7

ಜೀವನದಿ ಜೀವತಾಳುವ ಆ ಕ್ಷಣ...

Published:
Updated:
ಜೀವನದಿ ಜೀವತಾಳುವ ಆ ಕ್ಷಣ...

ಕಾವೇರಿ ಕೊಡಗಿನ ಕಾವೇರಿ

ಕಾವೇರಿ ನೀ ಬೆಡಗಿನ ವೈಯಾರಿ

ನೀ ನಡೆವ ನೆಲವೆಲ್ಲಾ ಪುಣ್ಯದ ಸನ್ನಿಧಿ’

–ಇದು ಒಂದು ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಚರಿತ್ರೆ ನಿರ್ಮಿಸಿದ್ದ ಪುಟ್ಟಣ್ಣ ಕಣಗಾಲ್ ಅವರ ‘ಶರಪಂಜರ’ ಚಿತ್ರದಲ್ಲಿ ಕಾವೇರಿ ನದಿಯ ಭವ್ಯತೆಯನ್ನು ಬಣ್ಣಿಸುವ ಹಾಡು. ಈ ಹಾಡಷ್ಟೇ ಸಾಕೇನೋ ತಾಯಿ ಕಾವೇರಿ ನದಿಯ ಮಹತ್ವ ಅರಿಯಲು! ಇಂಥ ಕಾವೇರಿ ನದಿ ಹುಟ್ಟಿ ಹರಿಯುವ ಕೊಡಗಿನ ತಲಕಾವೇರಿ ಪುಣ್ಯಸ್ಥಳ.

ಕೊಡಗಿನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ವರ್ಷಕ್ಕೊಮ್ಮೆ ತುಲಾ ಸಂಕ್ರಮಣದ ಪುಣ್ಯಕಾಲದಲ್ಲಿ ತೀರ್ಥರೂಪಿಣಿಯಾಗಿ ಉದ್ಭವಿಸಿ ತುಂಬಿ ಹರಿಯುವ ಕಾವೇರಿ ಮಾತೆಗೆ ವಿಶೇಷ ಮಹತ್ವ. ಇದು ಕಾವೇರಿ ತುಲಾ ಸಂಕ್ರಮಣ ಜಾತ್ರೆ ಎಂದೇ ಜನಪ್ರಿಯ. ಕೊಡಗಿನವರಷ್ಟೇ ಅಲ್ಲದೆ ನಾಡಿನ ಹಾಗೂ ದೇಶ-ವಿದೇಶಗಳ ಜನರೆಲ್ಲಾ ಇಲ್ಲಿ ಸಂಗಮಿಸಿ ಕಾವೇರಿ ತೀರ್ಥದಲ್ಲಿ ಮುಳುಗೆದ್ದು ಪುನೀತರಾಗುವ ತುಲಾ ಸಂಕ್ರಮಣ ಜಾತ್ರೆಯನ್ನು ನೋಡುವುದೇ ಆನಂದ.

ಹಸಿರು ಕಾನನ, ಬೆಟ್ಟಗುಡ್ಡಗಳಿಂದ ಆವೃತಗೊಂಡು ಸದಾ ಮಂಜಿನ ಮುಸುಕಿನೊಂದಿಗೆ ಆಸ್ತಿಕ-ನಾಸ್ತಿಕರೆನ್ನದೆ ಎಲ್ಲರನ್ನೂ ತನ್ನತ್ತ ಕೈಬೀಸಿ ಕರೆಯುವ ತಲಕಾವೇರಿಯ ಪ್ರಕೃತಿಯ ತಾಣದಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಹರಿಯುವ ಮೂಲಕ ಭಕ್ತರನ್ನು ಪುನೀತಗೊಳಿಸುತ್ತಾಳೆ. ಮಡಿಕೇರಿಯಿಂದ 42 ಕಿ.ಮೀ. ದೂರದಲ್ಲಿರುವ ತಲಕಾವೇರಿ ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿದ್ದು ಸಮುದ್ರ ಮಟ್ಟದಿಂದ ಸುಮಾರು ಐದು ಸಾವಿರ ಅಡಿ ಎತ್ತರದಲ್ಲಿದೆ.

ಸಾಮಾನ್ಯವಾಗಿ ತಲಕಾವೇರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಪುಟ್ಟಕೊಳದಂತಿರುವ ಕಾವೇರಿ ಕುಂಡಿಕೆ ನೋಡಿ ಅಚ್ಚರಿಪಡುತ್ತಾರೆ. ಏಕೆಂದರೆ ಆ ಪುಟ್ಟಕೊಳದಲ್ಲಿ ಉಗಮವಾಗುವ ಕಾವೇರಿ ಬಳಿಕ ಗುಪ್ತಗಾಮಿನಿಯಾಗಿ ಹರಿದು ನಂತರ ಅಲ್ಲಿಂದ ಭಾಗಮಂಡಲ ತಲುಪುತ್ತಿದ್ದಂತೆಯೇ ಬೃಹತ್ ನದಿಯಾಗಿ ಕನ್ನಿಕೆ ಮತ್ತು ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಕೊಡಗಿನ ಸಣ್ಣಪುಟ್ಟ ನದಿಗಳನ್ನು ಕೂಡಿಕೊಂಡು ಲೋಕಪಾವನೆಯಾಗಿ ಸಾಗುತ್ತಾಳೆ.

ಕಾವೇರಿ ತಲಕಾವೇರಿಯಲ್ಲಿ ಹುಟ್ಟಿ ಲೋಕ ಕಲ್ಯಾಣಕ್ಕಾಗಿ ನದಿಯಾಗಿ ಹೇಗೆ ಹರಿದಳು ಎಂಬುದನ್ನು ನೋಡುವುದಾದರೆ ಅದಕ್ಕೊಂದು ಪೌರಾಣಿಕ ಕಥೆ ಜನಮಾನಸದಲ್ಲಿ ಇರುವುದನ್ನು ಕಾಣಬಹುದು. ಪೌರಾಣಿಕ ಕಥೆ ಪ್ರಕಾರ ತಲಕಾವೇರಿ ಸಮೀಪದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರನೆಂಬ ಮುನಿ ವಾಸವಾಗಿದ್ದ. ಅವನಿಗೊಬ್ಬಳು ಪುತ್ರಿ ಬೇಕೆಂಬ ಅಭಿಲಾಷೆ ಉಂಟಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡತೊಡಗಿದ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸ ಪುತ್ರಿ ಲೋಪಾಮುದ್ರೆಯನ್ನು ದತ್ತು ಮಗಳಾಗಿ ನೀಡಿದ. ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆಯತೊಡಗಿದಳು. ಹೀಗೆ ಕವೇರ ಮುನಿಯ ಆಶ್ರಮದಲ್ಲಿ ಬೆಳೆದಿದ್ದರಿಂದ ಆಕೆ ಕಾವೇರಿಯಾದಳು.

ಒಮ್ಮೆ ಕವೇರನ ಆಶ್ರಮಕ್ಕೆ ಬಂದ ಅಗಸ್ತ್ಯ ಮುನಿಗಳು ಕಾವೇರಿಯನ್ನು ಕಂಡು ಮನಸೋತು ಆಕೆಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದರು. ನನ್ನನ್ನು ನೀವು ಉಪೇಕ್ಷಿಸಿ ಎಲ್ಲೂ ಹೋಗಬಾರದು ಹಾಗೊಂದು ವೇಳೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದದ್ದೇ ಆದರೆ ನಾನು ನದಿಯಾಗಿ ಹರಿಯುವುದಾಗಿ ಹೇಳಿದ್ದಳು. ಕಾವೇರಿಯ ಷರತ್ತಿಗೆ ಒಪ್ಪಿದ ಅಗಸ್ತ್ಯ ಮುನಿಗಳು ಆಕೆಯನ್ನು ವಿವಾಹವಾಗಿ ತನ್ನ ಆಶ್ರಮಕ್ಕೆ ಕರೆದೊಯ್ದಿದ್ದರು.

ಒಂದುದಿನ ಬೇಗ ಎದ್ದ ಅಗಸ್ತ್ಯ ಮುನಿಗಳು ನಿದ್ದೆಯಲ್ಲಿದ್ದ ಕಾವೇರಿಯನ್ನು ಹಾಗೇ ಬಿಟ್ಟು ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದರು. ಆದರೆ, ಎಚ್ಚರವಾದಾಗ ಸನಿಹದಲ್ಲಿ ಪತಿ ಇಲ್ಲದಿರುವುದನ್ನು ಕಂಡು ಕೋಪಗೊಂಡ ಕಾವೇರಿ, ಷರತ್ತು ಮೀರಿದ ಪತಿಯಿಂದ ದೂರವಾಗಿ ಅಲ್ಲೇ ಇದ್ದ ಕೊಳಕ್ಕೆ ಧುಮುಕಿ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರಿ, ಅಲ್ಲಿ ಕನ್ನಿಕೆ, ಸುಜ್ಯೋತಿ ನದಿಗಳೊಂದಿಗೆ ಸಂಗಮವಾಗಿ ಮುಂದೆ ಹರಿದಳು ಎಂಬ ಪ್ರತೀತಿ ಇದೆ. ಹೀಗೆ ಲೋಕಕಲ್ಯಾಣಕ್ಕೆ ಹೊರಟ ಕಾವೇರಿ ಪ್ರತಿ ವರ್ಷ ತುಲಾ ಸಂಕ್ರಮಣದಂದು ಬ್ರಹ್ಮಕುಂಡಿಕೆಯಲ್ಲಿ ಜಲರೂಪಿಣಿಯಾಗಿ ದರ್ಶನ ನೀಡುತ್ತಾ ಬಂದಿದ್ದಾಳಂತೆ.

ತಲಕಾವೇರಿಯಲ್ಲಿ ಉಗಮವಾಗಿ ಭಾಗಮಂಡಲ, ಬಲಮುರಿ, ಗುಹ್ಯ, ಕಣಿವೆ ಮೂಲಕ ಕೊಡಗಿನಿಂದ ಹೊರ ಹರಿದು ಬಳಿಕ ರಾಜ್ಯದಲ್ಲಿ ಸುಮಾರು 381 ಕಿ.ಮೀ. ಹರಿದು ಆ ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿ.ಮೀ. ಕ್ರಮಿಸಿ ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತಾಳೆ.

ತಲಕಾವೇರಿಯಲ್ಲಿ ಬ್ರಹ್ಮಕುಂಡಿಕೆಯ ಪಕ್ಕದಲ್ಲಿಯೇ ಸ್ನಾನಕೊಳವಿದ್ದು, ನೂತನವಾಗಿ ವಿವಾಹವಾದವರು ಈ ಸ್ನಾನಕೊಳದಲ್ಲಿ ಕೈ ಕೈ ಹಿಡಿದು ನೀರಿನಲ್ಲಿ ಮೂರು ಬಾರಿ ಮುಳುಗಿ ತಲೆಗೆ ಪವಿತ್ರ ಜಲವನ್ನು ಹಾಕಿಸಿಕೊಂಡರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ.

ಅಗಸ್ತ್ಯೇಶ್ವರ ದೇವಾಲಯದ ಎಡಭಾಗದಲ್ಲಿರುವ ಬ್ರಹ್ಮಗಿರಿ ಬೆಟ್ಟವನ್ನೇರಲು ಸುಮಾರು 500 ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಈ ಮೆಟ್ಟಿಲೇರಿದರೆ ಬ್ರಹ್ಮಗಿರಿಯ ಬೆಟ್ಟದ ಮೇಲ್ಭಾಗವನ್ನು ತಲುಪಬಹುದು. ಇಲ್ಲಿಂದ ನಿಂತು ನೋಡಿದರೆ ಕಂಡು ಬರುವ ನಿಸರ್ಗದ ಸುಂದರದೃಶ್ಯ ಮನಸ್ಸಿಗೆ ಉಲ್ಲಾಸ ನೀಡುತ್ತದೆ. ಅಲ್ಲದೆ ಎದುರಿನ ಬಾಪುರೆ ಬೆಟ್ಟದಲ್ಲಿ ಕೆಟ್ಟು ನಿಂತ ಬೃಹತ್ ಗಾಳಿ ಯಂತ್ರಗಳು ಸೋಜಿಗವನ್ನುಂಟು ಮಾಡುತ್ತವೆ. ಇನ್ನು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಸಿಗುವ ವ್ಯೂ ಪಾಯಿಂಟ್, ಭೀಮನಕಲ್ಲು, ಸಲಾಂಕಟ್ಟೆ ಎಲ್ಲವೂ ಇತಿಹಾಸದ ಕಥೆ ಹೇಳುತ್ತವೆ.

ತೀರ್ಥೋದ್ಭವದ ಸಂದರ್ಭ ಹಿರಿಯರಿಗೆ ಪಿಂಡ ಪ್ರದಾನ ಮಾಡುವ ಕಾರ್ಯವೂ ನಡೆಯುತ್ತದೆ. ತುಲಾಸಂಕ್ರಮಣದ ಒಂದು ತಿಂಗಳ ಕಾಲ ಭಗಂಡೇಶ್ವರ ದೇವಾಲಯದ ಕೊಠಡಿಯೊಂದರಲ್ಲಿ ನಂದಾದೀಪ ಉರಿಸಲಾಗುತ್ತದೆ. ಭಕ್ತರು ತಾವು ತರುವ ತುಪ್ಪವನ್ನು ಈ ದೀಪಕ್ಕೆ ಹಾಕುತ್ತಾರೆ.

ಹಾಗೆಯೇ ಅಕ್ಕಿಯನ್ನು ಕೂಡ ಇಲ್ಲಿನ ಅಕ್ಷಯ ಭಂಡಾರಕ್ಕೆ ಹಾಕಿ ತಮ್ಮ ಮನೆಯ ಕಣಜದಲ್ಲಿ ಸದಾ ಭತ್ತ ತುಂಬಿರುವಂತೆ ಬೇಡಿಕೊಳ್ಳುತ್ತಾರೆ. ಕಾವೇರಿ ತೀರ್ಥೋದ್ಭವದ ತುಲಾ ಸಂಕ್ರಮಣ ಜಾತ್ರೆಯಲ್ಲಿ ಎಲ್ಲರೂ ಭಾಗಿಯಾಗಿ ಸಂಭ್ರಮಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry