ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಹೊರಬರುವರು 48 ದೇವರು!

Published:
Updated:
ಹೊರಬರುವರು 48 ದೇವರು!

ಮಲೆನಾಡಿನ ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ದೊಡ್ಡ ಹಬ್ಬವಾಗಿದೆ. ಹಬ್ಬಕ್ಕಿಂತ ಎರಡು ದಿನ ಮೊದಲಿನಿಂದಲೇ ಸಿದ್ಧತೆ ಆರಂಭಗೊಂಡು ಮೂರು ದಿನಗಳವರೆಗೆ ನಡೆಯುತ್ತದೆ. ಗ್ರಾಮದೇವತೆ ಮತ್ತು ಆಯಾ ಗ್ರಾಮಗಳ ವ್ಯಾಪ್ತಿಯಲ್ಲಿರುವ ಎಲ್ಲಾ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಗ್ರಾಮ ದೇವತೆಗೆ ಹಣ್ಣು ಕಾಯಿ ಮತ್ತು ಬಲಿ ನೈವೇದ್ಯ ಸಲ್ಲಿಸುವ ನೋನಿ ಹಬ್ಬ ಹಲವು ಗ್ರಾಮಗಳಲ್ಲಿ ದೀಪಾವಳಿಯ ಮೊದಲ ದಿನವಾದ ನರಕ ಚತುದರ್ಶಿಯಂದು ನಡೆಯುತ್ತದೆ. ಇನ್ನು ಕೆಲ ಗ್ರಾಮಗಳಲ್ಲಿ ದೀಪಾವಳಿ ಅಮಾವಾಸ್ಯೆ ಅಥವಾ ದೀಪಾವಳಿಯ ಬಲಿಪಾಡ್ಯಮಿಯಂದು ನಡೆಯುತ್ತದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಪ್ರತಿವರ್ಷ ನರಕ ಚತುರ್ದಶಿಯ ದಿನ ನೋನಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತದೆ.

ಗ್ರಾಮದ ಕೆರೆ ತುದಿಯಲ್ಲಿರುವ ಶೀಲವಂತ ದೇವರಿಗೆ ಪ್ರತ್ಯೇಕ ವಾದ ದೇವರಬನವಿದೆ. ಈ ಬನದಲ್ಲಿ ಇಡೀ ಗ್ರಾಮಸ್ಥರೆಲ್ಲ ಸೇರಿ ಹಣ್ಣು-ಕಾಯಿ, ಎಡೆ ನೈವೇದ್ಯದ ಪೂಜೆ ಸಮರ್ಪಿಸುತ್ತಾರೆ. ಈ ಸ್ಥಳದಲ್ಲಿ ಒಟ್ಟು 48 ದೇವತೆಗಳ ಆವಾಸವಿದೆ ಎಂಬುದು ಗ್ರಾಮಸ್ಥರ ನಂಬಿಕೆ. ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು ಇತ್ಯಾದಿ ಲೋಹಗಳಿಂದ ತಯಾರಿಸಿದ ದೇವರ ವಿಗ್ರಹಗಳನ್ನು ಅಕ್ಕಿಯ ರಾಶಿಯಲ್ಲಿಟ್ಟು ಪೂಜಿಸಲಾಗುತ್ತದೆ.

ಎಲ್ಲಕ್ಕಿಂತ ವಿಶೇಷವೆಂದರೆ ಈ ದೇವರ ವಿಗ್ರಹಗಳನ್ನು ಪೂಜೆಯ ನಂತರ ಗಡಿಗೆಯಲ್ಲಿ ತುಂಬಿ ಮಣ್ಣಿನಲ್ಲಿ ಹೂತು ಇಡಲಾಗುತ್ತದೆ. ಪ್ರತಿ ವರ್ಷ ನರಕ ಚತುರ್ದಶಿಯಂದು ಮತ್ತೆ ಮಣ್ಣಿನಿಂದ ಮೇಲಕ್ಕೆ ತೆಗೆದು ನೀರಿನಿಂದ ಅಭಿಷೇಕ ಸ್ನಾನ ಮಾಡಿಸಿ ಸಾಲಾಗಿ ಜೋಡಿಸಿ ಪೂಜೆ ನಡೆಸಲಾಗುತ್ತದೆ. ವರ್ಷದ ಉಳಿದ ದಿನಗಳಂದು ಮಣ್ಣಿನೊಳಗೆ ಗಡಿಗೆಯಲ್ಲಿ ಭದ್ರವಾಗಿ ನೆಲದೊಡಲು ಸೇರುವ ಈ ದೇವರುಗಳು ಉಳಿದ ದಿನಗಳಂದು ಭಕ್ತರ ದರ್ಶನಕ್ಕೆ ಸಿಗುವುದಿಲ್ಲ. ದೇವರ ವಿಗ್ರಹಗಳನ್ನು ಪುರೋಹಿತರು ಮಣ್ಣಿನಿಂದ ತೆಗೆದು ವಿಧಿ ಬದ್ಧವಾಗಿ ಪೂಜಿಸುತ್ತಾರೆ. ಗ್ರಾಮದಲ್ಲಿ 130 ಕುಟುಂಬಗಳಿದ್ದು ಎಲ್ಲ ಕುಟುಂಬದವರೂ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಈ ವ್ಯಾಪ್ತಿಯ ಕುಟುಂಬಗಳಲ್ಲಿ ಮರಣ, ಜನನ, ಸ್ತ್ರೀಯರು ಮೈನೆರೆಯುವುದು, ರಜಸ್ವಲೆಯಾಗುವುದು ಇತ್ಯಾದಿ ಸಂದರ್ಭದಲ್ಲಿ ಗ್ರಾಮದಲ್ಲಿ ನೋನಿ ಹಬ್ಬ ಆಚರಿಸದೆ ಇರಲಾಗುತ್ತಿತ್ತು. ಈ ರೀತಿ ಘಟನೆಗಳಿಂದ ಪ್ರತಿವರ್ಷ ಹಬ್ಬ ನಿಂತು ಹೋಗಿ ಸತತ 15 ವರ್ಷ ಹಬ್ಬದಾಚರಣೆ ನಡೆದಿರಲಿಲ್ಲ. ‘ಗ್ರಾಮದೇವತೆ ಮುನಿಸಿಕೊಂಡ ಕಾರಣ ಈ ರೀತಿ ನಡೆಯುತ್ತಿದೆ. ಇದರಿಂದ ಗ್ರಾಮದಲ್ಲಿ ದುರ್ಮರಣ, ಬೆಳೆ ಹಾನಿ ಆಗುತ್ತಿದೆ’ ಎಂದು ಗ್ರಾಮದ ಮುಖಂಡರು ಐದು ವರ್ಷಗಳ ಹಿಂದೆ ಧರ್ಮಸ್ಥಳಕ್ಕೆ ಹೋಗಿ ಭಿನ್ನವಿಸಿದರು. ಗ್ರಾಮದಲ್ಲಿ ಮರಣ, ಜನನ ಕಾರಣದ ಮೈಲಿಗೆ ಸಂಭವಿಸಿದರೆ ಆ ಕುಟುಂಬದವರನ್ನು ಹೊರತುಪಡಿಸಿ ಪ್ರತಿವರ್ಷ ನೋನಿ ಹಬ್ಬ ಆಚರಿಸುವಂತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸೂಚಿಸಿದರು. ಐದು ವರ್ಷಗಳಿಂದ ಈ ಗ್ರಾಮದಲ್ಲಿ ತಪ್ಪದೆ ನೋನಿ ಹಬ್ಬ ಆಚರಣೆ ನಡೆಯುತ್ತಿದೆ.

ಶೀಲವಂತ ದೇವರ ಬನದಲ್ಲಿ ಗ್ರಾಮಸ್ಥರೆಲ್ಲ ಕುಟುಂಬ ಸಹಿತ ಪೂಜೆಗೆ ಸೇರುತ್ತಾರೆ. ಅಲ್ಲಿ ಗ್ರಾಮದ ಎಲ್ಲ ಕುಟುಂಬಗಳ ಜಮೀನಿನಲ್ಲಿರುವ ಎಲ್ಲ ದೇವರಿಗೆ ಎಡೆ ಇಡಲಾಗುತ್ತದೆ. ಶೀಲವಂತ ದೇವರಿಗೆ ಸಹ ಎಡೆ ಇಟ್ಟು ಹಣ್ಣು ಕಾಯಿ ಸಮರ್ಪಿಸಲಾಗುತ್ತದೆ. ಪೂಜೆಯ ಸಂದರ್ಭದಲ್ಲಿ ದೇವರ ಎದುರು ತೆಂಗಿನ ಕಾಯಿಯ ರಾಶಿಯೇ ಎದ್ದುಕಾಣುವಂತೆ ಇರುತ್ತದೆ. ಮಂಗಳಾರತಿ ಮುಗಿಯುತ್ತಿದ್ದಂತೆ ಉಳಿದ ದೇವರಿಗೆ ಇಡಲಾದ ಎಡೆಯನ್ನು ಆಯಾ ದೇವರ ಕಲ್ಲಿನ ಬಳಿ ಹೋಗಿ ಪೂಜೆ ಸಲ್ಲಿಸಿ ಬರಲಾಗುತ್ತದೆ.

ಈ ದೇವರಬನದಿಂದ ಸ್ವಲ್ಪ ದೂರದಲ್ಲಿ ರಸ್ತೆಯ ಆಚೆಕಡೆ ಕೋಮಾರಾಮ ದೇವರ ಬನವಿದ್ದು ಅಲ್ಲಿ ಬಲಿ ನೈವೇದ್ಯ ನಡೆಸಲಾಗು ತ್ತದೆ. ನಂತರ ಗ್ರಾಮದ ಮೇಲಿನ ಕೇರಿಯ ಗ್ರಾಮದೇವರ ಬನದಲ್ಲಿ ಸಹ ಬಲಿ ಸಮರ್ಪಣೆ ನಡೆಸಲಾಗುತ್ತದೆ. ಈ ಎಲ್ಲ ದೇವರುಗಳ ಪೂಜೆ ಮುಗಿಯಲು ಮಧ್ಯಾಹ್ನ 3 ಗಂಟೆ ಮೀರುತ್ತದೆ. ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಅಡುಗೆ ಮಾಡಿ ಊಟಮಾಡುವ ಸಂಪ್ರದಾಯವಿದೆ.

ಈ ಗ್ರಾಮದ ನೋನಿ ಹಬ್ಬದ ಆಚರಣೆಗೆ ಸಮಿತಿ ರಚಿಸಿ ಸಮಿತಿಯ ಮುಖ್ಯಸ್ಥರ ಮೂಲಕ ವಿವಿಧ ಸಂಪ್ರದಾಯಬದ್ಧ ಆಚರಣೆ ನಡೆಸುತ್ತಾರೆ. ಬಾಳೆ ಎಲೆಯಲ್ಲಿ ಅಕ್ಕಿ –ಕಾಯಿ, ಅಡಕೆ ಹಿಂಗಾರ, ಹೂವು ಹಣ್ಣು, ವೀಳ್ಯದೆಲೆ ಒಳಗೊಂಡ ಎಡೆ ನೈವೇದ್ಯದ ಸಾಲು ಸಾಲಿನ ರಾಶಿ ಆಕರ್ಷಿಸುತ್ತದೆ. ಈ ವಿಶಿಷ್ಟ ಆಚರಣೆ ವೀಕ್ಷಿಸಲು ಸುತ್ತಮುತ್ತಲ ಗ್ರಾಮಸ್ಥರು ಸಹ ಬರುತ್ತಾರೆ.

Post Comments (+)