ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಗತಿಯಲ್ಲಿ ಚತುಷ್ಪಥ ಕಾಮಗಾರಿ

ಮುಂಬೈ– ಕನ್ಯಾಕುಮಾರಿ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66
Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಮಳೆಗಾಲದ ನೆಪದಲ್ಲಿ 2–3 ತಿಂಗಳಿಂದ ಕಾಮಗಾರಿ ಬಹುತೇಕ ಸ್ಥಗಿತಗೊಂಡಿದ್ದು, ಅಲ್ಲಲ್ಲಿ ಸಣ್ಣ ಪುಟ್ಟ ಕೆಲಸಗಳು ಮಾತ್ರ ನಡೆಯುತ್ತಿವೆ.

ಉಡುಪಿಯ ಕುಂದಾಪುರದಿಂದ ಕಾರವಾರದ ಗಡಿ ಭಾಗದವರೆಗಿನ 189 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಯ ವಿಸ್ತರಣೆ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಕೈಗೆತ್ತಿಕೊಂಡಿದ್ದು, ಮುಂಬೈನ ಐಆರ್‌ಬಿ ಕಂಪೆನಿಗೆ ಗುತ್ತಿಗೆ ನೀಡಲಾಗಿದೆ. 2014ರ ಮಾರ್ಚ್‌ನಲ್ಲಿ ಆರಂಭಗೊಂಡ ₹1,686 ಕೋಟಿ ವೆಚ್ಚದ ಕಾಮಗಾರಿಯು ನಿಗದಿಯಂತೆ 2016ರ ಡಿಸೆಂಬರ್‌ನಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬ ಹಾಗೂ ಇನ್ನಿತರ ಕಾರಣಗಳಿಂದ ಕಾಮಗಾರಿ ಆಮೆವೇಗದಲ್ಲಿ ಸಾಗಿದೆ.

ಸೇತುವೆಗಳ ನಿರ್ಮಾಣ: ಕುಂದಾಪುರದಿಂದ ಕರ್ನಾಟಕ ಗೋವಾ ಗಡಿವರೆಗೆ 14 ದೊಡ್ಡ ಸೇತುವೆಗಳು ಹಾಗೂ 39 ಸಣ್ಣ ಸೇತುವೆಗಳು, 60 ಕಿ.ಮೀ. ಸರ್ವೀಸ್‌ ರಸ್ತೆ ಹಾಗೂ 3 ಮೇಲ್ಸೇತುವೆ ಹಾಗೂ 3 ಕೆಳ ಸೇತುವೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಹೊನ್ನಾವರ ತಾಲ್ಲೂಕಿನ ಶರಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ 900 ಮೀಟರ್‌ ಉದ್ದದ ಹೊಸ ಸೇತುವೆ ಮೇಲೆ ಈಗಾಗಲೇ ವಾಹನ ಸಂಚಾರ ಆರಂಭವಾಗಿದೆ. ಕಾರವಾರ ಬಳಿ ಕಾಳಿ ನದಿಗೆ ಅಡ್ಡಲಾಗಿ ನಿರ್ಮಾಣ ಆಗುತ್ತಿರುವ ಸೇತುವೆ ಕಾಮಗಾರಿ ಕೂಡ ಶೇ 80ರಷ್ಟು ಮುಗಿದಿದೆ.

ಬೈಪಾಸ್‌ ಗೊಂದಲ: ಕಾರವಾರ, ಕುಮಟಾ ಹಾಗೂ ಭಟ್ಕಳ ಪಟ್ಟಣಗಳಲ್ಲಿ ಬೈಪಾಸ್‌ ನಿರ್ಮಾಣ ಮಾಡಬೇಕೆಂದು ಕೆಲ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಇನ್ನು ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಾರವಾರ ತಾಲ್ಲೂಕಿನ ಅರಗಾದಿಂದ ಅಮದಳ್ಳಿವರೆಗೆ ಬೈಪಾಸ್‌ ನಿರ್ಮಿಸಬೇಕೆಂದು ಸ್ಥಳೀಯ ಶಾಸಕ ಸತೀಶ್‌ ಸೈಲ್‌ ನೇತೃತ್ವದಲ್ಲಿ ಗ್ರಾಮಸ್ಥರು ಹೋರಾಟ ನಡೆಸಿದ್ದರು. ಆದರೆ ಅಂತಿಮವಾಗಿ ಬೈಪಾಸ್‌ಗೆ ಹೆದ್ದಾರಿ ಪ್ರಾಧಿಕಾರ ಅನುಮತಿ ನೀಡಲಿಲ್ಲ. ಭಟ್ಕಳದಲ್ಲೂ ಬೈಪಾಸ್‌ ಪ್ರಸ್ತಾವಕ್ಕೆ ಸಮ್ಮತಿ ದೊರೆತಿಲ್ಲ. ಕುಮಟಾದಲ್ಲಿ ಬೈಪಾಸ್‌ ನಿರ್ಮಾಣ ಕುರಿತು ಗೊಂದಲ ಮುಂದುವರಿದಿದೆ ಎಂದು ಪ್ರಾಧಿಕಾರದ ಎಂಜಿನಿಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಮಗಾರಿ ಪುನರಾರಂಭ: ‘ಕರಾವಳಿಯಲ್ಲಿ ಮಳೆ ಬಿರುಸಾಗಿದ್ದರಿಂದ ಕೆಲವು ದಿನ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಪುನರಾರಂಭಗೊಳ್ಳಲಿದೆ. ಯೋಜನೆಗೆ ಅಗತ್ಯವಿರುವ ಸರ್ಕಾರಿ ಭೂಮಿ ಹಾಗೂ ಅರಣ್ಯ ಭೂಮಿಯನ್ನು ನಿಯಮಾನುಸಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದೇವೆ. ಖಾಸಗಿ ಭೂಮಿಯ ಸ್ವಾಧೀನ ಪ್ರಕ್ರಿಯೆ ಬಹುತೇಕ ಮುಗಿದಿದೆ. ರಸ್ತೆ ನಿರ್ಮಾಣ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

***
ಚತುಷ್ಪಥಕ್ಕೆ ಬೇಕಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಬಹುತೇಕ ಮುಗಿದಿದ್ದು, 2018ರ ಅಂತ್ಯಕ್ಕೆ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ.
ಎಸ್‌.ಎಸ್‌.ನಕುಲ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT