ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದೇಬಿಹಾಳದಲ್ಲಿ ಮಳೆಯಿಂದ ಅಪಾರ ಹಾನಿ

Last Updated 16 ಅಕ್ಟೋಬರ್ 2017, 9:42 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧಡೆ ಶುಕ್ರವಾರ ರಾತ್ರಿ ಸಿಡಿಲು ಗುಡುಗು ಸಹಿತ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ಎರಡ್ಮೂರು ಗಂಟೆಗೂ ಅಧಿಕ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರಿ ಮಳೆಯಿಂದ, ಚಲಮಿ ತಾಂಡಾ ವ್ಯಾಪ್ತಿಯ ಜಮೀನೊಂದರಲ್ಲಿ ಕಟ್ಟಿಹಾಕಿದ್ದ ಎಂ.ಎಸ್.ಚವ್ಹಾಣ ಎನ್ನುವವರಿಗೆ ಸೇರಿದ ಅಂದಾಜು ಒಂದು ಲಕ್ಷ ಮೌಲ್ಯದ ಎತ್ತು ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಯರಝರಿ ಗ್ರಾಮಕ್ಕೆ ನೀರು ಹೊಕ್ಕಿದೆ. ಮುದ್ದೇಬಿಹಾಳ ಹೋಬಳಿ ವ್ಯಾಪ್ತಿಯಲ್ಲಿ 145 ಮನೆಗಳು ಕುಸಿದಿರುವ ವರದಿಯಾಗಿದೆ.

ಪಟ್ಟಣದ ಬಸವೇಶ್ವರ ವೃತ್ತದ ನೆಲಮಹಡಿಯ ತರಕಾರಿ, ಗೊಬ್ಬರ, ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ರಸಗೊಬ್ಬರ, ಕೀಟನಾಶಕ, ತರಕಾರಿ, ಕಿರಾಣಿ, ದಿನಸಿ ವಸ್ತುಗಳು ನೀರು ಪಾಲಾಗಿದೆ. ಹುಡ್ಕೋ ಮುಖ್ಯ ರಸ್ತೆ ಪಕ್ಕದಲ್ಲಿ ಈಚೆಗೆ ನಿರ್ಮಿಸಲಾದ ಒಳಚರಂಡಿಯಲ್ಲಿ ಅಗ್ನಿಶಾಮಕ ದಳ ವಾಹನ ಸಿಲುಕಿಕೊಂಡರೇ, ಇಂದಿರಾ ವೃತ್ತದ ಬಳಿಯ ಕೆರೆಯ ಪಕ್ಕದ ರಸ್ತೆಯಲ್ಲಿ ಲಾರಿಯೊಂದು ಸಿಲೂಕಿ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡಿತು. ವಾಹನಗಳನ್ನು ತೆಗೆಯಲು ಮೂರ್ನಾಲ್ಕು ಗಂಟೆ ಹರಸಾಹಸ ಪಡಬೇಕಾಯಿತು.

145 ಮನೆ ಕುಸಿತ
ಮುದ್ದೇಬಿಹಾಳ ಹೋಬಳಿ ವ್ಯಾಪ್ತಿಯ ಯಲಗೂರದಲ್ಲಿ 13, ಆಲೂರದಲ್ಲಿ 10, ಕವಡಿಮಟ್ಟಿಯಲ್ಲಿ 6, ದೇವೂರಿನಲ್ಲಿ 5, ಕೋಳೂರಿನಲ್ಲಿ 14, ಕುಂಟೋಜಿಯಲ್ಲಿ 11, ಯರಝರಿಯಲ್ಲಿ 9, ಕಾಳಗಿಯಲ್ಲಿ 4, ತಂಗಡಗಿಯಲ್ಲಿ 26, ಅಮರಗೋಳದಲ್ಲಿ 19, ಹುನಕುಂಟಿಯಲ್ಲಿ 6, ಮುದ್ದೇಬಿಹಾಳ ಪಟ್ಟಣದಲ್ಲಿ 14, ಹಡಲಗೇರಿಯಲ್ಲಿ 8 ಮನೆಗಳು ಸೇರಿ ಒಟ್ಟು 145 ಮನೆಗಳು ಬಿದ್ದಿವೆ ಎಂದು ಕಂದಾಯ ನಿರೀಕ್ಷಕ ಎಸ್.ಸಿ.ವಡವಡಗಿ ತಹಶೀಲ್ದಾರ್‌ಗೆ ವರದಿ ಸಲ್ಲಿಸಿದ್ದಾರೆ.

ಯರಝರಿ ಗ್ರಾಮಕ್ಕೆ ನೀರು
ಢವಳಗಿ ಸೇರಿದಂತೆ ಇನ್ನಿತರ ಕಡೆಯಿಂದ ಹರಿದು ಬಂದ ನೀರು ಯರಝರಿ ಗ್ರಾಮದ ಬಳಿಯ ಕಿರು ಸೇತುವೆ ಮೂಲಕ ಮುಂದೆ ಹರಿದು ಹೋಗದೆ, ಗ್ರಾಮದೊಳಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಗ್ರಾಮ ಪಂಚಾಯ್ತಿ, ಪ್ರಾಥಮಿಕ ಕೃಷಿ ಪತ್ತಿನ ಸಂಘ, ಅಂಗನವಾಡಿ ಸೇರಿದಂತೆ ಬಹುತೇಕ ಮನೆಗಳು ನೀರಲ್ಲಿರುವುದು ಕಂಡು ಬಮದಿತು.

ಇದರಿಂದ ಆಲಮಟ್ಟಿ ಮುಖ್ಯರಸ್ತೆಯಿಂದ ಮಾದಿನಾಳ ಕ್ರಾಸ್ ಮೂಲಕ ಆಶ್ರಯ ಬಡಾವಣೆ, ಯಲ್ಲಾಲಿಂಗೇಶ್ವರ ಮಠದಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಿರುಸೇತುವೆ ಮೇಲೆ ನೀರು ನಿಂತಿದ್ದರಿಂದ ಸಂಚಾರ ಕೂಡ ಸ್ಥಗೀತಗೊಂಡಿತ್ತು.

ಕಾಲುವೆ ಒಡೆದು ಹಾನಿ
ತಾಲ್ಲೂಕಿನ ಮಾದಿನಾಳ ಗ್ರಾಮದ ಬಳಿ ಕಾಲುವೆ ಒಡೆದ ಪರಿಣಾಮ ಜಮೀನುಗಳಲ್ಲಿ ನೀರು ಹರಿದು ಅಪಾರ ಪ್ರಮಾಣದ ಫಲವತ್ತಾದ ಮಣ್ಣು ಹರಿದುಕೊಂಡು ಹೋಗಿದೆ. ಮಳೆ ನೀರು ಕೆರೆಯ ಕಡೆಗೆ ನೀರು ಹರಿಯದಂತೆ ಮಾಡದಿರುವುದು ಮತ್ತು ಕಾಲುವೆ ಕಳಪೆಯಾಗಿರುವ ಕಾರಣ ರೈತರ ಹೊಲಗಳಿಗೆ ನೀರು ನುಗ್ಗಿದ್ದರಿಂದ ಹಾನಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಶಾಸಕ ಸಿ.ಎಸ್‌.ನಾಡಗೌಡ ರೈತರ ಹಾನಿ ತುಂಬಿಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT