ಮತ್ತೆ ಹರಿದಳು ಅರ್ಕಾವತಿ

ಬುಧವಾರ, ಜೂನ್ 19, 2019
31 °C

ಮತ್ತೆ ಹರಿದಳು ಅರ್ಕಾವತಿ

Published:
Updated:
ಮತ್ತೆ ಹರಿದಳು ಅರ್ಕಾವತಿ

ಈ ನದಿ ಹರಿದ ಕುರುಹೂ ಇಲ್ಲದಂತೆ ದಶಕದಿಂದ ಬತ್ತಿಹೋಗಿತ್ತು. ದಕ್ಷಿಣ ಒಳನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಅರ್ಕಾವತಿ ನದಿಗೆ ಮರುಜೀವ ಬಂದಿದೆ. ದೊಡ್ಡಬಳ್ಳಾಪುರ, ರಾಮನಗರ, ಕನಕಪುರ, ಮಾಗಡಿ, ಹೆಸರಘಟ್ಟ ಸುತ್ತಲಿನ ಪ್ರದೇಶಗಳಲ್ಲಿ ಈ ವರ್ಷ ವರ್ಷಧಾರೆ ಕೃಪೆತೋರಿದೆ. ಹಾಗಾಗಿ ಅರ್ಕಾವತಿ ನದಿ ಹರಿವಿನ ಒಂದು ತಂಗುದಾಣ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 65 ಅಡಿ ನೀರು ಸಂಗ್ರಹವಾಗಿದೆ.‌

ಅರ್ಕಾವತಿ ನದಿ ಈ ಪ್ರದೇಶದ ಕೆರೆಗಳನ್ನು ಜೋಡಿಸುವ ಜಾಲದಂತಿದೆ. ನದಿ ಹಾದಿಯ ಮೊದಲ ಕೆರೆ ನಂದಿಬೆಟ್ಟದ ತಪ್ಪಲಿನ ಚಿಕ್ಕರಾಯಪ್ಪನಹಳ್ಳಿ ಕೆರೆಯ ಕೋಡಿ ಬಿದ್ದಿದೆ. ಬಹುವರ್ಷಗಳಿಂದ ಬರಿದಾಗಿದ್ದ ನದಿ ಮಾರ್ಗದ ಚನ್ನಾಪುರ, ಮಳೆಕೋಟೆ, ಕೋಡಿಹಳ್ಳಿ, ಕೋನಘಟ್ಟ, ಶಿವಪುರ, ನಾಗರಕೆರೆ, ಮಧುರೈ, ದೊಡ್ಡತುಮಕೂರು, ಬ್ಯಾತ, ಕಾಕೋಳು, ಹೆಸರಘಟ್ಟ ಕೆರೆಗಳು ಸೇರಿದಂತೆ ಪ್ರದೇಶದ ಶೇ 90 ರಷ್ಟು ಕೆರೆಗಳಿಗೆ ಜೀವಕಳೆ ಬಂದಿದೆ.

2005ರಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಪ್ರದೇಶದ ಮಂಚನಬೆಲೆ ಜಲಾಶಯ ಭರ್ತಿಯಾಗಿತ್ತು. ಆಗ ಜಲಾಶಯದಿಂದ ನೀರನ್ನು ಅರ್ಕಾವತಿ ನದಿಗೆ ಹರಿಸಿದ್ದರಿಂದ ಜನರು ಹೊಳೆಯಲ್ಲಿ ಮಿಂದಿದ್ದರು. ಹನ್ನೆರಡು ವರ್ಷದ ನಂತರ ಪುನಃ ಆ ಸೌಭಾಗ್ಯ ಸಿಕ್ಕದೆ.

ಒಂದು ಕಾಲಕ್ಕೆ ಬೆಂಗಳೂರು ಮಹಾನಗರದ ಜನತೆಗೆ ನೀರು ಕುಡಿಸುತ್ತಿದ್ದ ಅರ್ಕಾವತಿ ಭೂಪಟದಲ್ಲಷ್ಟೇ ಜೀವಂತವಾಗಿತ್ತು. ಈಗ ನದಿ ಮರುಪೂರಣಗೊಳ್ಳುತ್ತಿರುವುದರಿಂದ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಮನದಲ್ಲೂ ಸಂತಸ ಮನೆ ಮಾಡಿದೆ. ಕೆರೆಗಳು ಭರ್ತಿಯಾಗುತ್ತಿರುವುದರಿಂದ ರಾಗಿ, ಮೆಕ್ಕೆಜೋಳ, ಬೀನ್ಸ್‌, ಅವರೆಯ ಬೆಳೆ ಈ ವರ್ಷ ಕೈಗೆಟುಕಲಿದೆ. ಈ ಜಲಸಮೃದ್ಧಿ ಪ್ರತಿವರ್ಷವೂ ಬಂದರೆ, ಬೆಂಗಳೂರಿಗೆ ವಲಸೆ ಹೋಗಿ ದುಡಿಯುವುದು ತಪ್ಪಲಿದೆ ಎಂಬ ಇಂಗಿತವನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಈ ಮಳೆನೀರು ಬರಿದಾಗುತ್ತಿರುವ ಅಂತರ್ಜಲದ ಬ್ಯಾಂಕಿನ ಅಸಲಿಗೆ ಸೇರಲಿದೆ. ಅದರಿಂದ ಬತ್ತಿರುವ ಕೊಳವೆಬಾವಿಗಳಲ್ಲಿ ನೀರು ಜಿನುಗಲಿದೆ ಎಂಬ ಅಭಿಪ್ರಾಯ ಅವರದು.

ನದಿಯ ಬದಿಯ ಊರುಗಳಾದ ಮಧುರೈನಿಂದ ಕಾಕೋಳದವರೆಗೆ ಕುರುಚಲು ಕಾನನವಿದೆ. ಜಲದಿಂದ ನೆಲ ಹಸಿರಾಗಿರುವುದರಿಂದ ಈ ಅರಣ್ಯ ದಲ್ಲಿ ಕಾಡುಹಂದಿಗಳು ಕಳ್ಳಹೆಜ್ಜೆ ಹಾಕುತ್ತಿವೆ. ನವಿಲುಗಳ ನಾಟ್ಯದ ನೋಟಗಳು ಕಾಣಸಿಗುತ್ತಿವೆ. ಕಾವೇರಿ ನೀರಾವರಿ ಅಭಿವೃದ್ಧಿ ನಿಗಮ ಈ ನದಿ ಪುನಶ್ಚೇತನಕ್ಕಾಗಿ 2014ರಲ್ಲಿ ಅಂದಾಜು ₹22 ಕೋಟಿ ವ್ಯಯಿಸಿತ್ತು. ಕೆಲವು ರಾಜಕಾಲುವೆಗಳ ಒತ್ತುವರಿ ತೆರವು ಮಾಡಿ, ಆದಷ್ಟು ಕೆರೆಗಳ ಹೂಳು ತೆಗೆದು ತಂತಿಬೇಲಿ ಅಳವಡಿ ಸಿತ್ತು. ನದಿಗೆ ಮರುಜೀವ ಬರಲು ನಿಗಮದ ಚಿಕಿತ್ಸೆಯೂ ಒಂದು ಕಾರಣ.

ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿಯು ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ರಾಮನಗರ, ಕನಕಪುರ ಮೂಲಕ ತಮಿಳುನಾಡಿನ ಗಡಿ ಮೇಕೆದಾಟಿನ ಬಳಿ ಕಾವೇರಿ ನದಿಯಲ್ಲಿ ಸಂಗಮಗೊಳ್ಳುತ್ತದೆ. ಅರ್ಕಾವತಿ ನದಿಗೆ ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಉಪನದಿಗಳಿವೆ.

ನದಿ ಬತ್ತಿಸುವಲ್ಲಿ ದೊಡ್ಡಬಳ್ಳಾಪುರ ನಗರದ ಬೆಳವಣಿಗೆ, ಕಲ್ಲು, ಮರಳು ಗಣಿಗಾರಿಕೆ, ವಾಣಿಜ್ಯ ಬೆಳೆಗಳ ವಿಸ್ತರಣೆ, ನದಿಯ ಪಾತ್ರದಲ್ಲಿಯೇ ನೆಲೆ ಕಂಡುಕೊಂಡ ಕೊಳವೆಬಾವಿಗಳು ಕೊಡುಗೆ ನೀಡಿದ್ದವು.

**

1962ರಲ್ಲಿ ಪ್ರವಾಹ ಬಂದಿತ್ತು

ಮಂಚನಬೆಲೆಯಲ್ಲಿ ಜಲಾಶಯ ನಿರ್ಮಿಸುವುದಕ್ಕೂ ಮುನ್ನ ಅರ್ಕಾವತಿ ನದಿಯಲ್ಲಿ ನೀರು ಜೋರಾಗಿಯೇ ಹರಿಯುತ್ತಿತ್ತು. ಬರೊಬ್ಬರಿ 55 ವರ್ಷಗಳ ಹಿಂದೆ (1962, ಅಕ್ಟೋಬರ್‌ 2) ಅರ್ಕಾವತಿ ನದಿಯಲ್ಲಿ ಪ್ರವಾಹವೂ ಉಂಟಾಗಿತ್ತು. ಮಂಚನಬೆಲೆಯಿಂದ ರಾಮನಗರದವರೆಗೆ ಸುಮಾರು 2,000 ಎಕರೆ ಜಮೀನು ಜಲಾವೃತವಾಗಿತ್ತು. ಇದೇ ವೇಳೆ ಕಣ್ವ ನದಿಯಲ್ಲೂ ಪ್ರವಾಹ ಉಂಟಾಗಿ ಕೂಟಗಲ್‌ ಗ್ರಾಮದ ಸುತ್ತಮುತ್ತ 1,000 ಎಕರೆ ಬೆಳೆ ನಷ್ಟವಾಗಿತ್ತು ಎಂಬ ವರದಿ ಸರ್ಕಾರಿ ದಾಖಲೆಗಳಲ್ಲಿ ಇದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry