ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸು ಚಿಗುರಿಸಿದ ಚಿತ್ರಾವತಿ

Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ ನಂದಿ ಪಂಚಗಿರಿ ಶ್ರೇಣಿಯ ತಪ್ಪಲಲ್ಲಿ ಎಂಟು ನದಿಗಳು ಉಕ್ಕಿ ಹರಿಯುತ್ತಿದ್ದವು’ ಎಂದು ಹೇಳುತ್ತಿದ್ದ ಹಿರಿಯರ ಅನುಭವದ ನುಡಿ ಬಯಲು ಸೀಮೆಯ ಭಾಗವಾದ ಚಿಕ್ಕಬಳ್ಳಾಪುರ ಜಿಲ್ಲೆಯ ಇಂದಿನ ತಲೆಮಾರಿನವರಿಗೆ ‘ಅತಿಶಯೋಕ್ತಿ’ ಎನ್ನಿಸುವಷ್ಟರ ಮಟ್ಟಿಗೆ ಅರ್ಥ ಪಡೆದಿದೆ.

ದಶಕಗಳ ಹಿಂದೆ ವರುಣನ ಆರ್ಭಟಕ್ಕೆ ಧುಮ್ಮಿಕ್ಕುತ್ತಿದ್ದ ಪಾಲಾರ್, ಪಾಪಾಗ್ನಿ, ಚಿತ್ರಾವತಿ, ನಂಗ್ಲಿ, ಕುಂದಾರ, ಕುಶಾವತಿ, ಮಾರ್ಕಂಡೇಯ, ಪೆನ್ನಾರ್, ಅರ್ಕಾವತಿ, ವೃಷಭಾವತಿ, ನಂದನಾಮ್, ಉತ್ತರ ಮತ್ತು ದಕ್ಷಿಣ ಪಿನಾಕಿನಿ ನದಿಗಳು ತಮ್ಮ ಅಸ್ಮಿತೆ ಕಳೆದುಕೊಂಡು ಜಿಲ್ಲೆಯ ಇತಿಹಾಸದ ಪುಟ ಸೇರಿದ್ದೇ ಇದಕ್ಕೆ ಕಾರಣ.

ಆದರೆ, ಬಾಯಾರಿದ ಈ ನಾಡಿನಲ್ಲಿ ಈ ಬಾರಿ ವರುಣನ ಕೃಪೆ ಹೇಗಾಗಿದೆ ಎಂದರೆ ಚಿತ್ರಾವತಿ ಮತ್ತು ವಂಡ್‌ಮಾನ್‌ ಜಲಾಶಯಗಳು ತುಂಬಿ ಹರಿದಿವೆ. ಜಕ್ಕಲಮಡಗು ಜಲಾಶಯ ಕೂಡ ಒಡಲು ತುಂಬಿಕೊಂಡು ಉಕ್ಕಿದೆ. ಸನಿಹದ ಇತಿಹಾಸದಲ್ಲಿ ಇಷ್ಟೊಂದು ಜಲ ಸಮೃದ್ಧಿಯನ್ನು ಕಾಣದಿದ್ದ ಜಿಲ್ಲೆಯ ಜನ ತಂಡೋಪ ತಂಡವಾಗಿ ಈ ಜಲಾಶಯಗಳಿಗೆ ಬಂದು ಅಲ್ಲಿನ ನೋಟಗಳನ್ನು ಕಣ್ತುಂಬಿಕೊಳ್ಳುತ್ತಿದ್ದು, ಅವರ ಹರ್ಷಕ್ಕೂ ಕೋಡಿ ಬಿದ್ದಿದೆ.

ಸಾವಿರಾರು ಕೆರೆಗಳ ಬೀಡು ಎಂದು ಹೆಸರಾಗಿದ್ದರೂ ಮಳೆರಾಯ ತೋರಿದ ಮುನಿಸಿನಿಂದ ಮುದುಡಿಹೋಗಿದ್ದ ಇಲ್ಲಿನ ಬದುಕು ಮತ್ತೆ ಅರಳುತ್ತಿರುವ ದ್ಯೋತಕವಾಗಿ ಈಗಿನ ನೋಟಗಳು ಕಾಣುತ್ತವೆ. ಮುಂಗಾರಿನಲ್ಲಿ ಆಕಾಶ ದಿಟ್ಟಿಸಿ ನಿಟ್ಟುಸಿರು ಬಿಡುವುದನ್ನು ರೂಢಿಮಾಡಿಕೊಂಡಿದ್ದ ಜಿಲ್ಲೆಯ ರೈತರ ಮೊಗದಲ್ಲಿ ತುಂಬಿದ ಕೆರೆ–ಕಟ್ಟೆಗಳು ಮಂದಹಾಸ ಮೂಡಿಸಿವೆ. ಜಮೀನುಗಳಿಗೆ ಹೊಸ ಕಸುವು ಬಂದಿದೆ.

ಪಂಚಗಿರಿ ಶ್ರೇಣಿಯ ತಪ್ಪಲು ಸದ್ಯ ಮಲೆನಾಡಿನ ಸೊಬಗು ಹೊದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜಿಲ್ಲೆಯಲ್ಲಿ 1,620 ಕೆರೆಗಳಿವೆ. ಈಗಾಗಲೇ 280 ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದು, ಇನ್ನೂ ನೂರಾರು ಕೆರೆಗಳು ಅದೇ ಹಾದಿಯಲ್ಲಿವೆ.

ಆಂಧ್ರಪ್ರದೇಶದ ಗಡಿಗೆ ಅಂಟಿಕೊಂಡಿರುವ ಬಾಗೇಪಲ್ಲಿ ಮತ್ತು ಸಮೀಪದಲ್ಲಿರುವ ಗುಡಿಬಂಡೆ ತಾಲ್ಲೂಕುಗಳ 190 ಗ್ರಾಮಗಳ ಜನರಿಗೆ ‘ಬಹುಗ್ರಾಮ’ ಯೋಜನೆಯಡಿ ಶುದ್ಧ ಕುಡಿಯುವ ನೀರು ನೀಡಬೇಕೆನ್ನುವ ಎರಡು ಪ್ರಮುಖ ಯೋಜನೆಗಳು ಮಳೆರಾಯ ಮುನಿಸಿನಿಂದ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದವು. ಈ ಬಾರಿ ಚಿತ್ರಾವತಿ ಮತ್ತು ವಂಡ್‌ಮಾನ್‌ ಜಲಾಶಯಗಳು ತುಂಬಿ ಹರಿದಿರುವ ಕಾರಣ ಬಹುಗ್ರಾಮಗಳ ಜನರಲ್ಲಿ ಸದ್ಯ ಹೊಸ ಆಸೆ ಹರಿದಾಡುತ್ತಿದೆ.

ಚಿತ್ರಾವತಿ ಜಲಾಶಯದಿಂದ ಕುಡಿಯುವ ನೀರು ಪಡೆಯಲು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ಚೆಂಡೂರು, ದಪರ್ತಿ, ಹಂಪಸಂದ್ರ, ಕಾರ್ಕೂರು, ಪರಗೋಡು, ತಟ್ಟಹಳ್ಳಿ, ಶ್ರೀನಿವಾಸಪುರ ಸೇರಿದಂತೆ ನೂರಾರು ಗ್ರಾಮಗಳ ಜನರಲ್ಲಿ ಸಂತಸದ ಕೋಡಿ ಹರಿದಿದೆ. ಇನ್ನು ನೀರು ಹರಿಯಬೇಕಷ್ಟೆ.

‘ಚಿತ್ರಾವತಿ ಜಲಾಶಯ ಒಂದು ಬಾರಿ ತುಂಬಿದರೆ ಕನಿಷ್ಠ ಮೂರ್ನಾಲ್ಕು ವರ್ಷಗಳ ಕಾಲ ನಿರಾಂತಕವಾಗಿ ನೀರು ಪೂರೈಸಬಹುದು. ಸದ್ಯ ಯೋಜನೆಯ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಚಿತ್ರಾವತಿ ನೀರಿನ ಸಂಪರ್ಕ ಬೆಸೆದು, ಅಲ್ಲಲ್ಲಿ ಸಂಸ್ಕರಣಾ ಘಟಕಗಳು, ಓವರ್‌ ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾಡಳಿತ ಇನ್ನು ತಡಮಾಡದೆ ನೀರು ಶುದ್ಧೀಕರಿಸಿ ಪೂರೈಸಬೇಕು’ ಎನ್ನುವ ಆಗ್ರಹ ಜಿಲ್ಲೆಯ ನಾಗರಿಕರದ್ದು.

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕೆರೆಗಳು ತುಂಬಿವೆ. ಇದರಿಂದಾಗಿ ಬತ್ತಿದ ಕೊಳವೆ ಬಾವಿಗಳಲ್ಲಿ ಮತ್ತೆ ನೀರು ನೋಡುವ ತವಕ ಹೆಚ್ಚಿದೆ.
ಉಕ್ಕಿದ ಜಕ್ಕಲಮಡಗು: ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರುಣಿಸುವ ಜಕ್ಕಲಮಡಗು ಜಲಾಶಯ ಸುಮಾರು ಹತ್ತು ವರ್ಷಗಳ ಬಳಿಕ ಮೊದಲ ಬಾರಿ ಕೋಡಿ ಹರಿದಿದೆ.

ಜಕ್ಕಲಮಡುಗು ಕೆರೆಗೆ 1955ರಲ್ಲಿ ವಿಶ್ವೇಶ್ವರಯ್ಯ ಅವರು ಮೊದಲ ಬಾರಿಗೆ ಚಿಕ್ಕ ಆಣೆಕಟ್ಟೆ ಕಟ್ಟಿದ್ದರು. ಮೊದಲಿದ್ದ ಕೆರೆ ಹೋಗಿ, 4,390 ದಶಲಕ್ಷ ಲೀಟರ್‌ ಸಾಮರ್ಥ್ಯದ 172 ಎಕರೆ ವ್ಯಾಪ್ತಿಯ ಜಕ್ಕಲಮಡಗು ಜಲಾಶಯವಾಗಿ ಮಾರ್ಪಟ್ಟಿತ್ತು. ಕಾಲಾಂತರದಲ್ಲಿ ಇಲ್ಲಿನ ನೀರನ್ನು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಹರಿಸಬೇಕು ಎನ್ನುವ ಪ್ರಸ್ತಾವ ಬಂದಾಗ ಅಣೆಕಟ್ಟೆಯನ್ನು 49 ಅಡಿ ಎತ್ತರಕ್ಕೆ ಹೆಚ್ಚಿಸಲಾಗಿತ್ತು. ಹೊಸ ಅಣೆಕಟ್ಟೆ ಕಟ್ಟಿದಂದಿನಿಂದ ಈವರೆಗೆ ಈ ಜಲಾಶಯ ಕೋಡಿ ಹರಿದಿರಲಿಲ್ಲ. ‘ಜಕ್ಕಲಮಡುಗು ಜಲಾಶಯದಿಂದ ಚಿಕ್ಕಬಳ್ಳಾಪುರ ನಗರಕ್ಕೆ ನಿತ್ಯ 30 ಲಕ್ಷ ಲೀಟರ್‌, ದೊಡ್ಡಬಳ್ಳಾಪುರಕ್ಕೆ 10 ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತದೆ. ಸದ್ಯ ನಮಗೆ ದೇವರು ಯಥೇಚ್ಛವಾಗಿ ನೀರು ಕೊಟ್ಟಿದ್ದಾನೆ. ಹೀಗಾಗಿ ಎರಡು ನಗರಗಳಿಗೆ ಸುಮಾರು ಎರಡೂವರೆ ವರ್ಷಗಳವರೆಗೆ ಕುಡಿಯುವ ನೀರಿನ ಚಿಂತೆ ಇಲ್ಲ’ ಎಂಬ ಸಮಾಧಾನ ಆಡಳಿತಗಾರರದ್ದಾಗಿದೆ.

**

ಉಕ್ಕಿದ ಜಕ್ಕಲಮಡಗು
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರುಣಿಸುವ ಜಕ್ಕಲಮಡಗು ಜಲಾಶಯ ಸುಮಾರು ಹತ್ತು ವರ್ಷಗಳ ಬಳಿಕ ಮೊದಲ ಬಾರಿ ಕೋಡಿ ಹರಿದಿದೆ.

ಜಕ್ಕಲಮಡುಗು ಕೆರೆಗೆ 1955ರಲ್ಲಿ ವಿಶ್ವೇಶ್ವರಯ್ಯ ಅವರು ಮೊದಲ ಬಾರಿಗೆ ಚಿಕ್ಕ ಆಣೆಕಟ್ಟೆ ಕಟ್ಟಿದ್ದರು. ಮೊದಲಿದ್ದ ಕೆರೆ ಹೋಗಿ, 4,390 ದಶಲಕ್ಷ ಲೀಟರ್‌ ಸಾಮರ್ಥ್ಯದ 172 ಎಕರೆ ವ್ಯಾಪ್ತಿಯ ಜಕ್ಕಲಮಡಗು ಜಲಾಶಯವಾಗಿ ಮಾರ್ಪಟ್ಟಿತ್ತು. ಕಾಲಾಂತರದಲ್ಲಿ ಇಲ್ಲಿನ ನೀರನ್ನು ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಹರಿಸಬೇಕು ಎನ್ನುವ ಪ್ರಸ್ತಾವ ಬಂದಾಗ ಅಣೆಕಟ್ಟೆಯನ್ನು 49 ಅಡಿ ಎತ್ತರಕ್ಕೆ ಹೆಚ್ಚಿಸಲಾಗಿತ್ತು. ಹೊಸ ಅಣೆಕಟ್ಟೆ ಕಟ್ಟಿದಂದಿನಿಂದ ಈವರೆಗೆ ಈ ಜಲಾಶಯ ಕೋಡಿ ಹರಿದಿರಲಿಲ್ಲ.

‘ಜಕ್ಕಲಮಡುಗು ಜಲಾಶಯದಿಂದ ಚಿಕ್ಕಬಳ್ಳಾಪುರ ನಗರಕ್ಕೆ ನಿತ್ಯ 30 ಲಕ್ಷ ಲೀಟರ್‌, ದೊಡ್ಡಬಳ್ಳಾಪುರಕ್ಕೆ 10 ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತದೆ. ಸದ್ಯ ನಮಗೆ ದೇವರು ಯಥೇಚ್ಛವಾಗಿ ನೀರು ಕೊಟ್ಟಿದ್ದಾನೆ. ಹೀಗಾಗಿ ಎರಡು ನಗರಗಳಿಗೆ ಸುಮಾರು ಎರಡೂವರೆ ವರ್ಷಗಳವರೆಗೆ ಕುಡಿಯುವ ನೀರಿನ ಚಿಂತೆ ಇಲ್ಲ’ ಎಂಬ ಸಮಾಧಾನ ಆಡಳಿತಗಾರರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT