ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ

ಶುಕ್ರವಾರ, ಜೂಲೈ 19, 2019
24 °C
ಉಲ್ಟಾ ಹೊಡೆದ ವಿಧಾನಸಭಾಧ್ಯಕ್ಷ ಕೋಳಿವಾಡ

ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ

Published:
Updated:
ಚಿನ್ನವೂ ಇಲ್ಲ, ಬೆಳ್ಳಿಯೂ ಇಲ್ಲ

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವದ ಸವಿನೆನಪಿಗಾಗಿ ಶಾಸಕರು, ಸಂಸತ್‌ ಸದಸ್ಯರು ಮತ್ತು ವಿಧಾನಮಂಡಲ ಉಭಯ ಸಚಿವಾಲಯಗಳ ಸಿಬ್ಬಂದಿಗೆ ಉಡುಗೊರೆ ನೀಡಲು ₹ 3 ಕೋಟಿ ಖರ್ಚು ಮಾಡುತ್ತಿರುವ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೇ ವಿಧಾನಸಭಾಧ್ಯಕ್ಷ ಕೋಳಿವಾಡ ಚಿನ್ನದ ಬಿಸ್ಕತ್ತೂ ಇಲ್ಲ, ಬೆಳ್ಳಿ ತಟ್ಟೆನೂ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಇದೇ 25 ಮತ್ತು 26ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ನೆನಪಿನ ಕಾಣಿಕೆಯಾಗಿ ಜನಪ್ರತಿನಿಧಿಗಳಿಗೆ ಚಿನ್ನದ ಬಿಸ್ಕತ್‌, ಸಿಬ್ಬಂದಿಗೆ ಬೆಳ್ಳಿತಟ್ಟೆ ಕೊಡುವ ಯಾವುದೇ ಪ್ರಸ್ತಾವ ಇಲ್ಲ’ ಎಂದು ಕೋಳಿವಾಡ ಮಾತು ಬದಲಿಸಿದ್ದಾರೆ.

‘ಶಾಸಕರಿಗೆ ಚಿನ್ನದ ಬಿಸ್ಕತ್‌ ಉಡುಗೊರೆ ನೀಡುವ ಪ್ರಸ್ತಾವನೆ ಇಟ್ಟಿದ್ದೇವೆ’  ಎಂದು ಶನಿವಾರ ‘ಪ್ರಜಾವಾಣಿ’ಗೆ ಹೇಳಿದ್ದ ಕೋಳಿವಾಡ, ‘ನಾವು ಚಿನ್ನದ ಬಿಸ್ಕತ್ ಕೊಡ್ತಿಲ್ಲ, ಬೆಳ್ಳಿ ತಟ್ಟೆನೂ‌ ಕೊಡ್ತಿಲ್ಲ. ಮಾಧ್ಯಮಗಳಲ್ಲಿ ಇದು ಹೇಗೆ ವರದಿಯಾಯಿತು ಎನ್ನುವುದೂ ಗೊತ್ತಿಲ್ಲ’ ಎಂದು ಮಾಧ್ಯಮಗಳಿಗೆ ಸೋಮವಾರ ತಿಳಿಸಿದರು.

ಆದರೆ, ವಿಧಾನಸಭೆ ಸ್ಪೀಕರ್‌ ಕಚೇರಿಯಿಂದ ಹಣಕಾಸು ಇಲಾಖೆಗೆ ಕಳುಹಿಸಿದ್ದ ಪ್ರಸ್ತಾವನೆಯಲ್ಲಿ ಉಡುಗೊರೆ ಸೇರಿ ಸಿದ್ಧಪಡಿಸಿರುವ ಒಟ್ಟು ₹ 26.87 ಕೋಟಿಯ ಪ್ರಸ್ತಾವನೆಯನ್ನು ಅಧಿಕಾರಿಗಳು ಮುಖ್ಯಮಂತ್ರಿಗೆ ಹೊತ್ತು ಹಾಕಿದ್ದಾರೆ.

‘ನಮ್ಮ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಒಪ್ಪಿ ಹಣ ಕೊಟ್ಟರೆ, ನೆನಪಿನ ಕಾಣಿಕೆ ಕೊಡ್ತೇವೆ. ಉಡುಗೊರೆ ಬೇಡ ಎಂದು ಎಲ್ಲ ಸಚಿವರು, ಶಾಸಕರು ಹೇಳಿದರೆ ಬಿಡ್ತೇವೆ’ ಎಂದರು.

‘ನೆನಪಿನ ಕಾಣಿಕೆ ಏನು ಕೊಡಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ. ಅಬ್ದುಲ್ ಕಲಾಂ ಬಂದಾಗ ಲ್ಯಾಪ್‌ಟಾಪ್ ಕೊಟ್ಟಿದ್ದೇವೆ. ಆಗ ₹ 1.5 ಕೋಟಿ ವೆಚ್ಚ ಆಗಿತ್ತು. ಈ ಬಾರಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಕರೆಸುತ್ತಿದ್ದೇವೆ. ಇದು ಗೌರವದ ಪ್ರಶ್ನೆ. ಹೀಗಾಗಿ ವಿಜೃಂಭಣೆಯಿಂದ ಮಾಡ್ತಿದ್ದೇವೆ. ಕರ್ನಾಟಕದ ಗೌರವ ಕಾಪಾಡ್ತಿದ್ದೀವಿ, ಇದರಲ್ಲಿ ದುಡ್ಡು ಮುಖ್ಯ ಅಲ್ಲ’ ಎಂದೂ ಕೋಳಿವಾಡ ಸಮರ್ಥಿಸಿಕೊಂಡರು.

‘ರಾಷ್ಟ್ರಪತಿ ಬರುತ್ತಿರುವ ಕಾರಣ ವಿಧಾನಸೌಧದ ಘನತೆಗೆ ತಕ್ಕಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ. ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ಸಚಿವರು ಹೇಳುತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಹಾಗೆಂದು, ಇದನ್ನು ಸಚಿವರ ಗಮನಕ್ಕೆ ತರಬೇಕು, ಸಂಪುಟ ಸಭೆಯಲ್ಲಿ ನಿರ್ಧರಿಸಬೇಕು ಎಂದು ಯಾವ ಕಾನೂನಿನಲ್ಲೂ ಇಲ್ಲ’ ಎಂದು ಕೋಳಿವಾಡ ಕಿಡಿ ಕಾರಿದರು.

‘ನಮ್ಮ ಸಚಿವಾಲಯದ ನಿರ್ಧಾರ ನಮ್ಮದು. ಸರ್ಕಾರ ಅಂದ್ರೆ ಮುಖ್ಯಮಂತ್ರಿ. ಅವರಿಗೆ ಈ ವಿಷಯ ತಿಳಿಸಿದ್ದೇವೆ. ಆದರೆ, ಸಚಿವರು, ಶಾಸಕರು ಪತ್ರಿಕೆಗಳಲ್ಲಿ ಬಂದಿರುವ ವರದಿ ನೋಡಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹಣಕಾಸಿನ ವಿಚಾರ ಮಾತ್ರ ಆರ್ಥಿಕ ಇಲಾಖೆಗೆ ತಿಳಿಸಬೇಕು, ತಿಳಿಸಿದ್ದೇವೆ’ ಎಂದರು.

ಪರ– ವಿರೋಧ

ಈ ಮಧ್ಯೆ, ‘ಶಾಸಕರು ಮತ್ತು ಸಿಬ್ಬಂದಿಗೆ ಉಡುಗೊರೆ ನೀಡಿದರೆ ತಪ್ಪೇನು?’ ಎಂದು ಕೆಲವರು ಪ್ರಶ್ನಿಸಿದರೆ, ವಜ್ರಮಹೋತ್ಸವದ ಹೆಸರಿನಲ್ಲಿ ದುಂದುವೆಚ್ಚ ಮಾಡುವುದಕ್ಕೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ನೆನಪಿನ ಕಾಣಿಕೆ ಇರಲಿ, ಆದರೆ, ಚಿನ್ನದ ಬಿಸ್ಕತ್‌ ಅಗತ್ಯ ಇಲ್ಲ’ ಎಂದು ಸಂಪುಟ ಸಚಿವರುಗಳೇ ಆಕ್ಷೇಪಿಸಿದ್ದಾರೆ.

‘ಉಡುಗೊರೆ ಕೊಡುವುದು ತಪ್ಪಲ್ಲ. ಆದರೆ, ಶಾಸಕರಿಗೆ ಚಿನ್ನದ ಬಿಸ್ಕತ್ ನೀಡುವ ಅವಶ್ಯಕತೆ ಇಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ವಿಜ್ಞಾನ- ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಹೇಳಿದರು.

‘ವಜ್ರಮಹೋತ್ಸವ ಸ್ಮರಣಾರ್ಥ ಶಾಸಕರಿಗೆ ಫಲಕಗಳನ್ನು ನೀಡಿದ್ದರೆ ಸಾಕಾಗಿತ್ತು. ದುಬಾರಿ ಉಡುಗೊರೆ ಅಗತ್ಯ ಇಲ್ಲ. ಈ ವಿಚಾರದಲ್ಲಿ ವಿಧಾನಸಭಾಧ್ಯಕ್ಷರು ಮತ್ತಷ್ಟು ಚರ್ಚೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟ ಅವರು, ‘ಮುಖ್ಯಮಂತ್ರಿ ಈ ವಿಷಯದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದರು.‘ವಜ್ರ ಮಹೋತ್ಸವ ಆಚರಣೆ ಇರಲಿ. ಆದರೆ, ಶಾಸಕರಿಗೆ ಚಿನ್ನದ ಬಿಸ್ಕತ್, ನೌಕರರಿಗೆ ಬೆಳ್ಳಿ ತಟ್ಟೆಯಂಥ ಉಡುಗೊರೆ ಅಗತ್ಯವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಸ್ಪಷ್ಟಪಡಿಸಿದರು.

‘ಇದು ಸ್ಪೀಕರ್, ಸಭಾಪತಿಗೆ ಬಿಟ್ಟ ವಿಷಯ. ಆದರೂ ಇಂಥ ವಿಶೇಷ ಸಂದರ್ಭಗಳಲ್ಲಿ ಉಡುಗೂರೆ ಕೊಡುವುದರಲ್ಲಿ ತಪ್ಪೇನಿಲ್ಲ. ಚಿನ್ನದ ವಸ್ತುಗಳನ್ನೇ ಕೊಡಬೇಕು ಅಂತೇನೂ ಇಲ್ಲ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

‘ಉಡುಗೊರೆ ರೂಪದಲ್ಲಿ ಚಿನ್ನದ ನಾಣ್ಯ ನೀಡುವುದರಲ್ಲಿ ತಪ್ಪೇನಿದೆ. ವಜ್ರ ಮಹೋತ್ಸವದಂಥ ಕಾರ್ಯಕ್ರಮದಲ್ಲಿ ನೆನಪಿಗಾಗಿ ಉಡುಗೊರೆ ನೀಡುತ್ತಾರೆ. ಅದಕ್ಕೆ ಇಷ್ಟೇ ಅಂತ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ಅನಗತ್ಯವಾಗಿ ವಿವಾದ ಮಾಡಲಾಗುತ್ತಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಶಾಸಕ ಕೆ.ಎನ್. ರಾಜಣ್ಣ ಸಮರ್ಥಿಸಿದರು.

*

‘ನಮಗೆ ಸ್ಪೀಕರ್ ನೀಡುವ ಚಿನ್ನದ ಬಿಸ್ಕತ್ ಬೇಡ, ಏನೂ ಬೇಡ. ಕೊಟ್ಟರೂ ನಾವು ತಗೊಳ್ಳೊದಿಲ್ಲ. ಇದನ್ನು ನಾವು ವಿರೋಧಿಸುತ್ತೇವೆ.

ಬಸವರಾಜ ಹೊರಟ್ಟಿ,

ವಿಧಾನಪರಿಷತ್‌ ಸದಸ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry