ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರ್‌ ಸುರ್‌ ಬತ್ತಿ ಹೊತ್ತಿತು ನೋಡಿ!

Last Updated 16 ಅಕ್ಟೋಬರ್ 2017, 9:12 IST
ಅಕ್ಷರ ಗಾತ್ರ

‘ಇದು ಬರೀ ಕಾಮಿಡಿ ಸಿನಿಮಾ ಅಲ್ಲ, ತಾಯಿ ಮಗನ ಸೆಂಟಿಮೆಂಟ್‌ ಇಟ್ಟುಕೊಂಡು ಹೆಣೆದ ಕಥೆ. ಅವರಿಬ್ಬರ ಮಧ್ಯ  ಇನ್ನೊಬ್ಬಳು ಹುಡುಗಿ ಬಂದರೆ ಏನೆಲ್ಲ ಆಗುತ್ತದೆ ಎನ್ನುವುದು ಕಥಾವಸ್ತು’ ಎಂದು ಕಥೆಯ ಎಳೆ ಬಿಟ್ಟುಕೊಟ್ಟೇ ಮಾತಿಗಾರಂಭಿಸಿದರು ‘ಸುರ್‌ ಸುರ್‌ ಬತ್ತಿ’ ನಿರ್ದೇಶಕ ಮುಗಿಲ್‌ ಎಂ.

‘ಇಂಥ ಕಥೆಗಳು ಈಗಾಗಲೇ ಸಾಕಷ್ಟು ಬಂದಿವೆ. ಆದರೆ ಇದು ಅದೇ ಚೌಕಟ್ಟಿನಲ್ಲಿನ ತುಂಬ ಭಿನ್ನವಾದ ಸಿನಿಮಾ. ಭಾವುಕತೆಯ ಜತೆಗೆ ಹಾಸ್ಯವೂ ಇದೆ’ ಎಂದೂ ಅವರು ಹೇಳಿದರು.

’ಸುರ್‌ ಸುರ್‌ ಬತ್ತಿ’ ಮುಗಿಲ್‌ ನಿರ್ದೇಶನದ ಐದನೇ ಸಿನಿಮಾ. ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲು ಸಂದರ್ಭದಲ್ಲಿ ಪತ್ರಕರ್ತರನ್ನು ಕರೆದು ತಂಡ ಮಾಹಿತಿ ಹಂಚಿಕೊಂಡಿತು. ದೀಪಾವಳಿ ಪಟಾಕಿ ಶಬ್ದಗಳೆಲ್ಲ ಮುಗಿದ ಮೇಲೆ ‘ಸುರ್‌ ಸುರ್‌ ಬತ್ತಿ’ ಹೊತ್ತಿಸಲು ಚಿತ್ರತಂಡ ಸಜ್ಜಾಗಿದೆ.

‘ಇದು ಎರಡು ಅಮಾಯಕ ಪಾತ್ರಗಳ ಬದುಕನ್ನು ಹಳ್ಳಿ ಹಿನ್ನೆಲೆಯಲ್ಲಿ ತೋರಿಸುವ ಸಿನಿಮಾ’ ಎಂದೂ ಹೇಳಿದರು ನಿರ್ದೇಶಕರು. ವೈಷ್ಣವಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ‘ನಾನು ಈ ಸಿನಿಮಾದ ಮೂಲಕ ತುಂಬ ವಿಷಯಗಳನ್ನು ಕಲಿತಿದ್ದೇನೆ. ಖಂಡಿತ ಈ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸ ಇದೆ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡರು ವೈಷ್ಣವಿ.

ಕಿರುತೆರೆ ಧಾರಾವಾಹಿ ಮತ್ತು ರಿಯಾಲಿಟಿ ಷೋಗಳ ಮೂಲಕ ಪರಿಚಿತನಾಗಿರುವ ಆರ್ವ ಈ ಚಿತ್ರದಲ್ಲಿ ನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ‘ನನ್ನನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಾಗ ಎಲ್ಲರೂ ಇವನನ್ನು ಇಟ್ಟುಕೊಂಡು ಹೇಗೆ ಸಿನಿಮಾ ಮಾಡ್ತೀರಾ ಎಂದು ನಿರ್ದೇಶಕರನ್ನು ಗೇಲಿ ಮಾಡಿದ್ದರು. ಆದರೆ ಈಗ ಸಿನಿಮಾ ತುಂಬ ಚೆನ್ನಾಗಿ ಬಂದಿದೆ. ಅದು ನಮಗೆಲ್ಲರಿಗೂ ಖುಷಿ ಕೊಟ್ಟಿದೆ’ ಎಂದು ಅವರು ಹೇಳಿಕೊಂಡರು.

ನಾಯಕನ ತಾಯಿಯ ಪಾತ್ರದಲ್ಲಿ ನಟಿಸಿರುವ ಊರ್ವಶಿ ಮಾತನಾಡಿ, ‘ಕನ್ನಡ ಚಿತ್ರರಂಗ ಎಂದರೆ ನನಗೆ ವಿಶೇಷ ಪ್ರೀತಿ. ಯಾಕೆಂದರೆ ಇಲ್ಲಿನ ಜನರು ನನ್ನ ಕನ್ನಡವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾನು ತಾಯಿಯ ಪಾತ್ರವೇ ಆದರೂ ಅದು ತುಂಬ ಭಿನ್ನವಾಗಿದೆ. ಇಲ್ಲಿ ಯಾರೂ ವಿಲನ್‌ಗಳಿಲ್ಲ. ಸಂದರ್ಭವೇ ಖಳನಾಯಕ. ಅದರಿಂದ ಆಗುವ ಅನಾಹುತಗಳೆಲ್ಲವೂ ಕಥೆಯ ತಿರುಳಾಗಿ ಮೂಡಿಬಂದಿದೆ. ಹಾಸ್ಯದ ಮೂಲಕ ಪ್ರಾರಂಭವಾಗುವ ಕಥೆ ಒಮ್ಮಿಂದೊಮ್ಮೆಲೇ ಗಂಭೀರವಾಗಿಬಿಡುತ್ತದೆ’ ಎಂದು ವಿವರಿಸಿದರು. ಸಾಧುಕೋಕಿಲ ಸಹ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಬಿ.ಡಿ.ಕುಮಾರ್‌ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಲೋಕೇಶ್‌ ಅವರ ಸಂಗೀತ, ಎ.ಸಿ. ಮಹೇಂದರ್‌ ಛಾಯಾಗ್ರಹಣ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT