ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಿಂದ ₹ 1,660 ಕೋಟಿಗೂ ಹೆಚ್ಚು ಹಾನಿ

ಪರಿಹಾರ ಕಾಮಗಾರಿಗೆ ಕೇಂದ್ರವೂ ನೆರವು ನೀಡಲಿ: ಸಚಿವ ಜಾರ್ಜ್‌
Last Updated 16 ಅಕ್ಟೋಬರ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಸಾಲಿನಲ್ಲಿ ಸೆಪ್ಟೆಂಬರ್‌ 9ರವರೆಗೆ ₹ 1,660 ಕೋಟಿ ಹಾನಿ ಉಂಟಾಗಿದೆ. ನಂತರ ಆಗಿರುವ ಹಾನಿಯ ಬಗ್ಗೆಯೂ ವಿಶ್ಲೇಷಣೆ ನಡೆಸುತ್ತಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತೀವ್ರ ಮಳೆಯಿಂದಾಗಿ ಸೆಪ್ಟೆಂಬರ್‌ವರೆಗೆ ಆಗಿರುವ ಹಾನಿಯ ಕುರಿತು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದೇನೆ. ನಂತರದ ಹಾನಿಯ ಬಗ್ಗೆಯೂ ಶೀಘ್ರವೇ ವರದಿ ಸಲ್ಲಿಸುತ್ತೇನೆ’ ಎಂದರು.

ಕೇಂದ್ರ ನೆರವು ನೀಡಲಿ:
‘ನಗರದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದಲ್ಲಿ ಅನಾಹುತವಾಗಿದೆ. ಈ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರವೂ ನೆರವು ನೀಡಬೇಕು. ನಗರವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಈ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಒತ್ತಾಯಿಸಿದರು.

‘ನಗರದ ರಸ್ತೆಗಳಲ್ಲಿ 24,000 ಗುಂಡಿಗಳು ಬಿದ್ದಿರುವುದನ್ನು ಬಿಬಿಎಂಪಿ ಅಧಿಕಾರಿಗಳು ಗುರುತಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ದಿನಗಳ ಒಳಗೆ ಗುಂಡಿ ಮುಚ್ಚುವಂತೆ ಗಡುವು ನೀಡಿದ್ದರು. ಬಳಿಕ 12,000 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನುಳಿದ ಗುಂಡಿಗಳನ್ನು ಶೀಘ್ರವೇ ಮುಚ್ಚುತ್ತೇವೆ’ ಎಂದು ತಿಳಿಸಿದರು.

‘ಮಳೆ ಕಡಿಮೆ ಆದ ಬಳಿಕ ಹಾಟ್‌ಮಿಕ್ಸ್‌ ಬಳಸಿ ಗುಂಡಿಗಳನ್ನು ಮುಚ್ಚಲು ನಿರ್ಧರಿಸಿದ್ದೆವು. ಇದು ಹೆಚ್ಚು ಕಾಲ ಬಾಳಿಕೆ ಬರಲಿದೆ. ವೆಟ್‌ಮಿಕ್ಸ್‌ ಬಳಸಿ ತ್ವರಿತ ಗತಿಯಲ್ಲಿ ಗುಂಡಿ ಮುಚ್ಚುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ವೆಟ್‌ಮಿಕ್ಸ್‌ ಬಳಸಿದರೆ ರಸ್ತೆ ಬೇಗನೇ ಹದಗೆಡುವ ಸಾಧ್ಯತೆ ಹೆಚ್ಚು’ ಎಂದು ಸಚಿವರು ಅಭಿಪ್ರಾಯಪಟ್ಟರು.

‘ನಮ್ಮ ರಾಜಕಾಲುವೆಗಳು ದಿನವೊಂದಕ್ಕೆ 7–8 ಸೆಂ.ಮೀ ಮಳೆಯನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಮಾತ್ರ ಹೊಂದಿವೆ. ಈ ವರ್ಷ ಕೇವಲ 2– 3 ತಾಸುಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಾಗಾಗಿ ಅನಾಹುತಗಳು ಸಂಭವಿಸುತ್ತಿವೆ. ವಾಡಿಕೆಯಷ್ಟು ಮಳೆಯನ್ನು ನಿಭಾಯಿಸುವುದಕ್ಕೆ ನಮ್ಮ ಮೂಲಸೌಕರ್ಯಗಳು ಹಾಗೂ ಆಡಳಿತ ವ್ಯವಸ್ಥೆ ಸಮರ್ಥವಾಗಿದೆ’ ಎಂದು ಸಚಿವರು ಸಮಜಾಯಿಷಿ ನೀಡಿದರು.

‘ಭಾರಿ ಮಳೆಯಾದಾಗ ರಸ್ತೆಗಳಲ್ಲಿ ನೀರು ಹರಿದರೂ ಒಂದೆರಡು ತಾಸುಗಳಲ್ಲೇ ಇದು ಖಾಲಿ ಆಗುತ್ತಿದೆ. ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಲೋಪ ಇರುವುದು ನಿಜ. ಅಲ್ಲಿ ಸಮಸ್ಯೆ ನಿವಾರಿಸಲು ಈಗಿರುವ ರಾಜಕಾಲುವೆ ಪಕ್ಕದಲ್ಲೇ ಇನ್ನೊಂದು ಕಾಲುವೆ ನಿರ್ಮಿಸುತ್ತೇವೆ’ ಎಂದು ತಿಳಿಸಿದರು.

***
‘ಹೊಸ ರಸ್ತೆಗಳಲ್ಲಿ ಗುಂಡಿಗಳಿಲ್ಲ’

‘ನಗರದಲ್ಲಿ ಇತ್ತೀಚೆಗೆ ಡಾಂಬರೀಕರಣ, ವೈಟ್‌ಟಾಪಿಂಗ್‌ ಮಾಡಿದ ರಸ್ತೆಗಳಲ್ಲಿ ಹಾಗೂ ಟೆಂಡರ್‌ ಶ್ಯೂರ್‌ ರಸ್ತೆಗಳಲ್ಲಿ ಎಲ್ಲೂ ಗುಂಡಿಗಳು ಕಾಣಿಸಿಕೊಂಡಿಲ್ಲ. ಈ ಬಗ್ಗೆ ಜನ ತಪ್ಪು ಕಲ್ಪನೆ ಹೊಂದಿದ್ದಾರೆ’ ಎಂದು ಜಾರ್ಜ್‌ ಸ್ಪಷ್ಟಪಡಿಸಿದರು.

‘ರಸ್ತೆಗಳ ವೈಟ್‌ಟಾಪಿಂಗ್‌ಗೆ ಹಾಗೂ ಟೆಂಡರ್‌ಶ್ಯೂರ್‌ ಕಾಮಗಾರಿಗಳಿಗೆ ಮಂಜೂರಾಗಿರುವ ₹ 3,500 ಕೋಟಿ ಅನುದಾನದ ಇನ್ನಷ್ಟೇ ಬಳಕೆ ಆಗಬೇಕಾಗಿದೆ. ಮಳೆ ಕಡಿಮೆ ಆದ ಬಳಿಕ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ. ನಗರದ ರಸ್ತೆಗಳು ಮತ್ತೆ ಸುಸ್ಥಿತಿಗೆ ಬರಲಿವೆ’ ಎಂದು ಅವರು ತಿಳಿಸಿದರು.

***
‘ಪುನರ್ವಸತಿ ಕಲ್ಪಿಸಿ ರಾಜಕಾಲುವೆ ಒತ್ತುವರಿ ತೆರವು’

‘ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳಲ್ಲಿ ಬಡಕುಟುಂಬಗಳು ನೆಲೆಸಿವೆ. ಈ ಕಟ್ಟಡಗಳನ್ನು ಏಕಾಏಕಿ ತೆರವುಗೊಳಿಸಿದರೆ ಈ ಕುಟುಂಬಗಳು ಬೀದಿಗೆ ಬೀಳಲಿವೆ. ಇಂತಹ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಿದ ಬಳಿಕವೇ ಒತ್ತುವರಿ ತೆರವುಗೊಳಿಸುತ್ತೇವೆ’ ಎಂದು ಜಾರ್ಜ್‌ ಸ್ಪಷ್ಟಪಡಿಸಿದರು.

‘ನಗರದಲ್ಲಿ ಬಡವರಿಗಾಗಿ 1 ಲಕ್ಷ ವಸತಿ ಕಲ್ಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. ಪುನರ್ವಸತಿ ಕಲ್ಪಿಸಲು ಈ ಮನೆಗಳನ್ನು ಬಳಸಿಕೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT