ನಗರಾಡಳಿತದ ಶಕ್ತಿಸೌಧದಲ್ಲಿ ಸಮಸ್ಯೆ ನೂರಾರು

ಭಾನುವಾರ, ಜೂನ್ 16, 2019
29 °C

ನಗರಾಡಳಿತದ ಶಕ್ತಿಸೌಧದಲ್ಲಿ ಸಮಸ್ಯೆ ನೂರಾರು

Published:
Updated:
ನಗರಾಡಳಿತದ ಶಕ್ತಿಸೌಧದಲ್ಲಿ ಸಮಸ್ಯೆ ನೂರಾರು

ಕೋಲಾರ: ದೀಪದ ಬುಡದಲ್ಲೇ ಕತ್ತಲು ಎನ್ನುವಂತಾಗಿದೆ ನಗರಸಭೆಯ ಸ್ಥಿತಿ. ನಗರಾಡಳಿತದ ಶಕ್ತಿಸೌಧವಾದ ನಗರಸಭೆ ಕಟ್ಟಡದಲ್ಲಿ ಸಮಸ್ಯೆಗಳು ನೂರಾರು. ಶೌಚಾಲಯ, ವಿದ್ಯುತ್‌, ಕುಡಿಯುವ ನೀರು, ನೈರ್ಮಲ್ಯ, ಕೊಠಡಿ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ.

ನಗರಸಭೆಯು ಈ ಹಿಂದೆ ಪುರಸಭೆಯಾಗಿತ್ತು. 1920ರಲ್ಲಿ ಕಾರ್ಯಾರಂಭ ಮಾಡಿದ ಪುರಸಭೆಯನ್ನು ನಗರದ ವ್ಯಾಪ್ತಿ ವಿಸ್ತಾರವಾಗಿ ಜನಸಂಖ್ಯೆ ಹೆಚ್ಚಿದಂತೆ 1995ರಲ್ಲಿ ನಗರಸಭೆಯಾಗಿ ಮಾರ್ಪಾಡು ಮಾಡಲಾಯಿತು.

ನಗರದ ಜನತೆಯನ್ನು ಪ್ರತಿನಿಧಿಸುವ ನಗರಸಭೆ ಕಚೇರಿಯ ಕಟ್ಟಡವು ಸಾರ್ವಜನಿಕ ಆಸ್ತಿ. ನಗರದ ಆಡಳಿತಾತ್ಮಕ ಚಟುವಟಿಕೆಗಳು, ಅಭಿವೃದ್ಧಿ ಕಾರ್ಯ ಹೀಗೆ ಎಲ್ಲವೂ ಈ ಕಟ್ಟಡದಲ್ಲೇ ನಿರ್ಧಾರವಾಗುತ್ತವೆ. ಈ ಕಟ್ಟಡಕ್ಕೆ ಭವ್ಯ ಇತಿಹಾಸವಿದೆ. ಸಾ.ಮ.ರಂಗಪ್ಪ, ಸಿ.ಸೋಮಶೇಖರ್‌, ಸಿ.ಎಚ್‌.ವೆಂಕಟರಮಣಪ್ಪ ಅವರಂತಹ ರಾಜಕೀಯ ಮುತ್ಸದಿಗಳು ಅಧ್ಯಕ್ಷಗಾದಿ ಅಲಂಕರಿಸಿ ಈ ಕಟ್ಟಡದಲ್ಲೇ ಆಡಳಿತ ನಡೆಸಿದ್ದಾರೆ.

ಪಾರಂಪರಿಕ ಕಟ್ಟಡದಲ್ಲಿ ಮೂಲಸೌಕರ್ಯ ಸಮಸ್ಯೆ ಇದ್ದು, ಸಿಬ್ಬಂದಿಯ ದೈನಂದಿನ ಕಾರ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ. ವಿವಿಧ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ನಗರವಾಸಿಗಳು ಬವಣೆ ಪಡುವಂತಾಗಿದೆ. ಸಾರ್ವಜನಿಕರಿಗೆ ಕಚೇರಿಯಲ್ಲಿ ಕೂರಲು ಸರಿಯಾದ ಆಸನ ವ್ಯವಸ್ಥೆ ಸಹ ಇಲ್ಲ.

ಸೋರುವ ಸೂರು: ಕಟ್ಟಡದ ಹಲವು ಕೊಠಡಿಗಳ ಮೇಲ್ಛಾವಣಿ ಶಿಥಿಲಗೊಂಡಿದ್ದು, ಮಳೆಗಾಲದಲ್ಲಿ ಸೋರುತ್ತಿವೆ. ಇದರಿಂದ ದಾಖಲೆಪತ್ರಗಳು, ಕಡತಗಳಿಗೆ ಹಾನಿಯಾಗುತ್ತಿದೆ. ಸೋರುವ ಸೂರಿನ ಕೆಳಗೆ ಕುಳಿತು ಕಾರ್ಯ ನಿರ್ವಹಿಸುವ ಸಿಬ್ಬಂದಿಯ ಗೋಳು ಹೇಳತೀರದು. ಶಿಥಿಲ ಮೇಲ್ಛಾವಣಿಯು ಪುಡಿ ಪುಡಿಯಾಗಿ ಉದುರುತ್ತಿದ್ದು, ಸಿಬ್ಬಂದಿ ಪ್ರತಿನಿತ್ಯ ಜೀವ ಭಯದಲ್ಲಿ ಕೆಲಸ ಮಾಡುವಂತಾಗಿದೆ.

ಕುಡಿಯಲು ನೀರಿಲ್ಲ: ನಗರಸಭೆ ಆವರಣದಲ್ಲಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಿಲ್ಲ. ಆಗೊಮ್ಮೆ ಈಗೊಮ್ಮೆ ಕಚೇರಿಯಿಂದ ಕುಡಿಯುವ ನೀರಿನ ಕ್ಯಾನ್‌ಗಳನ್ನು ತರಿಸಲಾಗುತ್ತದೆ. ಉಳಿದಂತೆ ಸಿಬ್ಬಂದಿಯು ಮನೆಯಿಂದಲೇ ಪ್ರತಿನಿತ್ಯ ಬಾಟಲಿಗಳಲ್ಲಿ ಕುಡಿಯುವ ನೀರು ತರುತ್ತಾರೆ. ಆದರೆ, ಕಚೇರಿಗೆ ಬರುವ ನಗರವಾಸಿಗಳು ಬಾಯಾರಿಕೆಯಿಂದ ಬಳಲುವಂತಾಗಿದೆ.

ಪ್ರತ್ಯೇಕ ಶೌಚಾಲಯವಿಲ್ಲ: ಕಟ್ಟಡದಲ್ಲಿ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲ. ಮತ್ತೊಂದೆಡೆ ಶೌಚಾಲಯ ನಿರ್ವಹಣಾ ಕಾರ್ಯ ಹಳಿ ತಪ್ಪಿದ್ದು, ಗಬ್ಬೆದ್ದು ನಾರುತ್ತಿದೆ. ಪ್ರತಿನಿತ್ಯ ಶೌಚಾಲಯ ಸ್ವಚ್ಛಗೊಳಿಸದ ಕಾರಣ ಸಿಬ್ಬಂದಿ ಹಾಗೂ ಸಾರ್ವಜನಿಕರು ಅದರೊಳಗೆ ಹೋಗಲು ಅಸಹ್ಯ ಪಡುವ ಪರಿಸ್ಥಿತಿ ಇದೆ. ಇದರಿಂದ ಮಹಿಳಾ ಸಿಬ್ಬಂದಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.

ಕತ್ತಲ ಕೂಪ: ನಗರಸಭೆ ಕಚೇರಿಗೆ ಒಂದೂವರೆ ವರ್ಷದ ಹಿಂದೆ ಸುಮಾರು ₹ 8 ಲಕ್ಷ ಮೊತ್ತದ ಜನರೇಟರ್‌ ಖರೀದಿಸಲಾಗಿತ್ತು. ಆದರೆ, ಆ ಜನರೇಟರ್‌ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪವಿದೆ. ವಿದ್ಯುತ್‌ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ಜನರೇಟರ್‌ ಸ್ವಯಂ ಚಾಲನೆಯಾಗುವುದಿಲ್ಲ. ಬದಲಿಗೆ ಸಿಬ್ಬಂದಿಯೇ ಪ್ರತಿ ಬಾರಿ ಅದನ್ನು ಚಾಲು ಮಾಡುವ ಪರಿಸ್ಥಿತಿ ಇದೆ.

ಅಲ್ಲದೇ, ಜನರೇಟರ್‌ ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ವಿದ್ಯುತ್‌ ಸಂಪರ್ಕ ಕಡಿತಗೊಂಡ ಸಂದರ್ಭದಲ್ಲಿ ನಗರಸಭೆ ಕಟ್ಟಡ ಕತ್ತಲ ಕೂಪವಾಗುತ್ತದೆ. ವಿದ್ಯುತ್‌ ಸಮಸ್ಯೆಯಿಂದಾಗಿ ಕಚೇರಿಯ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ.

ಸೊಳ್ಳೆ ಕಾಟ: ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸ್ಥಳಾವಕಾಶ ಇಲ್ಲದ ಕಾರಣ ಕಸ ತುಂಬಿದ ಟ್ರ್ಯಾಕ್ಟರ್‌ಗಳನ್ನು ಆಗಾಗ್ಗೆ ನಗರಸಭೆ ಆವರಣದಲ್ಲೇ ನಿಲ್ಲಿಸಲಾಗುತ್ತಿದ್ದು, ಇದರಿಂದ ನೈರ್ಮಲ್ಯ ಸಮಸ್ಯೆ ಎದುರಾಗಿದೆ. ಟ್ರ್ಯಾಕ್ಟರ್‌ಗಳಲ್ಲಿನ ತ್ಯಾಜ್ಯವು ಕೊಳೆತು ದುರ್ನಾತ ಬೀರುವುದರಿಂದ ನೊಣ, ಸೊಳ್ಳೆ ಕಾಟ ಹೆಚ್ಚಿದೆ. ಸಂಜೆ ಆಯಿತೆಂದರೆ ಸೊಳ್ಳೆಗಳು ಕೊಠಡಿಗಳಿಗೆ ದಾಂಗುಡಿ ಇಡುವುದರಿಂದ ಸಿಬ್ಬಂದಿಗೆ ತೊಂದರೆಯಾಗುತ್ತಿದೆ.

ಕಟ್ಟಡ ನವೀಕರಣದ ಸೋಗಿನಲ್ಲಿ ಈಗಾಗಲೇ ನಾಲ್ಕೈದು ಬಾರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಅದರಿಂದ ಗುತ್ತಿಗೆದಾರರ ಜೇಬು ತುಂಬಿತೆ ಹೊರತು ಕಟ್ಟಡದಲ್ಲಿನ ಮೂಲಸೌಕರ್ಯ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry