25 ವರ್ಷಗಳಿಂದ ಗುಡಿಸಲಲ್ಲಿ ವಾಸ!

ಭಾನುವಾರ, ಜೂನ್ 16, 2019
22 °C

25 ವರ್ಷಗಳಿಂದ ಗುಡಿಸಲಲ್ಲಿ ವಾಸ!

Published:
Updated:
25 ವರ್ಷಗಳಿಂದ ಗುಡಿಸಲಲ್ಲಿ ವಾಸ!

ಕೆಂಭಾವಿ: ಸರ್ಕಾರ ಬಡವರಿಗಾಗಿ ಹಲವಾರು ಯೋಜನೆಗಳಡಿ ಮನೆಗಳ ನಿರ್ಮಾಣ ಹಾಗೂ ಮೂಲ ಸೌಕರ್ಯ ಒದಗಿಸುತ್ತಿದೆ. ಆದರೆ, ಪಟ್ಟಣದ ಹೊರ ವಲಯದಲ್ಲಿರುವ ಕೆಂಗೇರಿ ಬಡಾವಣೆಯಲ್ಲಿ ಅಲೆಮಾರಿ ಜನಾಂಗ ಮತ್ತು ಕುಂಚಿ ಕೊರಮರು ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಬಿದಿರು ಕಟ್ಟಿಗೆಗಳಿಂದ ಮಾಡಿದ ತಟ್ಟೆಗಳಿಗೆ ಸೀರೆಗಳನ್ನು ಹೊದಿಸಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಾರೆ. ಇಲ್ಲಿನ ಜನರು ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಕೂದಲು ಮಾರುವುದು, ಪ್ಲಾಸ್ಟಿಕ್ ಆರಿಸುವುದು, ಮಕ್ಕಳನ್ನು ಕಟ್ಟಿಕೊಂಡು ಸಂತೆಯಲ್ಲಿ ಭಿಕ್ಷೆ ಬೇಡುವುದು, ಹಂದಿ ಹಿಡಿಯುವುದು ಈ ಕಸಬುಗಳನ್ನು ಮಾಡುತ್ತಾರೆ.

‘25 ವರ್ಷಗಳಿಂದ ವಾಸವಾಗಿರುವ ಅಲೆಮಾರಿ ದಲಿತ ಕುಟುಂಬಗಳು ಇಂದಿಗೂ ಗುಡಿಸಲಲ್ಲಿ ಜೀವನ ಕಳೆಯುತ್ತಿವೆ. ಒಂದು ತಿಂಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತತ್ತರಿಸಿರುವ ಕುಟುಂಬಗಳ ಪಾಡು ಕೇಳುವವರಿಲ್ಲದಂತಾಗಿದೆ. ವಿದ್ಯುತ್ ಸೌಕರ್ಯವಿಲ್ಲದೆ ಕಗ್ಗತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಉತ್ತಮ ಶಿಕ್ಷಣ ಸಿಗದ ಇವರ ಮಕ್ಕಳು ಕೂಡ ಕುಲಕಸುಬನ್ನು ಮಾಡುವುದು ಅನಿವಾರ್ಯವಾಗಿದೆ’ ಎಂದು ಸ್ಥಳೀಯರು ದೂರಿದ್ದಾರೆ.

‘ಜೋರಾಗಿ ಮಳೆ ಬಂದರೆ ಪಟ್ಟಣದ ಚರಂಡಿ ನೀರು ನಾವು ವಾಸಿಸುವ ಪ್ರದೇಶವನ್ನು ಆವರಿಸಿ ನಡುಗಡ್ಡೆಯಂತಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೇ ಅನಿವಾರ್ಯವಾಗಿ ಜೀವನ ನಡೆಸುತ್ತಿದ್ದೆವೆ. ಆಶ್ರಯ ಮನೆ, ರಸ್ತೆ, ಶೌಚಾಲಯ, ಕುಡಿಯುವ ನೀರು, ಮಕ್ಕಳಿಗಾಗಿ ಶಾಲೆ ವ್ಯವಸ್ಥೆ ಕಲ್ಪಿಸಬೇಕು’ ಬಡಾವಣೆಯ ನಿವಾಸಿ ರಾಮಪ್ಪ ಒತ್ತಾಯಿಸುತ್ತಾರೆ.

‘ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮಂತಹ ಬಡವರ ಮಾತು ಯಾರು ಕಿವಿಗೆ ಹಾಕಿಕೊಳ್ಳುತ್ತಾರೆ’ ಎಂದು ಅವರು ಅಳಲು ತೋಡಿಕೊಂಡರು.

‘ಪಟ್ಟಣವು ಪುರಸಭೆಯಾಗಿ ಮೇಲ್ದರ್ಜೆಗೇರಿ ಎರಡು ವರ್ಷಗಳು ಪೂರ್ಣಗೊಂಡಿವೆ. ಆದರೆ, ಅಭಿವೃದ್ಧಿ ಮಾತ್ರ ಕನಸಿನ ಮಾತಾಗಿದೆ. ಈಗಲಾದರೂ ಜನಪ್ರತಿನಿಧಿಗಳು ಮತ್ತು ಪುರಸಭೆ ಅಧಿಕಾರಿಗಳು ಇಂತಹ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಕೆಲಸ ಮಾಡಲಿ’ ಎಂದು ಪಟ್ಟಣದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry