ಸೋರುವ ಕೇಂದ್ರದೊಳಗೆ ನೂರೆಂಟು ವಿಘ್ನಗಳು!

ಭಾನುವಾರ, ಮೇ 26, 2019
32 °C

ಸೋರುವ ಕೇಂದ್ರದೊಳಗೆ ನೂರೆಂಟು ವಿಘ್ನಗಳು!

Published:
Updated:

ಚಿಕ್ಕಬಳ್ಳಾಪುರ: ಮಳೆ ಸುರಿದರೆ ಮಕ್ಕಳನ್ನು ಮೂಲೆಯಲ್ಲಿ ಕೂಡಿಸಿ ಚಾವಣಿಯಿಂದ ಸೋರುವ ನೀರನ್ನು ಗೂಡಿಸಿ ಹೊರಹಾಕಬೇಕಾದ ಆ ಅಂಗನವಾಡಿಯಲ್ಲಿ ಕುಡಿಯುವ ನೀರಿಗೆ ಬರ. ಅಡುಗೆ ಸಿದ್ಧಪಡಿಸಲು ಪಾತ್ರೆಗಳಿಲ್ಲ, ಹದವಾಗಿ ಊಟ ಸಿದ್ಧಪಡಿಸಲು ಮಸಾಲೆ ಬಿಟ್ಟರೆ ಬೇರೇನೂ ಇಲ್ಲ. ಸಮಸ್ಯೆಗಳ ನಡುವೆಯೇ ಸಂಭಾಳಿಸಿಕೊಂಡು ಅಡುಗೆ ಮಾಡಿಟ್ಟರೆ ಗರ್ಭಿಣಿ, ಬಾಣಂತಿಯರು ಊಟಕ್ಕೇ ಬರುತ್ತಿಲ್ಲ.

ತಾಲ್ಲೂಕಿನ ಮೈಲಪ್ಪನಹಳ್ಳಿ ಅಂಗನವಾಡಿ ಕೇಂದ್ರದ ನೌಕರರ ಗೋಳಿದು. 20 ವಿದ್ಯಾರ್ಥಿಗಳನ್ನು ಹೊಂದಿರುವ ಈ ಕೇಂದ್ರಕ್ಕೆ ಇವತ್ತು ಕಟ್ಟಡದ ಮೂಲ ಸಮಸ್ಯೆಯಾಗಿದೆ. ಮಳೆ ಆರಂಭವಾದರೆ ಈ ಅಂಗನವಾಡಿಯ ನೌಕರರು ಸೋರುವ ನೀರನ್ನು ಗೂಡಿಸುವ ಚಾಕರಿ ಕೆಲಸಕ್ಕೆ ಅಣಿಗೊಳ್ಳಬೇಕಾದ ಸ್ಥಿತಿ ಇದೆ.

ಈ ಕೇಂದ್ರದ ವ್ಯಾಪ್ತಿಯಲ್ಲಿ 8 ಗರ್ಭಿಣಿಯರು, 11 ಬಾಣಂತಿಯರು ಹೀಗೆ 19 ‘ಮಾತೃಪೂರ್ಣ’ ಯೋಜನೆಯ ಫಲಾನುಭವಿಗಳಿದ್ದಾರೆ. ಶಾಲೆಯ ಈ ಸ್ಥಿತಿ ನೋಡಿ ಒಬ್ಬೇ ಒಬ್ಬ ಫಲಾನುಭವಿ ಕೂಡ ಇವತ್ತು ಊಟ ಮಾಡಲು ಕೇಂದ್ರಕ್ಕೆ ಬರುತ್ತಿಲ್ಲ. ಅಡುಗೆ ಮಾಡಿಟ್ಟು, ಊಟಕ್ಕೆ ಬನ್ನಿ ಎಂದು ಅಂಗಲಾಚಿದರೂ ಬರದ ಫಲಾನುಭವಿಗಳಿಂದಾಗಿ ‘ಮಾತೃಪೂರ್ಣ’ ಭೋಜನ ವ್ಯರ್ಥವಾಗುತ್ತಿದೆ.

ಇಲ್ಲಿರುವ ಫಲಾನುಭವಿಗಳ ಪೈಕಿ ಕೇವಲ ಮೂರ್ನಾಲ್ಕು ಜನರು ಊಟವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದು, ಉಳಿದವರು ‘ನಮಗೆ ಊಟ ಬೇಡ, ಮೊದಲಿನಂತೆ ರೇಷನ್‌ ಕೊಡಿ’ ಅಂಗನವಾಡಿ ಕಾರ್ಯಕರ್ತೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವುದು ನೌಕರರಿಗೆ ಹೊಸ ತಲೆನೋವಾಗಿದೆ. ಇದರಿಂದಾಗಿ ಈ ಕೇಂದ್ರದ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ.

‘ನಮಗೆ ಇಲಾಖೆ ವತಿಯಿಂದ ಸಾಂಬಾರ್‌ ಪುಡಿ ಮಾತ್ರ ಪೂರೈಸಿದ್ದಾರೆ. ಈವರೆಗೆ ಪಾತ್ರೆ, ತಟ್ಟೆಗಳು, ಎಣ್ಣೆ, ಬೇಳೆಕಾಳು ಏನೂ ನೀಡಿಲ್ಲ. ಮೊಟ್ಟೆ, ತರಕಾರಿಗೆ ದುಡ್ಡು ಕೊಟ್ಟಿಲ್ಲ. ಆದರೂ ನಾವು ಇರುವುದರಲ್ಲಿಯೇ ಸುಧಾರಿಸಿ ಅಡುಗೆ ಮಾಡಿ ಬಡಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಫಲಾನುಭವಿಗಳು ನಿಮ್ಮ ಊಟದಲ್ಲಿ ಉಪ್ಪಿಲ್ಲ, ಕಾರಿಲ್ಲ. ನಮಗದು ಬೇಡವೇ ಬೇಡ ಎಂದು ಫಲಾನುಭವಿಗಳು ಹೇಳುತ್ತಿದ್ದಾರೆ. ಏನು ಮಾಡಬೇಕೋ ತೋಚುತ್ತಿಲ್ಲ’ ಎಂದು ಅಂಗನವಾಡಿ ಕಾರ್ಯಕರ್ತೆ ರಾಧಮ್ಮ ಅಳಲು ತೋಡಿಕೊಂಡರು.

‘ಊಟಕ್ಕಾಗಿಯೇ ದಿನಾಲೂ ಒಂದು ಕೀಲೊ ಮೀಟರ್‌ ನಡೆದುಕೊಂಡು ಬರಲು ಆಗುವುದಿಲ್ಲ. ಊಟಕ್ಕೆ ಬರುವುದು ನೋಡಿ ಜನರು ನಗಾಡುತ್ತಾರೆ. ಮಕ್ಕಳೆದುರು ಕುಳಿತು ಊಣ್ಣಲು ಮುಜುಗರವಾಗುತ್ತದೆ. ನಮಗೆ ಹಿಂದಿನಂತೆ ಬ್ಯಾಗ್ ಕೊಡಿ ಎಂದು ಅನೇಕ ಫಲಾನುಭವಿಗಳು ಗಲಾಟೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಹೇಳಿಕೊಂಡರೆ ಮನವೊಲಿಸಿ ಎಂದು ಸಾಗ ಹಾಕುತ್ತಾರೆ. ಇಲ್ಲಿ ಯಾರು ನಮ್ಮ ಮಾತು ಕೇಳುತ್ತಿಲ್ಲ. ಏನು ಮಾಡಲಿ ಹೇಳಿ’ ಎಂದು ಪ್ರಶ್ನಿಸಿದರು.

‘ಅರ್ಧ ಕೀಲೊ ಮೀಟರ್‌ ನಡೆದು ಹೋಗಿ ಕುಡಿಯುವ ನೀರು ತರಬೇಕು. ಜತೆಗೆ ಮಕ್ಕಳನ್ನು ನೋಡಿಕೊಳ್ಳುತ್ತಲೇ ಅಡುಗೆ ಮಾಡಬೇಕು. ಮಾಡಿದ ಅಡುಗೆ ಕೆಡಿಸಬಾರದು ಎಂದು ನಾವೇ ಮನೆ, ಮನೆಗೆ ಹೋಗಿ ಕೊಡಲು ಹೋದರೆ ಅನೇಕರು ನಿರಾಕರಿಸುತ್ತಾರೆ. ಇವತ್ತು ನಮಗೆ ಕುಡಿಯುವ ನೀರಿನದೇ ದೊಡ್ಡ ಸಮಸ್ಯೆಯಾಗಿದೆ.  ಈ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಅಂಗನವಾಡಿ ಸಹಾಯಕಿ ಲಕ್ಷ್ಮೀ ದೇವಮ್ಮ ಬೇಸರ ವ್ಯಕ್ತಪಡಿಸಿದರು.

‘ಈಗ ಚುನಾವಣೆ ಸಮೀಸುತ್ತಿರುವ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ. ಗರ್ಭಿಣಿ, ಬಾಣಂತಿಯರ ಮೇಲೆ ಅಷ್ಟು ಕಾಳಜಿ ಇದ್ದರೆ ಊಟ ಮೂರು ಹೊತ್ತು ಕೊಡಲಿ ನೋಡೋಣ? ನಮಗಂತೂ ಮನೆ ಕೆಲಸ ಬಿಟ್ಟು ಅಂಗನವಾಡಿಗೆ ಊಟಕ್ಕೆ ಬರಲು ನಾಚಿಕೆಯಾಗುತ್ತದೆ. ನಾವು ಮಾಡಿದ ಅಡುಗೆ ನಾವೇ ತಿಂದರೇ ನಮಗೆ ಸಮಾಧಾನ’ ಎಂದು ಸ್ಥಳೀಯ ನಿವಾಸಿ, ಗರ್ಭಿಣಿ ಭಾರತಿ ತಿಳಿಸಿದರು.

‘ಮಾತೃ ಪೂರ್ಣ ಯೋಜನೆಯನ್ನು ಸರ್ಕಾರ ಏಕೆ ಜಾರಿಗೆ ತಂದಿತೋ ಗೊತ್ತಾಗುತ್ತಿಲ್ಲ. ಇವತ್ತಿನ ಸಂದರ್ಭದಲ್ಲಿ ಯಾರು ಕೂಡ ಗರ್ಭಿಣಿ, ಬಾಣಂತಿಯರನ್ನು ನಿತ್ಯ ಹೊರಗಡೆ ಊಟಕ್ಕಾಗಿಯೇ ಕಳುಹಿಸಲು ಒಪ್ಪುವುದಿಲ್ಲ. ಇದರ ಬದಲಾಗಿ ಹಣ್ಣು, ಹಂಪಲುಗಳನ್ನಾದರೂ ನೀಡಲಿ. ಊಟ ಮಾತ್ರ ಬೇಡವೇ ಬೇಡ’ ಎಂದು ಮೈಲಪ್ಪನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಮನಸ್ಸೂರು ಒತ್ತಾಯಿಸಿದರು.

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry