ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ; ಮತ್ತೆ ಕುಸಿದ ಕೋಟೆ

Last Updated 16 ಅಕ್ಟೋಬರ್ 2017, 8:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದಾಗಿ ಇಲ್ಲಿನ ಕೋಟೆ ಆಂಜನೇಸ್ವಾಮಿ ದೇವಾಲಯ ಬಳಿ, ರಾಂಪಾಲ್‌ ರಸ್ತೆಯ ಸಮೀಪ ಶನಿವಾರ ಮತ್ತೆ ಕೋಟೆ ಕುಸಿದಿದೆ. ಸುಮಾರು 10 ಮೀಟರ್‌ ಉದ್ದದಷ್ಟು ಕೋಟೆಯ ಗೋಡೆ ನೆಲ ಕಚ್ಚಿದ್ದು, ಶತಮಾನಗಳ ಹಿಂದೆ ನಿರ್ಮಿಸಿರುವ ಕೋಟೆಯ ದಪ್ಪ ಕಲ್ಲುಗಳು ನೆಲಕ್ಕೆ ಉರುಳಿವೆ. ಕೋಟೆಯ ಅವಶೇಷಗಳು ಕಂದಕ್ಕೆ ಬಿದ್ದಿವೆ

ಸತತ ಮಳೆಯ ಕಾರಣದಿಂದ ಪಟ್ಟಣದಲ್ಲಿ 5ನೇ ಬಾರಿ ಕೋಟೆ ಕುಸಿದಂತಾಗಿದೆ. ಈ ಮೊದಲು ಪುರಸಭೆ ಕಚೇರಿ ಬಳಿಯ ಪೂರ್ವ ಕೋಟೆ, ನಂತರ ಸೆಂದಲ್‌ ಕೋಟೆ, ಜಿಬಿ ಹೊಳೆ ಕೋಟೆ, ಶಂಭುಲಿಂಗಯ್ಯನ ಕಟ್ಟೆ ಬಳಿ ಪಶ್ಚಿಮ ಕೋಟೆಯ ಭಾಗಗಳು ಕುಸಿದಿದ್ದವು.

‘ಮಳೆ ನಿಲ್ಲುವವರೆಗೆ ಕೋಟೆಯ ದುರಸ್ತಿ ಕಾರ್ಯ ಕೈಗೊಳ್ಳುವುದಿಲ್ಲ’ ಎಂದು ರಾಜ್ಯ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಕುಸಿದಿರುವ ಕೋಟೆಗೆ ಹೊಂದಿಕೊಂಡ ಸ್ಥಳದಲ್ಲಿ ಕೆಲವೇ ದಿನಗಳ ಹಿಂದಷ್ಟೇ ದುರಸ್ತಿ ಕಾರ್ಯ ನಡೆದಿತ್ತು.

ಮನೆಗೋಡೆ ಕುಸಿತ
ಕೊಪ್ಪ: ಹೋಬಳಿಯ ಕೆಲವು ಗ್ರಾಮ ಗಳಲ್ಲಿ ಶನಿವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಮನೆಯ ಗೋಡೆ ಕುಸಿದಿದ್ದು, ಅಕ್ಕಪಕ್ಕದ ಮನೆಗಳೂ ಕುಸಿಯುವ ಭೀತಿಯಲ್ಲಿವೆ. ಕೆಲವೆಡೆ ಮರಗಳು ರಸ್ತೆಗೆ ಉರುಳಿ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಬೆಸಗರಹಳ್ಳಿ ಗ್ರಾಮದ 2ನೇ ವಾರ್ಡ್‌ನ ಮನೆಗಳು ಒಂದಾದ ಮೇಲೋಂದು ಕುಸಿದು ಬಿಳುತ್ತಿದ್ದು ನಾಗರಿಕರು ಆತಂಕಕ್ಕೆ ಒಳಾಗಿದ್ದಾರೆ. ಕೆಲವು ಮನೆಗಳಲ್ಲಿ ವಾಸ ಮಾಡುವುದಕ್ಕೂ ತೊಂದರೆ ಆಗಿದೆ.

ಬೆಸಗರಹಳ್ಳಿಯ ಮೇರಿಯಮ್ಮ ಅವರ ಮನೆಯ ಗೋಡೆ ಕುಸಿದು ₹ 10 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಕೋಡಗಹಳ್ಳಿ ಮಹಾದೇವ, ರಂಗಮ್ಮ, ಆರೋಗ್ಯ ಮೇರಿ ಅವರ ಮನೆಗಳು ಕುಸಿಯುವ ಹಂತ ತಲುಪಿವೆ.

65 ವರ್ಷಗಳಿಂದ ವಾಸಿ ಸುತ್ತಿದ್ದರೂ ಹಕ್ಕುಪತ್ರ ನೀಡಿಲ್ಲ. ಮನೆ ಕಟ್ಟಲು ಸಾಧ್ಯವಾಗದೆ ತೊಂದರೆ ಆಗಿದೆ ಎಂದು ಮೇರಿಯಮ್ಮ ಅಳಲು ತೋಡಿಕೊಂಡರು. ಕೌಡ್ಲೆ, ಹಳೇಹಳ್ಳಿ, ಬೆಕ್ಕಳಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಶನಿವಾರ ರಾತ್ರಿ ಮರಗಳು ಉರುಳಿಬಿದ್ದು ಸಂಚಾರಕ್ಕೆ ತೊಂದರೆಯಾಗಿತ್ತು.

ಕುಸಿದ ಮನೆ
ಕಿಕ್ಕೇರಿ: ನಿರಂತರ ಮಳೆಯಿಂದಾಗಿ ಇಲ್ಲಿನ ಜನತಾ ಕಾಲನಿಯಲ್ಲಿರುವ ಗೌರೀಶ್ ಅವರ ಮನೆಯ ಮಣ್ಣಿನ ಗೋಡೆ ಭಾನುವಾರ ಕುಸಿದಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ.

ಪಟ್ಟಣದ ಪ್ರಮುಖಬೀದಿಯಾದ ಅಂಗಡಿಬೀದಿ ರಸ್ತೆ ಕೊಚ್ಚೆಗುಂಡಿ ಯಾಗಿದೆ. ತರಕಾರಿ ಮತ್ತಿತರ ವಸ್ತು ಗಳು ರಸ್ತೆಯಲ್ಲಿ ಬಿದ್ದಿದ್ದು, ಗಬ್ಬು ವಾಸನೆ ಹರಡಿದೆ. ಮಂದಗೆರೆಯಲ್ಲಿ ಹೇಮಾವತಿ ನದಿಯ ಸೇತುವೆಯ ಗುಂಡಿಮಯವಾಗಿದ್ದು, ಮಳೆಯ ನೀರು ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT