ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಯಾಕಾರ್ಯಗಳು

Last Updated 16 ಅಕ್ಟೋಬರ್ 2017, 19:35 IST
ಅಕ್ಷರ ಗಾತ್ರ

‘ದಯೆಯೇ ಧರ್ಮದ ಮೂಲವಯ್ಯ’ ಎಂದು ಸಾರಿದ ಕ್ರಾಂತಿಕಾರಿ ಬಸವಣ್ಣನವರ ವಚನಗಳು ಈ ಲೋಕದ ಎಲ್ಲಾ ಜೀವನಾಡಿಗಳ ಅಂತಃಕರಣದಲ್ಲಿ ದಯೆ ಇರಬೇಕು ಎಂದು ಸ್ಪಷ್ಟಪಡಿಸುತ್ತವೆ. ಎಲ್ಲಾ ಧರ್ಮಗಳ ತಳಹದಿಯೂ ಇದೇ ಆಗಿದೆ. ದಯೆಯಿಂದಲೇ ಮಾನವೀಯತೆಯ ಹುಟ್ಟು ಸಾಧ್ಯ. ಧರ್ಮದಲ್ಲಿ ದಯೆಯಿಲ್ಲದಿದ್ದರೆ ಅಥವಾ ಧರ್ಮವು ದಯೆಯನ್ನು ಕಳೆದುಕೊಂಡರೆ ಅದು ವಿನಾಶಕಾರಿಯಾಗುವುದು ಎಂದು ನಾವು ಅನುಭವದಿಂದ ತಿಳಿದಿದ್ದೇವೆ.

‘ಸ್ವರ್ಗದಲ್ಲಿರುವ ತಂದೆಯಂತೆ ನೀವೂ ದಯಾವಂತರಾಗಿ’, ಎಂದು ತಮ್ಮ ಹಿಂಬಾಲಕರಿಗೆ ಯೇಸು ಸ್ವಾಮಿ ಮಾಡಿದ ಬೋಧನೆಯಲ್ಲಿ ದಯಾವಂತರಾಗಲೂ ದೇವಪಿತನನ್ನೇ ಅವರು ಅತ್ಯುನ್ನತ ಆದರ್ಶವನ್ನಾಗಿ ನೀಡುತ್ತಾರೆ. ಇದರರ್ಥವೇನೆಂದರೆ ನಾವು ದಯಾವಂತರಾದಷ್ಟೂ ಮತ್ತೂ ಹೆಚ್ಚಾಗಿ ದಯಾವಂತರಾಗಲು ಪ್ರೇರಣೆ ಸಿಗಬೇಕು. 2016 ನೇ ವರ್ಷವನ್ನು ’ಜಾಗತಿಕ ಕರುಣೆ/ದಯೆಯ ವರ್ಷ’ ವೆಂದು ಘೋಷಿಸಿದ ಜಗದ್ಗುರು ಪೋಪ್ ಫ್ರಾನ್ಸಿಸ್‌ರವರು, ದೇವರ ಅಸೀಮ ದಯೆಯನ್ನು ಅನುಭವಿಸಿದ ನಾವು ಎಲ್ಲಾ ಜೀವನಾಡಿಗಳಿಗೂ ದಯೆಯನ್ನು ತೋರಿಸುವಂತರಾಗೋಣ ಎಂದು ಕರೆಕೊಟ್ಟರು. ಇದಕ್ಕೆ ಕಾರಣ ನಮ್ಮ ಸೃಷ್ಟಿಕರ್ತ ಭಗವಂತನ ಹೆಸರೇ ದಯಾಮಯಿ ಅಥವಾ ಕರುಣಾಮಯಿ.

ಭಗವಂತನ ಈ ದಯೆಯನ್ನು ಕಾರ್ಯರೂಪದಲ್ಲಿ ತೋರಿಸಲು, ಕ್ರೈಸ್ತ ಅಧ್ಯಾತ್ಮಿಕತೆಯಲ್ಲಿ ಕೆಲವು ವಿಧಾನ ಹಾಗೂ ರೀತಿಗಳನ್ನು ಸೂಚಿಸಲಾಗಿದೆ. ಹಸಿದವರಿಗೆ ಆಹಾರ ನೀಡುವುದು, ನಿರಾಶ್ರಿತರಿಗೆ ಆಶ್ರಯವನ್ನು ನೀಡುವುದು, ಬಟ್ಟೆಯಿಲ್ಲದವರ ಮೈಮುಚ್ಚುವುದು, ಅಸ್ವಸ್ಥರನ್ನು ಹಾಗೂ ಖೈದಿಗಳನ್ನು ಭೇಟಿ ಮಾಡುವುದು, ಅನಾಥ ಶವಗಳ ಸಮಾಧಿ ಮಾಡುವುದು ಹಾಗೂ ಬಡವರಿಗೆ ದಾನ ಮಾಡುವುದು - ಇವಿಷ್ಟು ದೈಹಿಕ ದಯೆಯ ಕಾರ್ಯಗಳು. ಈ ಮೂಲಕ ಭಗವಂತ ತಾನು ಹುಟ್ಟಿಸಿದವರನ್ನು ಹುಲ್ಲು ಮೇಯಲು ಬಿಡದೆ, ಅವರನ್ನು ರಕ್ಷಿಸಿ ಪೋಷಿಸುತ್ತಾನೆ ಎಂಬ ಅರಿವು ಜನರಿಗೆ ಆಗುತ್ತದೆ. ಇವಲ್ಲದೆ ಆಧ್ಯಾತ್ಮಿಕ ದಯೆಯ ಕಾರ್ಯಗಳೂ ಇವೆ. ಇವು ಮಾನವನ ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಗತ್ಯಗಳಿಗೆ ಸಂಬಂಧಪಟ್ಟವುಗಳು. ಅಜ್ಞಾನಿಗಳನ್ನು ಶಿಕ್ಷಿತಗೊಳಿಸುವುದು, ಸಲಹೆಯನ್ನು ನೀಡುವುದು, ದುಃಖಿತರನ್ನು ಸಂತೈಸುವುದು, ದಣಿದವರನ್ನು ನಿರಾಳಗೊಳಿಸುವುದು, ತಪ್ಪುಮಾಡಿದವರನ್ನು ಕ್ಷಮಿಸುವುದು ಹಾಗೂ ಪರರ ತಪ್ಪುಗಳನ್ನು ಸಹಿಸುವುದು - ಆಧ್ಯಾತ್ಮಿಕ ದಯಾ ಕಾರ್ಯಗಳಾಗಿವೆ.

ದಯೆಯು ಕೇವಲ ಬಾಯಿಮಾತಿನಲ್ಲಿ ಅಥವಾ ಸಾಂಕೇತಿಕತೆಯಲ್ಲಿ ಉಳಿದರೆ ಸಾಲದು. ಅದು ಈ ಮೇಲಿನ ದಯಾ ಕಾರ್ಯಗಳ ಮೂಲಕ ಪ್ರಕಟಗೊಂಡರೆ ಮಾತ್ರ ದಯೆಯು ನಮ್ಮ ಧರ್ಮದ ಮೂಲವೆಂದು ಸಾರಲ್ಪಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT