮನಾಬಾದ್‌ ನಾಕಾ–ಆಳಂದ ಚೆಕ್‌ಪೋಸ್ಟ್‌ ವರೆಗಿನ ರಸ್ತೆ ವಿಭಜಕಕ್ಕೆ ಗ್ರಿಲ್‌ ಅಳವಡಿಸಿಲ್ಲ. ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದ್ದು, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಬಿಡಾಡಿ ದನಗಳು ಆ ಸಸಿಗಳನ್ನು ತಿನ್ನುತ್ತಿಲ್ಲವಾದರೂ, ಅವುಗಳಿಗೆ ಹಾನಿಯನ್ನುಂಟು ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸುನಿಲಕುಮಾರ್‌.

‘ಈ ಸಸಿಗಳನ್ನು ಹಾಳು ಮಾಡದಂತೆ ಬಿಡಾಡಿ ದನಗಳನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹಸಿರು ಕಾರ್ಯಪಡೆಗೆ ವಹಿಸಲಾಗಿದೆ. ಈ ಕಾರ್ಯಪಡೆಯಲ್ಲಿ ಐವರು ನೌಕರರು ಇದ್ದು, ನಿಯಮಿತವಾಗಿ ಅವರು ಸಸಿಗಳ ರಕ್ಷಣೆಯ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT