ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣ ನೆಪ: ರೈತರ ಹೆಸರಲ್ಲಿ ಅಕ್ರಮ

Last Updated 16 ಅಕ್ಟೋಬರ್ 2017, 8:31 IST
ಅಕ್ಷರ ಗಾತ್ರ

ಗಂಗಾವತಿ: ತಾಲ್ಲೂಕಿನ ಮರಳಿ ಸಮೀಪ ಇರುವ ತಾಯಮ್ಮ ಹಳ್ಳದಲ್ಲಿ ಕಳೆದ ಹಲವು ದಿನದಿಂದ ಎತ್ತುಗಳ ಬಂಡಿ (ಚಕ್ಕಡಿ) ಮೂಲಕ ಸುಮಾರು 20ಕ್ಕೂ ಹೆಚ್ಚು ಜನ ರೈತರ ಹೆಸರಲ್ಲಿ ಅಕ್ರಮವಾಗಿ ಮರಳು ಸಾಗಣೆ ತೊಡಗಿದ್ದಾರೆ.

ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಿಕೊಳ್ಳುವ ನೆಪದಲ್ಲಿ ಮರಳನ್ನು ಸಾಗಿಸಲಾಗುತ್ತಿದೆ. ನಿತ್ಯ ಬೆಳಿಗ್ಗೆ ಐದಾರು ಗಂಟೆಯಿಂದ ಸಂಜೆ ಏಳು ಗಂಟೆ ಅಥವಾ ಬೆಳಕು ಇರುವವರೆಗೂ ನಿರಂತರವಾಗಿ ಹಳ್ಳದಲ್ಲಿ ಮರಳು ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.

‘ನಿತ್ಯ 200ಕ್ಕೂ ಹೆಚ್ಚು ಬಂಡಿಗಳಲ್ಲಿ ಇಲ್ಲಿನ ಮರಳನ್ನು ಸಾಗಿಸಲಾಗುತ್ತಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಮರಳಿಯ ಬಸವರಾಜ ಸ್ವಾಮಿ ದೂರಿದ್ದಾರೆ.

ಸಮೀಪದ ಢಣಾಪುರ, ಅಯೋಧ್ಯಾ, ಹೊಸಕೇರಿ, ಜಂಗಮರ ಕಲ್ಗುಡಿ, ವಿದ್ಯಾನಗರ ಮೊದಲಾದ ಗ್ರಾಮಗಳಿಗೆ ಬಂಡಿಗಳ ಮೂಲಕ ಮರಳು ಸಾಗಿಸುವ ಕಾಯಕದಲ್ಲಿ ಹಲವರು ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ.

‘ಒಂದು ಬಂಡಿ ಮರಳಿಗೆ ಸ್ಥಳೀಯವಾಗಿ ₹ 500ಕ್ಕೆ ಮಾರಾಟ ಮಾಡಲಾಗುತ್ತಿದೆ. ಸಾಗಿಸಬೇಕಿರುವ ಗ್ರಾಮಗಳ ದೂರದ ಆಧಾರದ ಮೇಲೆ ಒಂದು ಸಾವಿರದಿಂದ ₹ 1,800ಗೆ ಮರಳು ಮಾರಾಟ ಮಾಡಲಾಗುತ್ತಿದೆ’ ಎಂದು ಕಲ್ಗುಡಿಯ ಎನ್. ಧನಂಜಯ ತಿಳಿಸಿದ್ದಾರೆ.

ಇನ್ನು ಕೆಲವರು ಬಂಡಿಗಳ ಮೂಲಕ ಮರಳು ಸಾಗಿಸಿ ಒಂದು ಕಡೆ ಸಂಗ್ರಹಿಸುತ್ತಿದ್ದಾರೆ. ಹೀಗೆ ಸಂಗ್ರಹಿಸಿದ ಮರಳನ್ನು ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಬೇರೆಡೆ ಸಾವಿರಾರು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ರಾಯಧನ ಪಾವತಿಸದೇ ಸರ್ಕಾರಕ್ಕೆ ವಂಚಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿವೆ.

‘ಒಂದು ಟ್ರಾಕ್ಟರ್‌ನಲ್ಲಿ ಮೂರು ಕ್ಯೂಬಿಕ್ ಮೀಟರ್ ಪ್ರಮಾಣದ ಮರಳು ಸಾಗಿಸಿದರೆ, ಬಂಡಿಯಲ್ಲಿ ಅರ್ಧ ಕ್ಯೂಬಿಕ್ ಮೀಟರ್‌ನಷ್ಟು ಮರಳು ಸಾಗಿಸಬಹುದು. ಕಣ್ಣಿಗೆ ಸಣ್ಣ ಪ್ರಮಾಣದಂತೆ ಕಂಡರೂ ತೆರೆಮರೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮವಿದೆ’ ಎಂದು ಗ್ರಾಮಸ್ಥ ನರಸಿಂಹರಾಜು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT