ಬುಧವಾರ, ಮೇ 27, 2020
27 °C

ಕಬ್ಬಿನ ಬೆಳೆಗೆ ಪಂಚ ಸೂತ್ರಗಳು

ಬಸವರಾಜ ಗಿರಗಾಂವಿ Updated:

ಅಕ್ಷರ ಗಾತ್ರ : | |

ಕಬ್ಬಿನ ಬೆಳೆಗೆ ಪಂಚ ಸೂತ್ರಗಳು

ಭೂಮಿ ತಯಾರಿ ಹೀಗಿರಬೇಕು

* ನೀರಿನ ಲಭ್ಯತೆಗೆ ಅನುಗುಣವಾಗಿ ಕಬ್ಬು ನಾಟಿ ಮಾಡುವ ಕ್ಷೇತ್ರ ನಿರ್ಧರಿಸಬೇಕು.

* ಭೂಮಿ ಸಮತಟ್ಟಾಗಿರುವುದು ಅವಶ್ಯ. ಇದರಿಂದ ಪ್ರತಿ ಕಬ್ಬಿನ ಸಸಿಗೆ ಸಮ ಪ್ರಮಾಣದಲ್ಲಿ ನೀರು ಲಭಿಸುತ್ತದೆ.

* ಕಬ್ಬು ನಾಟಿ ಮಾಡಲು ಕೆಂಪು ಮಿಶ್ರಿತ ಕಪ್ಪು ಮಣ್ಣಿನ (ಮಸಾರಿ)ಭೂಮಿ ಆಯ್ಕೆ ಮಾಡಬೇಕು.

* ಗರಿಕೆ, ಜೇಕುಗಳನ್ನು ನಾಶಗೊಳಿಸಬೇಕು.

* ಫೆಬ್ರುವರಿ-ಮಾರ್ಚ್‌ ತಿಂಗಳಲ್ಲಿ ಮಾಗಿ ಉಳುಮೆ ಕೈಗೊಳ್ಳಬೇಕು. ಇದರಿಂದ ನಾಟಿ ಸಸಿಗಳಿಗೆ ತಗಲುವ ಪ್ರಾರಂಭದ ರೋಗ ಕೀಟಗಳು ನಾಶವಾಗುತ್ತವೆ.

* ಮಾಗಿ ಉಳುಮೆ ಮಾಡಿದ ತಿಂಗಳ ನಂತರ, ಪದ್ಧತಿಯಂತೆ ಮಣ್ಣು ಮತ್ತು ನೀರನ್ನು ಪರೀಕ್ಷಿಸಬೇಕು.

* ಮೇ ತಿಂಗಳ ಮಧ್ಯದಲ್ಲಿ ಪ್ರತಿ ಎಕರೆಗೆ 10 ಮೆಟ್ರಿಕ್‌ ಟನ್‌ನಂತೆ ಚೆನ್ನಾಗಿ ಕಳಿತ ಕೊಟ್ಟಿಗೆ ಗೊಬ್ಬರವನ್ನು ಜಮೀನಿನಲ್ಲಿ ಹರಡಿ ರೂಟಾವೇಟರ್ ಮುಖಾಂತರ ಮಣ್ಣಿನೊಂದಿಗೆ ಮಿಶ್ರಣ ಮಾಡಬೇಕು.

* ಜೂನ್ ತಿಂಗಳ ಮೊದಲನೆ ವಾರದಲ್ಲಿ ಪ್ರತಿ ಎಕರೆಗೆ 10 ಕೆ.ಜಿ.ಯಂತೆ ಹಸಿರೆಲೆ ಗೊಬ್ಬರ ಗಳಾದ ಡೈಂಚಾ ಅಥವಾ ಸೆಣಬು ಬಿತ್ತಬೇಕು.

* ಜುಲೈ ಮಧ್ಯ ಭಾಗದಲ್ಲಿ ಹಸಿರೆಲೆ ಗೊಬ್ಬರದ ಸಸಿಗಳು ಹೂ ಬಿಡುವ ಮುಂಚೆ ಮೊಗ್ಗು ಒಡೆದು ಮಣ್ಣಿನಲ್ಲಿ ಮಿಶ್ರಣ ಮಾಡಬೇಕು.

* ಎಕರೆಗೆ ಐದು ಮೆಟ್ರಿಕ್‌ ಟನ್‌ನಂತೆ ಸಾವಯವ ಗೊಬ್ಬರವನ್ನು ಜಮೀನಿನಲ್ಲಿ ಮಿಶ್ರಣ ಮಾಡಬೇಕು.

* ಜಮೀನಿನಲ್ಲಿ ಉದ್ದವಾಗಿರುವಂತೆ ಐದು ಅಡಿಗೆ ಒಂದರಂತೆ ಸಾಲು ಬಿಡಬೇಕು. ಈ ರೀತಿ ಮಾಡಿದರೆ, ಕಬ್ಬು ಕಟಾವು ಯಂತ್ರದ ಸಹಾಯದಿಂದ ಸುಲಭವಾಗಿ ಕಟಾವು ಮಾಡಿ ಕಾರ್ಖಾನೆಗೆ ಸಾಗಿಸಬಹುದು.

* ಪೂರ್ವ-ಪಶ್ಚಿಮಾಭಿಮುಖವಾಗಿ ಸಾಲು ಇರಬೇಕು. ಹೀಗೆ ಮಾಡಿದರೆ ಕಬ್ಬಿಗೆ ಅತಿಯಾದ ಸೂರ್ಯನ ಬೆಳಕು ಲಭಿಸುತ್ತದೆ. ಕಬ್ಬಿನ ಎಲೆಗಳು ಸದೃಢವಾಗಿ ಪತ್ರಹರಿತ್ತನ್ನು ಹೊಂದಿ ಅಚ್ಚುಕಟ್ಟಾದ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುತ್ತವೆ. ಕಬ್ಬಿಗೆ ಒಳ್ಳೆಯ ಗಾಳಿ ಹಾಗೂ ಬೆಳಕು ಲಭಿಸುವುದರಿಂದ ಕಬ್ಬು ಉತ್ತಮ ಗಾತ್ರ, ತೂಕ ಮತ್ತು ಒಳ್ಳೆಯ ಸಕ್ಕರೆ ಇಳುವರಿ ಪ್ರಮಾಣ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ.

* ಕಬ್ಬನ್ನು ಕಡ್ಡಾಯವಾಗಿ ಕನಿಷ್ಠ 12 ತಿಂಗಳ ನಂತರ ಮಾಗಿದ ಮೇಲೆ ಕಟಾವು ಮಾಡಬೇಕು. ಇದರಿಂದ ಕಬ್ಬು ಒಳ್ಳೆಯ ಗಾತ್ರ, ತೂಕ ಮತ್ತು ಸಕ್ಕರೆ ಇಳುವರಿ ಹೊಂದಿರುತ್ತದೆ.

* ಕಬ್ಬಿನೊಂದಿಗೆ ಅಂತರ ಬೆಳೆಯಾಗಿ ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿಯಂಥ ಘಾಟುಯುಕ್ತ ಬೆಳೆಗಳನ್ನು ಹಾಗು ಇನ್ನಿತರ ದ್ವಿದಳ ಧಾನ್ಯಗಳನ್ನು ಮಾತ್ರ ಬೆಳೆಯಬೇಕು. ಇದರಿಂದ ರೋಗ ಮತ್ತು ಕೀಟಗಳ ಬಾಧೆ ಕಡಿಮೆಯಾಗುವುದರೊಂದಿಗೆ ಸಾರಜನಕವು ನೈಸರ್ಗಿಕವಾಗಿ ಭೂಮಿಯಲ್ಲಿ ಲಭ್ಯವಾಗುತ್ತದೆ.

**

ರೋಗ ಮತ್ತು ಕೀಟಗಳ ನಿಯಂತ್ರಣ

ಕಬ್ಬು ಬೆಳೆಗೆ ಕೀಟ ಮತ್ತು ರೋಗಗಳು ಮಣ್ಣು, ಗಾಳಿ, ಬೀಜ, ಇಬ್ಬನಿ, ತುಂತುರು ಮತ್ತು ನೀರಿನಿಂದ ಮಾತ್ರ ಬರುತ್ತವೆ. ಈ ಮುನ್ನ ರೈತರು ಕಬ್ಬನ್ನು ನದಿ ಪಾತ್ರದ ಫಲವತ್ತಾದ ಭೂಮಿಯಲ್ಲಿ ರಾಸಾಯನಿಕ ಗೊಬ್ಬರವನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಿ ಬೆಳೆಯುತ್ತಿದ್ದುದರಿಂದ ಕಬ್ಬಿಗೆ ಹಿಂದಿನ ದಿನಮಾನಗಳಲ್ಲಿ ಯಾವುದೇ ರೋಗಗಳು ಕಡಿಮೆ ಇದ್ದವು.

ಈಗೀಗ ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆ ಮತ್ತು ಹಲವಾರು ಸ್ಥಳಗಳಲ್ಲಿ ಸಕ್ಕರೆ ಕಾರ್ಖಾನೆಗಳು ಹುಟ್ಟಿ ಕಬ್ಬಿಗೆ ಯೋಗ್ಯ ಬೆಲೆ ಕೊಡಲು ಆರಂಭಿಸಿದಂದಿನಿಂದ ಒಣ ಭೂಮಿಗೂ ನದಿಯಿಂದ ಪೈಪ್‌ಲೈನ್ ಮಾಡಿ, ಬೋರ್‌ವೆಲ್ ಕೊರೆದು
ಕಬ್ಬು ಬೆಳೆಯಲು ಪ್ರಾರಂಭವಾಯಿತು. ಇದರಿಂದ ಹಲವಾರು ರೋಗ, ಕೀಟಗಳು ದಾಳಿ ಮಾಡುವುದೂ ಹೆಚ್ಚಿದೆ. ಆದ್ದರಿಂದ ತಜ್ಞರ ಶಿಫಾರಸ್ಸಿನ ಮೇರೆಗೆ ಕೀಟನಾಶಕವನ್ನು ಸಿಂಪರಣೆ ಮಾಡಬಹುದು. ಆದರೆ ಈ ಕೀಟನಾಶಕಗಳ ಬದಲು ಮನೆಯಲ್ಲಿಯೇ ತಯಾರಿಸಿದ ಬೇವಿನ ರಸವನ್ನು ಅಥವಾ ಬೇವಿನ ಹಿಂಡಿಯನ್ನು ಸಿಂಪರಣೆ ಮಾಡಿದಲ್ಲಿ ಕಡಿಮೆ ಖರ್ಚಿನೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದು.

* ಬೇವಿನ ರಸ ತಯಾರಿಸುವ ವಿಧಾನ: ಅಂದಾಜು 25 ಕೆ.ಜಿ.ಯಷ್ಟು ಬೇವಿನ ಗಿಡದ ಯಾವುದೇ ಹಸಿಯಾಗಿರುವ ಭಾಗವನ್ನು (ಎಲೆ, ತೊಗಟೆ ಮತ್ತು ಕಾಂಡ), 15 ಲೀಟರ್ ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿದರೆ 12 ಲೀಟರ್‌ನಷ್ಟು ದ್ರಾವಣ ದೊರೆಯುತ್ತದೆ. ಈ ದ್ರಾವಣವನ್ನು 1 ಲೀಟರ್‌ಗೆ 15 ಲೀಟರ್‌ನಷ್ಟು ನೀರನ್ನು ಸೇರಿಸಿ ರೋಗವಿರುವ ಕಬ್ಬಿಗೆ ಸಿಂಪರಣೆ ಮಾಡಿದಲ್ಲಿ ಯಾವುದೇ ರೋಗಗಳಿದ್ದರೂ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತವೆ. 12 ಲೀಟರ್ ದ್ರಾವಣ ಒಂದು ಎಕರೆಗೆ ಸಾಕಾಗುತ್ತದೆ. ಸಾಕು ಪ್ರಾಣಿಗಳು ಮತ್ತು ಚಿಕ್ಕ ಮಕ್ಕಳಿಂದ ಈ ದ್ರಾವಣವನ್ನು ದೂರವಿಡಬೇಕು. ಈ ದ್ರಾವಣವನ್ನು ಇನ್ನಿತರ ಯಾವುದೇ ಬೆಳೆಗಳ ರೋಗ-ಕೀಟಗಳ ಹತೋಟಿಗೆ ಬಳಸಬಹುದು.

* ‌ಕಬ್ಬಿನ ಬೆಳೆಗೆ ರೋಗ-ಕೀಟಗಳು ತಗುಲಿದಲ್ಲಿ ಒಬ್ಬರು ಮಾತ್ರ ಕ್ರಮ ಕೈಗೊಳ್ಳದೇ ಸುತ್ತ-ಮುತ್ತಲಿನ ಎಲ್ಲ ರೈತರೂ ಸಾಮೂಹಿಕವಾಗಿ ಹತೋಟಿ ಕ್ರಮ ಕೈಗೊಳ್ಳಬೇಕು.

ಹೆಚ್ಚಿನ ಮಾಹಿತಿಗೆ: 9945220660.

**

ಗೊಬ್ಬರ, ನೀರು ಹೀಗಿರಲಿ

* ಮಣ್ಣು ಮತ್ತು ನೀರಿನ ಪರೀಕ್ಷೆಯ ಶಿಫಾರಸಿನ ಆಧಾರದಂತೆ ಗೊಬ್ಬರ, ಲಘು ಪೋಷಕಾಂಶಗಳನ್ನು ಸಮಯಾನುಸಾರ ಕೊಡಬೇಕು.

* ಸಾವಯವ ಮತ್ತು ರಾಸಾಯನಿಕ ಗೊಬ್ಬರವನ್ನು ಒಮ್ಮೆಲೆ ಮಿಶ್ರಣ ಮಾಡಿ ಕೊಡಬಾರದು, ಕನಿಷ್ಠ 15 ದಿನಗಳ ಅಂತರವಿರಬೇಕು.

* ಯಾವುದೇ ಕಾರಣಕ್ಕೂ ಕಬ್ಬು ಬೆಳೆಗೆ ಅನಿಯಮಿತ ಫೋರೇಟ್ ದೂಳೀಕರಣ ಬೇಡ. ಇದರಿಂದ ಭೂಮಿ ಫಲವತ್ತತೆ ಹಾಳಾಗುತ್ತದೆ.

* ಕೆಲವು ರೈತರು ಕಬ್ಬಿನ ಬೆಳೆಗೆ ಹೆಚ್ಚು ನೀರು ಅವಶ್ಯ ಎನ್ನುತ್ತಾರೆ. ಆದರೆ ಹಾಗಿಲ್ಲ. ಹವಾಮಾನ ಹಾಗೂ ಸಮಯಕ್ಕೆ ಅನುಸಾರವಾಗಿ ನೀರನ್ನು ಹಂತ ಹಂತವಾಗಿ ಕೊಡಬೇಕು. ಹನಿ ನೀರಾವರಿ ಅಳವಡಿಸಿಕೊಂಡಲ್ಲಿ ನೀರಿನ ಬಳಕೆ ಕಡಿಮೆಯಾಗುತ್ತದೆ. ಮಳೆ ನೀರು ಮತ್ತು ನದಿ ನೀರು ಸಾಕಷ್ಟು ಖನಿಜಾಂಶಗಳಿಂದ ಕೂಡಿರುವುದರಿಂದ ಕಬ್ಬು ಬೆಳೆಗೆ ಬಹಳ ಯೋಗ್ಯ. ಬೋರ್‌ವೆಲ್‌ ನೀರು ಫ್ಲೋರೈಡ್‌ಯುಕ್ತ ಆಗಿರುವುದರಿಂದ ಅಷ್ಟು ಯೋಗ್ಯವಲ್ಲ.

* ಯಾವುದೇ ಕಾಲಕ್ಕೂ ಗೋವಿನಜೋಳ ಮತ್ತು ಇನ್ನಿತರ ಏಕದಳ ಬೆಳೆಗಳನ್ನು ಬೆಳೆಯಬಾರದು. ಕಬ್ಬು ಬೆಳೆ, ವರ್ಷದವರೆಗೆ ಉಪಯೋಗಿಸುವ ಮೂಲ ಗೊಬ್ಬರವನ್ನು ಏಕದಳ ಬೆಳೆಗಳು ತಮ್ಮ ಅಲ್ಪ ಅವಧಿಯಲ್ಲಿ ಸಂಪೂರ್ಣ ಉಪಯೋಗಿಸಿಬಿಡುತ್ತವೆ. ಇದರಿಂದ ಕಬ್ಬಿಗೆ ಗೊಬ್ಬರ ಲಭಿಸದೇ ಬೆಳೆಯು ಕುಂಠಿತಗೊಂಡು ನಿರೀಕ್ಷಿಸಿದಷ್ಟು ಇಳುವರಿ ಅಸಾಧ್ಯ.

ಕಳೆ ನಿರ್ವಹಣೆ

* ಕಳೆಗೆ ತಜ್ಞರ ಶಿಫಾರಸ್ಸಿನಂತೆ ಕಳೆನಾಶಕ ಕೊಟ್ಟರೆ ತಪ್ಪಲ್ಲ. ಆದರೆ ಇದರಿಂದ ಕೆಲವು ರೈತಸ್ನೇಹಿ ಕೀಟಗಳು ಮತ್ತು ಭೂಮಿಯ ಫಲವತ್ತತೆ ನಾಶವಾಗುವ ಸಂಭವವೂ ಉಂಟು.

* ಕಳೆಗಳು ಕಾಣಿಸಿ, ಹೂವು ಬಿಡುವುದಕ್ಕಿಂತ ಮುಂಚೆ ಅವುಗಳನ್ನು ತೆಗೆದು ಅದೇ ಸಾಲಿನಲ್ಲಿ ಹೊದಿಕೆಯಾಗಿ ಉಪಯೋಗಿಸಬೇಕು. ಇದ ರಿಂದ ಮಣ್ಣಿನಲ್ಲಿ ತೇವಾಂಶ ಉಳಿಯುವುದರೊಂದಿಗೆ ಕಳೆತು ಸಾವಯವ ಗೊಬ್ಬರವಾಗುತ್ತವೆ.

* ಕಬ್ಬನ್ನು ನಾಟಿ ಮಾಡಿದ 90 ದಿನಗಳ ನಂತರ ಸಾಲು ಒಡೆದ ಮೇಲೆ ಪ್ರತಿ ಎರಡು ತಿಂಗಳಿಗೊಮ್ಮೆ ಕಬ್ಬಿನಲ್ಲಿನ ಒಣ ರವದಿಗಳನ್ನು ತೆಗೆದು ಅದೇ ಸಾಲಿನಲ್ಲಿ ಹೊದಿಕೆ ಮಾಡುತ್ತಿರಬೇಕು. ಒಂದುವೇಳೆ ಕಬ್ಬಿಗೆ ರೋಗ-ಕೀಟದ ಬಾಧೆಯಾಗಿದ್ದಲ್ಲಿ ರವದಿಯನ್ನು ಕಬ್ಬಿನ ಜಮೀನಿನಿಂದ ಹೊರಗೆ ತೆಗೆದು ಸುಟ್ಟು ಹಾಕಬೇಕು.

**

ಕಬ್ಬಿನ ಬೀಜದ ಆಯ್ಕೆ, ನಾಟಿ

* ಅಲ್ಪಾವಧಿ ತಳಿಯ ಅಂಗಾಂಶ ಕೃಷಿಯ ಮೂರನೇ ಹಂತದ ಪ್ರಮಾಣಿತ ಕಬ್ಬಿನ ಬೀಜವನ್ನು ಆಯ್ಕೆ ಮಾಡಬೇಕು (ಸದ್ಯ ನಮ್ಮ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಚಾಲ್ತಿಯಲ್ಲಿರುವ ಎಲ್ಲ ಕಬ್ಬಿನ ತಳಿಗಳು ಬಹುತೇಕ ತನ್ನ ಮೂಲ ಗುಣವನ್ನು ಕಳೆದುಕೊಂಡಿವೆ).

* ಕುಳೆ ಕಬ್ಬು ಹೆಚ್ಚಾಗಿ ರೋಗ-ಕೀಟಗಳಿಗೆ ತುತ್ತಾಗಿರುವುದರಿಂದ ಬೀಜಕ್ಕಾಗಿ ಆಯ್ಕೆ ಮಾಡುವುದು ಬೇಡ.

* ಬೀಜಕ್ಕಾಗಿ 8 –10 ತಿಂಗಳ ನಾಟಿ ಕಬ್ಬನ್ನು ಮಾತ್ರ ಆಯ್ಕೆ ಮಾಡಬೇಕು. ಈ ಕಬ್ಬಿನಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿಗೆ ಇರುವುದರಿಂದ ಕಬ್ಬಿನ ಕಣ್ಣು ಬೇಗನೆ ಚಿಗುರೊಡೆಯುತ್ತದೆ. 10 ತಿಂಗಳಾದ ನಂತರದ ಕಬ್ಬಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಕ್ರೋಸ್ ಪರಿವರ್ತನೆ ಆಗುವುದರಿಂದ ಕಬ್ಬಿನ ಕಣ್ಣುಗಳು ಚಿಗುರೊಡೆಯುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ.

* ಬೆಳವಣಿಗೆ ಹಂತದಲ್ಲಿ ರವದಿ ಬೇರ್ಪಡಿಸಿದ ಕಬ್ಬನ್ನು ಬೀಜಕ್ಕಾಗಿ ಆಯ್ಕೆ ಮಾಡಬೇಡಿ. ಆರೋಗ್ಯವಂತ ಮತ್ತು ಸದೃಢ ಕಬ್ಬನ್ನು ಮಾತ್ರ ಬೀಜಕ್ಕಾಗಿ ಉಪಯೋಗಿಸಬೇಕು.

* ದನ-ಕರುಗಳ ಸಾಕಣೆಯನ್ನು ಕಡ್ಡಾಯವಾಗಿ ಮಾಡುತ್ತಿರಬೇಕು. ಸಗಣಿ ಮತ್ತು ಗಂಜಲವನ್ನು ನೇರವಾಗಿ ತಿಪ್ಪೆ ಗುಂಡಿಗೆ ಹಾಕದೇ ಪ್ರತಿ ನೀರಿನೊಂದಿಗೆ ತಕ್ಷಣವೇ ಬೆರೆಸಿ ಕಬ್ಬು ಬೆಳೆಗೆ ಬಿಡುವುದರಿಂದ ಹೆಚ್ಚಿನ ಇಳುವರಿ ಸಾಧ್ಯ. ಜೊತೆಗೆ ಹೀಗೆ ಮಾಡಿ ಯಾವುದೇ ರಾಸಾಯನಿಕ ಗೊಬ್ಬರ ಉಪಯೋಗಿಸದೇ ಹಲವಾರು ರೈತರು ಸಾಕಷ್ಟು ಕಬ್ಬು ಉತ್ಪಾದನೆ ಮಾಡಿದ್ದಾರೆ.

* ಕಬ್ಬನ್ನು ಮೊನಚಾದ ಸಲಕರಣೆಗಳ ಸಹಾಯ ದಿಂದ 2 ಕಣ್ಣಿನ ಗಣಿಕೆ/ತುಕಡಿ ಮಾಡಬೇಕು.

* ಕಬ್ಬಿನ ಕಣ್ಣುಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು.

* ಕಬ್ಬಿನ ಬೀಜವನ್ನು 50 ಡಿಗ್ರಿ ಸೆಲ್ಸಿಯಸ್ ಶಾಖದಲ್ಲಿ ಕನಿಷ್ಠ ಒಂದು ಗಂಟೆ ಶಾಖೋಪಚಾರ ಮಾಡಬೇಕು.

* ಬೀಜೋಪಚಾರ ಕಡ್ಡಾಯ. ಇದರಿಂದ ಕಬ್ಬು ಪ್ರಾರಂಭದ ಹಂತದಲ್ಲಿ ಯಾವುದೇ ರೋಗ-ಕೀಟಕ್ಕೆ ಒಳಗಾಗದೇ ಬೆಳೆಯುತ್ತದೆ.

* ಎರಡು ಕಣ್ಣಿನ ಕಬ್ಬಿನ ಬೀಜವನ್ನು ಸಾಲಿನಿಂದ ಸಾಲಿಗೆ 5 ಅಡಿ ಮತ್ತು ಬೀಜದಿಂದ ಬೀಜಕ್ಕೆ ಒಂದು ಅಡಿಗೆ ಒಂದರಂತೆ ನಾಟಿ ಮಾಡಬೇಕು. ಇದರಿಂದ ಅವಶ್ಯವಿರುವಷ್ಟು ಸಸಿಗಳು ಮಾತ್ರ ಹುಟ್ಟುತ್ತವೆ, ಕಬ್ಬಿನ ಬೀಜವು ಕಡಿಮೆ ತಗಲುತ್ತದೆ.

* ಎಕರೆಗೆ ಬೀಜಕ್ಕಾಗಿ 1.5 ಮೆಟ್ರಿಕ್‌ ಟನ್ ಕಬ್ಬು ಸಾಕಾಗುತ್ತದೆ. ಎಕರೆಗೆ 4400 ಸಸಿಗಳು ಅವಶ್ಯಕ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು