ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಗಿಟ್ಲೆಯಂತೆ ತಿರುಗಿ ಅಪ್ಪಳಿಸಿದ ಅವಳಿ ನಕ್ಷತ್ರ

ಆಗಸ್ಟ್‌ನಲ್ಲಿ ನಡೆದ ವಿದ್ಯಮಾನ ಪತ್ತೆ l ಖಗೋಳ ವಿಜ್ಞಾನದ ಹೊಸ ಮನ್ವಂತರಕ್ಕೆ ನೆರವಾಗಲಿರುವ ಶೋಧನೆ
Last Updated 17 ಅಕ್ಟೋಬರ್ 2017, 4:10 IST
ಅಕ್ಷರ ಗಾತ್ರ

ಬೆಂಗಳೂರು: ಆಗಸ್ಟ್‌ ತಿಂಗಳಿನಲ್ಲಿ ಎರಡು ನ್ಯೂಟ್ರಾನ್‌ ನಕ್ಷತ್ರಗಳು ಗಿರಗಿಟ್ಲೆಯಂತೆ ತಿರುಗಿ, ಡಿಕ್ಕಿ ಹೊಡೆದು ಲಯ ಹೊಂದಿರುವುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

‘ಈ ಶೋಧನೆ ಖಗೋಳ ವಿಜ್ಞಾನದಲ್ಲಿ ಹೊಸ ಮನ್ವಂತರಕ್ಕೆ ನಾಂದಿಯಾಗಿದೆ. ಭೂಮಿಯಿಂದ 130 ದಶಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಿಂದ ಬಂದ ಈ ಗುರುತ್ವದ ಅಲೆಗಳು ಇದುವರೆಗೆ ಗುರುತಿಸಿದ  ಗುರುತ್ವದ ಅಲೆಗಳಲೆಲ್ಲಾ ಅತ್ಯಂತ ತೀಕ್ಷ್ಣವಾಗಿದ್ದವು’ ಎಂದು ಅಮೆರಿಕ ಮತ್ತು ಫ್ರಾನ್ಸ್‌ ದೇಶಗಳ ಲೈಗೊ ಸಂಸ್ಥೆ (Laser Interfero meter Gravitational-Wave Observatory)  ತಿಳಿಸಿದೆ.

ಎರಡು ತಿಂಗಳ ಹಿಂದೆ ಲೈಗೊ ಉಪಕರಣಗಳು ಗುರುತ್ವದ ಅಲೆಗಳನ್ನು ಒಟ್ಟಿಗೆ ಗುರುತಿಸಿದ್ದವು. ಈ ಗುರುತ್ವದ ಅಲೆಗಳೊಂದಿಗೆ ಇತರ ಅನೇಕ ಅಲೆಗಳು (ಕ್ಷ ಕಿರಣ ಇತ್ಯಾದಿ) ಇರುವುದನ್ನು ಜಗತ್ತಿನಾದ್ಯಂತ ಇರುವ ಅನೇಕ ದೂರದರ್ಶಕಗಳೂ ದೃಢೀಕರಿಸಿವೆ. ಇದು 2015 ರಲ್ಲಿ ಮೊತ್ತ ಮೊದಲ ಬಾರಿಗೆ ಕಂಡು ಬಂದ ಗುರುತ್ವದಲೆಗಳ ಇರುವಿಕೆಯನ್ನು ಮತ್ತೊಮ್ಮೆ ದೃಢೀಕರಿಸಿದೆ. ಗುರುತ್ವದಲೆಗಳ ಆವಿಷ್ಕಾರಕ್ಕೆ ಈ ವರ್ಷದ ನೊಬೆಲ್‌ ಪುರಸ್ಕಾರವೂ ಸಂದಿದೆ. ನ್ಯೂಟ್ರಾನ್‌ ನಕ್ಷತ್ರಗಳು ಕೆಲವು ನಕ್ಷತ್ರಗಳ ವಿಕಾಸದ ಅಂತಿಮ ಘಟ್ಟ. ಇತ್ತೀಚೆಗೆ ಕಾಲ–ದೇಶದಲ್ಲಿ (ಸ್ಪೇಸ್‌– ಟೈಮ್) ತಲ್ಲಣ ಸೃಷ್ಟಿಸಿದ ಎರಡು ನ್ಯೂಟ್ರಾನ್‌ ನಕ್ಷತ್ರಗಳು ಸೂರ್ಯನಿಗಿಂತ 1.1 ಮತ್ತು 1.6 ರಷ್ಟು ತೂಕವುಳ್ಳದ್ದಾಗಿದ್ದವು. ಇವು ಲಯ ಹೊಂದುವ ಮುನ್ನ ನೂರು ಸೆಕೆಂಡಿಗೂ ಹೆಚ್ಚು ಕಾಲ ಗಿರಗಿಟ್ಲೆಯಂತೆ ಒಂದರ ಸುತ್ತ ಮತ್ತೊಂದು ತಿರುಗಿ ಪರಸ್ಪರ ಅಪ್ಪಳಿಸಿದವು.

ಬೆಳಕಿನ ವೇಗ: ಈ ಬಾರಿ ಗುರುತ್ವದಲೆಗಳು ಕಂಡು ಬಂದ ಕೇವಲ ಎರಡು ಸೆಕೆಂಡುಗಳ ಅಂತರದಲ್ಲಿ ಗಾಮ ಕಿರಣಗಳನ್ನು ಭೂಮಿಯನ್ನು ಪರಿಭ್ರಮಣ ನಡೆಸುತ್ತಿರುವ ಅನೇಕ ದೂರದರ್ಶಕಗಳು ಗುರುತಿಸಿವೆ. ಗಾಮ ಕಿರಣ ಸ್ಫೋಟಗಳಿಗೆ ಪರಸ್ಪರ ಡಿಕ್ಕಿ ಹೊಡೆದು ಲಯ ಹೊಂದುತ್ತಿರುವ  ನ್ಯೂಟ್ರಾನ್ ನಕ್ಷತ್ರಗಳೇ ಕಾರಣ ಎಂಬ ಅಂಶವೂ ದೃಢಪಟ್ಟಿದೆ. ಇದರ ಜೊತೆಗೆ ಈ ಮೊದಲೇ ಊಹಿಸಿದಂತೆ ಗುರುತ್ವದ ಅಲೆಗಳು ಬೆಳಕಿನ ವೇಗದಲ್ಲಿ ಚಲಿಸುತ್ತವೆ ಎಂಬ ಅಂಶವೂ ಋಜುವಾತಾಗಿದೆ ಎಂದು ಬಸವನಗುಡಿ ನ್ಯಾಷನಲ್‌ ಕಾಲೇಜು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ವೈ.ಸಿ. ಕಮಲಾ ತಿಳಿಸಿದ್ದಾರೆ.

***
ಚಿನ್ನ, ಬೆಳ್ಳಿ ಮತ್ತು ಗಾಮ ಕಿರಣಗಳು

ಕಬ್ಬಿಣಕ್ಕಿಂತ ಹೆಚ್ಚಿನ ಪರಮಾಣು ತೂಕವುಳ್ಳ ವಸ್ತುಗಳ ಸಂಸ್ಕರಿಸಲು ಇಂತಹ ನ್ಯೂಟ್ರಾನ್‌ ನಕ್ಷತ್ರಗಳ ಡಿಕ್ಕಿಯಿಂದ ಬರುವ ಅತಿ ಶಕ್ತಿಯುತ  ಗಾಮ ಕಿರಣಗಳು ಕಾರಣ ಎಂಬ ಸಿದ್ಧಾಂತಕ್ಕೆ ಈ ಆವಿಷ್ಕಾರಗಳು ಪುರಾವೆ ನೀಡತೊಡಗಿವೆ. ಅಂದರೆ, ಭೂಮಿಯಲ್ಲಿರುವ ಚಿನ್ನ, ಬೆಳ್ಳಿ, ಪ್ಲಾಟಿನಂನಂಥ ಅಮೂಲ್ಯ ಲೋಹಗಳ ಉತ್ಪಾದನೆಯ ಮೂಲ ಇಂಥ ಲಯಕಾರಕ ಸನ್ನಿವೇಶಗಳೇ ಆಗಿವೆ.

***
ನ್ಯೂಟ್ರಾನ್‌ ನಕ್ಷತ್ರಗಳ ಲಯದಿಂದ ಕಾಲ ದೇಶದಲ್ಲಿ (ಸ್ಪೇಸ್‌– ಟೈಮ್‌) ಉಂಟಾದ ತಲ್ಲಣಗಳನ್ನು ಸಮರ್ಥವಾಗಿ ಸೆರೆ ಹಿಡಿಯುವಲ್ಲಿ ಭಾರತದ 13 ಸಂಸ್ಥೆಗಳ 40 ವಿಜ್ಞಾನಿಗಳ ಪಾತ್ರ ಅತ್ಯಂತ ಮಹತ್ವದ್ದು. ವಿಶ್ವದಾದ್ಯಂತ ಇರುವ ನೂರಾರು ರೀತಿಯ ವಿಕಿರಣ ನಡುವಿನಿಂದ ಈ ಅಲೆಗಳನ್ನು ಹೆಕ್ಕಿ ತೆಗೆಯುವಲ್ಲಿ ಭಾರತದ ವಿಜ್ಞಾನಿಗಳು ರೂಪಿಸಿರುವ ಮೂಲಭೂತ ಆಲ್ಗೊರಿದಮ್‌ ನೆರವಾಗಿವೆ. ಭಾರತದ ಈ ತಂಡದಲ್ಲಿ ಸಿಎಂಐ ಚೆನ್ನೈ, ಐಸಿಟಿಎಸ್‌ ಬೆಂಗಳೂರು, ಐಐಎಸ್‌ಇಆರ್‌ ಕೋಲ್ಕತ್ತ, ಐಐಎಸ್‌ಇಆರ್‌ ತಿರುವನಂತಪುರ, ಐಐಟಿ ಮದ್ರಾಸ್‌, ಐಐಟಿ ಗಾಂಧಿನಗರ, ಐಯುಸಿಎಎ ಪುಣೆ, ಆರ್‌ಆರ್‌ಸಿಎಟಿ ಇಂದೋರ್‌, ಟಿಐಎಫ್‌ಆರ್‌ ಮುಂಬೈ ಮತ್ತು ಯುಎಐಆರ್‌ ಗಾಂಧಿನಗರ ಸಂಸ್ಥೆಗಳ ವಿಜ್ಞಾನಿಗಳು ಪಾಲ್ಗೊಂಡಿದ್ದಾರೆ.

***
ಬೆಂಗಳೂರಿನ ವಿಜ್ಞಾನಿಗಳು

ಬೆಂಗಳೂರಿನ ಸೈದ್ಧಾಂತಿಕ ವಿಜ್ಞಾನಗಳ ಅಂತರ ರಾಷ್ಟ್ರೀಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ಬಾಲ ಅಯ್ಯರ್‌ ಮತ್ತು ಪ್ರೊ. ಅಜಿತ್‌ ಪರಮೇಶ್ವರನ್‌ ಈ ಸಂಶೋಧನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT