ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲ್ಲಣದ ಮನಕ್ಕೊಂದು ಭಾವಸೇತು

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಹುಕಾಲದಿಂದಲೂ ಮಾನಸಿಕ ಆರೋಗ್ಯದ ಬಗ್ಗೆ ನಮ್ಮಲ್ಲಿ ಹಲವು ತಪ್ಪು ಕಲ್ಪನೆ ಹಾಗೂ ಮೂಢನಂಬಿಕೆಗಳು ಬೇರೂರಿವೆ. ಮಾನಸಿಕ ಕಾಯಿಲೆಗೆ ಅಂಟಿಕೊಂಡಿರುವ ಕಳಂಕ, ವೈಜ್ಞಾನಿಕ ಮಾಹಿತಿ ಅಲಭ್ಯತೆಯಿಂದ ಜನ ಸಾಮಾನ್ಯರಲ್ಲಿ ತಿಳಿವಳಿಕೆ ಕೊರತೆ ಇದೆ. ಇದನ್ನು ನೀಗಿಸುವ ನಿಟ್ಟಿನಲ್ಲಿ ಜಯನಗರದ ‘ವೈಟ್ ಸ್ವಾನ್ ಫೌಂಡೇಷನ್ ಫಾರ್ ಮೆಂಟಲ್ ಹೆಲ್ತ್’ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

‘ಪರಿವರ್ತನೆ ನನ್ನಿಂದಲೇ ಆರಂಭ’ ಎನ್ನುವುದು ಈ ಸಂಸ್ಥೆಯ ಘೋಷವಾಕ್ಯ. ಮಾನಸಿಕ ಅಸ್ವಸ್ಥತೆಯಿಂದ ಬಳಲುವ ಮಕ್ಕಳು, ಯುವಜನರು, ಮಧ್ಯ ವಯಸ್ಕರು, ವಯೋವೃದ್ಧರು ಸೇರಿದಂತೆ ವಿವಿಧ ವೃತ್ತಿ, ಕ್ಷೇತ್ರದ ಜನರಲ್ಲಿ ಮಾನಸಿಕ ಆರೋಗ್ಯ ಜ್ಞಾನ ಬಿತ್ತುವುದೇ ಸಂಸ್ಥೆಯ ಧ್ಯೇಯ.
ಮೂರು ವರ್ಷಗಳಿಂದ ಮಾನಸಿಕ ಆರೋಗ್ಯ ಮತ್ತು ಉತ್ತಮ ಜೀವನ ನಿರ್ವಹಣೆ ಕುರಿತ ಮಾಹಿತಿಯನ್ನು ಇಂಗ್ಲಿಷ್, ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಅಂತರ್ಜಾಲದ ಮೂಲಕ ಪಸರಿಸುತ್ತಿದೆ.

ಸಂಸ್ಥೆ ಯಾವುದೇ ಚಿಕಿತ್ಸೆ ನೀಡುವುದಿಲ್ಲ; ಬದಲಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದೆ. ವೆಬ್‌ಸೈಟ್, ಫೇಸ್‌ಬುಕ್, ಟ್ವಿಟರ್‌ನಂತಹ ನವಮಾಧ್ಯಮಗಳ ಮೂಲಕ ಮಾನಸಿಕ ಕ್ಷೋಭೆ ಉಂಟುಮಾಡುವ ತಲ್ಲಣಗಳ ಬಗ್ಗೆ ಮಾನಸಿಕ ಆರೋಗ್ಯ ಕ್ಷೇತ್ರದ ತಜ್ಞರ ಅನುಭವದ ಮಾತು, ಸ್ಫೂರ್ತಿದಾಯಕ ಕಥೆಗಳು, ವರದಿ – ವಿಶ್ಲೇಷಣೆಗಳು, ಅಂಕಿ– ಅಂಶಗಳು ತೆರೆದಿಟ್ಟ ಸತ್ಯಾಂಶಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದರಿಂದ ಜನರು ತಾವಾಗಿಯೇ ಜ್ಞಾನ ಸಂಪಾದಿಸಿ ಸಮಸ್ಯೆ ಎದುರಾದಾಗ ನಿರ್ಣಯ ಕೈಗೊಳ್ಳುವಂತೆ ಪ್ರೇರೇಪಿಸುವ ಕೆಲಸವನ್ನು ಮಾಡುತ್ತಿದೆ.

ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಅಂತರ್ಜಾಲದ ಪ್ರಯೋಜನ ಪಡೆಯಬಹುದು. ರೋಗದ ಗುಣಲಕ್ಷಣಗಳು, ಚಿಕಿತ್ಸೆ, ಆರೈಕೆ ವಿಷಯ ಓದಿ ತಿಳಿದುಕೊಳ್ಳಬಹುದು. ಅಲ್ಲದೆ ಮನಸ್ಸಿನಲ್ಲಿರುವ ಅನೇಕ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು.

ಅಂತರ್ಜಾಲ ಬಳಸದೆ ಇರುವ ಜನಸಾಮಾನ್ಯರು, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಶಾಲಾ ಶಿಕ್ಷಕರಿಗೆ ಸಣ್ಣ ಮಟ್ಟದ ಗುಂಪುಗಳಲ್ಲಿ ಮಾನಸಿಕ ಯೋಗಕ್ಷೇಮ, ಖಿನ್ನತೆ ಮತ್ತು ಆತಂಕ, ವೈಯಕ್ತಿವಾಗಿ ಸಾಮರ್ಥ್ಯ ಅರ್ಥ ಮಾಡಿಕೊಳ್ಳುವುದು, ಆಲೋಚನೆ, ಭಾವನೆ, ಮಾತು, ನಡವಳಿಕೆ ಬಗ್ಗೆ ನಿಯಂತ್ರಣ ಹೊಂದುವುದರ ಬಗೆಗೆ ತಿಳಿಸಿಕೊಡುತ್ತಾರೆ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ಹೊಂದುವುದು, ಸಂತಸ ನೀಡುವ ಅರ್ಥಪೂರ್ಣ ಚಟುವಟಿಕೆಯಲ್ಲಿ ಸಕ್ರಿಯರಾಗುವಂತೆ ಪ್ರೇರೇಪಿಸಲು ಸಣ್ಣ ಕೈಪಿಡಿ, ಕರಪತ್ರ, ಚಿತ್ರಗಳ ಮುಖೇನ ನೆರವು ಕಾರ್ಯಕ್ರಮಗಳನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಥೆ ಆಯೋಜಿಸುತ್ತಾ ಬರುತ್ತಿದೆ.

ಸಂಸ್ಥೆ ಅಧ್ಯಕ್ಷ ಸುಬ್ರೊತೊ ಬಾಗ್ಚಿ ಅವರು 2013ರಲ್ಲಿ ಮೈಂಡ್ ಟ್ರೀ ಲಿಮಿಟೆಡ್‌ನ ಅಡಿ ನಿಮ್ಹಾನ್ಸ್‌ ಮಾರ್ಗದರ್ಶನದಲ್ಲಿ ಸಂಸ್ಥೆ ಆರಂಭಿಸಿ ಮುನ್ನಡೆಸುತ್ತಿದ್ದಾರೆ.

‘500 ಜನ ತಜ್ಞರ ಸಾಮರ್ಥ್ಯ ಹಾಗೂ ದಕ್ಷ ವ್ಯವಸ್ಥೆ ಉಪಯೋಗಿಸಿಕೊಂಡು ದೇಶದ ಪ್ರಮುಖ 10 ನಗರಗಳ ಯುವ ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ತಿಳಿವಳಿಕೆ ಮೂಡಿಸುವುದು, ಅಂತರ್ಜಾಲದಲ್ಲಿ ಮಾನಸಿಕ ಆರೋಗ್ಯ ಕುರಿತ ಮಾಹಿತಿಸೇವೆ ಒದಗಿಸುವ ಅತಿದೊಡ್ಡ ಲಾಭರಹಿತ ಕೇಂದ್ರವಾಗಿ ರೂಪಿಸುವ ಗುರಿ ಹೊಂದಲಾಗಿದೆ’ ಎಂದು ಸಂಸ್ಥೆಯ ಸಿಇಒ ಮನೋಜ್ ಚಂದ್ರನ್ ಮಾಹಿತಿ ಹಂಚಿಕೊಂಡರು.

ಈ ಸಂಸ್ಥೆಯ ರಾಯಭಾರಿಯಾಗಿ ಖ್ಯಾತ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಮತ್ತು ರಂಗಕರ್ಮಿ ಅರುಂಧತಿ ನಾಗ್ ಕಾರ್ಯನಿರ್ವಹಿಸುತ್ತಿದ್ದಾರೆ. ‘ಸಮಾಜವು ಮಾನಸಿಕ ಅಸ್ವಸ್ಥರನ್ನು ತಾತ್ಸಾರ ಮಾಡುತ್ತದೆ. ಸರಿಯಾದ ಮಾಹಿತಿ ಪಡೆದು ನಮ್ಮಲ್ಲಿರುವ ಮೂಢ ನಂಬಿಕೆ ಹಾಗೂ ತಪ್ಪು ಗ್ರಹಿಕೆ ಹೋಗಲಾಡಿಸಬೇಕು’ ಎಂಬುದು ಗಿರೀಶ್ ಕಾಸರವಳ್ಳಿ ಅವರ ಅಭಿಪ್ರಾಯ.

‘ಮಿದುಳು ದೇಹದ ಒಂದು ಭಾಗ. ಅದಕ್ಕೆ ತೊಂದರೆಯಾದರೆ ಮಾನಸಿಕ ಅನಾರೋಗ್ಯ ಉಂಟಾಗುತ್ತದೆ. ಇದಕ್ಕೆ ಪಾಪಪುಣ್ಯಗಳನ್ನು ಆರೋಪಿಸುವ ಅಗತ್ಯವಿಲ್ಲ. ಮಾನಸಿಕ ಸಮಸ್ಯೆಯನ್ನು ಅದಷ್ಟು ಬೇಗ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಚೇತರಿಸಿಕೊಳ್ಳಬಹುದು’ ಎನ್ನುತ್ತಾರೆ ಆರುಂಧತಿ ನಾಗ್.

ಮಾಹಿತಿಗೆ www.whiteswanfoundation.org ಜಾಲತಾಣ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT