ಮಾತೆ ಮಹಾದೇವಿ ರ‍್ಯಾಲಿಗೆ ಕಪ್ಪುಪಟ್ಟಿ ಪ್ರದರ್ಶನ

ಮಂಗಳವಾರ, ಜೂನ್ 18, 2019
23 °C
ಬೀದರ್‌ನಲ್ಲಿ ಕಲ್ಯಾಣ ಪರ್ವ ಮತ್ತು ಲಿಂಗಾಯತ ಮಹಾ ಸಮಾವೇಶ, ಕ್ಷಮೆಯಾಚನೆಗೆ ಪಟ್ಟು

ಮಾತೆ ಮಹಾದೇವಿ ರ‍್ಯಾಲಿಗೆ ಕಪ್ಪುಪಟ್ಟಿ ಪ್ರದರ್ಶನ

Published:
Updated:
ಮಾತೆ ಮಹಾದೇವಿ ರ‍್ಯಾಲಿಗೆ ಕಪ್ಪುಪಟ್ಟಿ ಪ್ರದರ್ಶನ

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಮಾತೆ ಮಹಾದೇವಿ ನೇತೃತ್ವದ ಕಲ್ಯಾಣ ಪರ್ವ ಮತ್ತು ಲಿಂಗಾಯತ ಮಹಾ ಸಮಾವೇಶದ ನಿಮಿತ್ತ ಸೋಮವಾರ ಇಲ್ಲಿ ಆಯೋಜಿಸಿದ್ದ ರ‍್ಯಾಲಿಗೆ ಬಸವೇಶ್ವರ ವೃತ್ತದ ಬಳಿ ಕೆಲವರು ಕಪ್ಪುಪಟ್ಟಿ ತೋರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು.

ನಗರದ ಬಸವೇಶ್ವರ ದೇವಸ್ಥಾನದಿಂದ ರ‍್ಯಾಲಿ ಆರಂಭವಾದಾಗ ಕೆಲ ಯುವಕರು ಮಾತೆ ಮಹಾದೇವಿ ಎದುರು ಬಂದು ‘ಬಸವಣ್ಣನ ವಚನಾಂಕಿತ ತಿದ್ದಿರುವುದಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.

ಮಾತೆ ಮಹಾದೇವಿ ಅವರು ಮಾತನಾಡಿ, ‘ಈಗಾಗಲೇ ವಚನದೀಪ್ತಿ ವಿರುದ್ಧ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದರಿಂದ ಅದನ್ನು ಇನ್ನು ಮುಂದೆ ಪ್ರಕಟಿಸುವುದಿಲ್ಲ’ ಎಂದು ಭರವಸೆ ನೀಡಿದರು. ‘ಮಾತೆ ಮಹಾದೇವಿ ಅವರು ಕ್ಷಮೆ ಯಾಚಿಸಬೇಕು’ ಎಂದು ಪಟ್ಟು ಹಿಡಿದಾಗ ತ್ವೇಷಮಯ ವಾತಾವರಣ ಉಂಟಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಯಾಗಿಸಿದರು.

ನಂತರ ರ‍್ಯಾಲಿಯು ಕೋಟೆಯ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಬಂದಾಗ ಕೆಲವರು ಮಾತೆ ಮಹಾದೇವಿ ಅವರ ವಿರುದ್ಧ ಘೋಷಣೆ ಕೂಗಿದರು. ಬಸವೇಶ್ವರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಹಾಗೂ ಯುವ ಬಸವ ಸಂಘಟನೆಯ ಪದಾಧಿಕಾರಿಗಳು ಕಪ್ಪುಪಟ್ಟಿ ಪ್ರದರ್ಶಿಸಿದರು.

‘ಬಸವಣ್ಣನವರ ವಚನಾಂಕಿತ ತಿದ್ದಿರುವ ಮಾತೆ ಮಹಾದೇವಿಗೆ ಧಿಕ್ಕಾರ’, ಕಲ್ಯಾಣ ಪರ್ವಕ್ಕೆ ಧಿಕ್ಕಾರ’ ಎಂಬ ಘೋಷಣೆ ಕೂಗಿದರು. ಇಂಥ ಪರಿಸ್ಥಿತಿಯಲ್ಲಿಯೇ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಬಸವೇಶ್ವರ ಪುತ್ಥಳಿಗೆ ಪುಷ್ಪಮಾಲೆ ಹಾಕಿದರು. ಆಗಲೂ ಪ್ರತಿಭಟನೆ ವ್ಯಕ್ತವಾಯಿತು.

ಪುತ್ಥಳಿಯ ಪಾದದಲ್ಲಿ ಇಡಲಾಗಿದ್ದ ಪುಷ್ಪಮಾಲೆಯನ್ನು ಕೆಲವರು ತೆಗೆದು ಹೊರಗಡೆ ಎಸೆದರು. ಹೀಗಾಗಿ ಮೆರವಣಿಗೆಯಲ್ಲಿದ್ದವರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಿ ರ‍್ಯಾಲಿ ಮುಂದೆ ಸಾಗುವುದಕ್ಕೆ ಅನುವು ಮಾಡಿಕೊಟ್ಟರು. ರ‍್ಯಾಲಿ ಮುಂದಕ್ಕೆ ಸಾಗುವವರೆಗೂ ಧಿಕ್ಕಾರದ ಘೋಷಣೆಗಳು ಮೊಳಗುತ್ತಲೇ ಇದ್ದವು.

***

‘ಸ್ವತಂತ್ರ ಧರ್ಮಕ್ಕೆ ವಿರೋಧವಿಲ್ಲ’

‘ಮಾತೆ ಮಹಾದೇವಿಯವರ ಕಲ್ಯಾಣ ಪರ್ವಕ್ಕೆ ತಮ್ಮ ವಿರೋಧವಿದೆ ಹೊರತು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟಕ್ಕೆ ಅಲ್ಲ’ ಎಂದು ದೇವಸ್ಥಾನ ಸಮಿತಿ ಉಪಾಧ್ಯಕ್ಷ ಜಗನ್ನಾಥ ಖೂಬಾ ಸ್ಪಷ್ಟಪಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry