ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತಿಕೆಯ ಅಟ್ಟಹಾಸ, ಹಸಿವಿನ ಹಾಹಾಕಾರಗಳ ನಡುವೆ

ಉಳ್ಳವರಿಗೇ ಮತ್ತಷ್ಟು ಭೂಮಿ ಕೊಡುತ್ತಾ ಜನಸಾಮಾನ್ಯರಿಗೆ ಆಹಾರ ಹಂಚುವ ಯೋಜನೆಗಳಿಂದ ಹಸಿವು ಇಂಗುವುದು ಸಾಧ್ಯವೆ?
Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಭಾರತದ ಅತಿ ಶ್ರೀಮಂತರ ಪಟ್ಟಿಯು ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಒಬ್ಬೊಬ್ಬರ ಶ್ರೀಮಂತಿಕೆಯೂ ಒಂದೊಂದು ದೇಶವನ್ನು ಖರೀದಿಸಬಹುದಾದಷ್ಟು, ಒಂದೊಂದು ದೇಶದ ಜಿಡಿಪಿಯಷ್ಟು, ನಮ್ಮಂಥ ಜನಸಾಮಾನ್ಯರ ಕಲ್ಪನೆಗೆ ನಿಲುಕದಷ್ಟು. ಒಂದು ಕೋಟಿಯಲ್ಲ, ನೂರು ಕೋಟಿಯಲ್ಲ, ಸಾವಿರ ಸಾವಿರ ಕೋಟಿ, ಲಕ್ಷ ಕೋಟಿ, ಸಾವಿರ ಲಕ್ಷ ಕೋಟಿ. ಬಿಡಿ, ನಮಗೆ ಎಣಿಸಲು ಬರುವುದಿಲ್ಲ. ಸುಮಾರು ನೂರು ಕೋಟಿಯ ನಂತರ ಎಣಿಸುವುದೇಕೆ? ಪರಸ್ಪರ ಸ್ಪರ್ಧೆಯ ಹೊರತಾಗಿ ಏನಾದರೂ ವ್ಯತ್ಯಾಸವಾದೀತೇ? ಅದೂ ಕೂಡ ನಮ್ಮ ಕಲ್ಪನೆಗೆ ಹೊರತಾದದ್ದು.

ನಮ್ಮ ಕಲ್ಪನೆಗೆ ಎಟುಕುವುದು ಇಲ್ಲಿದೆ ನೋಡಿ. ಅದೆಂದರೆ ಇದೀಗ ಬಿಡುಗಡೆಯಾಗಿರುವ ಹಸಿದಿರುವ ಭಾರತದ ಚಿತ್ರ. ಹಸಿವು ಹೆಚ್ಚಿರುವ 119 ದೇಶಗಳಲ್ಲಿ 100ನೇ ಸ್ಥಾನದಲ್ಲಿ ನಿಂತಿರುವ ಭಾರತವು ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ, ಚೀನಾಗಳಿಗಿಂತ ಹಿಂದೆ ಇದೆ. ಅಷ್ಟೇ ಅಲ್ಲ, ಅತಿ ಹೆಚ್ಚಿನ ಕ್ರೌರ್ಯ ಮತ್ತು ಮಾನವ ಹಕ್ಕುಗಳ ಧ್ವಂಸವಾಗುತ್ತಿರುವ ಉತ್ತರ ಕೊರಿಯಾ, ಇರಾಕ್‌ಗಳನ್ನೂ ದಾಟಿ ಅತ್ತ ನಿಂತಿದೆ. ದಕ್ಷಿಣ ಏಷ್ಯಾದ ಮುಕ್ಕಾಲು ಪಾಲು ಜನಸಂಖ್ಯೆಯಿರುವ ಭಾರತದಲ್ಲಿ ಹಸಿವು ಜಾಸ್ತಿಯಾಗಿರುವುದರಿಂದ ಇಡೀ ಪ್ರದೇಶದ ಸಮತೋಲನವನ್ನೇ ಅದು ಕೆಡಿಸುತ್ತದೆ ಎನ್ನುತ್ತದೆ ಜಾಗತಿಕ ಹಸಿವಿನ ಸೂಚ್ಯಂಕ.

ಭಾರತದ ಈ ಸ್ಥಿತಿಗೆ ಮುಖ್ಯ ಕಾರಣ, ಇಲ್ಲಿನ ಮಕ್ಕಳ ಅಪೌಷ್ಟಿಕತೆಯನ್ನು ತಡೆಯಲಿಕ್ಕೆ ದೇಶಕ್ಕೆ ಇನ್ನೂ ಸಾಧ್ಯವಾಗದಿರುವುದು. ಬಹುಶಃ ಕೆಲವರ ಶ್ರೀಮಂತಿಕೆಯ ಏರುಗತಿಯನ್ನು ತಡೆಯಲು ಹೇಗೆ ಆಗುತ್ತಿಲ್ಲವೋ, ಅದೇ ರೀತಿಯಲ್ಲಿ ಮಕ್ಕಳು ಅಪೌಷ್ಟಿಕತೆಯತ್ತ ಜಾರುವುದನ್ನೂ ತಡೆಯಲು ನಮ್ಮ ಸರ್ಕಾರಕ್ಕೆ ಆಗುತ್ತಿಲ್ಲ. ಐದು ವರ್ಷದೊಳಗಿನ ಪ್ರತಿ 5 ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ಬಳಲುತ್ತಿದೆ. ಅಂತರರಾಷ್ಟ್ರೀಯ ಆಹಾರ ನೀತಿ ಮತ್ತು ಅಧ್ಯಯನ ಕೇಂದ್ರವು  ಈ ಜಾಗತಿಕ ಹಸಿವಿನ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ. ಜಾಗತಿಕ ಹಸಿವಿನ ಸೂಚ್ಯಂಕ ದಾಖಲಿಸುವಾಗ ಅಳತೆಗೆ ತೆಗೆದುಕೊಂಡಿದ್ದು, ಮೊದಲನೆಯದಾಗಿ  ಒಟ್ಟು ಜನಸಂಖ್ಯೆಯಲ್ಲಿ ಎಷ್ಟು ಮಂದಿಗೆ ಅಪೌಷ್ಟಿಕತೆ ಇದೆ, ಮಕ್ಕಳ ಮರಣದ ಪ್ರಮಾಣ ಎಷ್ಟು, ವಯಸ್ಸಿಗೆ ತಕ್ಕ ಎತ್ತರವಿಲ್ಲದ, ವಯಸ್ಸಿಗೆ ತಕ್ಕ ತೂಕವಿಲ್ಲದ ಮಕ್ಕಳು ಎಷ್ಟು ಎನ್ನುವುದು.

2000 ಇಸವಿಯ ನಂತರ ಜಾಗತಿಕವಾಗಿ ಶೇ 27ರಷ್ಟು ಪ್ರಮಾಣದಲ್ಲಿ ಹಸಿವಿನ ಸಮಸ್ಯೆ ಕಡಿಮೆಯಾಗಿದ್ದರೂ ಕಳೆದ ಒಂದು ವರ್ಷದಲ್ಲಿ ಅದು ಮತ್ತೆ ಪುಟಿದೆದ್ದಿದೆ. ಭಾರತದ ಅತಿ ಹೆಚ್ಚು ಶ್ರೀಮಂತರ ಶ್ರೀಮಂತಿಕೆ 17% ಹೆಚ್ಚಾಗಿದ್ದರೆ ಪ್ರತಿ 9 ಜನರಲ್ಲಿ ಒಬ್ಬರು ಹಸಿದಿದ್ದಾರೆ. ಅಂಬಾನಿಯವರ ವಾರ್ಷಿಕ ಉತ್ಪನ್ನ ಯೆಮೆನ್ ದೇಶದ ವಾರ್ಷಿಕ ಉತ್ಪನ್ನಕ್ಕಿಂತಲೂ ಹೆಚ್ಚು. ಶತಕೋಟ್ಯಧೀಶರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು ಈ ವರ್ಷದಲ್ಲಿ ಅವರ ಸಂಖ್ಯೆ 136ಕ್ಕೇರಿದೆ.

ಜಗತ್ತಿನ ಅತಿ ಹೆಚ್ಚು ಆಹಾರ ಉತ್ಪಾದನೆಯಲ್ಲಿ ಎರಡನೆಯ ಸ್ಥಾನದಲ್ಲಿದ್ದರೂ ಸಂಪನ್ಮೂಲದಲ್ಲಿ 50% ಕೇವಲ 1% ಜನರ ಬಳಿ ಶೇಖರಣೆ ಆಗಿರುವುದರಿಂದ ಹಸಿವಿನಲ್ಲಿ ಕೂಡ ಭಾರತ ಎರಡನೆಯ ಸ್ಥಾನದಲ್ಲಿದೆ! ಜನಸಾಮಾನ್ಯರಿಗೆ ಆಹಾರ ವಿತರಣೆಯ ಅನೇಕ ಸರ್ಕಾರಿ ಕಾರ್ಯಕ್ರಮಗಳಿದ್ದರೂ ವ್ಯವಸ್ಥೆಯೊಳಗಿನ ಕೊರತೆಗಳು ಜನರಿಗೆ ಆಹಾರ ತಲುಪದಂತೆ ಮಾಡಿ ಅಪೌಷ್ಟಿಕತೆಯ ಹೊಸ್ತಿಲಲ್ಲೇ ದೇಶವನ್ನು ತಂದಿಟ್ಟಿವೆ. ದೇಶದ 21%  ಮಕ್ಕಳು ವಯಸ್ಸಿಗಿಂತ ಕಡಿಮೆ ತೂಕ, ಕಡಿಮೆ ಎತ್ತರ ಇರುವವರಾಗಿದ್ದಾರೆ.

ಬರ ಪೀಡಿತ ಸಡಾನ್ ದೇಶದಲ್ಲಿ ಕೂಡ ಕಡಿಮೆ ತೂಕದ ಮಕ್ಕಳ ಪ್ರಮಾಣ 20% ಮೀರುವುದಿಲ್ಲ. ಕಳೆದ 25 ವರ್ಷಗಳಲ್ಲಿ ಭಾರತವು ಈ ದಿಕ್ಕಿನಲ್ಲಿ ಯಾವುದೇ ಉತ್ತಮ ಬದಲಾವಣೆಯನ್ನೂ ತೋರಿಸಿಲ್ಲ. ಜಿಡಿಪಿಯ ಏರಿಕೆಯು ದೇಶದೊಳಗಿನ ಮಕ್ಕಳಿಗೆ ಆಹಾರ ಮತ್ತು ಪೌಷ್ಟಿಕತೆಯನ್ನು ಒದಗಿಸುವುದಿಲ್ಲವೆಂಬುದನ್ನು ಈ ಅಧ್ಯಯನದ ಭಾಗವಾಗಿರುವ ಭಾರತದ ನಿವೇದಿತಾ ವಾರ್ಶ್ನೇಯ ಹೇಳುತ್ತಾರೆ. ಹಾಗೆಯೇ ಅಧಿಕ ಮೊತ್ತದ ನೋಟುಗಳ ರದ್ದತಿಯಿಂದಾದ ದೇಶದ ಆರ್ಥಿಕ ವೃದ್ಧಿ ದರ ಕುಸಿತವೂ ಈ ಶತಕೋಟ್ಯಧೀಶರ ಸಿರಿವಂತಿಕೆಗೆ ಯಾವುದೇ ರೀತಿಯ ಧಕ್ಕೆ ಮಾಡಿಲ್ಲ ಎಂಬುದೂ ವಿಶೇಷ. ಇದು ಭಾರತದ ಹಸಿವು ಮತ್ತು ಶ್ರೀಮಂತಿಕೆಗಳ ಚಿತ್ರ.

ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ವರದಿಯ ಪ್ರಕಾರ ಜಗತ್ತಿನಾದ್ಯಂತ ಅಪೌಷ್ಟಿಕತೆಯಿಂದ ನರಳುವವರ ಸಂಖ್ಯೆ 2016ರಲ್ಲಿ 81. 5 ಕೋಟಿಗೇರಿದ್ದು ಅದು ಹಿಂದಿನ ವರ್ಷಕ್ಕಿಂತಲೂ 3.8 ಕೋಟಿಗೂ ಹೆಚ್ಚು. ವೈಜ್ಞಾನಿಕ ಆವಿಷ್ಕಾರಗಳು ಮತ್ತು ಆಧುನಿಕ ತಂತ್ರಜ್ಞಾನಗಳಿಂದ ಆಹಾರೋತ್ಪಾದನೆಯು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇಡೀ ಭೂಗ್ರಹದ ಎಲ್ಲಾ ಜನರೂ ತಿಂದು ಮಿಗಬಹುದಾದಷ್ಟು ಪೌಷ್ಟಿಕ ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುತ್ತಿರುವಾಗಲೂ ಕೂಡ ಜಗತ್ತಿನಲ್ಲಿ ಹಸಿವಿನ ಪ್ರಮಾಣ ಮಾತ್ರ ಏರಿಕೆಯ ಹಾದಿಯನ್ನೇ ಹಿಡಿದಿದೆ ಎಂದು ಈ ವರದಿ ವಿಷಾದದಿಂದ ಹೇಳುತ್ತದೆ.

ಆಹಾರ ಉತ್ಪಾದನೆಯಾಗಿದೆ ನಿಜ. ಆದರೆ ಹಂಚಿಕೊಂಡು ತಿನ್ನುವ ಹೃದಯ ವೈಶಾಲ್ಯತೆ ಹುಟ್ಟಲಿಲ್ಲ. ಎಲ್ಲೆಲ್ಲಿಯೂ ತಾರತಮ್ಯ, ದ್ವೇಷ, ಯುದ್ಧ, ಪ್ರಕೃತಿ ಸಂಪತ್ತನ್ನು ನಾಶ ಮಾಡುವ ಕೆಲ ಜನರ ಗುಣದಿಂದಾಗಿ ಭೂಮಿಯಲ್ಲಿ ಬೆಳೆದದ್ದು ಎಲ್ಲರಿಗೂ ದಕ್ಕುತ್ತಿಲ್ಲ. ಶ್ರೀಮಂತ ಮತ್ತು ಬಡದೇಶಗಳೆರಡರಲ್ಲೂ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯು ಬಡವರಿಗೆ ಆಹಾರವು ಕೈಗೆ ಎಟುಕದಂತೆ ಮಾಡಿಟ್ಟಿದೆ. ಸಮೃದ್ಧಿಯೆಂಬುದು ಬಡವರಿಗೆ ಕನ್ನಡಿಯೊಳಗಿನ ಗಂಟಾಗಿದೆ.

ಆಹಾರ ಮತ್ತು ಕೃಷಿ ಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆ, ಕೃಷಿ ಅಭಿವೃದ್ಧಿಗಾಗಿ ಅಂತರರಾಷ್ಟ್ರೀಯ ನಿಧಿ, ಜಾಗತಿಕ ಆಹಾರ ಯೋಜನೆ ಮತ್ತು ಯುನಿಸೆಫ್ ಎಲ್ಲ ಸೇರಿ ಈ ವರದಿಯಲ್ಲಿ ಏರುತ್ತಿರುವ ತಾಪಮಾನ, ಏರುತ್ತಿರುವ ತಾರತಮ್ಯ ಮತ್ತು ಏರುತ್ತಿರುವ ಹಸಿವು ಇವೆಲ್ಲವುಗಳ ಪರಸ್ಪರ ಸಂಬಂಧವನ್ನು ಈ ವರದಿಯಲ್ಲಿ ದಾಖಲಿಸಿವೆ.

15.5 ಕೋಟಿ ಮಕ್ಕಳು ವಯೋಮಾನಕ್ಕಿಂತ ಕಡಿಮೆ ಎತ್ತರವುಳ್ಳವರಾಗಿದ್ದಾರೆ. ಇನ್ನು 5.2 ಕೋಟಿ ಮಕ್ಕಳು ಕಡಿಮೆ ತೂಕವುಳ್ಳವು. ಆಹಾರದ ಕೊರತೆಯೇ ಅದಕ್ಕೆ ಕಾರಣ. ಇಡೀ ಆಫ್ರಿಕಾದಲ್ಲಿ ಜನಸಂಖ್ಯೆಯ ಮೂರನೇ ಒಂದು ಭಾಗ ಮಕ್ಕಳು ಆಹಾರದ ಕೊರತೆಯಿಂದ ಬಳಲುತ್ತಿವೆ.  2016 ರ ಫೆಬ್ರುವರಿಯಲ್ಲಿ ಸುಡಾನ್‌ನಲ್ಲಿ ಬರ ಘೋಷಿಸಲಾಯಿತು. ಅಲ್ಲಿ ಜನಸಂಖ್ಯೆಯ  ಶೇ 42ರಷ್ಟು ಮಂದಿ ಹಸಿವಿನಿಂದ ಕಂಗೆಟ್ಟಿದ್ದಾರೆ. ಅದರ ಪಕ್ಕದ ಯೆಮೆನ್, ಉತ್ತರ ನೈಜೀರಿಯಾ ಮತ್ತು ಸೊಮಾಲಿಯಾಗಳು ಬರದ ಅಂಚಿನಲ್ಲೇ ಇವೆ. ಆಹಾರದ ಕೊರತೆ ಇಡೀ ಯುರೋಪಿನ ಜನಸಂಖ್ಯೆಗೆ ಸರಿಸಮನಾದ  81.5 ಕೋಟಿ ಜನರನ್ನು ಅಪೌಷ್ಟಿಕ ಮಾಡಿಟ್ಟಿದೆ. ಇವರಲ್ಲಿ ಶೇ 60ರಷ್ಟು ಜನರಿರುವುದು ಯುದ್ಧಗಳಿಂದ ತತ್ತರಿಸಿದ ನಾಡುಗಳಲ್ಲಿ. ಆಹಾರದ ಕೊರತೆ, ಹಸಿವು ಮತ್ತು ಅಪೌಷ್ಟಿಕತೆಯನ್ನು ಹೆಚ್ಚಿಸುವುದಕ್ಕೆ ಯುದ್ಧಗಳೂ ಕಾರಣ.

ಸಿರಿಯಾದ ಯುದ್ಧ ಅತ್ತ ಯುರೋಪನ್ನು ಬಾಧಿಸುತ್ತಿದ್ದರೆ ಇಲ್ಲಿ ದಕ್ಷಿಣ ಏಷ್ಯಾದಲ್ಲಿ ರೋಹಿಂಗ್ಯಾ ಸಮಸ್ಯೆ ಎದ್ದಿದೆ. ಯುದ್ಧದ ಜೊತೆ ಜೊತೆಯಲ್ಲೇ ಬರುವುದು ನಿರಾಶ್ರಿತ ಸ್ಥಾನಮಾನ. ಜೀವ ರಕ್ಷಿಸಿಕೊಳ್ಳಲು ಜನ ತಂಡೋಪತಂಡವಾಗಿ ದಿಕ್ಕಾಪಾಲಾಗಿ ಓಡುತ್ತಾರೆ. ಕಳೆದ ಹತ್ತು ವರ್ಷಗಳಲ್ಲಿ 6.4 ಕೋಟಿ ಜನರು ಯುದ್ಧದಿಂದಾಗಿ ನಿರ್ವಸಿತರಾಗಿದ್ದಾರೆ. ಇಂದು ಜಗತ್ತಿನಲ್ಲಿ ಪ್ರತಿ 113 ಜನರಿಗೆ ಒಬ್ಬರು ನಿರಾಶ್ರಿತರಿದ್ದಾರೆ ಎಂದರೆ ಸಮಸ್ಯೆಯ ಆಳದ ಅರಿವಾಗಬಹುದು.

ಯುದ್ಧವು ನೇರವಾಗಿ ಎಲ್ಲಾ ನಾಗರಿಕ ವ್ಯವಸ್ಥೆಯ ಮೇಲೂ ದುಷ್ಪರಿಣಾಮ ಬೀರುತ್ತದಾದರೂ ಕೃಷಿ ಮತ್ತು ಆಹಾರ ವಿತರಣೆಯ ಮೇಲೆ ಬಲು ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ. ಬೆಳೆ ತೆಗೆಯುವುದು, ಕೊಯಿಲು, ಸಂಸ್ಕರಣೆ, ಸಾಗಣೆ, ವಿತರಣೆ ಮತ್ತು ಇವೆಲ್ಲಕ್ಕೂ ಅಗತ್ಯವಾದ ಹಣಕಾಸಿನ ಬೆಂಬಲ ಇವೆಲ್ಲದರ ಮೇಲೆಯೂ ಯುದ್ಧವು ಕೈಹಾಕುತ್ತದೆ. ಉದಾಹರಣೆಗೆ ಇರಾಕಿನ ಮೇಲೆ ಅಮೆರಿಕವು ಯುದ್ಧ ಸಾರುವುದಕ್ಕೂ ಮೊದಲು ಅಲ್ಲಿನ ನಿನೆವೆ ಮತ್ತು ಸಲಹ್ ಅಲ್‌ದಿನ್ ಜಿಲ್ಲೆಗಳಲ್ಲಿ ದೇಶದ ಶೇ 40 ರಷ್ಟು ಗೋಧಿ ಮತ್ತು ಬಾರ್ಲಿಯನ್ನು ಉತ್ಪಾದಿಸಲಾಗುತ್ತಿತ್ತು. 2016ರ ಫೆಬ್ರುವರಿಯ ವೇಳೆಗೆ ಅದರ 70%ನಷ್ಟು ಕೃಷಿ ಕ್ಷೇತ್ರವನ್ನು ನಾಶ ಮಾಡಲಾಯಿತು. ಗೋಧಿ ಉತ್ಪಾದಿಸುವ   32–68% ಭೂಮಿಯನ್ನು ಒಂದೋ ಹಾಳು ಮಾಡಲಾಗಿದೆ ಅಥವಾ ಬೇರೆ ಕಾರಣಕ್ಕಾಗಿ ಬಳಸಲಾಗುತ್ತಿದೆ. ಹಾಗೆಯೇ 43 –57 % ನಷ್ಟು ಬಾರ್ಲಿ ಬೆಳೆಯುವ ಪ್ರದೇಶದ್ದೂ ಅದೇ ಕತೆ.

ಒಂದು ಕಾಲಕ್ಕೆ ಕೃಷಿ ಚಟುವಟಿಕೆಗಳಿಂದ ಕಂಗೊಳಿಸುತ್ತಿದ್ದ ಸಿರಿಯಾ, ಅಲ್ಲಿನ ಪ್ರಭುತ್ವದ ಬದಲಾವಣೆ ಮಾಡಬೇಕೆಂದು ಅಮೆರಿಕ ಯುದ್ಧ ಹುಟ್ಟಿಸಿದಾಗಿನಿಂದ ಸುಟ್ಟು ಕರಕಲಾಗಿದೆ. ಸಿರಿಯಾದ  ಶೇ 85 ರಷ್ಟು  ಜನರು ಬಡತನಕ್ಕೆ ಬಿದ್ದಿದ್ದಾರೆ.    60.7 ಲಕ್ಷ  ಜನರು ಜೀವ ಉಳಿಸಿಕೊಳ್ಳಲಿಕ್ಕಾಗಿ ಊರು ಬಿಟ್ಟು, ದೇಶ ಬಿಟ್ಟು ಎತ್ತೆತ್ತಲೋ ಓಡಿ ಹೋಗಿದ್ದಾರೆ. ಅಂಥಲ್ಲಿ ಹಸಿವು, ಅಪೌಷ್ಟಿಕತೆಗಳ ಪ್ರಮಾಣ ಎಷ್ಟಿರಬೇಡ?

ಆಹಾರವನ್ನೇ ಯುದ್ಧಾಸ್ತ್ರವಾಗಿ ಬಳಸುವುದು ಅಪೌಷ್ಟಿಕತೆಗೆ ಇನ್ನೊಂದು ಮುಖ್ಯ ಕಾರಣ. ಸುಡಾನ್ ದೇಶಕ್ಕೆ ಆಹಾರ ರಫ್ತನ್ನೇ ನಿಲ್ಲಿಸಲಾಗಿದೆ. ಆಹಾರಕ್ಕಾಗಿ ಆಮದನ್ನೇ ಅವಲಂಬಿಸಿರುವುದರಿಂದ ಯೆಮೆನ್‌ನಲ್ಲಿಯೂ ಸೌದಿ ದೇಶಗಳಿಂದ ವ್ಯಾಪಾರ ನಿಷೇಧ ಆಗಿರುವ ಕಾರಣ ಹಸಿವಿನಿಂದ ಜನ ಕಂಗಾಲಾಗಿದ್ದಾರೆ.

ವಿಶ್ವ ಸಂಸ್ಥೆ ತಯಾರಿಸಿರುವ ಈ ವರದಿಯು ಯುದ್ಧಗಳು, ಆಹಾರ ಕೊರತೆ ತರುವುದನ್ನು ಹೇಳುತ್ತದೆಯಾದರೂ ಈ ಯುದ್ಧಗಳು ಏತಕ್ಕೆ ಆಗುತ್ತವೆ ಎಂಬುದನ್ನು ವಿಶ್ಲೇಷಿಸಹೋಗುವುದಿಲ್ಲ. ಸಿರಿಯಾ, ಸುಡಾನ್‌ಗಳಲ್ಲಿ ಆಗುತ್ತಿರುವ ಯುದ್ಧಗಳನ್ನು ದೇಶದೊಳಗಿನ ಅಂತಃಕಲಹ ಎಂದೇ ಬಣ್ಣಿಸುತ್ತದೆಯೇ ಹೊರತು ಅಮೆರಿಕದಂಥ ರಾಷ್ಟ್ರಗಳು ಯುದ್ಧ ಆರಂಭಿಸುವುದನ್ನೂ, ಯುದ್ಧಾಗ್ನಿಗೆ ತುಪ್ಪ ಸುರಿಯುತ್ತಿರುವುದನ್ನೂ ವರ್ಣಿಸುವುದಿಲ್ಲ. ಶ್ರೀಮಂತ ರಾಷ್ಟ್ರಗಳು ಮತ್ತು ಬಡ ರಾಷ್ಟ್ರಗಳ ಶ್ರೀಮಂತರ ಬದುಕುವ ರೀತಿಯೇ ಬಡ ರಾಷ್ಟ್ರಗಳು ಮತ್ತು ಬಡವರ ಆಹಾರ ಕೊರತೆಗೆ, ಅಲ್ಲಿನ ಯುದ್ಧಗಳಿಗೆ, ಅಲ್ಲಿನ ವಾತಾವರಣ ಬದಲಾಗುವುದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ಶ್ರೀಮಂತ ರಾಷ್ಟ್ರಗಳಲ್ಲಿ ಕೂಡ ಆಹಾರ ಕೊರತೆ ಉಂಟಾಗುತ್ತಿರುವುದಕ್ಕೆ ಇವರ ಲಾಭಕೋರ ನೀತಿಗಳು ಕಾರಣವಾಗಿವೆ.

ವಾತಾವರಣದ ಏರುಪೇರು ಆಹಾರ ಕೊರತೆಗೆ ಇನ್ನೊಂದು ಕಾರಣವಾಗಿದೆ. ಸಹಾರಾ ಸುತ್ತಮುತ್ತಲಿನ ದೇಶಗಳು ಮತ್ತು ದಕ್ಷಿಣ ಏಷ್ಯಾ  ದೇಶಗಳಲ್ಲಿ ಆಹಾರದ ಕೊರತೆಗೆ ಜಾಗತಿಕ ತಾಪಮಾನ ಕಾರಣ. ಕಾಲಕ್ಕೆ ತಕ್ಕ ಮಳೆ ಇಲ್ಲದೆ ಭೂಮಿಯನ್ನು ಬಿಟ್ಟು ವಲಸೆ ಹೋದ ಜನಗಳಿಗೆ ಕೂಲಿ ದರ ಇದ್ದಷ್ಟೇ ಇದ್ದು, ಆಹಾರದ ಬೆಲೆ ಏರುತ್ತ ಹೋದಂತೆ ತರಕಾರಿ, ಧಾನ್ಯಗಳನ್ನು ಕೊಂಡು ತಿನ್ನುವುದು ಕಠಿಣವಾಗುತ್ತದೆ. ಸಂಪನ್ಮೂಲ ನಾಶ, ಭೂಮಿ ಮತ್ತು ನೀರಿನ ತಪ್ಪು ಬಳಕೆ ಇವೇ ವಾತಾವರಣದ ಏರುಪೇರಿಗೆ ಕಾರಣವಾಗಿದ್ದು ಅದರ ಫಲವನ್ನು ಅನುಭವಿಸುವವರು ಮಾತ್ರ ಬಡಜನರಾಗಿದ್ದಾರೆ.

ಜಗತ್ತಿನ ಬಂಡವಾಳಶಾಹಿ ಆರ್ಥಿಕತೆಗೆ ಒಂದು ಕೊನೆಯನ್ನು ತಂದಾಗಲೇ ಜಾಗತಿಕ ಹಸಿವೆಗೊಂದು ಉತ್ತರ ಸಿಗಬಹುದು. ಬಂಡವಾಳಶಾಹಿ ನೀತಿಯನ್ನು ಬದಿಗಿಟ್ಟು ಸಾಮಾಜಿಕ ಸಮಾನತೆಯ ಆರ್ಥಿಕತೆಯತ್ತ ಏನಾದರೂ ಹೆಜ್ಜೆ ಹಾಕಿದರೆ ಮಾತ್ರ ಹಸಿವು ಮತ್ತು ಅತಿ ಶ್ರೀಮಂತಿಕೆಯ ತಾರತಮ್ಯಗಳನ್ನು ಕೊನೆಗೊಳಿಸಬಹುದು. ಉಳ್ಳವರಿಗೇ ಮತ್ತಷ್ಟು ಭೂಮಿ ಕೊಡುತ್ತ ಜನಸಾಮಾನ್ಯರಿಗೆ ಆಹಾರ ಹಂಚುವ ಯೋಜನೆಗಳನ್ನು ಹಾಕುವ ಬದಲು ಭೂಮಿ ಇಲ್ಲದವರಿಗೆ ಭೂಮಿಯನ್ನು ಹಂಚುವ ಕೆಲಸವನ್ನು ಮಾಡಿದರೆ ಅಸಮಾನತೆಯನ್ನು ತೊಡೆಯುವ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗುತ್ತದೆ. ನಿನ್ನೆಯಷ್ಟೇ   ವಿಶ್ವ ಆಹಾರ ದಿನ ಆಚರಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಚಿಂತನೆಗಳು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT