ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನ ಬಿತ್ತೀತೆ ಹೊನ್ನ ಹೊಳೆ...?

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ ಇದು ನಿಜಕ್ಕೂ ಚಿನ್ನವೇ. ಈಗ ನೋಡಿ ಎಲ್ಲ ಬರಿದಾಗಿದೆ...’ ನೋವಿನ ಭಾವದೊಂದಿಗೆ ನಿಟ್ಟುಸಿರುಬಿಟ್ಟರು ಕೊಳ್ಳೇಗಾಲದ ರೈತ ಸಿದ್ದಪ್ಪ.

ಇದು ‘ಹೊನ್ನ ಹೊಳೆ’ಯ ಜಲಸಮೃದ್ಧಿಯಲ್ಲಿ ಚಿನ್ನದ ಬೆಳೆ ಬೆಳೆದ ಈ ಭಾಗದ ಎಲ್ಲ ರೈತರ ಮಾತೂ ಹೌದು. ಮರಳು ದಂಧೆಗೆ ತನ್ನ ನೈಜ ಸ್ವರೂಪವನ್ನೇ ಕಳೆದುಕೊಂಡು ಬರಿದಾಗಿದ್ದ ಹೊನ್ನಹೊಳೆಯಲ್ಲಿ ಏಳು ವರ್ಷದ ಬಳಿಕ ಮತ್ತೆ ನೀರು ಹರಿದಿದೆ. ಆದರೆ ಅದಕ್ಕೆ ತನ್ನ ಹಳೆಯ ವೈಭೋಗವನ್ನು ಮತ್ತೆ ತುಂಬಿಕೊಳ್ಳುವ ಶಕ್ತಿಯಿಲ್ಲ. ಚರಿತ್ರೆಯ ಗಳಿಗೆಗಳನ್ನು ಮೆಲುಕು ಹಾಕುವ ಇಲ್ಲಿನ ರೈತರಿಗೆ ಸತತ ಬರಗಾಲದ ಹೊಡೆತದಿಂದ ಈಗಲಾದರೂ ಮುಕ್ತಿ ಸಿಗಬಹುದು ಎಂಬ ಭರವಸೆ ಮೂಡಿದೆ.

ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ನದಿಗೆ ಯಳಂದೂರು, ಕೊಳ್ಳೇಗಾಲ ತಾಲ್ಲೂಕು ಪ್ರದೇಶಗಳಲ್ಲಿ ಕರೆಯುವುದು ಹೊನ್ನ ಹೊಳೆ ಎಂದು. ಈ ಎರಡೂ ಹೆಸರುಗಳು ಒಂದೇ ಅರ್ಥ ಧ್ವನಿಸಿದರೂ, ಹೊನ್ನ ಹೊಳೆ ಎಂಬ ಹೆಸರೇ ಈ ಭಾಗದ ರೈತರಿಗೆ ಹೆಚ್ಚು ಆಪ್ತ.

ಚಾಮರಾಜನಗರದಿಂದ ಸತ್ಯಮಂಗಲಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ಎಡಭಾಗದಲ್ಲಿ ಸುವರ್ಣಾವತಿ ಇದ್ದರೆ ಇನ್ನೊಂದು ಮಗ್ಗುಲಲ್ಲಿ ಚಿಕ್ಕಹೊಳೆ ಜಲಾಶಯವಿದೆ. ಅವಳಿ ಜಲಾಶಯ ಎಂದೇ ಹೆಸರಾಗಿರುವ ಈ ಜಲಾಶಯಗಳ ಒಡಲು ತುಂಬಿರುವುದರಿಂದ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಅಂತರ್ಜಲ ವೃದ್ಧಿಯಾಗಿ ಕುಡಿಯಲು ಮತ್ತು ಕೃಷಿಗೆ ಯಥೇಚ್ಛ ನೀರು ಸಿಗಲಿದೆ.

ರಾಜ್ಯದ ಇತರೆ ಪ್ರಮುಖ ಜಲಾಶಯಗಳಿಗೆ ಹೋಲಿಸಿದರೆ ಈ ಅವಳಿ ಜಲಾಶಯಗಳ ನೀರು ಸಂಗ್ರಹಣೆ ಸಾಮರ್ಥ್ಯ ತೀರಾ ಕಡಿಮೆ. ಆದರೆ, ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಗೆ ಇವು ಜೀವನಾಡಿಯಾಗಿವೆ.

ತಮಿಳುನಾಡಿನ ದಿಂಬಂನಿಂದ ಬೇಡುಗುಳಿ, ಹಾಸನೂರು ಮೂಲಕ ಹಾದು ಬರುವ ಈ ನದಿಗೆ ನಿರೆದುರ್ಗಿ ಹಳ್ಳ ಮತ್ತು ಅರೈಕದಿ ಹಳ್ಳ ಎಂಬೆರಡು ಜಲಮೂಲಗಳು ಬೂದಿಪಡಗದ ಬಳಿ ಸೇರಿಕೊಳ್ಳುತ್ತಿದ್ದವು. ಬೆಟ್ಟಗುಡ್ಡ, ಅರಣ್ಯ ಪ್ರದೇಶಗಳೊಟ್ಟಿಗೆ ಸಂವಾದಿಸುತ್ತಾ ಬರುವ ಸುವರ್ಣಾವತಿ ತನ್ನೊಟ್ಟಿಗೆ ಫಲವತ್ತಾದ ಮಣ್ಣನ್ನು ಹೊತ್ತು ತರುತ್ತಿತ್ತು. ಪ್ರತಿ ಮಳೆಗಾಲದಲ್ಲಿ ನೆರೆ ಉಕ್ಕಿ ಇಳಿದ ಬಳಿಕ ಕೃಷಿ ಚಟುವಟಿಕೆ ಗರಿಗೆದರುತ್ತಿತ್ತು. ಆ ನೆಲದಲ್ಲಿ ಸಮೃದ್ಧ ಬೆಳೆ ತುಂಬಿಕೊಳ್ಳುತ್ತಿತ್ತು. ಆ ಕಾರಣಕ್ಕಾಗಿಯೇ ಇದು ಹೊನ್ನ ಹೊಳೆ ಮತ್ತು ಸುವರ್ಣಾವತಿ ಎಂಬ ಹೆಸರು ಪಡೆದದ್ದು. ಈಗ ಈ ಕೃಷಿ ಸಿರಿವಂತಿಕೆ ಇತಿಹಾಸದ ಪುಟ ಸೇರಿಕೊಂಡಿದೆ.

ಈ ಭಾಗದಲ್ಲಿ ಮುಂಗಾರಿಗಿಂತ ಹಿಂಗಾರು ಹಂಗಾಮಿನ ಈಶಾನ್ಯ ಮಾರುತಗಳೇ ಪ್ರಭಾವಶಾಲಿ. ಅಕ್ಟೋಬರ್‌ ವೇಳೆಗೆ ಸುವರ್ಣಾವತಿಯಲ್ಲಿ ನೆರೆ ಉಕ್ಕುತ್ತಿತ್ತು. ಬ್ರಿಟಿಷರ ಕಾಲಾವಧಿಯಲ್ಲಿಯೇ ಈ ನದಿಗೆ ಅಟ್ಟುಗುಳಿಪುರದಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ಆರಂಭಿಸಲಾಗಿತ್ತು. ಕೊನೆಗೆ ಅನುಮೋದನೆ ದೊರೆತಿದ್ದು 1976ರಲ್ಲಿ.

ಸಮುದ್ರಮಟ್ಟದಿಂದ 2,455 ಅಡಿ ಎತ್ತರವಿರುವ ಜಲಾಶಯಕ್ಕೆ 1.259 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯವಿದೆ. ಸುಮಾರು 7,000 ಎಕರೆ ಪ್ರದೇಶಕ್ಕೆ ಇದು ನೀರು ಉಣಿಸುತ್ತದೆ. ಎಡದಂಡೆ ನಾಲೆ 400 ಎಕರೆ ಪ್ರದೇಶಕ್ಕೆ ವ್ಯಾಪಿಸಿದ್ದರೆ, ಬಲದಂಡೆ ಸುಮಾರು 6,600 ಕೃಷಿ ಭೂಮಿಗೆ ನೀರು ನೀಡುತ್ತದೆ.

ಮಲ್ಲದೇವನಹಳ್ಳಿ, ಪುಟ್ಟನಕೆರೆ, ನಾಗವಳ್ಳಿಕೆರೆ, ಹೆಬ್ಬಳಕೆರೆ, ಹೊಮ್ಮ ಕೆರೆ, ಸರಗೂರು ಮೋಳೆ ಕೆರೆ, ದೊಡ್ಡಕೆರೆ, ಚಿಕ್ಕಕೆರೆ ಮುಂತಾದ 13 ಪ್ರಮುಖ ಕೆರೆಗಳಿಗೆ ಜಲಾಶಯದಿಂದ ನೀರು ಹರಿಸಲಾಗುತ್ತದೆ.

ಜಲಾಶಯ ಬಹುತೇಕ ಭರ್ತಿಯಾದಾಗ ನಾಲೆಗಳಿಂದ ನೀರು ಬಿಡಲಾಗುತ್ತದೆ. ಆದರೆ, ‘ಹೊನ್ನಹೊಳೆ’ಯ ಜೀವಂತಿಕೆಯನ್ನು ಕೊನೆಯ ಸಲ ಕಂಡದ್ದು 2010ರಲ್ಲಿ. ಜಲಾಶಯದ ಮೂರೂ ಕ್ರೆಸ್ಟ್‌ಗೇಟ್‌ಗಳನ್ನು ತೆರೆದು ನೀರು ಹೊರಬಿಡುವ ಪ್ರಮೇಯವೇ ಏಳು ವರ್ಷಗಳಿಂದ ಉದ್ಭವಿಸಿರಲಿಲ್ಲ.

ಹೊಂಗಲವಾಡಿ, ಕುಂಬೇಶ್ವರ ಕಾಲೊನಿ, ಕಾಳಿಕಾಂಬ ಕಾಲೊನಿ, ಆಲೂರು, ಹುಲ್ಲೂರು, ದಿಡ್ಡಾಪುರ, ನಾಗವಳ್ಳಿ, ನಲ್ಲೂರು, ಅಮ್ಮನಪುರ, ಕಾಗಲವಾಡಿ ಮುಂತಾದ ಗ್ರಾಮಗಳ ಮೂಲಕ ಹೊನ್ನಹೊಳೆ ಹರಿಯುತ್ತದೆ. ಹಾಗೆ ಹರಿದ ಹೊಳೆ ಕೊಳ್ಳೇಗಾಲದ ಹಳೆ ಹಂಪಾಪುರ ಬಳಿ ಕಾವೇರಿ ಒಡಲು ಸೇರಿಕೊಳ್ಳುತ್ತದೆ. ಅಲ್ಲಿಂದ ಮರಳಿ ತವರೂರು ತಮಿಳುನಾಡಿಗೆ ತಲುಪುತ್ತದೆ.

ಅಡಿಕೆ, ತೆಂಗು ಮುಂತಾದ ದೀರ್ಘಾವಧಿ ವಾಣಿಜ್ಯ ಬೆಳೆಗಳ ಜತೆ, ಭತ್ತ, ರಾಗಿ, ಜೋಳ, ಉದ್ದು, ನೆಲಗಡಲೆ, ಹೆಸರು ಮತ್ತು ತರಕಾರಿ ಬೆಳೆಗಳನ್ನು ಈ ಭಾಗದ ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಮಳೆಯಿಲ್ಲದೆ ನಾಲೆಗಳಲ್ಲಿಯೂ ನೀರು ಹರಿಯದ ಕಾರಣ ಇಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಮಳೆಯಾಗುತ್ತದೆ ಎಂಬ ನಂಬಿಕೆಯೊಂದಿಗೆ ಭತ್ತ ಬಿತ್ತನೆ ಮಾಡಿ ಕೈಸುಟ್ಟುಕೊಂಡಿದ್ದರು.

ಚಿಕ್ಕಹೊಳೆಯ ಸೊಬಗು: ಚಿಕ್ಕಹೊಳೆಯ ಮೂಲ ಕೂಡ ತಮಿಳುನಾಡು. ಚಿಕ್ಕ–ಚಿಕ್ಕ ಹಳ್ಳ ತೊರೆಗಳು ಸೇರಿ ನದಿಯ ಸ್ವರೂಪ ಪಡೆದುಕೊಳ್ಳುತ್ತದೆ. ಈ ನೀರು ರಾಜ್ಯದ ಗಡಿಯೊಳಗೆ ಬರಲು ನೂರೆಂಟು ಅಡ್ಡಿಗಳಿವೆ. ತಮಿಳುನಾಡಿನಲ್ಲಿ ಹೆಜ್ಜೆ ಹೆಜ್ಜೆಗೂ ಇದಕ್ಕೆ ಚೆಕ್‌ಡ್ಯಾಂಗಳನ್ನು ನಿರ್ಮಿಸಲಾಗಿದೆ. ಇವೆಲ್ಲವೂ ತುಂಬಿ ಹರಿದರೆ ಮಾತ್ರ ಚಿಕ್ಕಹೊಳೆಗೆ ಜಲಭಾಗ್ಯ. 2,474 ಅಡಿ ಎತ್ತರವಿರುವ ಚಿಕ್ಕಹೊಳೆಯ ನೀರು ಸಂಗ್ರಹ ಸಾಮರ್ಥ್ಯ 0.376 ಟಿಎಂಸಿ ಅಡಿ. 4,500 ಎಕರೆ ಪ್ರದೇಶಕ್ಕೆ ಇಲ್ಲಿಂದ ನೀರು ದೊರಕುತ್ತದೆ.

ಚಿಕ್ಕಹೊಳೆಯಿಂದ ಸುವರ್ಣಾವತಿಗೆ ಸಂಪರ್ಕ ನಾಲೆಯಿದ್ದು, ಜಲಾಶಯ ಭರ್ತಿಯಾದಾಗ ಸುವರ್ಣಾವತಿಗೆ ಹೆಚ್ಚುವರಿ ನೀರನ್ನು ಹರಿಸಲಾಗುತ್ತದೆ. ಈ ಜಲಾಶಯದ ಗೇಟ್‌ಗಳನ್ನೂ ಏಳು ವರ್ಷದ ಬಳಿಕ ತೆರೆಯಲಾಗಿದೆ. ಇಲ್ಲಿಂದ ಹರಿಯುವ ನೀರು ಸಿದ್ದಯ್ಯನಪುರ ಗ್ರಾಮದ ಬಳಿ ಸುವರ್ಣಾವತಿಯನ್ನು ಕೂಡಿಕೊಳ್ಳುತ್ತದೆ.

ಹೊನ್ನ ಹೊಳೆಗೆ ಕನ್ನ!: ಅಟ್ಟುಗುಳಿಪುರದಿಂದ ಸುಮಾರು 55 ಕಿ.ಮೀವರೆಗೆ ಹೊನ್ನ ಹೊಳೆಯ ವ್ಯಾಪ್ತಿಯಿದೆ. ನೀರು ಹರಿಯದ ಈ ಅವಧಿಯಲ್ಲಿ ಮರಳಿಗಾಗಿ ಮನಬಂದಂತೆ ನದಿ ಒಡಲನ್ನು ದೋಚಲಾಗಿದೆ. ಫಲವತ್ತಾದ ಮಣ್ಣು ತರುತ್ತಿದ್ದ ಹೊಳೆಯೀಗ ತ್ಯಾಜ್ಯ ಬಿಸಾಕುವ ಸ್ಥಳವಾಗಿ ಮಾರ್ಪಟ್ಟಿದೆ. ಇನ್ನು ಕೆಲವೆಡೆ ಹೂಳು ಮತ್ತು ಮುಳ್ಳಿನ ಪೊದೆಗಳು ದಟ್ಟವಾಗಿ ತುಂಬಿಕೊಂಡಿವೆ.

ನದಿ ಜೋಡಣೆಯ ಹೋರಾಟಗಳು ಹುಟ್ಟುಪಡೆಯುತ್ತಿರುವ ಈ ಹೊತ್ತಿನಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿರುವ ಇಂತಹ ಸಣ್ಣ ಹೊಳೆಗಳು, ನಿರ್ಲಕ್ಷ್ಯಕ್ಕೆ ಒಳಗಾದ ಕೆರೆಗಳ ಉಳಿವು ಚಾಮರಾಜನಗರದಂತಹ ಬರಪೀಡಿತ ಜಿಲ್ಲೆಗೆ ಭವಿಷ್ಯದ ದೃಷ್ಟಿಯಿಂದ ತುರ್ತು ಅಗತ್ಯವೂ ಹೌದು.

**

ಕೆರೆಗಳಿಗೆ ನೀರು

ಚಾಮರಾಜನಗರ ಜಿಲ್ಲೆಯ 200ಕ್ಕೂ ಹೆಚ್ಚು ಕೆರೆಗಳ ಪೈಕಿ 71 ಕೆರೆಗಳಿಗೆ ಕಬಿನಿ ನದಿಯ ನೀರನ್ನು ತುಂಬಿಸುವ ಯೋಜನೆ ನಡೆದಿದೆ. ಇದು ಬಹುತೇಕ ಯಶಸ್ವಿಯೂ ಆಗಿದೆ. ಕೆರೆಗಳ ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ಸಾಕಷ್ಟು ನೀರು ಲಭ್ಯವಾಗುತ್ತಿದೆ. ಬತ್ತಿದ್ದ ಕೊಳವೆಬಾವಿಗಳಲ್ಲಿ ಮತ್ತೆ ನೀರು ತುಂಬಿಕೊಂಡಿದೆ. ಈ ಯೋಜನೆ ಪರಿಣಾಮಕಾರಿಯಾದ ಕಾರಣ ತಮ್ಮೂರಿನ ಕೆರೆಗಳನ್ನು ತುಂಬಿಸುವಂತೆ ರೈತರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ದುಂಬಾಲು ಬೀಳುತ್ತಿದ್ದಾರೆ.

**

ಕಾಡಿದ್ದರೂ ಮಳೆಯಿಲ್ಲ!

ಭೂಪ್ರದೇಶದ ಶೇ 48ರಷ್ಟು ಭಾಗ ಅರಣ್ಯ ಸಂಪತ್ತು ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದ್ದರೂ, ಮಳೆ ವಿಚಾರದಲ್ಲಿ ಕೊರತೆ ಅನುಭವಿಸುತ್ತಲೇ ಇದೆ. ಕಾಡಿಲ್ಲದೆ ಸುಡುಬಿಸಿಲಿನಿಂದ ತತ್ತರಿಸುವ ಜಿಲ್ಲೆಗಳಿಗೂ ಚಾಮರಾಜನಗರಕ್ಕೂ ಅಂತಹ ವ್ಯತ್ಯಾಸವಿಲ್ಲ.

ಈ ಬಾರಿ ಏಪ್ರಿಲ್‌ ಮತ್ತು ಮೇ ಆರಂಭದಲ್ಲಿ ಪೂರ್ವ ಮುಂಗಾರು ಚೆನ್ನಾಗಿ ಆಗಿದ್ದರಿಂದ ರೈತರು ಜೋಳ, ಸೂರ್ಯಕಾಂತಿ ಮುಂತಾದವುಗಳನ್ನು ಉತ್ಸಾಹದಿಂದ ಬಿತ್ತಿದ್ದರು. ಆದರೆ, ಜೂನ್‌ ಮತ್ತು ಜುಲೈನಲ್ಲಿ ಮುಂಗಾರು ಕೈಕೊಟ್ಟಿದ್ದು, 52,688 ಹೆಕ್ಟೇರ್‌ ಕೃಷಿಭೂಮಿಯಲ್ಲಿ ಬೆಳೆ ನಷ್ಟವಾಗಿತ್ತು. ಆಗಸ್ಟ್‌ನಿಂದ ಉತ್ತಮ ಮಳೆಯಾಗುತ್ತಿದ್ದು, ಹಿಂಗಾರು ಅಬ್ಬರಿಸುತ್ತಿದೆ.

ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 792 ಮಿ.ಮೀ. ಈ ವರ್ಷ ಅಕ್ಟೋಬರ್‌ ಮೊದಲ ವಾರದವರೆಗೆ 877 ಮಿ.ಮೀ ಮಳೆ ಸುರಿದಿದೆ. ನಾಲ್ಕೈದು ವರ್ಷಗಳಿಂದ ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಜನರಿಗೆ ವರ್ಷಧಾರೆ ಖುಷಿ ತಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT