ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬದ ಸಂಭ್ರಮದ ಜತೆ ಎಚ್ಚರವೂ ಇರಲಿ

Last Updated 17 ಅಕ್ಟೋಬರ್ 2017, 5:06 IST
ಅಕ್ಷರ ಗಾತ್ರ

ದೀಪಾವಳಿಯೆಂದರೆ ಎಲ್ಲರಿಗೂ ಸಂಭ್ರಮ. ಮಕ್ಕಳಂತೂ ತಿಂಗಳು ಮುಂಚೆಯೇ ಪೋಷಕರ ಮುಂದೆ ಪಟಾಕಿಗಾಗಿ ಬೇಡಿಕೆ ಇಡಲು ಆರಂಭಿಸುತ್ತಾರೆ. ರಾಕೆಟ್‌, ಲಕ್ಷ್ಮಿ ಪಟಾಕಿ, ಸರ ಪಟಾಕಿ, ಆಟಮ್‌ ಬಾಂಬ್‌... ಹೀಗೆ ತರಹೇವಾರಿ ಪಟಾಕಿಗಳನ್ನು ಕೊಳ್ಳುವ ಬಗ್ಗೆ ಯೋಚಿಸುತ್ತಿರುತ್ತಾರೆ. ಎಷ್ಟು ಬೇಗ ಹಬ್ಬ ಬಂದೀತೋ, ಯಾವಾಗ ಪಟಾಕಿಯೆಲ್ಲ ಹೊಡೆಯುತ್ತೇನೋ ಎಂದು ಕಾತರಿಸುತ್ತಿರುತ್ತಾರೆ.

ಪಟಾಕಿ ಹಚ್ಚಿ ಖುಷಿ ಪಡುವುದೇನೋ ಅರಿ. ಆದರೆ, ಅದರಿಂದಾಗುವ ಅನಾಹುತಗಳ ಬಗ್ಗೆ ನಾವು ಯೋಚಿಸುತ್ತಿದ್ದೇವೆಯೇ? ಪಟಾಕಿ ಹಚ್ಚುವ ಮುನ್ನ ಎಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆಯೇ? ಒಂದು ದಿನದ ಸಂಭ್ರಮದಲ್ಲಿ ಕಣ್ಣುಗಳನ್ನು ಕಳೆದುಕೊಂಡವರು, ಮೈ ಸುಟ್ಟುಕೊಂಡವರ ಸಂಖ್ಯೆ ದೊಡ್ಡದು. ಹಿಂದಿನ ದೀಪಾವಳಿಯಲ್ಲಿ ಆದ ಅನಾಹುತಗಳಿಂದ ತೊಂದರೆ ಅನುಭವಿಸಿದ ಅನೇಕರು ನಗರದ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 'ಮೆಟ್ರೊ' ಪುರವಣಿಗಾಗಿ ಅವರನ್ನು ಮತ್ತೆ ಸಂಪರ್ಕಿಸಿದಾಗ ಕೇಳಿ ಬಂದ ಮಾತುಗಳಿವು...

ಪಟಾಕಿ ತರುವುದನ್ನೇ ಬಿಟ್ಟಿದ್ದೇವೆ

ಈ ಘಟನೆ ನಡೆದು  ಹಬ್ಬದ ಊಟ ಮುಗಿಸಿ ಮನೆಯ ಮುಂದೆ ಕುಳಿತಿದ್ದೆ. ಒಮ್ಮೆಲೆ ಎರಗಿ ಬಂದ ರಾಕೆಟ್‌ ಎಡಕಣ್ಣಿಗೆ ತಾಕಿತು. ಸ್ಥಳೀಯ ಆಸ್ಪತ್ರೆಯವರು ಬೆಂಗಳೂರಿನ ಮಿಂಟೊ ಆಸ್ಪತ್ರೆಗೆ ಬರೆದರು. ಏನೇ ಚಿಕಿತ್ಸೆ ಮಾಡಿದರೂ ದೃಷ್ಟಿ ಬರಲಿಲ್ಲ. ಬೇರೆ ಕಣ್ಣು ಅಳವಡಿಸಿ, ದೃಷ್ಟಿ ನೀಡಲು ಸಾಧ್ಯವೇ ಎಂದು ವೈದ್ಯರಿಗೆ ಕೇಳಿದೆ. ಅದಕ್ಕೆ ಅವರು 'ಈ ಹಿಂದೆ ತಲೆಯ ಭಾಗದಲ್ಲಿ ಏಟೇನಾದರೂ ಆಗಿತ್ತಾ?' ಎಂದು ಕೇಳಿದರು. ಹೌದು ಎಂದು ಹೇಳಿದೆ. 'ಹಾಗಿದ್ದರೆ, ಕಣ್ಣು ಬದಲಾಯಿಸಿದರೂ ದೃಷ್ಟಿ ಬರುವ ಸಾಧ್ಯತೆಗಳು ಕಡಿಮೆ' ಎಂದರು. ಈ ಘಟನೆ ನಡೆದು ಎರಡು ವರ್ಷಗಳಾಗಿವೆ. ದೃಷ್ಟಿ ಬರಬಹುದು ಎನ್ನುವ ಆಸೆ ಬಿಟ್ಟು ಒಂದು ಕಣ್ಣಿನಲ್ಲಿಯೇ ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಅಂದಿನಿಂದ ಪಟಾಕಿ ತರುವುದನ್ನೇ ಬಿಟ್ಟಿದ್ದೇವೆ. ದೀಪ ಹಚ್ಚಿ, ಸಿಹಿ ಉಂಡು ಹಬ್ಬ ಆಚರಿಸುತ್ತೇವೆ.

–ಮುನಿವೆಂಕಟಪ್ಪ, ಪೆಗಲಪಲ್ಲಿ, ಶ್ರೀನಿವಾಸಪುರ ತಾಲ್ಲೂಕು

*

ಕೃತಕ ಕಣ್ಣು ಹಾಕಿಸಿದೆವು

ಮೂರು ವರ್ಷಗಳ ಹಿಂದಿನ ದೀಪಾವಳಿಯ ನೆನಪು ಇದು. ಎಲ್ಲರೂ ಪಟಾಕಿ ಹಚ್ಚುವುದನ್ನು ಮಗ ನೋಡುತ್ತಿದ್ದ. ಒಮ್ಮೆಲೆ ರಾಕೆಟ್‌ ಬಂದು ಎಡಕಣ್ಣಿಗೆ ಬಡಿಯಿತು. ಏನೇ ಚಿಕಿತ್ಸೆ ಕೊಡಿಸಿದರೂ, ದೃಷ್ಟಿ ಬರಲಿಲ್ಲ. ಅದರಿಂದಾಗಿಯೇ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿದ. ಆಗ ಮಗನ ಬಗ್ಗೆ ಕಟ್ಟಿಕೊಂಡಿದ್ದ ಕನಸುಗಳು ಕಳಚಿ ಬಿದ್ದಂತಾಯಿತು. ಕೊನೆಗೆ ಲಕ್ಷ ರೂಪಾಯು ಖರ್ಚು ಮಾಡಿ ಕೃತಕ ಕಣ್ಣು ಹಾಕಿಸಿದೆವು. ಸದ್ಯ ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ಅಲ್ಲಿಂದಾಚೆಗೆ ಪಟಾಕಿ ಸಹವಾಸಕ್ಕೆ ಹೋಗಿಲ್ಲ.

–ಬಸಂತಿ, ಎದ್ದಲಹಳ್ಳಿ, ಮುಳಬಾಗಲು ತಾಲ್ಲೂಕು

*

ಸೀರೆಗೆ ಬೆಂಕಿ ತಾಗಿತ್ತು

ನನ್ನ ಚಿಕ್ಕಮ್ಮ ಮೆಡಿಕಲ್‌ ಸ್ಟೋರ್‌ ಗೆ ಹೋಗಿ ವಾಪಸ್‌ ಬರುತ್ತಿದ್ದಾಗ ರಾಕೆಟ್‌ ತಾಗಿ ಅವರ ಸೀರೆಗೆ ಬೆಂಕಿ ಹೊತ್ತಿಕೊಂಡಿತು. ಸೊಂಟದವರೆಗೆ ಎರಡೂ ಕಾಲುಗಳು ಸುಟ್ಟು ಹೋಗಿವೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಅವರು ಕಳೆದ ಒಂಬತ್ತು ತಿಂಗಳುಗಳಿಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗ ಒಂದು ತಿಂಗಳಿನಿಂದಷ್ಟೇ ಅವರು ಶಾಲೆಗೆ ಹೋಗಲು ಆರಂಭಿಸಿದ್ದಾರೆ. ಪಟಾಕಿಗಳನ್ನು ಜನರು ಓಡಾಡುವ ಪ್ರದೇಶಗಳಲ್ಲಿ ಹಚ್ಚಬೇಡಿ. ಪಟಾಕಿ ಹಚ್ಚುವವರು ಕನಿಷ್ಠ ಪಕ್ಷ 'ಪಟಾಕಿ ಹಚ್ಚಿದ್ದೇವೆ. ಸ್ವಲ್ಪ ನಿಲ್ಲಿ' ಎಂದು ಎಚ್ಚರಿಸುವ ಸೌಜನ್ಯವನ್ನಾದರೂ ತೋರಿಸಬೇಕು.

–ಅರ್ಷದ್‌, ಮತ್ತಿಕೆರೆ

*

ಈಗಲೂ ದೃಷ್ಟಿ ಮಂಜು

ಹಬ್ಬದ ದಿನ ಮಕ್ಕಳು ಹೊರಗೆ ಆಡುತ್ತಿದ್ದರು. ಯಾರೋ ಹಚ್ಚಿದ ಪಟಾಕಿ ಮಗನ ಕಣ್ಣಿನ ತಾಗಿದ್ದರಿಂದ ಕೆಂಪಾಯಿತು. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ಬೆಂಗಳೂರಿಗೆ ಬಂದೆವು. ನಾಲ್ಕು ದಿನ ಆಸ್ಪತ್ರೆಯಲ್ಲಿದ್ದೆವು. ಈಗಲೂ ದೃಷ್ಟಿ ತೊಂದರೆ ಸ್ವಲ್ಪಮಟ್ಟಿಗೆ ಇದೆ. ಆಗಿನಿಂದ ದೀಪಾವಳಿ ಸಂದರ್ಭದಲ್ಲಿ ಮಕ್ಕಳನ್ನು ಹೊರಗಡೆ ಕಳಿಸುವುದಿಲ್ಲ. ಪಟಾಕಿಯಿಂದಾಗುವ ಅಪಾಯದ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದ್ದೇವೆ. ಅವರೂ ಪಟಾಕಿ ಕೊಡಿಸಿ ಎಂದು ಹಠ ಮಾಡುವುದಿಲ್ಲ.

–ಲಕ್ಷ್ಮಿ, ಮಡೇರಹಳ್ಳಿ, ಮುಳಬಾಗಲು ತಾಲ್ಲೂಕು

*

ಹಾನಿಕಾರಕ ಪಟಾಕಿಗಳು ಬೇಡ

ರಾಕೆಟ್‌, ಲಕ್ಷ್ಮಿ ಪಟಾಕಿ, ಆಟಮ್‌ ಬಾಂಬ್‌, ಹೂಕುಂಡದಂಥ ಪಟಾಕಿಗಳಿಂದ ಹೆಚ್ಚು ಅಪಾಯಗಳು ಸಂಭವಿಸುತ್ತಿರುವುದು ಅಂಕಿಅಂಶಗಳಿಂದ ದೃಢಪಟ್ಟಿವೆ. ಇಂತಹ ಪಟಾಕಿಗಳ ಮೇಲೆ ನಿಷೇಧ ಹೇರುವುದು ಒಳಿತು. ಕಣ್ಣಿಗೆ ಅಪಾಯವಾದ ಆ ಕೂಡಲೇ ವೈದ್ಯರ ಬಳಿ ಬರಬೇಕು. ಮನೆಯಲ್ಲಿ ಯಾವುದೇ ಪ್ರಾಥಮಿಕ ಚಿಕಿತ್ಸೆ ಮಾಡದಿರುವುದು ಒಳಿತು. ಏಕೆಂದರೆ ಕಣ್ಣು ತುಂಬಾ ಸೂಕ್ಷ್ಮವಾದ್ದರಿಂದ ಸೋಂಕು ತಗಲುವ ಸಾಧ್ಯತೆ ಹೆಚ್ಚು. ಇಲ್ಲಿ ಕಣ್ಣಿನ ಬಗ್ಗೆ ಮಾತ್ರ ಯೋಚಿಸಲಾಗದು. ಮಾಲಿನ್ಯ ಪ್ರಮಾಣದ ಹೆಚ್ಚಳದಿಂದಾಗಿ ಶ್ವಾಸಕೋಶಕ್ಕೂ ಹಾನಿಯಾಗುತ್ತದೆ. ಅಲ್ಲದೇ ಪ್ರಾಣಿಗಳೂ ಹೆದರುತ್ತವೆ. ಸಾಕುನಾಯಿಗಳು ಮೂರು ದಿನ ಮನೆಬಿಟ್ಟು ಆಚೆ ಬರುವುದಿಲ್ಲ. ಇನ್ನು ಬೀದಿನಾಯಿಗಳ ಪಾಡು ಹೇಳಬೇಕಿಲ್ಲ.

–ಡಾ.ಚಿನ್ಮಯಿ, ಸಹ ಪ್ರಾಧ್ಯಾಪಕಿ, ಮಿಂಟೊ ಕಣ್ಣಿನ ಆಸ್ಪತ್ರೆ

**

ಹೀಗೆ ಮಾಡಿ

* ಪಟಾಕಿಗಳನ್ನು ಮೈದಾನ ಪ್ರದೇಶಗಳಲ್ಲಿ ಹಚ್ಚಿ. ಜನಸಂಚಾರವಿರುವ ರಸ್ತೆಗಳಲ್ಲಿ ಬೇಡ

* ಉತ್ತಮ ಗುಣಮಟ್ಟದ ಪಟಾಕಿಗಳನ್ನು ಮಾತ್ರ ಬಳಸಿ

* ಒಂದು ಸಲ ಹಚ್ಚಿದ ಪಟಾಕಿಯನ್ನು ದೂರ ನಿಂತು ಗಮನಿಸಿ

* ಪಟಾಕಿ ಹಚ್ಚುವ ಸ್ಥಳದಲ್ಲಿ ಎರಡು ಬಕೆಟ್‌ ನೀರು ಅಥವಾ ಮರಳನ್ನು ಇರಿಸಿಕೊಂಡಿರಿ

* ಹಿರಿಯರ ಸಮ್ಮುಖದಲ್ಲಿಯೇ ಮಕ್ಕಳು ಪಟಾಕಿಗಳನ್ನು ಹಚ್ಚಬೇಕು

ಹೀಗೆ ಮಾಡಬೇಡಿ

* ಪಟಾಕಿಯನ್ನು ಕೈಯಲ್ಲಿ ಹಿಡಿದು ಹಚ್ಚಬೇಡಿ

* ಮನೆಯ ಸಮೀಪ ಹಚ್ಚುವುದು ಬೇಡ

* ಅರ್ಧ ಉರಿದ ಇಲ್ಲವೇ ಸ್ಫೋಟಗೊಳ್ಳದ ಪಟಾಕಿಯನ್ನು ಮುಟ್ಟಬೇಡಿ

* ಪುಟ್ಟಮಕ್ಕಳಿಗೆ ಯಾವ ಕಾರಣಕ್ಕೂ ಪಟಾಕಿ ಕೊಡಬೇಡಿ

* ಇತರರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿರಿ

- ಡಾ.ಕೆ.ಟಿ.ರಮೇಶ್, ಮುಖ್ಯಸ್ಥರು, ಪ್ಲಾಸ್ಟಿಕ್ ಸರ್ಜರಿ ವಿಭಾಗ, ವಿಕ್ಟೋರಿಯಾ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT