ಆಧಾರ್‌ ಲಿಂಕ್ ಮಾಡದ್ದಕ್ಕೆ ಪಡಿತರ ರದ್ದು: ಹಸಿವಿನಿಂದ 11 ವರ್ಷದ ಬಾಲಕಿ ಸಾವು

ಶುಕ್ರವಾರ, ಜೂಲೈ 19, 2019
22 °C

ಆಧಾರ್‌ ಲಿಂಕ್ ಮಾಡದ್ದಕ್ಕೆ ಪಡಿತರ ರದ್ದು: ಹಸಿವಿನಿಂದ 11 ವರ್ಷದ ಬಾಲಕಿ ಸಾವು

Published:
Updated:
ಆಧಾರ್‌ ಲಿಂಕ್ ಮಾಡದ್ದಕ್ಕೆ ಪಡಿತರ ರದ್ದು: ಹಸಿವಿನಿಂದ 11 ವರ್ಷದ ಬಾಲಕಿ ಸಾವು

ರಾಂಚಿ: ಆಧಾರ್ ಕಾರ್ಡ್ ಲಿಂಕ್ ಮಾಡದ ಬಡ ಕುಟುಂಬವೊಂದಕ್ಕೆ ಕಳೆದ ಕೆಲವು ತಿಂಗಳುಗಳಿಂದ ಪಡಿತರ ನೀಡದ ಪರಿಣಾಮ 11 ವರ್ಷದ ಬಾಲಕಿ ಸಂತೋಷಿ ಕುಮಾರಿ ಎಂಬಾಕೆ ಹಸಿವಿನಿಂದ ಮೃತಪಟ್ಟ ದಾರುಣ ಘಟನೆ ಜಾರ್ಖಂಡ್‌ನ ಸಿಮ್‌ಡೇಗಾ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

‘ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದುದರಿಂದ ಬಾಲಕಿ ಮಧ್ಯಾಹ್ನದ ಊಟ ಯೋಜನೆಯಿಂದಲೂ ವಂಚಿತಳಾಗಿದ್ದಳು. ಪಡಿತರ ದೊರೆಯದಿರುವುದರಿಂದ ಮನೆಯಲ್ಲೂ ಆಹಾರಕ್ಕೆ ತತ್ವಾರವಾಗಿತ್ತು. ಸುಮಾರು ಎಂಟು ದಿನಗಳಿಂದ ಆಹಾರವಿಲ್ಲದೆ ಬಳಲಿದ್ದ ಆಕೆ ಸೆಪ್ಟೆಂಬರ್ 28ರಂದು ಮೃತಪಟ್ಟಿದ್ದಾಳೆ’ ಎಂದು ‘ಆಹಾರ ಹಕ್ಕು ಅಭಿಯಾನ’ ಸ್ವಯಂಸೇವಾ ಸಂಸ್ಥೆಯ ಹೋರಾಟಗಾರರ ಹೇಳಿಕೆ ಉಲ್ಲೇಖಿಸಿ ಸ್ಕ್ರಾಲ್ ಡಾಟ್ ಇನ್ ವರದಿ ಮಾಡಿದೆ.

ಸಂತೋಷಿ ಕುಮಾರಿ ಕುಟುಂಬಕ್ಕೆ ಜಮೀನಿಲ್ಲ. ಆಕೆಯ ಕುಟುಂಬದವರು ಉದ್ಯೋಗ ಹೊಂದಿಲ್ಲ. ಸ್ಥಿರ ಆದಾಯವೂ ಇಲ್ಲ. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ ಅನ್ವಯ ಪಡಿತರ ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ಆದಾಗ್ಯೂ, ಕಳೆದ 6 ತಿಂಗಳುಗಳಿಂದ ಆಕೆಯ ಕುಟುಂಬಕ್ಕೆ ಪಡಿತರ ನಿರಾಕರಿಸಲಾಗಿತ್ತು ಎಂಬುದು ಸ್ಥಳಿಯ ಪತ್ರಿಕೆಗಳ ಮತ್ತು ‘ಆಹಾರ ಹಕ್ಕು ಅಭಿಯಾನ’ ಸ್ವಯಂಸೇವಾ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ.

ಕೇಂದ್ರದ ನಿರ್ಧಾರವೇ ಕಾರಣ: ಪಡಿತರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಫೆಬ್ರುವರಿಯಲ್ಲಿ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿತ್ತು. ಹೀಗಾಗಿ ಸಂತೋಷಿ ಕುಟುಂಬದವರಿಗೆ ಪಡಿತರ ನೀಡಲು ನಿರಾಕರಿಸಲಾಗಿತ್ತು ಎನ್ನಲಾಗಿದೆ.

ಜಾರ್ಖಂಡ್, ರಾಜಸ್ತಾನ ಹಾಗೂ ಇತರ ಕೆಲವು ರಾಜ್ಯಗಳ ಅನೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್‌ ಲಿಂಕ್ ಮಾಡದ ಕಾರಣಕ್ಕೆ ಪಡಿತರ ನೀಡಲಾಗುತ್ತಿಲ್ಲ ಎಂದು ಸರಣಿ ವರದಿ ಮಾಡಿದ್ದಾಗ್ಯೂ ಸರ್ಕಾರ ಕ್ರಮ ಕೈಗೊಂಡಿರಲಿಲ್ಲ ಎಂದೂ ಸ್ಕ್ರಾಲ್ ಡಾಟ್ ಇನ್ ವರದಿಯಲ್ಲಿ ಆರೋಪಿಸಲಾಗಿದೆ.

ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ: ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳ ಸೌಲಭ್ಯ ಪಡೆಯಲು, ಅದರಲ್ಲೂ ಆಹಾರ ಧಾನ್ಯಗಳ ವಿತರಣೆ ವಿಚಾರದಲ್ಲಿ ಆಧಾರ್ ಅನ್ನು ಕಡ್ಡಾಯ ಮಾಡುವಂತಿಲ್ಲ ಎಂದು 2013ರಲ್ಲೇ ಸುಪ್ರೀಂ ಕೋರ್ಟ್ ಆದೇಶಿಸಿದೆ. ಹೀಗಾಗಿ ಆಧಾರ್ ಲಿಂಕ್ ಮಾಡದವರಿಗೆ ಪಡಿತರ ನೀಡಲು ನಿರಾಕರಿಸುವುದು ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಎಂದು ಹೋರಾಟಗಾರರು ಪ್ರತಿಪಾದಿಸಿದ್ದಾರೆ. ಆದಾಗ್ಯೂ, ಆಧಾರ್ ಲಿಂಕ್ ಮಾಡದವರಿಗೆ ಜಾರ್ಖಂಡ್‌ನಲ್ಲಿ ಪಡಿತರ ನಿರಾಕರಿಸಲಾಗುತ್ತಿದೆ.

ಈ ಮಧ್ಯೆ, ನವೆಂಬರ್ ಒಳಗೆ ಆಧಾರ್ ಜತೆ ಲಿಂಕ್ ಮಾಡದಿದ್ದರೆ ಪಡಿತರ ರದ್ದು ಮಾಡುವುದಾಗಿ ಜಾರ್ಖಂಡ್‌ನ ಲಾತೇಹಾರ್ ಜಿಲ್ಲೆಯ ವಿತರಣಾಧಿಕಾರಿ ಸೆಪ್ಟೆಂಬರ್ 30ರಂದು ನಾಗರಿಕರಿಗೆ ಎಚ್ಚರಿಕೆ ನೀಡಿರುವುದಾಗಿಯೂ ವರದಿಯಲ್ಲಿ ಹೇಳಲಾಗಿದೆ.

ಸಂತೋಷಿ ಕುಮಾರಿ ಮನೆಗೆ ಪಡಿತರ ವಿತರಿಸುವ ವಿತರಕ ಸುಮಾರು 700 ಮನೆಗಳಿಗೆ ಪಡಿತರ ವಿತರಿಸುವ ಜವಾಬ್ದಾರಿ ಹೊಂದಿದ್ದು, ಆಧಾರ್‌ ಲಿಂಕ್ ಮಾಡದ 10 ಕುಟುಂಬಗಳನ್ನು ಈಗಾಗಲೇ ಪಟ್ಟಿಯಿಂದ ತೆರವುಗೊಳಿಸಿದ್ದಾರೆ ಎನ್ನಲಾಗಿದೆ.

ಸತ್ತ ಮೇಲೆ ಬಂತು ಹೊಸ ಪಡಿತರ ಕಾರ್ಡ್: ಆಗಸ್ಟ್ 21ರಂದು ಸಿಮ್‌ಡೇಗಾ ಜಿಲ್ಲೆಯ ಜಿಲ್ಲಾಧಿಕಾರಿಯವರು ಜನತಾ ದರ್ಬಾರ್ ನಡೆಸಿದ್ದರು. ಆ ಸಂದರ್ಭ, ಆಧಾರ್ ಲಿಂಕ್ ಮಾಡದವರ ಪಡಿತರ ಕಾರ್ಡ್ ರದ್ದಾದ ವಿಷಯವನ್ನು ಹೋರಾಟಗಾರರು ಪ್ರಸ್ತಾಪಿಸಿದ್ದರು. ಜತೆಗೆ, ಸೆಪ್ಟೆಂಬರ್ 1ರಂದು ಕೊಯ್ಲಿ ದೇವಿ (ಮೃತ ಬಾಲಕಿ ಸಂತೋಷಿಯ ತಾಯಿ) ಅವರ ಆಧಾರ್ ಕಾರ್ಡ್‌ ಪ್ರತಿ ಜತೆಗೆ ಲಿಖಿತ ದೂರನ್ನೂ ನೀಡಲಾಗಿದ್ದು, ಹೊಸ ಪಡಿತರ ಕಾರ್ಡ್ ನೀಡುವಂತೆ ಮನವಿ ಮಾಡಲಾಗಿತ್ತು.

ಇದಾಗಿ ಒಂದು ತಿಂಗಳು ಕಳೆದರೂ ಕೊಯ್ಲಿ ದೇವಿ ಅವರಿಗೆ ಹೊಸ ಪಡಿತರ ಕಾರ್ಡ್ ದೊರೆತಿರಲಿಲ್ಲ. ಸಂತೋಷಿ ಮೃತಪಟ್ಟ ಒಂದು ವಾರದ ನಂತರ ಅವರಿಗೆ ಹೊಸ ಪಡಿತರ ಕಾರ್ಡ್ ನೀಡಲಾಯಿತು. ಆನ್‌ಲೈನ್ ಪೋರ್ಟಲ್‌ ಸರಿಯಾಗಿ ಕಾರ್ಯನಿರ್ವಹಿಸದ್ದರಿಂದ ಹೊಸ ಪಡಿತರ ಕಾರ್ಡ್‌ ನೀಡುವುದು ತಡವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಈ ಸಮಸ್ಯೆ ಜಾರ್ಖಂಡ್‌ನಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅಂತರ್ಜಾಲ ಸೌಲಭ್ಯದ ಸಮಸ್ಯೆಯಿಂದಾಗಿ ಜನರು ಆಧಾರ್ ಕಾರ್ಡ್ ಹೊಂದಿದ್ದರೂ ಅದನ್ನು ಪಡಿತರದ ಜತೆ ಲಿಂಕ್ ಮಾಡುವುದು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ’ ಎಂದು ಧೀರಜ್ ಕುಮಾರ್ ಎಂಬುವವರು ಅಲವತ್ತುಕೊಂಡಿದ್ದಾರೆ.

ಕೊಯ್ಲಿ ದೇವಿ (ಮೃತ ಬಾಲಕಿ ಸಂತೋಷಿಯ ತಾಯಿ) ಅವರು ಹೋರಾಟಗಾರರ ಜತೆ ಮಾತನಾಡಿರುವ ವಿಡಿಯೊ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry