ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಪಿಐಎಲ್‌: 26ಕ್ಕೆ ಮುಂದೂಡಿಕೆ

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘2011ರ ಸಾಲಿನ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ (ಕೆಪಿಎಸ್‌ಸಿ) ಆಯ್ಕೆಯಾದ 362 ಅಭ್ಯರ್ಥಿಗಳ ನೇಮಕಾತಿ ಆದೇಶ ಪ್ರಶ್ನಿಸಿರುವುದು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವ್ಯಾಪ್ತಿಗೆ ಬರುವುದೊ ಇಲ್ಲವೊ’ ಎಂಬ ಜಿಜ್ಞಾಸೆ ಉಂಟಾಗಿದೆ.

ಸೋಮವಾರ ಈ ಕುರಿತ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪ್ರತಿವಾದಿಗಳ ವಕೀಲ ಬಿ.ಎಲ್‌.ಆಚಾರ್ಯ ‘ಇದು ಆಡಳಿತ ಸೇವಾ ವ್ಯಾಪ್ತಿಗೆ ಸಂಬಂಧಿಸಿದ ಅರ್ಜಿ. ಹೀಗಾಗಿ ಇದನ್ನು ಪಿಐಎಲ್‌ ಎಂದು ಪರಿಗಣಿಸಬಾರದು’ ಎಂದು ಈ ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದರು.

ಇದಕ್ಕೆ ಉತ್ತರಿಸಿದ ಅರ್ಜಿದಾರರೂ ಆದ ಅನುತ್ತೀರ್ಣ ಅಭ್ಯರ್ಥಿಗಳ ವಕೀಲ ರಹಮತ್ ಉಲ್ಲಾ ಕೊತ್ವಾಲ ಅವರು, ‘ಇದೇ ಹೈಕೋರ್ಟ್ ಈ ಹಿಂದೆ ಈ ಪ್ರಕರಣವನ್ನು ಸ್ವಯಂ ಪ್ರೇರಿತ ಪಿಐಎಲ್‌ ಆಗಿ ವಿಚಾರಣೆ ನಡೆಸಿದೆ’ ಎಂಬ ಅಂಶದ ಬಗ್ಗೆ ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಅರ್ಜಿ ಸೇವಾವ್ಯಾಜ್ಯಗಳ ವ್ಯಾಪ್ತಿಯಲ್ಲಿ ಬರುತ್ತದೆಯೊ ಅಥವಾ ಪಿಐಎಲ್‌ ಆಗಿಯೇ ವಿಚಾರಣೆ ನಡೆಸಬಹುದೇ ಎಂಬುದಕ್ಕೆ  ಇರುವ ಸುಪ್ರೀಂ ಕೋರ್ಟ್‌ ತೀರ್ಪುಗಳ ಆಧಾರ ಕೊಡಿ’ ಎಂದು ಹೇಳಿ ಇದೇ 26ಕ್ಕೆ ಈ ಅರ್ಜಿಯ ಅಂತಿಮ ವಿಚಾರಣೆ ನಡೆಸುವುದಾಗಿ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT