ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರವರ್ತುಲ ರಸ್ತೆಗೆ ನುಗ್ಗಿದ ಸೌಳ ಕೆರೆ ನೀರು

Last Updated 16 ಅಕ್ಟೋಬರ್ 2017, 19:58 IST
ಅಕ್ಷರ ಗಾತ್ರ

ಬೆಂಗಳೂರು: ಹೊರವರ್ತುಲ ರಸ್ತೆಯ ಬೆಳ್ಳಂದೂರು ಸಮೀಪ ಇಕೊಸ್ಪೇಸ್‌ ಸರ್ವೀಸ್‌ ರಸ್ತೆ ಹಾಗೂ ಸುತ್ತಲಿನ ಪ್ರದೇಶಕ್ಕೆ ಸೌಳ ಕೆರೆಯ ನೀರು ನುಗ್ಗಿದೆ.

ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿರುವ ಸೌಳ ಕೆರೆ ತುಂಬಿ ಹರಿಯುತ್ತಿದೆ. ಈ ನೀರು ಬೆಳ್ಳಂದೂರು ಕೆರೆಗೆ ಸೇರುತ್ತದೆ. ಆದರೆ, ರಾಜಕಾಲುವೆಯಲ್ಲಿ ಹೂಳು ತುಂಬಿಕೊಂಡಿರುವುದರಿಂದ ನೀರು ಉಕ್ಕಿ ರಸ್ತೆ ಮೇಲೆ ಹರಿದಿದೆ.

ಆರ್‌ಎಂಜಡ್‌ ಇಕೊಸ್ಪೇಸ್‌ ಜಲಾವೃತಗೊಂಡಿತ್ತು. ಹೊರ ವರ್ತುಲ ರಸ್ತೆಯಲ್ಲೂ ನೀರು ತುಂಬಿತ್ತು. ಇದರಿಂದ ಈ ಭಾಗದಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಸಂಚಾರ ಪೊಲೀಸರು ಸೋಮವಾರ ಬೆಳಿಗ್ಗೆಯಿಂದ ರಾತ್ರಿಯವರೆಗೂ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದರು.

‘ಸೌಳ ಕೆರೆಯು ನಗರದ ದೊಡ್ಡ ಕೆರೆಗಳಲ್ಲಿ ಒಂದು. ಆದರೆ, ಕೆರೆಯಂಗಳ ಹಾಗೂ ರಾಜಕಾಲುವೆಯನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

‘ಬಿಬಿಎಂಪಿಗೆ ದೂರು ನೀಡಿದ್ದೇವೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹೊರ ವರ್ತುಲ ರಸ್ತೆಯಲ್ಲಿ ಮಿತಿ ಮೀರಿದ ಸಂಚಾರ ದಟ್ಟಣೆ ಇರುತ್ತದೆ. ಈಗ ರಸ್ತೆಯಲ್ಲಿ 3–4 ಅಡಿ ನೀರು ಸಂಗ್ರಹಗೊಂಡಿರುವುದರಿಂದ ಮತ್ತಷ್ಟು ದಟ್ಟಣೆ ಉಂಟಾಗಿದೆ’ ಎಂದು ಆರ್‌ಎಂಜಡ್‌ ಇಕೊಸ್ಪೇಸ್‌ನ ಉದ್ಯೋಗಿ ಪ್ರಿಯಾಂಕ್‌ ಶರ್ಮಾ ತಿಳಿಸಿದರು.

ನೌಕರರಿಗೆ ಮನೆಯಿಂದ ಕೆಲಸ:
‘ಕಂಪೆನಿಯ ನೌಕರರು ಮನೆಯಲ್ಲೇ ಕಚೇರಿಯ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಹೊರ ವರ್ತುಲ ರಸ್ತೆಯ ಕಂಪೆನಿಗಳ ಸಂಘವು (ಒಆರ್‌ಆರ್‌ಸಿಎ) ಮನವಿ ಮಾಡಿತ್ತು. ಹೀಗಾಗಿ, ಸೋಮವಾರ ಮನೆಗಳಿಂದಲೇ ಕೆಲಸ ಮಾಡಲು ನೌಕರರಿಗೆ ಅವಕಾಶ ಕಲ್ಪಿಸಲಾಗಿತ್ತು.

‘ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕಚೇರಿಯವರೆಗೆ ಬರಬೇಕಾದರೆ 4–5 ಗಂಟೆ ಹಿಡಿಯುತ್ತದೆ. ಆದ್ದರಿಂದ ಮನೆಯಲ್ಲೇ ಕೆಲಸ ಮಾಡುವುದು ಒಳಿತು. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದೆ’ ಎಂದು ಸಂಘದ ಸದಸ್ಯ ವಿನೋದ್‌ ಚಂದ್ರನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT