ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಕಲಿಸುವುದು ಕಷ್ಟ’

ರಾಜ್ಯ, ಕೇಂದ್ರಕ್ಕೆ ಮನವಿ ಸಲ್ಲಿಸಲು ಸಿಬಿಎಸ್‌ಇ ಶಾಲೆಗಳ ಆಡಳಿತ ಮಂಡಳಿ ನಿರ್ಧಾರ
Last Updated 16 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‌ಬೆಂಗಳೂರು: ರಾಜ್ಯದ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬಹುದು ಹೊರತು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಡ್ಡಾಯ ಮಾಡಲು ಸಾಧ್ಯವಿಲ್ಲ ಎಂದು ಸಿಬಿಎಸ್‌ಇ ಶಾಲೆಗಳ ಆಡಳಿತ ಮಂಡಳಿ ಸಂಘ ತಿಳಿಸಿದೆ.

‘ಕನ್ನಡವನ್ನು ಕಡ್ಡಾಯ ಮಾಡುವುದರಿಂದ ಆಗುವ ತೊಡಕುಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಮತ್ತು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೂ ಮನವಿ ಸಲ್ಲಿಸುತ್ತೇವೆ. ಅವರ ಮುಂದಿನ ನಿರ್ಧಾರ ಗಮನಿಸಿ, ಅದನ್ನು ಪಾಲಿಸುತ್ತೇವೆ’ ಎಂದು ಸಂಘದ ಅಧ್ಯಕ್ಷ ಎಂ. ಶ್ರೀನಿವಾಸನ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬಿಎಸ್‌ಇ ಶಾಲೆಗಳಲ್ಲಿ ಇಂಗ್ಲಿಷ್ ಪ್ರಥಮ ಮತ್ತು ಹಿಂದಿ ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಕೇಂದ್ರ ಸರ್ಕಾರ ಇದೇ ವರ್ಷದಲ್ಲಿ ಕಾನೂನು ರೂಪಿಸಿದೆ. ಹಾಗಾದರೆ ಅದನ್ನು ಪಾಲಿಸಬೇಕೆ ಅಥವಾ ರಾಜ್ಯ ಸರ್ಕಾರದ ಕಾನೂನು ಪಾಲಿಸಬೇಕೆ ಎಂಬ ಗೊಂದಲವೂ ಉಂಟಾಗಿದೆ ಎಂದೂ ಅವರು ಹೇಳಿದರು.

‘ಕರ್ನಾಟಕದಲ್ಲಿ ಇರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂಬುದರಲ್ಲಿ ಯಾವುದೇ ತಕಾರರು ಇಲ್ಲ. ಬಹುತೇಕ ಶಾಲೆಗಳು ಒಂದರಿಂದ ಎಂಟನೇ ತರಗತಿವರೆಗೆ ಕನ್ನಡ ಕಲಿಸುತ್ತಿವೆ. 9 ಮತ್ತು 10ನೇ ತರಗತಿಗೆ ಬೋರ್ಡ್‌ ಪರೀಕ್ಷೆಗಳು ನಡೆಯುತ್ತವೆ. ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಿದರೆ ಬೋರ್ಡ್‌ ಪರೀಕ್ಷೆ ಮಾಡಲು ಅವಕಾಶ ಇಲ್ಲ. ಈ ಸಂಬಂಧ ಸಿಬಿಎಸ್‌ಇ ಮಂಡಳಿಯೂ ಸೂಕ್ತ ತೀರ್ಮಾನ ತೆಗೆದುಕೊಂಡು ನಮಗೆ ಸೂಚನೆಗಳನ್ನು ನೀಡಬೇಕು’ ಎಂದರು.

ಹಾಗೆ ನೋಡಿದರೆ ಹಿಂದಿಯನ್ನು ದ್ವಿತೀಯ ಭಾಷೆ ಮಾಡಿರುವುದೂ ಸಮಜಂಸವಲ್ಲ. ಪ್ರಥಮ ಭಾಷೆ ಇಂಗ್ಲಿಷ್ ಮತ್ತು ಎರಡನೇ ಭಾಷೆಯಾಗಿ ವಿದೇಶಿ ಭಾಷೆಗಳನ್ನು ಕಲಿಯಲು ಹೆಚ್ಚಿನ ಮಕ್ಕಳು, ಪೋಷಕರು ಆಸಕ್ತಿ ವ್ಯಕ್ತಪಡಿಸುತ್ತಾರೆ. ಇದರಿಂದ ಅವರ ಭವಿಷ್ಯಕ್ಕೂ ಅನುಕೂಲವಾಗುತ್ತದೆ. ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸುವುದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದೂ ಶ್ರೀನಿವಾಸನ್ ಮನವಿ ಮಾಡಿದರು.

ಕನ್ನಡ ಶಿಕ್ಷಕರ ನೇಮಕವಾಗಲಿ:
‘ಕೇಂದ್ರೀಯ ಮತ್ತು ಅಲ್ಪಸಂಖ್ಯಾತರ ಶಾಲೆಗಳನ್ನೂ ಒಳಗೊಂಡಂತೆ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿರುವುದು ಸ್ವಾಗತಾರ್ಹ ಕ್ರಮ. ಆದರೆ, ಅದಕ್ಕೆ ತಕ್ಕಂತೆ ಕನ್ನಡ ಶಿಕ್ಷಕರ ನೇಮಕಕ್ಕೂ ಕ್ರಮ ಕೈಗೊಳ್ಳಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ, ‘ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡಿ ಎಂಬುದು ಬಹಳ ದಿನದ ಬೇಡಿಕೆ. ಪರಿಷತ್ ಸಹ ಮೊದಲಿನಿಂದಲೂ ಈ ಒತ್ತಾಯ ಮಾಡುತ್ತಲೇ ಬಂದಿದೆ. ರಾಜ್ಯ ಸರ್ಕಾರ ಈಗ ಆದೇಶ ಮಾಡಿರುವುದು ಸೂಕ್ತವಾಗಿದೆ’ ಎಂದು
ಅಭಿಪ್ರಾಯಪಟ್ಟರು.

***
‘ಕಾನೂನಾತ್ಮಕವಾಗಿಯೇ ಮನವರಿಕೆ ಮಾಡಿ’
‘ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸದ ಶಾಲೆಗಳಿಗೆ ಕಾನೂನಾತ್ಮಕವಾಗಿಯೇ ಮನವರಿಕೆ ಮಾಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

‘ಇಲ್ಲಿನ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡ ಮೇಲೆ ಭಾಷೆಯನ್ನೂ ಕಲಿಸುವುದು ಅವರ ಕನಿಷ್ಠ ಋಣ. ಅದನ್ನೂ ತೀರಿಸದೆ ತಿನ್ನುವ ಅನ್ನಕ್ಕೆ ದ್ರೋಹ ಬಗೆಯಬಾರದು’ ಎಂದು ಅವರು ಹೇಳಿದರು.

ಕನ್ನಡ ಕಡ್ಡಾಯ ಮಾಡಿ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ನಿಯಮಾವಳಿಗೆ ತಿದ್ದುಪಡಿ ತಂದಾಗ ಆಕ್ಷೇಪಣೆ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ಇತ್ತು. ಆಗ ಆಕ್ಷೇಪಣೆ ಸಲ್ಲಿಸದೆ ಈಗ ತಕರಾರು ಮಾಡಿದರೆ ಯಾವ ನ್ಯಾಯಾಲಯಗಳೂ ಒಪ್ಪುವುದಿಲ್ಲ’ ಎಂದೂ ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT