ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳುಗಾರಿಕೆಗೆ ನಲುಗುತ್ತಿವೆ ಹಳ್ಳಿಗಳು

Last Updated 16 ಅಕ್ಟೋಬರ್ 2017, 9:10 IST
ಅಕ್ಷರ ಗಾತ್ರ

ರಾಮನಗರ: ಪಾತಾಳಕ್ಕೆ ಇಳಿದ ದೊಡ್ಡ ದೊಡ್ಡ ಹಳ್ಳಗಳು, ಅದನ್ನು ತುಂಬಿ ಭೋರ್ಗರೆಯುತ್ತಿರುವ ಕಣ್ವ ಹೊಳೆ, ಅಲ್ಲಲ್ಲಿ ಮರಳಿನ ಬೃಹತ್‌ ರಾಶಿ... ಇದು ಕೂಗಟಲ್‌ ಹೋಬಳಿಯ ಅಕ್ರಮ ಮರಳು ದಂಧೆಗೆ ನಲುಗುತ್ತಿರುವ ಗ್ರಾಮಗಳ ಸದ್ಯದ ಚಿತ್ರಣ. ಈಚೆಗೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಲ್ಲಿನ ಹಳ್ಳಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು ಮೃತ್ಯುಕೂಪಗಳಾಗಿ ಪರಿಣಮಿಸಿವೆ. ಸುತ್ತಲಿನ ಜಮೀನುಗಳು ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗುತ್ತಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ.

ತಾಲ್ಲೂಕಿನ ಮೆಳೇಹಳ್ಳಿಯಿಂದ ಆರಂಭಗೊಂಡು ಅರಳೀಮರದ ದೊಡ್ಡಿ, ಜೋಗಿದೊಡ್ಡಿ, ಲಕ್ಷ್ಮಿಪುರ, ಕೂಟಗಲ್, ಯರೇಹಳ್ಳಿ, ಶ್ಯಾನಬೋಗನಹಳ್ಳಿಯವರೆಗೂ ಈ ಅಕ್ರಮ ಮರಳು ದಂಧೆ ವ್ಯಾಪಿಸಿದೆ. ಮರಳು ಮಿಶ್ರಿತ ಮಣ್ಣಿನ ಸಲುವಾಗಿ ಅಲ್ಲಲ್ಲಿ ಭಾರಿ ಪ್ರಮಾಣದಲ್ಲಿ ಹಳ್ಳಗಳನ್ನು ತೋಡಲಾಗುತ್ತಿದೆ, ರೈತರಿಂದ ಜಮೀನುಗಳನ್ನು ಗುತ್ತಿಗೆಗೆ ಪಡೆದು 50–60 ಅಡಿಗಳ ಆಳದವರೆಗೂ ಮಣ್ಣನ್ನು ಬಗೆದು ಫಿಲ್ಟರ್ ಮಾಡಿ ಮರಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಹೀಗೆ ಉತ್ಪಾದನೆಯಾದ ಮರಳು ಅಕ್ರಮವಾಗಿ ಬೆಂಗಳೂರಿಗೆ ಸಾಗಣೆಯಾಗುತ್ತಿದೆ.

ನದಿಯ ಹರಿವಿಗೆ ಧಕ್ಕೆ: ಅಕ್ರಮ ಮರಳುಗಾರಿಕೆಯಿಂದಾಗಿ ಕಣ್ವ ಹೊಳೆಯ ಹರಿವಿಗೆ ತೀವ್ರ ಧಕ್ಕೆಯಾಗಿದ್ದು, ನದಿ ಪಾತ್ರವೇ ಬದಲಾಗಿ ಹೋಗಿದೆ. ಇಷ್ಟೆಲ್ಲ ಆದರೂ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿಲ್ಲ.

ಕಣ್ವ ಹೊಳೆಯು ಹರಿಯುವ ಹಾದಿಯಲ್ಲಿಯೇ ಅಲ್ಲಲ್ಲಿ ಮರಳಿಗಾಗಿ ನೆಲವನ್ನು ಬಗೆಯಲಾಗಿದೆ. ಈ ಹಳ್ಳಗಳಲ್ಲಿ ಕೆರೆಯ ಮಾದರಿಯಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು, ಅಕ್ರಮ ಮರಳುಗಾರಿಕೆಗೂ ಅನುಕೂಲವಾಗಿದೆ. ನೀರು ಹೆಚ್ಚಾದಾಗ ಮಾತ್ರ ಹಳ್ಳಗಳನ್ನು ಒಡೆದು ನೀರನ್ನು ಹೊರಚೆಲ್ಲಲಾಗುತ್ತಿದೆ. ಆ ಸಂದರ್ಭ ಪ್ರವಾಹ ಉಂಟಾಗಿ ಅಕ್ಕಪಕ್ಕದ ಜಮೀನುಗಳಿಗೂ ಹಾನಿಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

‘ಅಕ್ರಮ ಮರಳುಗಾರಿಕೆಯಿಂದ ಕಣ್ವ ಹೊಳೆ ಬತ್ತುತ್ತಿದೆ. ಇಲ್ಲಿನ ದೊಡ್ಡ ಹಳ್ಳಗಳಲ್ಲಿ ನೀರು ಸಂಗ್ರಹಗೊಳ್ಳುವ ಕಾರಣ ಮುಂದೆ ಹರಿಯುತ್ತಿಲ್ಲ. ಹೀಗಾಗಿ ಕಣ್ವ ಜಲಾಶಯಕ್ಕೆ ದೂರದ ಇಗ್ಗಲೂರು ಬ್ಯಾರೇಜ್‌ನಿಂದ ಪೈಪ್‌ಲೈನ್‌ ಮೂಲಕ ನೀರು ತುಂಬಿಸುವ ದುಃಸ್ಥಿತಿ ಎದುರಾಗಿದೆ’ ಎಂದು ಕೂಟಗಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬೋರೇಗೌಡ ಬೇಸರ ವ್ಯಕ್ತಪಡಿಸುತ್ತಾರೆ.

ಹದಿನೈದು ದಿನದ ಹಿಂದೆ ಈ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಹಳ್ಳಗಳು ಭರ್ತಿಯಾಗಿದ್ದವು, ಆ ವೇಳೆಯೂ ಹಳ್ಳಗಳನ್ನು ಒಡೆದು ನೀರನ್ನು ಹೊರಗೆ ಬಿಡಲಾಗಿತ್ತು. ಇದರಿಂದ ಸುತ್ತಲಿನ ಜಮೀನುಗಳಿಗೆ ನೀರು ನುಗ್ಗಿತ್ತು. ಆದರೂ ಅಧಿಕಾರಿಗಳು ಬಂದು ಪರಿಶೀಲಿಸಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಅಧಿಕಾರಿಗಳೂ ಶಾಮೀಲು: ಅಕ್ರಮ ಮರಳುಗಾರಿಕೆ ನಿರಂತರವಾಗಿದ್ದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸುತ್ತಲಿನ ಜನರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
‘ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ಆದಿಯಾಗಿ ಎಲ್ಲರಿಗೂ ಇಲ್ಲಿನ ಮರಳುಗಾರಿಕೆ ಬಗ್ಗೆ ತಿಳಿದಿದೆ. ಪೊಲೀಸರ ಕಣ್ಗಾವಲಿನಲ್ಲಿಯೇ ಇದು ನಡೆಯುತ್ತಿದೆ. ಕೆಲವು ಕಡೆ ಸರ್ಕಾರಿ ಜಮೀನುಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ’ ಎಂದು ಸ್ಥಳೀಯರು ಆರೋಪ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT