ಸೋಮವಾರ, ಸೆಪ್ಟೆಂಬರ್ 16, 2019
26 °C

ಇಂದು ತಲಕಾವೇರಿ ಕ್ಷೇತ್ರದಲ್ಲಿ ‘ತೀರ್ಥೋದ್ಭವ’ ಸಂಭ್ರಮ

Published:
Updated:
ಇಂದು ತಲಕಾವೇರಿ ಕ್ಷೇತ್ರದಲ್ಲಿ ‘ತೀರ್ಥೋದ್ಭವ’ ಸಂಭ್ರಮ

ಮಡಿಕೇರಿ: ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ತಲಕಾವೇರಿ ಕ್ಷೇತ್ರ ಸಜ್ಜಾಗಿದೆ. ಮಂಗಳವಾರ ಮಧ್ಯಾಹ್ನ 12.33ಕ್ಕೆ ಧನುರ್‌ ಲಗ್ನದಲ್ಲಿ ಪವಿತ್ರ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿಯಲಿದ್ದಾಳೆ. ಈ ಕ್ಷಣಕ್ಕೆ ಸಾಕ್ಷಿಯಾಗಲು ವಿವಿಧೆಡೆಯಿಂದ ಭಕ್ತರು ನದಿಯ ತವರಿನತ್ತ ಹೆಜ್ಜೆ ಹಾಕಿದ್ದಾರೆ.

ತೀರ್ಥೋದ್ಭವದ ವೇಳೆ ನೂಕು ನುಗ್ಗಲು ತಡೆಯಲು ಪ್ರವೇಶ ದ್ವಾರದಿಂದ ಸ್ನಾನಕೊಳದ ತನಕ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಮಡಿಕೇರಿಯಿಂದ ತಲಕಾವೇರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 30 ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಪಿಂಡ ಪ್ರದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪುಣ್ಯಸ್ನಾನಕ್ಕೆ ಭಕ್ತರ ಅನುಕೂಲಕ್ಕೆ ಪ್ರತ್ಯೇಕ ಸ್ಥಳ ನಿಗದಿಗೊಳಿಸಲಾಗಿದೆ.‌

ಬಿಗಿ ಭದ್ರತೆ: ಈ ವರ್ಷ ಹಗಲಿನಲ್ಲಿ ತೀರ್ಥೋದ್ಭವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಕೇರಳ, ತಮಿಳುನಾಡಿನಿಂದಲೂ ಬರುವ ನಿರೀಕ್ಷೆಗಳಿವೆ. ಜಿಲ್ಲಾಡಳಿತ ಬಿಗಿ ಭದ್ರತೆ ಕೈಗೊಂಡಿದೆ.

40 ಕಡೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂವರು ಡಿವೈಎಸ್‌ಪಿ, 50 ಮಂದಿ ಸಬ್‌ ಇನ್‌ಸ್ಪೆಕ್ಟರ್‌ ಹಾಗೂ ಸಹಾಯಕ ಸಬ್ ಇನ್‌ಸ್ಪೆಕ್ಟರ್‌, 600 ಮಂದಿ ಕಾನ್‌ ಸ್ಟೆಬಲ್‌, ಎಂಟು ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ತಿಳಿಸಿದರು.

ಅಕ್ಷಯಪಾತ್ರೆಯಲ್ಲಿ ಸುರಿದಿರುವ ಅಕ್ಕಿಯನ್ನು ಮಂಗಳವಾರದಿಂದ ತಿಂಗಳ ಕಾಲ ಭಾಗಮಂಡಲ– ತಲಕಾವೇರಿಗೆ ಬರುವ ಭಕ್ತರಿಗೆ ಪಡಿಯಕ್ಕಿ ರೂಪದಲ್ಲಿ ವಿತರಿಸುವುದು ಸಂಪ್ರದಾಯ.

ಜಾಗೃತಿ ಶಕ್ತಿ: ‘ಕಾವೇರಿ ತೀರ್ಥ ಸೇವಿಸಿದರೆ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳು ಗುಣವಾಗಲಿವೆ. ಅಮೆರಿಕದ ವಿಜ್ಞಾನ ಹಾಗೂ ಅಧ್ಯಾತ್ಮ ಪ್ರಯೋಗಾಲಯದಲ್ಲಿ ಈ ತೀರ್ಥವನ್ನು ಪರೀಕ್ಷೆಗೆ ಒಳಪಡಿಸಿದಾಗ ಜಾಗೃತಿ ಶಕ್ತಿಯಿರುವುದು ಗೊತ್ತಾಗಿದೆ’ ಎಂದು ಹಿರಿಯ ವಿಜ್ಞಾನಿ ಬಿದ್ದಂಡ ಪಿ.ಕೃಷ್ಣ ಮಾದಪ್ಪ ತಿಳಿಸಿದ್ದಾರೆ.

‘2012ರಲ್ಲಿ ಈ ಪರೀಕ್ಷೆ ನಡೆಸಲಾಗಿತ್ತು. ಬೇರೆಬೇರೆ ದೇಶಗಳ ವಿಜ್ಞಾನಿಗಳೂ ಪಾಲ್ಗೊಂಡಿದ್ದರು. ದಕ್ಷಿಣ ಗಂಗೆ ಕಾವೇರಿಯ ತೀರ್ಥಕ್ಕೆ ಅಧ್ಯಾತ್ಮಿಕ ಶಕ್ತಿಯಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈ ನದಿ ಜನಿಸಿರುವುದು ನಾಡಿನ ಪುಣ್ಯ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Post Comments (+)