ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಸಂತ್ರಸ್ತರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸಬೇಕು

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅದು ಒಂದೆರಡು ತಿಂಗಳ ಹಿಂದಿನ ಮಾತು. ಆಗ ಮಳೆ ಇರಲಿಲ್ಲ. ಮಳೆ ಬರಲಿ ಎಂದು ಮಾಡಿದ ಪ್ರಯತ್ನಗಳಿಗೆ ಲೆಕ್ಕವೇ ಇಲ್ಲ. ಆದರೆ ಈಗ ಇಡೀ ಸನ್ನಿವೇಶವೇ ಬದಲಾಗಿದೆ. ಬೇಡ ಬೇಡ ಎಂದರೂ ಮಳೆ ಸುರಿಯುತ್ತಿದೆ. ಅದೂ ಇದುವರೆಗಿನ ದಾಖಲೆಯನ್ನು ಮುರಿಯುವಂತಹ ಮಳೆ. ರಾಜಧಾನಿ ಬೆಂಗಳೂರಂತೂ ಮಳೆ ನೀರಲ್ಲೇ ಮುಳುಗಿದಂತಿದೆ. ರಾಜ್ಯದ ವಿವಿಧೆಡೆ ಮರಗಳು ಬಿದ್ದು, ಮನೆಗಳು ಬಿದ್ದು, ನೀರಲ್ಲಿ ಕೊಚ್ಚಿ ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ನಿತ್ಯದ ಜನಜೀವನಕ್ಕೆ ತೊಂದರೆ ಆಗಿದೆ. ಇನ್ನೇನು, ಕೈಗೆ ಬರಲಿದ್ದ ಬೆಳೆಗಳಿಗೂ ಭಾರಿ ಹಾನಿಯಾಗಿದೆ. ಎಷ್ಟೋ ಕಡೆ ಕಟಾವು ಮಾಡಲು ಆಗುತ್ತಿಲ್ಲ. ಅನಾವೃಷ್ಟಿಯಿಂದ ಕಂಗಾಲಾಗಿದ್ದ ರೈತರು ಈಗ ಅತಿವೃಷ್ಟಿಯಿಂದಲೂ ಲುಕ್ಸಾನು ಅನುಭವಿಸುತ್ತಿದ್ದಾರೆ.

ಅಕಾಲಿಕ ಮತ್ತು ಅತಿಯಾಗಿ ಮಳೆ ಬಂದಾಗ ದೈನಂದಿನ ಬದುಕು ಏರುಪೇರಾಗುವುದು ಸ್ವಾಭಾವಿಕ. ಆದರೆ ಬೆಂಗಳೂರಿನಲ್ಲಿ ಮಾತ್ರ ಮಳೆಯ ಪರಿಣಾಮ ಜನರಿಗೆ ಜೋರಾಗಿಯೇ ತಟ್ಟುತ್ತಿದೆ. ಆಕಾಶದಲ್ಲಿ ಕಪ್ಪು ಮೋಡಗಳು ಕಂಡರೆ ಸಾಕು; ಭಯಬೀಳುವಂತಾಗಿದೆ. ಗುಡಿಸಲುಗಳಷ್ಟೇ ಅಲ್ಲ, ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳೂ ಜಲಾವೃತಗೊಂಡಿವೆ. ಹಾಗೆಂದು, ಇದಕ್ಕೆಲ್ಲ ಮಳೆಯನ್ನೇ ದೂರಿ ಪ್ರಯೋಜನ ಇಲ್ಲ. ಇದರಲ್ಲಿ ಮಾನವ ನಿರ್ಮಿತ ತಪ್ಪುಗಳೇ ಜಾಸ್ತಿ.

ರಾಜ್ಯ ಸರ್ಕಾರ ಮತ್ತು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಈ ವಿಚಾರದಲ್ಲಿ ತಮ್ಮ ಹೊಣೆ ಹಾರಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಬೆಂಗಳೂರಿನ ಪಾಲಿಗೆ ಹೆಚ್ಚು ಮಳೆಯಾದಾಗ ನೀರು ರಸ್ತೆ ಮೇಲೇ ಹರಿಯುವುದು, ಮನೆಗಳಿಗೆ ನುಗ್ಗುವುದು ಹೊಸದೇನಲ್ಲ. ಇವೆಲ್ಲ ಪಾಲಿಕೆಗೂ ಗೊತ್ತು. ಈ ರೀತಿ ಆಗದಂತೆ ಅದು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು. ಆದರೆ ವಹಿಸಲಿಲ್ಲ. ಅದರ ಫಲವೇ ಈ ಜಲಪ್ರಳಯ. ಇಲ್ಲಿ ರಾಜಕಾಲುವೆಗಳೆಲ್ಲ ಒತ್ತುವರಿಯಾಗಿವೆ. ಕೆರೆಗಳನ್ನು ಮುಚ್ಚಿ ಮನೆಗಳು,

ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿವೆ. ಸಣ್ಣ ಪುಟ್ಟ ಮೋರಿಗಳಲ್ಲಿ ಹೂಳು, ಕಸ ತುಂಬಿಕೊಂಡಿವೆ. ನೀರು ಇಂಗಲು ಜಾಗವೇ ಇಲ್ಲ. ಒತ್ತುವರಿಯನ್ನು ತೆರವು ಮಾಡಿ ರಾಜಕಾಲುವೆಗಳನ್ನು ಸುಸ್ಥಿತಿಯಲ್ಲಿ ಇಡಬೇಕಾಗಿತ್ತು. ಮೋರಿಗಳಲ್ಲಿನ ಹೂಳನ್ನು ತೆಗೆಸಿ ಸ್ವಚ್ಛ ಮಾಡಬೇಕಾಗಿತ್ತು. ಮುಖ್ಯವಾಗಿ ಈ ಕೆಲಸ ಬೇಸಿಗೆಯಲ್ಲೇ ನಡೆಯಬೇಕಾಗಿತ್ತು. ಆದರೆ ಆಗ ಪಾಲಿಕೆ ನಿದ್ರಾವಸ್ಥೆಯಲ್ಲಿತ್ತು. ಮಳೆ ನೀರು ನಗರವನ್ನೇ ಮುಳುಗಿಸಿದ ನಂತರ ಅದಕ್ಕೆ ಎಚ್ಚರ ಆಯಿತು. ಈಗ ರಸ್ತೆ ಉದ್ದಕ್ಕೂ ನೋಡಿದರೆ ಹೂಳು ತೆಗೆಯುವ ಕೆಲಸ ನಡೆದಿರುವುದು ಕಣ್ಣಿಗೆ ಬೀಳುತ್ತದೆ, ‘ಯುದ್ಧಕಾಲೇ ಶಸ್ತ್ರಾಭ್ಯಾಸ’ ಎನ್ನುವ ಮಾತು ನೆನಪಾಗುತ್ತದೆ. ಮಳೆಗಾಲ ಕಾಲಿಡುವ ಮೊದಲೇ ಮಾಡಲು ಏನು ಕಷ್ಟ ಇತ್ತು? ‘ಎಂತಹ ಮಳೆಯಾದರೂ ಎದುರಿಸಲು ಸರ್ವಸನ್ನದ್ಧರಾಗಿದ್ದೇವೆ; ಜನರಿಗೆ ಯಾವ ತೊಂದರೆಯೂ ಆಗುವುದಿಲ್ಲ’ ಎಂದು ವೀರಾವೇಶದ ಹೇಳಿಕೆ ಕೊಟ್ಟವರೆಲ್ಲ ಈಗ ಎಲ್ಲಿದ್ದಾರೆ?

ಬೆಂಗಳೂರಲ್ಲಿ ರಸ್ತೆ ನಿರ್ಮಾಣಕ್ಕೆ, ಗುಂಡಿ ಮುಚ್ಚಲಿಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗಿದೆ. ಆದರೆ ಆ ಕೆಲಸದ ಗುಣಮಟ್ಟ ಹೇಗಿದೆ ಎಂಬುದನ್ನು ರಸ್ತೆಗಳಲ್ಲಿ ಒಮ್ಮೆ ಅಡ್ಡಾಡಿದರೆ ಚೆನ್ನಾಗಿ ಅರಿವಾಗುತ್ತದೆ. ಮಳೆ ನೀರಿನ ಜತೆಗೆ ರಸ್ತೆ ಗುಂಡಿಗಳೂ ಅನೇಕರನ್ನು ಬಲಿ ತೆಗೆದುಕೊಂಡಿವೆ. ಇಂತಹ ಹೊತ್ತಿನಲ್ಲಿ ಪಕ್ಷ ರಾಜಕಾರಣ ಮಾಡುವುದು, ಒಂದು ಪಕ್ಷದವರು ಇನ್ನೊಂದು ಪಕ್ಷದವರ ಮೇಲೆ ಗೂಬೆ ಕೂರಿಸುವುದರಿಂದ ಬಿಡಿಗಾಸಿನ ಪ್ರಯೋಜನವೂ ಇಲ್ಲ. ಆದರೂ ನಮ್ಮ ರಾಜಕಾರಣಿಗಳಿಗೆ ಅದು ಅರ್ಥವಾಗುತ್ತಿಲ್ಲ. ಸಂತ್ರಸ್ತರ ನೋವಿಗೆ ಸ್ಪಂದಿಸುವ, ಸಾಮಾನ್ಯ ಜನರ ಬವಣೆ ಕಡಿಮೆ ಮಾಡುವ ಬದಲು ಪರಸ್ಪರ ಕೆಸರು ಎರಚಾಟದಲ್ಲಿ ನಿರತರಾಗಿದ್ದಾರೆ. ಆರೋಪ– ಪ್ರತ್ಯಾರೋಪ, ಕೂಗಾಟ– ಬೈದಾಟಗಳಲ್ಲಿ ತಮಗಿರುವ ಪಾಂಡಿತ್ಯವನ್ನು ಬೇಕಾದರೆ ಮುಂಬರುವ ಚುನಾವಣೆಯಲ್ಲಿ ಪ್ರದರ್ಶಿಸಲಿ. ಈಗ ಜನಸೇವೆಗೆ ಮುಂದಾಗಲಿ. ಇಡೀ ಆಡಳಿತ ಯಂತ್ರವನ್ನು ಚುರುಕುಗೊಳಿಸಲಿ. ಜನರ ತಾಳ್ಮೆಯನ್ನು ಕೆಣಕುವುದು ಬೇಡ. ಪ್ರಾಕೃತಿಕ ವಿಕೋಪವನ್ನು ಎಲ್ಲರೂ ಒಟ್ಟಾಗಿ, ಸಮರ್ಥವಾಗಿ ನಿಭಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT