ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರ ಪೂಜೆ, ಅವುಗಳ ಸಂಕಟ

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೀಪಾವಳಿ ಹಬ್ಬದಲ್ಲಿ ಗೋಪೂಜೆಗೆ ವಿಶೇಷ ಪ್ರಾಮುಖ್ಯ. ಗೋವಿಗೆ ಸ್ನಾನ ಮಾಡಿಸಿ, ಅರಿಶಿಣ ಕುಂಕುಮ ಹಚ್ಚಿ, ಕೊಂಬಿಕೆ ಸೇವಂತಿಗೆ, ಚೆಂಡು ಹೂವುಗಳನ್ನು ಸುತ್ತಿ ಪೂಜಿಸುವುದು ಸಾಮಾನ್ಯ ಸಂಗತಿ. ಗ್ರಾಮೀಣ ಭಾಗದಲ್ಲಿ ಇಂದಿಗೂ ಈ ಆಚರಣೆಗಳು ಇಂದಿಗೂ ಅದ್ದೂರಿಯಾಗಿಯೇ ನಡೆಯುತ್ತವೆ. ಆದರೆ ಬೆಂಗಳೂರಿನಲ್ಲಿ ನಡೆಯುವ ಗೋಪೂಜೆಯು ಗೋವಿಗೆ ಕಂಟಕವಾಗುತ್ತಿದೆ.

ಮಲ್ಲೇಶ್ವರ ಮತ್ತು ಹಲಸೂರಿನ ಮಿಲ್ಕ್‌ ಕಾಲೊನಿಯಲ್ಲಿ ಒಂದು ಸುತ್ತು ಹಾಕಿದರೆ ಹಸುಗಳ ಗೋಳಿನ ಪರಿಸ್ಥಿತಿಯ ದರ್ಶನವಾಗುತ್ತದೆ. ಹಿಂದೆಲ್ಲ ಇಲ್ಲಿ ಕಂಡಲೆಲ್ಲ ಹಸುಗಳೇ ಕಾಣಿಸುತ್ತಿತ್ತು. ನಗರ ಅಭಿವೃದ್ಧಿಯಾದಂತೆಲ್ಲ ಹಸುಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ಸಾಕಿರುವವರು ಅದನ್ನು ನಿಭಾಯಿಸಲಾಗದೆ ಗೋಳಾಡುತ್ತಿದ್ದಾರೆ. ಇದರ ಜೊತೆಗೆ ಸಂಪ್ರದಾಯದ ಹೆಸರಿನಲ್ಲಿ ಕೆಲವರು ಹಸುಗಳಿಗೆ ನೀಡುತ್ತಿರುವ ಆಹಾರವೂ ಹಸು ಸಾಕಿರುವವರ ಚಿಂತೆಯನ್ನು ಹೆಚ್ಚಿಸಿದೆ.

‘ನಮ್ಮ ಮನೆಯಲ್ಲಿ ದೀಪಾವಳಿಯಲ್ಲಿ ಗೋವಿನ ಪೂಜೆ ಮಾಡುವುದಿಲ್ಲ, ಸಂಕ್ರಾಂತಿಗೆ ಮಾಡುತ್ತೇವೆ. ದೀಪಾವಳಿಗೆ ನೆರೆಮನೆಯವರು ಗೋವಿಗೆ ಪೂಜೆ ಮಾಡಿ ಹೋಗುತ್ತಾರೆ. ಅಪ್ಪನ ಕಾಲದಿಂದಲೂ ಹಸುಗಳನ್ನು ಸಾಕುವುದೇ ನಮ್ಮ ಉದ್ಯೋಗ. ಈಗ ನಾನು ಮೂರು ಹಸುಗಳನ್ನು ಸಾಕಿದ್ದೇನೆ. ವಿದ್ಯಾಭ್ಯಾಸ ಇಲ್ಲ. ಹೀಗಾಗಿ ಬೇರೆ ಉದ್ಯೋಗದ ಕಡೆ ಮುಖ ಮಾಡಿಲ್ಲ. ಹಸುಗಳನ್ನು ಮಗುವಿನಂತೆ ಸಾಕುವುದಷ್ಟೇ ನನಗೆ ಗೊತ್ತಿರುವುದು. ಅವುಗಳು ಹಾಲು ಕೊಟ್ಟರಷ್ಟೇ ನಮ್ಮ ಜೀವನ ನಡೆಯುತ್ತದೆ' ಎನ್ನುತ್ತಾರೆ ಹಲಸೂರಿನ ಮಂಜುನಾಥ್.

'ಮನೆಮನೆಗೆ ಹೋಗಿ ಹಾಲು ಹಾಕಿ ಬರುತ್ತೇನೆ. ಮೊದಲೆಲ್ಲ ವಿಶಾಲವಾದ ಜಾಗವಿತ್ತು. ಆದರೆ ಈಗ ಎಲ್ಲಿ ನೋಡಿದರೂ ಕಟ್ಟಡಗಳು. ಚಳಿ, ಮಳೆ. ದನಗಳನ್ನು ಸಾಕುವುದೇ ಕಷ್ಟ. ಪೂಜೆಯ ನೆಪವೊಡ್ಡಿ ಬರುವ ಮಂದಿಯಿಂದಲೂ ನಮಗೆ ತೊಂದರೆಯಾಗುತ್ತದೆ. ಹಸುವಿನ ಆಹಾರ ಪದ್ಧತಿ ಗೊತ್ತಿರುವ ಕಾರಣಕ್ಕೆ ಅದನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ. ಆದರೆ ಕೆಲವರು ಏನೇನೋ ತಂದು ತಿನ್ನಿಸುತ್ತಾರೆ. ಮನುಷ್ಯರು ತಿನ್ನುವ ಆಹಾರ ತಿಂದರೆ ಹಸುಗಳಿಗೆ ಹೊಟ್ಟೆಯುಬ್ಬರದಂಥ ಸಮಸ್ಯೆ ಆಗುತ್ತದೆ. ಅದಕ್ಕೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣವೂ ಖರ್ಚಾಗುತ್ತದೆ. ನಾವು ಅವಕಾಶ ಮಾಡಿಕೊಡದಿದ್ದರೆ 'ಇವರಿಗೆಷ್ಟು ದುರಹಂಕಾರ' ಎಂದು ಬೈಯುತ್ತಾರೆ. ನನಗಂತೂ ಇಂಥವರಿಂದ ಸಾಕಾಗಿ ಹೋಗಿದೆ. ಮುಂದಿನ ವರ್ಷ ಹಸುಗಳನ್ನು ಮಾರಿಬಿಡೋಣ ಎಂದುಕೊಂಡಿದ್ದೇನೆ’ ಎಂದು ಬೇಸರಿಸುತ್ತಾರೆ ಅವರು.

ಇದು ಇವರೊಬ್ಬರ ಕಥೆಯಲ್ಲ. ಹಲಸೂರಿನ ಮಿಲ್ಕ್‌ ಮ್ಯಾನ್‌ ಬೀದಿಯಲ್ಲಿ ದನಗಳನ್ನು ಸಾಕಿರುವ ಪ್ರತಿ ಮನೆಯವರದ್ದೂ ಇದೇ ಅಭಿಪ್ರಾಯ. ನಗರದಲ್ಲಿ ದನಗಳಿಗೆ ಮೇವು ಸಿಗುವುದಿಲ್ಲ. ಹಸುಗಳಿಗಾಗಿ ತರಕಾರಿ, ಬಾಳೆಹಣ್ಣನ್ನು ಮಿತವಾಗಿ ಕೊಡಬೇಕು. ದನಗಳು ಪ್ಲಾಸ್ಟಿಕ್‌ ತಿನ್ನದಂತೆ ನೋಡಿಕೊಳ್ಳಬೇಕು. ಇವು ಹೈಬ್ರೀಡ್ ಹಸುಗಳಾಗಿದ್ದರಿಂದ ಸೂಕ್ಷ್ಮವಾಗಿರುತ್ತದೆ. ಇಷ್ಟೆಲ್ಲಾ ಕಷ್ಟಗಳ ಮಧ್ಯೆ ಕೆಲವರು ಕೊಡುವ ಆಹಾರದ ಮೇಲೆಯೂ ನಿಗಾ ವಹಿಸುವುದು ಹಸುಗಳ ಮಾಲೀಕರಿಗೆ ತಲೆನೋವಾಗಿದೆ.

‘ಹತ್ತು ಹಸುಗಳನ್ನು ಸಾಕಿದ್ದೇನೆ. ಇವುಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಹಸುಗಳನ್ನು ಬಿಟ್ಟು ಬೇರೆ ಊರಿಗೆ ಹೋಗಲು ಆಗುವುದಿಲ್ಲ. ಎಂಥದ್ದೇ ಸಮಾರಂಭವಿದ್ದರೂ, ಒಂದೇ ದಿನದಲ್ಲಿ ವಾಪಸ್‌ ಬರಬೇಕು. ಹಬ್ಬ, ತಿಥಿ ಹೀಗೆ ಹಲವು ಸಂದರ್ಭಗಳಲ್ಲಿ ಜನರು ದನಗಳಿಗೆ ನೈವೇದ್ಯ ಮಾಡಲು ಬರುತ್ತಾರೆ. ದೀಪಾವಳಿಗೆ ಸಾಕಷ್ಟು ಮಂದಿ ಬಂದು ಪೂಜೆ ಮಾಡಿ ಹೋಗುತ್ತಾರೆ. ದನಗಳಿಗೆ ಬಂದು ಪೂಜೆ ಮಾಡಿದರೆ ನಮಗೂ ಖುಷಿಯೇ.

‘ಆದರೆ ಕೆಲವರು ವಿಪರೀತ ತಿನ್ನಲು ಕೊಡುತ್ತಾರೆ. ಈ ಹಸುಗಳಿಗೆ ಆಹಾರದ ಮಿತಿ ಇರುತ್ತದೆ. ಸಿಕ್ಕಾಪಟ್ಟೆ ತಿನ್ನುವುದರಿಂದ ಅವುಗಳಿಗೆ ಅಜೀರ್ಣವಾಗುತ್ತದೆ. ಏನೋ ನಂಬಿಕೆಯಿಂದ ಬರುತ್ತಾರೆ ಅವರನ್ನು ಬೈಯ್ದು ಕಳುಹಿಸುವುದು ಸರಿಯಲ್ಲ ಎಂದು ನಾವೂ ಸುಮ್ಮನಾಗುತ್ತೇವೆ. ನೋಡಿ, ಮೊನ್ನೆಯಷ್ಟೇ ಒಬ್ಬರು ಬಂದು ನವಧಾನ್ಯಗಳನ್ನು ದನಗಳಿಗೆ ತಿನ್ನಲು ಕೊಟ್ಟರು. ಒಂದು ಮುಷ್ಟಿ ಕೊಟ್ಟರೆ ಪರ‍್ವಾಗಿಲ್ಲ, ಅವರು ಒಂದು ಬಕೆಟ್‌ ಇಟ್ಟು ಹೋಗಿದ್ದರು. ಅದನ್ನು ತಿಂದ ನಂತರದಿಂದ ಇದರ ಹೊಟ್ಟೆ ಊದಿಕೊಂಡಿದೆ. ಈ ಜ್ಯೋತಿಷಿಗಳು ಟೀವಿಯಲ್ಲಿ ಇಲ್ಲಸಲ್ಲದ್ದನ್ನು ದನಗಳಿಗೆ ಕೊಡುವಂತೆ ಹೇಳುತ್ತಾರೆ. ಆಮೇಲೆ ಹಸು ಸಾಕಿರುವವರು ಪಜೀತಿ ಪಡಬೇಕು’ ಎಂದು ಗೋಳು ತೋಡಿಕೊಳ್ಳುತ್ತಾರೆ ರವಿಕುಮಾರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT